ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karantara Suliyalli Book: ʼಕಾರಂತರ ಸುಳಿಯಲ್ಲಿʼ ಪುಸ್ತಕ; ವಿಶ್ವೇಶ್ವರ ಭಟ್ಟರ ಅನುವಾದ ಮೂಲ ಕೃತಿಗಿಂತ ಸೊಗಸಾಗಿದೆ: ಉಲ್ಲಾಸ್‌ ಕಾರಂತ್‌

ಕನ್ನಡದ ಮೇರು ಸಾಹಿತಿ ಶಿವರಾಮ ಕಾರಂತರ ಮೂವರು ಮಕ್ಕಳಾದ ಕೆ.ಉಲ್ಲಾಸ ಕಾರಂತ, ಮಾಲವಿಕಾ ಕಪೂರ ಮತ್ತು ಕ್ಷಮಾ ರಾವ್ ಬರೆದ Growing Up Karanth ಕೃತಿಯ ಕನ್ನಡ ಅನುವಾದಿತ ಕೃತಿ, ವಿಶ್ವೇಶ್ವರ ಭಟ್‌ ಅವರ ʼಕಾರಂತರ ಸುಳಿಯಲ್ಲಿʼ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ನೆರವೇರಿತು.

ವಿಶ್ವೇಶ್ವರ ಭಟ್ಟರ ಅನುವಾದ ಮೂಲ ಕೃತಿಗಿಂತ ಸೊಗಸಾಗಿದೆ: ಉಲ್ಲಾಸ್‌ ಕಾರಂತ್‌

ಕನ್ನಡದ ಖ್ಯಾತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರ ಪುತ್ರ ಉಲ್ಲಾಸ್‌ ಕಾರಂತ್‌. -

Prabhakara R
Prabhakara R Apr 5, 2026 11:20 PM

ಬೆಂಗಳೂರು: ವೈಎನ್‌ಕೆಯವರ ಗರಡಿಯಲ್ಲಿ ಬೆಳೆದ ವಿಶ್ವೇಶ್ವರ ಭಟ್ಟರು 'Growing Up Karanth' ಪುಸ್ತಕವನ್ನು ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅನೇಕ ಅನುವಾದಗಳು ಮೂಲ ಕೃತಿ ಮಟ್ಟಕ್ಕೆ ಹೋಗುವುದಿಲ್ಲ. ಆದರೆ, ಇದು ವಿಶಿಷ್ಟ ಪುಸ್ತಕ. ಕಾರಂತರಿಗೆ ಅತ್ಯಂತ ಹತ್ತಿರದವರಾದ ಡಾ.ಶಿವರಾಮ್‌ ಅವರ ಮಗ ಡಾ.ಓಂಪ್ರಕಾಶ್‌ ಅವರು ʼಕಾರಂತರ ಸುಳಿಯಲ್ಲಿʼ ಪುಸ್ತಕವನ್ನು ಓದಿ, ಇದು ಇಂಗ್ಲಿಷ್‌ಗಿಂತ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ಬಹಳ ಸಂತೋಷವಾಯಿತು ಎಂದು ಕನ್ನಡದ ಮೇರು ಸಾಹಿತಿ ಶಿವರಾಮ ಕಾರಂತ ಅವರ ಪುತ್ರ ಉಲ್ಲಾಸ್‌ ಕಾರಂತ್‌ ತಿಳಿಸಿದರು.

ಶಿವರಾಮ ಕಾರಂತರ ಮೂವರು ಮಕ್ಕಳಾದ ಕೆ.ಉಲ್ಲಾಸ ಕಾರಂತ, ಮಾಲವಿಕಾ ಕಪೂರ ಮತ್ತು ಕ್ಷಮಾ ರಾವ್ ಬರೆದ ʼGrowing Up Karanthʼ ಕೃತಿಯ ಕನ್ನಡ ಅನುವಾದ ಕೃತಿ, ವಿಶ್ವೇಶ್ವರ ಭಟ್‌ ಅವರ ʼಕಾರಂತರ ಸುಳಿಯಲ್ಲಿʼ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ನಮ್ಮ ತಂದೆಯವರು ಎಂದರೆ ನಮಗೆ ತುಂಬಾ ಪ್ರೀತಿ, ಆದರೆ ಅಷ್ಟೇ ಭಯ. ಹೀಗಾಗಿ ಅವರು ಬದುಕಿರುವವರೆಗೆ ಈ ಪುಸ್ತಕಕ್ಕೆ ಕೈ ಹಾಕಲು ಧೈರ್ಯವೇ ಬರಲಿಲ್ಲ. ಅವರು 1997ರಲ್ಲಿ ತೀರಿಕೊಂಡರು. ನಂತರ ನಾವು ಮೂವರು ಮಕ್ಕಳೂ ನಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆವು. ಹುಚ್ಚು ಮನಸ್ಸಿನ ಹತ್ತು ಮುಖಗಳು, ಸ್ಮೃತಿಪಟಲದಿಂದ, ಅಳಿದುಳಿದ ನೆನಪುಗಳು ಪುಸ್ತಕದಲ್ಲೇ ತಂದೆಯವರು ತಮ್ಮ ಬಗ್ಗೆ ಹೇಳಿದ್ದರು. ಅವರೆಲ್ಲಾ ಹೇಳಿ ಆಗಿದೆ ಎಂದು ನಾವು ಸುಮ್ಮನಾಗಿದ್ದೆವು.

Karantara Suliyalli Book Release: ಕಾರಂತರ ವ್ಯಕ್ತಿತ್ವ ನೋಡುವ ದೊಡ್ಡ ಪ್ರಯತ್ನ ʼಕಾರಂತರ ಸುಳಿಯಲ್ಲಿʼ ಪುಸ್ತಕದಲ್ಲಿದೆ: ವಿಶ್ವೇಶ್ವರ ಭಟ್‌



ಆದರೆ, ಅವರು ತೀರಿಕೊಂಡ ನಂತರ ಜನರು ಅವರನ್ನು ನೆನೆಯುವ ರೀತಿ, ಅವರ ಜತೆ ಓಡಾಡಿದವರ ಅನುಭವಗಳು ಎಲ್ಲಾ ಕೇಳಿದಾಗ ಕಾರಂತರ ವ್ಯಕ್ತಿತ್ವದ ಬಗ್ಗೆ ತಿಳಿಸಬೇಕು ಎಂದು ಸುಮಾರು 2000 ಇಸವಿಯಲ್ಲಿ ಈ ಪುಸ್ತಕ ಬರೆಯಲು ಕೈ ಹಾಕಿದೆವು.

ಕಾರಂತರು ತೀರಿಕೊಳ್ಳುವಾಗ 95 ವರ್ಷವಾಗಿತ್ತು. ಅವರ ಆತ್ಮೀಯರು, ಸಮಕಾಲೀನರು ಎಲ್ಲಾ ತೀರಿ ಹೋಗಿದ್ದರು. ಅದೇ ರೀತಿ ಅವರಿಂದ ಸ್ಫೂರ್ತಿ ಪಡೆದ ಬಿಜಿಎಲ್‌ ಸ್ವಾಮಿ, ಶಾರದಾ ಪ್ರಸಾದ್‌ ಅವರ ತಲೆಮಾರಿನವರು ಕೂಡ ಹೆಚ್ಚು ಮಂದಿ ಇರಲಿಲ್ಲ. ನಮ್ಮ ತಂದೆಯವರ ಬಯೋಗ್ರಫಿಯಷ್ಟೇ ಇದರಲ್ಲಿ ನಮ್ಮ ಅಮ್ಮನ ಪಾತ್ರವಿದೆ. ಅವರು ಹೇಗೆ ಕಾರಂತರನ್ನು ಬೆಳೆಸಿದರು, ಅವರಿಲ್ಲದಿದ್ದರೆ ತಂದೆಯವರು ಇಷ್ಟು ಸಾಧನೆ ಮಾಡಲು ಸಾಧ್ಯವಿರಲಿಲ್ಲ ಎಂಬುವುದು ನಮಗೆ ಗೊತ್ತಿತ್ತು. ಆದರೆ, ಅವರ ಜತೆಗಿದ್ದವರು ಎಲ್ಲರೂ ತೀರಿಕೊಳ್ಳುತ್ತಾ ಹೋದರು. ಹೀಗಿರುವಾಗ ನಮಗೆ ಪತ್ರಕರ್ತ ಸುಗತ ಶ್ರೀನಿವಾಸರಾಜು ಮತ್ತು ಅವರ ಪತ್ನಿ ರೋಸಿ ಡಿಸೋಜಾ ಅವರು ನಮಗೆ ತುಂಬಾ ಸಹಕಾರ ನೀಡಿದರು ಎಂದು ಸ್ಮರಿಸಿದರು.



ಬಳಿಕ ಮತ್ತಷ್ಟು ಜನರನ್ನು ಮಾತನಾಡಿ ಪುಸ್ತಕವನ್ನು ನಾವು ಬರೆಯಲು ನಿರ್ಧರಿಸಿದೆವು. ಇಂಗ್ಲಿಷ್‌ನಲ್ಲಿ 'Growing Up Karanth' ಪುಸ್ತಕ ಹೊರತಂದೆವು. ಈ ಪುಸ್ತಕ 2021ರಲ್ಲಿ ವೆಸ್ಟ್‌ಲ್ಯಾಂಡ್‌ ಪಬ್ಲಿಕೇಶನ್‌ನಿಂದ ಪ್ರಕಟವಾಯಿತು. ಆದರೆ, ಕಾರಂತರ ಬಗ್ಗೆ ಕನ್ನಡದಲ್ಲಿ ಬರೆಯದೆ ಇಂಗ್ಲಿಷ್‌ನಲ್ಲಿ ಯಾಕೆ ಬರೆದಿರಿ ಎಂದು ಹಲವರು ಕೇಳಿದರು. ಕಾರಂತರ ಬಗ್ಗೆ ನಾಡಿನ ಜನರಿಗೆ ವಿಪರೀತ ಅಭಿಮಾನ ಇರುವ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಪುಸ್ತಕ ಪ್ರಕಟಿಸಲು ಚಿಂತನೆ ನಡೆಸಿದೆವು.

Karantara Suliyalli Book: ವಿಶ್ವೇಶ್ವರ್ ಭಟ್ ಅವರ ‘ಕಾರಂತರ ಸುಳಿಯಲ್ಲಿ’ ಪುಸ್ತಕ ಲೋಕಾರ್ಪಣೆ



ನನಗೆ ಹಾಗೂ ವಿಶ್ವೇಶ್ವರ ಭಟ್‌ರದ್ದು ಬಹಳ ಹಳೆಯ ಸಂಬಂಧ. ವಿಶ್ವೇಶ್ವರ ಭಟ್ಟರು ನಮ್ಮ ಪುಸ್ತಕವನ್ನು ಓದಿ ತಾವೇ ಅನುವಾದ ಮಾಡುವುದಾಗಿ ಹೇಳಿದರು. ವೈಎನ್‌ಕೆಯವರ ಗರಡಿಯಲ್ಲಿ ಬೆಳೆದ ಭಟ್ಟರು ಪುಸ್ತಕವನ್ನು ಬಹಳ ಸೊಗಸಾಗಿ ಅನುವಾದ ಮಾಡಿದ್ದಾರೆ. ಅನೇಕ ಅನುವಾದಗಳು ಮೂಲ ಕೃತಿ ಮಟ್ಟಕ್ಕೆ ಹೋಗುವುದಿಲ್ಲ. ಆದರೆ, ಇದು ವಿಶಿಷ್ಟ ಪುಸ್ತಕ. ಕಾರಂತರಿಗೆ ಅತ್ಯಂತ ಹತ್ತಿರದವರಾದ ಡಾ.ಶಿವರಾಮ್‌ ಅವರ ಮಗ ಡಾ.ಓಂಪ್ರಕಾಶ್‌ ಅವರು ʼಕಾರಂತರ ಸುಳಿಯಲ್ಲಿʼ ಪುಸ್ತಕವನ್ನು ಓದಿ, ಇದು ಇಂಗ್ಲಿಷ್‌ಗಿಂತ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ ಎಂದು ಹೇಳಿದ್ದರು. ಇದರಿಂದ ಬಹಳ ಸಂತೋಷವಾಯಿತು ಎಂದು ತಿಳಿಸಿದ್ದಾರೆ.