ಇಂದು ಕರ್ನಾಟಕ ಬಂದ್; ಬಸ್ ಸಂಚಾರ ಇರುತ್ತಾ? ಬೆಳಗ್ಗೆಯಿಂದ ಹೇಗಿದೆ ಪರಿಸ್ಥಿತಿ
ಕಾವೇರಿ ನೀರಿನ ಸಮಸ್ಯೆಯನ್ನು ಪ್ರತಿಭಟಿಸಿ ಮತ್ತು ಮೇಕೆದಾಟು, ಮಹದಾಯಿ ಮತ್ತು ಕಳಸಾ-ಬಂಡೂರಿ ಸೇರಿದಂತೆ ಯೋಜನೆಗಳ ಕುರಿತು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್‌ಗೆ ಅಂದುಕೊಂಡಷ್ಟು ಬೆಂಬಲ ಸಿಕ್ಕಿಲ್ಲ.
ಇಂದು ಕರ್ನಾಟಕ ಬಂದ್ -
ಬೆಂಗಳೂರು: ಕಾವೇರಿ ನೀರಿನ ಸಮಸ್ಯೆಯನ್ನು ಪ್ರತಿಭಟಿಸಿ ಮತ್ತು ಮೇಕೆದಾಟು, ಮಹದಾಯಿ ಮತ್ತು ಕಳಸಾ-ಬಂಡೂರಿ ಸೇರಿದಂತೆ ಯೋಜನೆಗಳ ಕುರಿತು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದ್ದು, ಬಂದ್‌ಗೆ ಅಂದುಕೊಂಡಷ್ಟು ಬೆಂಬಲ ಸಿಕ್ಕಿಲ್ಲ. ಕೆಲವು ಸಂಘಟನೆಗಳು ಮಾತ್ರ ಬೆಂಬಲ ಸೂಚಿಸಿವೆ. ಬೆಳಿಗ್ಗೆಯಿಂದಲೇ ಬಿಎಂಟಿಸಿ ಮತ್ತು ಖಾಸಗಿ ಬಸ್ಗಳ ಸಂಚಾರವೂ ಎಂದಿನಂತೆ ಆರಂಭವಾಗಿದೆ.
ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುಖ್ಯವಾಗಿ ನಗರದ ಕೇಂದ್ರ ವಿಭಾಗ, ಪಶ್ಚಿಮ ವಿಭಾಗ, ವಾಯವ್ಯ ವಿಭಾಗ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ತಮಿಳು ಭಾಷಿಕರ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಲು ನಗರ ವ್ಯಾಪ್ತಿಯ ಎಲ್ಲಾ ಡಿಸಿಪಿಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸೂಚನೆ ನೀಡಿದ್ದಾರೆ. ಅಲ್ಲದೆ ಬಂದ್ ಹೆಸರಲ್ಲಿ ಸರ್ಕಾರಿ ಬಸ್, ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಬಾರದು. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಕೊಡಬಾರದು. ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಬಾರದು. ಒಂದೊಮ್ಮೆ ಆ ರೀತಿ ನಡೆದುಕೊಂಡಲ್ಲಿ ಕ್ರಮದ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದಾರೆ. ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದ್ದು, ಹೊರಗೆ ಧರಣಿ, ರ್ಯಾಲಿ ನಡೆಸಿದರೆ ವಶಕ್ಕೆ ಪಡೆಯಲು ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಸೂಚಿಸಿದ್ದಾರೆ.
ಏನೆಲ್ಲ ಸೇವೆ ಇರುತ್ತದೆ?
ಆಸ್ಪತ್ರೆ, ಔಷಧ ಅಗಡಿ, ಹಾಲು, ಮೊಸರು, ತರಕಾರಿಯಂತಹ ಎಲ್ಲಾ ಅಗತ್ಯ ವಸ್ತುಗಳು ಸಿಗಲಿದೆ.
ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳು ತೆರೆಯಲಿದೆ.
KSRTC, BMTC ಬಸ್ ಸೇವೆಗಳು ಎಂದಿನಂತೆ ಇರಲಿದೆ.
ಖಾಸಗಿ ಬಸ್ ಸೇವೆಗಳೂ ಸಹ ಇರಲಿದೆ.
ಕ್ಯಾಬ್, ಮೆಟ್ರೋ, ರೈಲು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.
ಹೋಟೆಲ್ ಮಾಲೀಕರ ಸಂಘ ಈ ಬಂದ್‌ಗೆ ಬೆಂಬಲ ಸೂಚಿಸಿಲ್ಲದ ಕಾರಣ ಹೋಟೆಲ್‌ಗಳು ಎಂದಿನಂತೆ ತೆರೆದಿರಲಿದೆ.
ಪ್ರತಿಭಟನೆ ಹೇಗಿರಲಿದೆ?
ಬಂದ್‌ಗೆ ಕರೆ ನೀಡಿರುವ ವಾಟಾಳ್ ನಾಗರಾಜ್, ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್ಗೆ ಆಗಮಿಸಲಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬರಲಿರುವ ಹೋರಾಟಗಾರರು ಬಂದ್‌ಗೆ ಬೆಂಬಲ ನೀಡುವಂತೆ KSRTC, BMTC ಸಿಬ್ಬಂದಿಗೆ ಮನವಿ ಮಾಡಲಿದ್ದಾರೆ. ನಂತರ ಟೌನ್ಹಾಲ್ ಬಳಿ ತೆರಳಿ ಅಲ್ಲಿಂದ ಫ್ರೀಡಂಪಾರ್ಕ್ವರೆಗೆ ಪ್ರತಿಭಟನಾಮೆರವಣಿಗೆಗೆ ನಿರ್ಧರಿಸಲಾಗಿದೆ. ತೆರೆದ ವಾಹನದಲ್ಲಿ ವಾಟಾಳ್ ಪ್ರತಿಭಟನಾ ರ್ಯಾಲಿ ನಡೆಸಲಿದ್ದು, ಟೌನ್ಹಾಲ್ನಿಂದ ಹಲಸೂರು ಗೇಟ್ ಪೊಲೀಸ್ ಠಾಣೆ, ಮೈಸೂರು ಬ್ಯಾಂಕ್ ಸರ್ಕಲ್, ಓಣಿ ಆಂಜನೇಯ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಫ್ರೀಡಂಪಾರ್ಕ್ ತಲುಪಲಿದೆ.