ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Female Elephant: ಹೆಣ್ಣಾನೆ ದಾನ ಮಾಡುವಂತೆ ಕೇರಳಂ ಸಿಎಂಗೆ ಡಿ.ಕೆ.ಶಿವಕುಮಾರ್‌ ಪತ್ರ

ಸಾಕಾನೆಗಳ ವರ್ಗಾವಣೆ ವಿಚಾರದಲ್ಲಿ ಕೇರಳ ಸರ್ಕಾರವು ಮೊದಲಿನಿಂದಲೂ ಅತ್ಯಂತ ಕಟ್ಟುನಿಟ್ಟಿನ ನಿಲುವು ತಳೆದಿದೆ. ಈ ಹಿಂದೆ ತೆಲಂಗಾಣ ಸಿಎಂ ತಮ್ಮ ರಾಜ್ಯದ ಧಾರ್ಮಿಕ ಉದ್ದೇಶಗಳಿಗಾಗಿ ಕೇರಳದ ಅರಣ್ಯ ಇಲಾಖೆಯ ಶಿಬಿರದ ಆನೆಗಳನ್ನು ಕೋರಿದ್ದ ಪ್ರಸ್ತಾವನೆಯನ್ನು ಕೇರಳ ತಿರಸ್ಕರಿಸಿತ್ತು. ಇದೀಗ ಕರ್ನಾಟಕ ಸರಕಾರದ ಮನವಿ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹೆಣ್ಣಾನೆ ದಾನ ಮಾಡುವಂತೆ ಕೇರಳಂ ಸಿಎಂಗೆ ಡಿಕೆಶಿ ಪತ್ರ

-

Prabhakara R
Prabhakara R Jul 13, 2026 8:20 PM

ಬೆಂಗಳೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಾಂಪ್ರದಾಯಿಕ ಆಚರಣೆಗಳಿಗಾಗಿ ಹೆಣ್ಣು ಸಾಕಾನೆಯೊಂದನ್ನು (Female Elephant) ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ (DK Shivakumar) ಅವರು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಪತ್ರ ಬರೆದಿದ್ದಾರೆ.

ಕೇರಳದ ಯಾವುದೇ ದೇವಸ್ಥಾನದಿಂದ ಇಚ್ಛಾಪೂರ್ವಕವಾಗಿ ಹೆಣ್ಣು ಆನೆಯೊಂದನ್ನು ದಾನವಾಗಿ ಕೊಡಿಸಲು ಅನುಕೂಲ ಮಾಡಿಕೊಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ವಿನಂತಿಸಿದ್ದಾರೆ. ಇದು ಉಭಯ ರಾಜ್ಯಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂಬುದು ಕರ್ನಾಟಕದ ಆಶಯವಾಗಿದೆ. ಆದರೆ, ಇಂತಹ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಅಥವಾ ದಾನಿಗಳನ್ನು ಹುಡುಕುವುದು ತಮ್ಮ ಕಾನೂನು ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇರಳ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನೆರೆರಾಜ್ಯಗಳ ಪ್ರಸ್ತಾವನೆ ತಿರಸ್ಕರಿಸಿದ್ದ ಕೇರಳಂ

ಸಾಕಾನೆಗಳ ವರ್ಗಾವಣೆ ವಿಚಾರದಲ್ಲಿ ಕೇರಳ ಸರ್ಕಾರವು ಮೊದಲಿನಿಂದಲೂ ಅತ್ಯಂತ ಕಟ್ಟುನಿಟ್ಟಿನ ನಿಲುವು ತಳೆದಿದೆ. ಈ ಹಿಂದೆ ತೆಲಂಗಾಣ ಸಿಎಂ ತಮ್ಮ ರಾಜ್ಯದ ಧಾರ್ಮಿಕ ಉದ್ದೇಶಗಳಿಗಾಗಿ ಕೇರಳದ ಅರಣ್ಯ ಇಲಾಖೆಯ ಶಿಬಿರದ ಆನೆಗಳನ್ನು ಕೋರಿದ್ದ ಪ್ರಸ್ತಾವನೆಯನ್ನು ಕೇರಳ ತಿರಸ್ಕರಿಸಿತ್ತು. ಅಷ್ಟೇ ಅಲ್ಲದೆ, ಮೂರು ವರ್ಷಗಳ ಹಿಂದೆ ತ್ರಿಪುರಾದ ವ್ಯಕ್ತಿಯೊಬ್ಬರು ಮಾವೇಲಿಕ್ಕರಾದ ದೇವಸ್ಥಾನಕ್ಕೆ ಆನೆಯೊಂದನ್ನು ಉಡುಗೊರೆಯಾಗಿ ನೀಡಲು ಕೋರಿದ್ದ ಮನವಿಗೂ ಒಪ್ಪಿರಲಿಲ್ಲ.

ಪ್ರಸ್ತುತ ಕೇರಳದ ವಿವಿಧ ಶಿಬಿರಗಳಲ್ಲಿ 30 ಸಾಕಾನೆಗಳಿದ್ದು, ಇಡೀ ರಾಜ್ಯದಲ್ಲಿ ಒಟ್ಟು 368 ಸಾಕಾನೆಗಳಿವೆ. ಆದರೆ, ವಾರ್ಷಿಕವಾಗಿ 15 ರಿಂದ 20 ಆನೆಗಳು ಮೃತಪಡುತ್ತಿರುವುದು ಕೇರಳದ ಆತಂಕಕ್ಕೆ ಕಾರಣವಾಗಿದೆ.

ಸಾಕಾನೆ ವರ್ಗಾವಣೆಗೆ ತಾಂತ್ರಿಕ ಸವಾಲುಗಳು

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ ನೂತನ 'ಸಾಕಾನೆ (ವರ್ಗಾವಣೆ ಅಥವಾ ಸಾರಿಗೆ) ನಿಯಮಗಳು, 2024' ರ ಅಡಿಯಲ್ಲಿ ಅಂತಾರಾಜ್ಯ ಆನೆ ವರ್ಗಾವಣೆಗೆ ಕಠಿಣ ಮಾನದಂಡಗಳನ್ನು ವಿಧಿಸಲಾಗಿದೆ. ಫೆಬ್ರವರಿ 24, 2024 ಕ್ಕಿಂತ ಮೊದಲು ಮಾಲೀಕತ್ವದ ಪ್ರಮಾಣಪತ್ರವನ್ನು ಹೊಂದಿರುವ ಮತ್ತು ಕೇಂದ್ರ ಸಚಿವಾಲಯದ ಎಲೆಕ್ಟ್ರಾನಿಕ್ ಮಾನಿಟರಿಂಗ್ ಅಪ್ಲಿಕೇಶನ್‌ನಲ್ಲಿ ಜೆನೆಟಿಕ್ ಪ್ರೊಫೈಲ್ ನಮೂದಾಗಿರುವ ಆನೆಗಳ ವರ್ಗಾವಣೆಗೆ ಮಾತ್ರ ಅವಕಾಶವಿರುತ್ತದೆ.

ದಾನ ನೀಡುವ ರಾಜ್ಯದ ಮುಖ್ಯ ವನ್ಯಜೀವಿ ಪಾಲಕರು, ಪ್ರಸ್ತುತ ಮಾಲೀಕರು ಆನೆಯನ್ನು ಪೋಷಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ ಮತ್ತು ಹೊಸ ಸ್ಥಳದಲ್ಲಿ ಪ್ರಸ್ತುತ ಸಂದರ್ಭಕ್ಕಿಂತ ಉತ್ತಮ ಪಾಲನೆ ಸಿಗಲಿದೆ ಎಂದು ಅಧಿಕೃತವಾಗಿ ತೃಪ್ತಿಪಟ್ಟರೆ ಮಾತ್ರ ವರ್ಗಾವಣೆಗೆ ಒಪ್ಪಿಗೆ ನೀಡಲು ಸಾಧ್ಯ. ಹೀಗಾಗಿ ಈ ವಿಚಾರದಲ್ಲಿ ಕೇರಳ ಸರ್ಕಾರ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.