ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಸಿದ್ದರಾಮಯ್ಯ! ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ನಡೆದಿದ್ದೇನು?
CM Siddaramaiah resignation: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ರಾಜಕೀಯ ಬೆಳವಣಿಗೆಗಳು ಇದೀಗ ಅಂತಿಮ ಹಂತಕ್ಕೆ ತಲುಪಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ತಮ್ಮ ಕಾವೇರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಚಿವರ ಮಹತ್ವದ ‘ಬ್ರೇಕ್ ಫಾಸ್ಟ್’ಸಭೆಯಲ್ಲಿ ತಾವೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಸಂಗ್ರಹ ಚಿತ್ರ -
ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ರಾಜಕೀಯ ಬೆಳವಣಿಗೆಗಳು ಇದೀಗ ಅಂತಿಮ ಹಂತಕ್ಕೆ ತಲುಪಿವೆ. ಮುಖ್ಯಮಂತ್ರಿ (CM Siddaramaiah) ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ತಮ್ಮ ಕಾವೇರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಚಿವರ ಮಹತ್ವದ ‘ಬ್ರೇಕ್ ಫಾಸ್ಟ್’ಸಭೆಯಲ್ಲಿ ತಾವೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಕಾವೇರಿ ನಿವಾಸದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ ಎನ್ನಲಾಗಿದೆ.
ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಮಧ್ಯಾಹ್ನವೇ ಮುಂದಿನ ಕಾನೂನು ಹಾಗೂ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ರಾಜಭವನಕ್ಕೆ ತೆರಳಿ, ರಾಜ್ಯಪಾಲರನ್ನು ಭೇಟಿಯಾಗಲಿರುವ ಅವರು ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ ಎಂದು ಸಭೆಯ ಮೂಲಗಳು ಖಚಿತಪಡಿಸಿವೆ.
ಈ ಬ್ರೇಕ್ ಫಾಸ್ಟ್ ಸಭೆಯಲ್ಲಿ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಇಷ್ಟು ದಿನಗಳ ಕಾಲ ಸರ್ಕಾರ ಮುನ್ನಡೆಸಲು ಮತ್ತು ಜನಪದ ಕಾರ್ಯಕ್ರಮಗಳನ್ನು ಜಾರಿಗೆ ತರಲು ತಮಗೆ ಬೆಂಬಲವಾಗಿ ನಿಂತ ಎಲ್ಲಾ ಸಚಿವರಿಗೂ ಹಾಗೂ ಶಾಸಕರಿಗೂ ಆತ್ಮೀಯವಾಗಿ ಕೃತಜ್ಞತೆ ಸಲ್ಲಿಸಿದರು. ಮುಂಬರುವ ದಿನಗಳಲ್ಲಿ ಪಕ್ಷ ಮತ್ತು ನಾಯಕತ್ವ ವಹಿಸಲಿರುವ ಮುಂದಿನ ಹೆಜ್ಜೆಗಳ ಕುರಿತು ಸಭೆಯಲ್ಲಿ ಕೆಲವು ಪ್ರಾಥಮಿಕ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್; ಡಿಕೆಶಿ ಸೇರಿ ಹಲವರು ಭಾಗಿ
ಇನ್ನು ಉಪಹಾರ ಕೂಟಕ್ಕೆ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ ಹಾಗೂ ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ಹಿರಿಯ ಸಚಿವರು ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದ್ದು, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಕೂಡ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ.