Karnataka Fisheries University: ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ: ಸಿಎಂ ಸಿದ್ದರಾಮಯ್ಯ ಘೋಷಣೆ
CM Siddaramaiah: ಮೀನುಗಾರಿಕೆ ಇಲಾಖೆ ಶನಿವಾರ ಆಯೋಜಿಸಿದ್ದ ‘ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ’ ವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ಘೋಷಣೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ) -
ಬೆಂಗಳೂರು, ನ.22: ಮೀನುಗಾರಿಕಾ ವಿಶ್ವವಿದ್ಯಾಲಯ (Karnataka Fisheries University) ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದರು. ಮೀನುಗಾರಿಕೆ ಇಲಾಖೆ ಶನಿವಾರ ಆಯೋಜಿಸಿದ್ದ ‘ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಯನ್ನು ಮತ್ತು ಮೀನುಗಾರ ಕುಟುಂಬಗಳನ್ನು ಅಭಿವೃದ್ಧಿಪಡಿಸಲು ಕರಾವಳಿಯವರೇ ಆದ ಮಂಕಾಳ ವೈದ್ಯ ಅವರನ್ನೇ ಮಂತ್ರಿ ಮಾಡಿದ್ದೇವೆ. ಇವರು ಉತ್ತಮವಾಗಿ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ. ಮೀನುಗಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 320 ಕಿ.ಮೀ. ಕರಾವಳಿ ಪ್ರದೇಶ ಇದೆ. 5.5 ಲಕ್ಷ ಹೆಕ್ಟೇರ್ ಒಳನಾಡು ಜಲಪ್ರದೇಶ ಇದೆ. ಮೀನು ರಫ್ತಿನಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ದೇಶದ ಮೀನು ಉತ್ಪಾದನೆಯಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಒಟ್ಟಾರೆ ಮೀನುಗಾರಿಕೆ 10 ಲಕ್ಷ ಜನರ ಜೀವನ ಆಸರೆಯಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾಂತ್ರೀಕೃತ ದೋಣಿಗಳ ಡೀಸೆಲ್ ವಾರ್ಷಿಕ ಮಿತಿಯನ್ನು 1.5 ಲಕ್ಷ ಕಿ.ಲೋ ಲೀಟರ್‌ನಿಂದ 2 ಲಕ್ಷ ಕಿ.ಲೋ ಲೀಟರ್‌ಗೆ ಹೆಚ್ಚಿಸಲಾಗಿದೆ. ನಾಡ ದೋಣಿಗಳಿಗೆ ಕೈಗಾರಿಕಾ ಸೀಮೆ ಎಣ್ಣೆಯನ್ನು ಪ್ರತೀ ಲೀಟರ್‌ಗೆ 35 ರೂ. ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿದ್ದೇವೆ. ಒಟ್ಟಾರೆ ಮೀನುಗಾರ ಸಮುದಾಯದ ಏಳಿಗೆಗೆ ಸರ್ಕಾರ ಪ್ರತೀ ಬಜೆಟ್‌ನಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಸುದ್ದಿಯನ್ನೂ ಓದಿ | ಸಿಎಂ ದೊಡ್ಡವರು, ಅವರ ಅಧಿಕಾರವನ್ನು ನಾವ್ಯಾರೂ ಪ್ರಶ್ನಿಸುತ್ತಿಲ್ಲ: ಡಿಕೆ ಶಿವಕುಮಾರ್
ಸಿಎಂ ಆಗಿ ನಾನೇ ಮುಂದುವರಿಯುವೆ: ಸಿದ್ದರಾಮಯ್ಯ
ಮೈಸೂರು: ಮುಖ್ಯಮಂತ್ರಿಯಾಗಿ ನಾನೇ ಮುಂದುವರಿದು, ಮುಂದಿನ ಬಜೆಟ್‌ಗಳನ್ನು ನಾನೇ ಮಂಡಿಸುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಾಂಗ್ರೆಸ್‌ನ ಕೆಲ ಶಾಸಕರು ಪಕ್ಷದ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ವರಿಷ್ಠರ ತೀರ್ಮಾನಕ್ಕೆ ಪಕ್ಷದ ಪ್ರತಿಯೊಬ್ಬರೂ ಬದ್ಧರಾಗಿರಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದಂತೆ ನಾನೆಂದೂ ಮಾತಿಗೆ ತಪ್ಪುವುದಿಲ್ಲ. ರಾಜ್ಯದ ಜನರಿಗೆ ನೀಡಿದ ಗ್ಯಾರಂಟಿಯ ಭರವಸೆಯನ್ನು ಈಡೇರಿಸಿದ್ದೇನೆ. ಮುಖ್ಯಮಂತ್ರಿಯಾಗಿ ನಾನೇ ಮುಂದುವರಿದು, ಮುಂದಿನ ಬಜೆಟ್‌ಗಳನ್ನು ನಾನೇ ಮಂಡಿಸುವೆ. ಶುಕ್ರವಾರ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ಶನಿವಾರ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೆಕ್ಕೆ ಜೋಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಲಿದೆ ಎಂದು ಹೇಳಿದರು.
ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2,400 ರೂ. ಬೆಂಬಲ ಬೆಲೆ ನಿಗದಿಯಾಗಿದ್ದು, ಇದುವರೆಗೆ ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಮೆಕ್ಕೆ ಜೋಳದ ಖರೀದಿ ಬಗ್ಗೆ ಸಂಬಂಧಪಟ್ಟ ಸಚಿವರು , ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳದ ಬೆಲೆ (Maize price) ಕುಸಿತ ಕಂಡಿದ್ದು, ಉತ್ಪಾದನೆ ಹೆಚ್ಚಾಗಿದೆ. ಸುಮಾರು 55 ಲಕ್ಷ ಮೆಟ್ರಿಕ್ ಟನ್‌ನಷ್ಟು ಮೆಕ್ಕೆಜೋಳವನ್ನು ರೈತರು ಬೆಳೆಯಬಹುದೆಂಬ ಅಂದಾಜಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮೆಕ್ಕೆ ಜೋಳ ಉತ್ಪತ್ತಿಯಲ್ಲಿ ಏರಿಕೆ ಕಂಡಿದ್ದರೂ ಸಹ, ಕೇಂದ್ರ ಸರ್ಕಾರ ಸುಮಾರು 70 ಲಕ್ಷ ಮೆ.ಟನ್ ನಷ್ಟು ಮೆಕ್ಕೆಜೋಳವನ್ನು ಆಮದು ಮಾಡಿಕೊಳ್ಳುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ನೋಡಲ್ ಏಜೆನ್ಸಿಗಳಾದ ನಫೆಡ್, ಎನ್‌ಸಿಸಿಎಫ್ ಸಂಸ್ಥೆಗಳು ಮೆಕ್ಕೆ ಜೋಳ ಖರೀದಿ ಪ್ರಕ್ರಿಯೆ ನಡೆಸದೇ ಇರುವುದರಿಂದ, ರೈತರು ಕೆಲವಡೆ ಧರಣಿ ನಡೆಸುತ್ತಿದ್ದಾರೆ ಎಂದರು.
ಮೆಕ್ಕೆಜೋಳ ಖರೀದಿಗೆ ಡಿಸ್ಟಲರಿಗಳೊಂದಿಗೆ ಚರ್ಚೆ
ಡಿಸ್ಟಿಲರಿಗಳು ಮೆಕ್ಕೆ ಜೋಳ ಬೆಲೆ ಕಡಿಮೆ ಇದ್ದಾಗಲೇ ಹಿಂದೆಯೇ ಖರೀದಿಸಿ ಶೇಖರಣೆ ಮಾಡಿಕೊಂಡಿವೆ. ಮೆಕ್ಕೆಜೋಳವನ್ನು ನಿಯಮಾನುಸಾರ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸಲು ಡಿಸ್ಟಲರಿ ಮಾಲೀಕರೊಂದಿಗೆ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ 10 ಲಕ್ಷ ಮೆ. ಟನ್ ಖರೀದಿ
ಮೆಕ್ಕೆ ಜೋಳದ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಎಲ್ಲ ರೀತಿಯ ಸಹಾಯವನ್ನು ಸರ್ಕಾರ ಮಾಡಲಿದೆ. ರಾಜ್ಯ ಸರ್ಕಾರ, ರೈತರಿಂದ ಸುಮಾರು 10 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ಸ್ಥಾಪಿಸಲು ಸೂಚನೆ ನೀಡಲಾಗಿದೆ. ದೇಶದಲ್ಲಿಯೇ ಹೇರಳವಾಗಿ ಮೆಕ್ಕೆಜೋಳವನ್ನು ಬೆಳೆದಿದ್ದು, ಅದನ್ನು ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರವನ್ನು ಪತ್ರಮುಖೇನ ಕೋರಲಾಗುವುದು ಎಂದರು.
ಇದನ್ನೂ ಓದಿ | ಗ್ಯಾರಂಟಿ ಬಳಿಕ ಮತ್ತೆ 3 ದೊಡ್ಡ ಯೋಜನೆ ಘೋಷಿಸಿದ ಸರ್ಕಾರ
ಬೆಳೆಹಾನಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ
ಮೆಕ್ಕೆ ಜೋಳದ ಜತೆಗೆ ಹೆಸರುಕಾಳು ಬೆಳೆ ಸಮಸ್ಯೆ ಬಗ್ಗೆ ಚರ್ಚಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಎಫ್‌ಎಕ್ಯು ಬದಲಾವಣೆಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸುವ ಜತೆಗೆ ಸಂಬಂಧಪಟ್ಟವರ ತಂಡ ಈ ಬಗ್ಗೆ ದೆಹಲಿಗೂ ಭೇಟಿ ನೀಡಬೇಕೆಂದು ಸೂಚನೆ ನೀಡಲಾಗಿದೆ. ಇತ್ತೀಚೆಗೆ ಪ್ರಧಾನಿ ಅವರನ್ನು ಭೇಟಿಯಾಗಿ ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ಕೋರಲಾಗಿದೆ. ಈ ಬಾರಿ ರಾಜ್ಯದಲ್ಲಿ ಸುಮಾರು 15.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ರಾಜ್ಯದ ಮನವಿಗೆ ಕೇಂದ್ರ ಪೂರಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.