ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rahul Gandhi: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌; ಬಿಜೆಪಿಯ ಮಾನನಷ್ಟ ಮೊಕದ್ದಮೆ ವಜಾ ಮಾಡಿದ ಹೈಕೋರ್ಟ್‌

40 per cent commission: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನಾ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿ, ಭ್ರಷ್ಟಾಚಾರದ ರೇಟ್ ಕಾರ್ಡ್ ಜಾಹೀರಾತನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ಹೂಡಿತ್ತು.

ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌; ಮಾನನಷ್ಟ ಮೊಕದ್ದಮೆ ವಜಾ

ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ). -

Prabhakara R
Prabhakara R Feb 17, 2026 7:15 PM

ಬೆಂಗಳೂರು: ಬಿಜೆಪಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನಾ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿ, ಭ್ರಷ್ಟಾಚಾರದ ರೇಟ್ ಕಾರ್ಡ್ ಜಾಹೀರಾತನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ (defamation case) ಹೂಡಿತ್ತು. ಆದರೆ, ಈ ಪ್ರಕರಣವನ್ನು ಹೈಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವ ಆದೇಶ ರದ್ದತಿ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ಮುಂದುವರಿಕೆಯು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಹೀಗಾಗಿ, 4ನೇ ಆರೋಪಿ ರಾಹುಲ್‌ ಗಾಂಧಿ ವಿರುದ್ಧದ ಪ್ರಕ್ರಿಯೆ ಬದಿಗೆ ಸರಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಬಿಜೆಪಿಯ ವಿರುದ್ಧ ಆಧಾರರಹಿತ, ಸುಳ್ಳು ಜಾಹೀರಾತನ್ನು ಪತ್ರಿಕೆಗಳ ಮುಖಪುಟದಲ್ಲಿ ನೀಡುವ ಮೂಲಕ ಆರೋಪಿಗಳು ಮಾನಹಾನಿ ಮಾಡಿರುವುದಲ್ಲದೇ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆಕ್ಷೇಪಾರ್ಹ ಜಾಹೀರಾತಿನಲ್ಲಿ ʼಭ್ರಷ್ಟಾಚಾರ ದರ ಪಟ್ಟಿ ಅಡಿಯಲ್ಲಿ ಹಲವು ಸುಳ್ಳುಗಳನ್ನು ಸೇರಿಸಲಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿತ್ತು.

ಇನ್ನು ರಾಹುಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಶಶಿಕಿರಣ್‌ ಶೆಟ್ಟಿ ಅವರು, ಜಾಹೀರಾತಿನಲ್ಲಿ ಬಿಜೆಪಿಯ ಹೆಸರನ್ನೇ ಉಲ್ಲೇಖಿಸಿಲ್ಲ. ಸರ್ಕಾರವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರವನ್ನು ವಿರೋಧಿಸಿದ ಮಾತ್ರಕ್ಕೆ ರಾಜಕೀಯ ಪಕ್ಷವೊಂದು ದಾವೆ ಹೂಡಲಾಗದು. ಹೀಗಾದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದು ಅಪರಾಧವಾಗಲಿದೆ ಎಂದಿದ್ದರು.

ಮಹದೇವಪ್ಪ ದೊಡ್ಡವರು, ಈಗ ಅವರೂ ನಮ್ಮ ಹೈಕಮಾಂಡ್‌ನ ಭಾಗ: ಡಿಸಿಎಂ ಡಿ.ಕೆ. ಶಿವಕುಮಾರ್

ಬಿಜೆಪಿ ಪ್ರತಿನಿಧಿಸಿದ್ದ ವಕೀಲ ಎಂ ವಿನೋದ್‌ ಕುಮಾರ್‌ ಅವರು, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹೊರಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ರಾಹುಲ್‌ ಗಾಂಧಿ ಅವರ ಹೆಸರಿತ್ತು. ಆಕ್ಷೇಪಾರ್ಹವಾದ ಜಾಹೀರಾತಿಗೂ ರಾಹುಲ್‌ ಗಾಂಧಿಗೂ ಸಂಬಂಧವಿದೆಯೇ ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಬೇಕಿದೆ. ಜಾಹೀರಾತು ಓದಿದ ಯಾರಿಗಾದರೂ ಅದು ಬಿಜೆಪಿ ವಿರುದ್ಧವೇ ನೀಡಿರುವುದು ಎಂದರ್ಥವಾಗುತ್ತದೆ ಎಂದಿದ್ದರು. ವಾದ-ಪ್ರತಿವಾದ ಆಲಿಸಿರುವ ಕೋರ್ಟ್‌, ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ವಜಾ ಮಾಡಿದೆ.