ಮಹದೇವಪ್ಪ ದೊಡ್ಡವರು, ಈಗ ಅವರೂ ನಮ್ಮ ಹೈಕಮಾಂಡ್‌ನ ಭಾಗ: ಡಿಸಿಎಂ ಡಿ.ಕೆ. ಶಿವಕುಮಾರ್
ಸಚಿವ ಎಚ್.ಸಿ ಮಹದೇವಪ್ಪ ಅವರು ಅಧಿಕಾರ ಹಂಚಿಕೆ ವಿಚಾರವಾಗಿ ನೀಡಿರುವ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, “ನಾಯಕರ ಹೇಳಿಗೆ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ನಾಯಕರು ಕ್ರಮ ಕೈಗೊಳ್ಳುತ್ತಾರೆ. ನಾನು ಮಹದೇವಪ್ಪನಿಗೆ ಹಾಗೂ ಬೇರೆಯವರಿಗೆ ಉತ್ತರ ನೀಡಲು ತಯಾರಿಲ್ಲ ಎಂದು ತಿಳಿಸಿದ್ದಾರೆ.
ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್. -
ಬೆಂಗಳೂರು, ಫೆ.17: “ಸಚಿವ ಎಚ್.ಸಿ ಮಹದೇವಪ್ಪ ಬಹಳ ದೊಡ್ಡವರು. ಈಗ ಅವರೂ ನಮ್ಮ ಹೈಕಮಾಂಡ್ ಭಾಗವಾಗಿದ್ದಾರೆ. ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಈ ಬಗ್ಗೆ ಪಕ್ಷವೇ ತೀರ್ಮಾನ ಮಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಬಳ್ಳಾರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ (DK Shivakumar) ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಸಚಿವ ಎಚ್.ಸಿ ಮಹದೇವಪ್ಪ ಅವರು ಅಧಿಕಾರ ಹಂಚಿಕೆ ವಿಚಾರವಾಗಿ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, “ನಾಯಕರ ಹೇಳಿಗೆ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ನಾಯಕರು ಕ್ರಮ ಕೈಗೊಳ್ಳುತ್ತಾರೆ. ನಾನು ಮಹದೇವಪ್ಪನಿಗೆ ಹಾಗೂ ಬೇರೆಯವರಿಗೆ ಉತ್ತರ ನೀಡಲು ತಯಾರಿಲ್ಲ. ನಾಯಕತ್ವ ವಿಚಾರವಾಗಿ ಈ ಹಿಂದೆ ಹೇಳಿರುವಂತೆ ನಾನು, ಸಿದ್ದರಾಮಯ್ಯನವರು ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ. ಈ ತೀರ್ಮಾನ ಏನು ಎಂಬುದು ಸಮಯ ಬಂದಾಗ ತಿಳಿಯುತ್ತದೆ. ಇದು ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟು ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯದ ಜನಕ್ಕೆ ಸಂದೇಶ ನೀಡುತ್ತಾರೆ” ಎಂದು ತಿಳಿಸಿದರು.
ನನಗೆ ಶಾಸಕರ ವಿದೇಶ ಪ್ರವಾಸ ಗೊತ್ತಿಲ್ಲ
ಶಾಸಕರ ವಿದೇಶ ಪ್ರವಾಸದ ಬಗ್ಗೆ ಕೇಳಿದಾಗ, “ನನಗೆ ಯಾವ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ನನಗೆ ಮಾಧ್ಯಮಗಳಿಂದಷ್ಟೇ ತಿಳಿದಿದೆ. ಇದು ಅವರ ವೈಯಕ್ತಿಕ ಪ್ರವಾಸವೋ, ಬೇರೆಯವರು ಅವರನ್ನು ಪ್ರವಾಸಕ್ಕೆ ಕಳುಹಿಸುತ್ತಿದ್ದಾರೋ ಗೊತ್ತಿಲ್ಲ. ಇದು ಪ್ರವಾಸ ಕಳುಹಿಸುತ್ತಿರುವವರು ಉಂಟು ಹಾಗೂ ಪ್ರವಾಸ ಹೋಗುತ್ತಿರುವವರು ಉಂಟು. ಪಕ್ಷದ ಅಧ್ಯಕ್ಷನಾಗಿ ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಚಾಣಕ್ಯ ವಿವಿ, ಆರ್‌ಎಸ್ಎಸ್ ಕಚೇರಿಗೆ ನೂರಾರು ಎಕರೆ ಕೊಟ್ಟಿಲ್ಲವೇ?
ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಜಮೀನು ಬಳಸಿಕೊಳ್ಳಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, “ಖಂಡಿತವಾಗಿ ನಾವು ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಜಾಗ ಬಳಸಿಕೊಳ್ಳುತ್ತಿದ್ದೇವೆ. ನಾವು ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ 100 ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮುಂದಾಗಿದ್ದೇವೆ. ನಾವು 5-10 ಸಾವಿರ ಚದರ ಅಡಿಗಳಷ್ಟು ಜಾಗವನ್ನು ಮಂಜೂರು ಮಾಡುತ್ತಿದ್ದೇವೆ. ಬಿಜೆಪಿ ಆಡಳಿತ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಟ್ರಸ್ಟ್‌ಗಳ ಹೆಸರಿನಲ್ಲಿ ಜಾಗ ಪಡೆದಿದ್ದಾರೆ. ಚಾಣಕ್ಯ ವಿವಿಗೆ ನೀಡಿರುವ ಜಾಗ ಪ್ರತಿ ಎಕರೆಗೆ 10 ಕೋಟಿ ರೂಪಾಯಿ ಬೆಳೆಬಾಳುತ್ತದೆ. ಆದರೆ ಬಿಜೆಪಿಯವರು ಪ್ರತಿ ಎಕರೆಗೆ 50 ಲಕ್ಷದ ದರದಲ್ಲಿ 100 ಎಕರೆ ಜಾಗ ಮಂಜೂರು ಮಾಡಿದ್ದು, ಸಿಎಸ್ಆರ್ ನಿಧಿ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದಾರೆ. ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು.
ಬಿಜೆಪಿ ಜಾಗ ಮಂಜೂರು ಮಾಡದೇ, ಆರ್‌ಎಸ್ಎಸ್ ಕಚೇರಿ ಹೇಗೆ ನಿರ್ಮಾಣವಾಯಿತು? ಸದಾಶಿವನಗರದಲ್ಲಿ ನಮ್ಮ ಮನೆಯ ಪಕ್ಕದಲ್ಲಿರುವ ಪಾರ್ಕ್ ಅನ್ನು ವೆಲ್ ನೆಸ್ ಸೆಂಟರ್‌ನ ಯೋಗಾ ಕಚೇರಿಗೆ ನೀಡಿದ್ದು, ಕಚೇರಿ ಕಟ್ಟಿಕೊಂಡಿದ್ದಾರೆ. ಇಂತಹ ನೂರಾರು ಉದಾಹರಣೆಗಳನ್ನು ನಾನು ನೀಡಬಲ್ಲೆ. ಅವರು ನಮಗೆ ಬೋಧನೆ ಮಾಡುವ ಅಗತ್ಯವಿಲ್ಲ. ಅವರು ಏನಾದರೂ ಆರೋಪ ಮಾಡಿಕೊಳ್ಳಲಿ. ನಾವು ನಮ್ಮ ಪಕ್ಷದ ದೇವಾಲಯವನ್ನು ಕಟ್ಟಲು ಈ ತೀರ್ಮಾನಕ್ಕೆ ಬಂದಿದ್ದೇವೆ. ಇದು ನಮ್ಮ ಕರ್ತವ್ಯ. ನಾನು ಇದನ್ನು ಮಾಡಿಯೇ ಮಾಡುತ್ತೇನೆ. ಎಲ್ಲಾ ಮಾನದಂಡಗಳು, ಅರ್ಹತೆ ಆಧಾರದ ಮೇಲೆ ನಾವು ಈ ಜಾಗವನ್ನು ಮಂಜೂರು ಮಾಡುತ್ತಿದ್ದೇವೆ. ಈ ಬಗ್ಗೆ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರುವುದಾದರೆ ಹತ್ತಲಿ” ಎಂದರು.