Karnataka Recruitment Scam: ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆಗೆ ಎಸ್‌ಐಟಿ ರಚಿಸಲು ಹೈಕೋರ್ಟ್ ಆದೇಶ
KPSC Veterinary Officers recruitment: ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ಸಂಬಂಧಿಸಿ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಎಸ್‌ಐಟಿ ರಚನೆಗೆ ಹೈಕೋರ್ಟ್ ಆದೇಶ ನೀಡಿದೆ. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೂ ಅಗತ್ಯ ಸಹಕಾರ ಹಾಗೂ ಮಾಹಿತಿ ನೀಡುವಂತೆ ಎಸ್‌ಐಟಿಗೆ ನಿರ್ದೇಶನ ನೀಡಲಾಗಿದೆ.
-
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗೆ (Karnataka Recruitment Scam) ಎಸ್‌ಐಟಿ ರಚಿಸಲು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲು ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠವು ನಿರ್ದೇಶನ ನೀಡಿದೆ.
ಈ ಎಸ್‌ಐಟಿ ತಂಡದಲ್ಲಿ ಅನುಭವಿ ಅಧಿಕಾರಿಗಳಾದ ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೌಕ್ಸೆ ಮತ್ತು ಶರ್ಮಾ ಮಿಶ್ರಾ ಅವರು ಸದಸ್ಯರಾಗಿರಲಿದ್ದಾರೆ. ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳಿಗೂ ಅಗತ್ಯ ಸಹಕಾರ ಹಾಗೂ ಮಾಹಿತಿ ನೀಡುವಂತೆ ಎಸ್‌ಐಟಿಗೆ ಹೈಕೋರ್ಟ್ ಸೂಚಿಸಿದೆ.
100 ದಿನಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದ್ದು, 30 ದಿನಗಳಿಗೆ ಒಮ್ಮೆ ತನಿಖಾ ಪ್ರಗತಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಸಿಐಡಿ ಸಂಪೂರ್ಣ ದಾಖಲೆಗಳನ್ನು ಎಸ್ಐಟಿ ವಶಕ್ಕೆ ನೀಡಬೇಕು. ತನಿಖೆ ನಡೆಸುತ್ತಿರುವ ಪೊಲೀಸರು ದಾಖಲೆ ಹಸ್ತಾಂತರಿಸಬೇಕು. ಒಂದು ವಾರದಲ್ಲಿ ದಾಖಲೆಗಳನ್ನು ಹಸ್ತಾಂತರಿಸಲು ಹೈಕೋರ್ಟ್ ಸೂಚಿಸಿದೆ.
ಸೂರಜ್ ರೇವಣ್ಣಗೆ ಬಿಗ್ ರಿಲೀಫ್; ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 2ನೇ ಬಾರಿ ಬಿ ರಿಪೋರ್ಟ್ ಸಲ್ಲಿಕೆ
ಇನ್ನು ರಾಜ್ಯ ಸರ್ಕಾರ ಎಸ್ಐಟಿಗೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡಬೇಕು. ತನಿಖೆಗೆ ಯಾವುದೇ ಅಡ್ಡಿ ಉಂಟು ಮಾಡದಂತೆ ಹೈಕೋರ್ಟ್ ಸೂಚನೆ ನೀಡಿದೆ.
ಏನಿದು ಪ್ರಕರಣ?
ರಾಜ್ಯದಲ್ಲಿ ಕೆಪಿಎಸ್‌ಸಿ ಮೂಲಕ ನಡೆದ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ನೇಮಕಾತಿ ಪರೀಕ್ಷೆಯ ಫಲಿತಾಂಶ ಹೊರಬಿದ್ದ ತಕ್ಷಣ, ಸುಮಾರು 50ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರತಿ ಹುದ್ದೆಗೆ 80 ಲಕ್ಷದವರೆಗೆ ಲಂಚ ಕೇಳಿದ ಆಡಿಯೋ ಸಂಭಾಷಣೆಗಳು ಬಹಿರಂಗಗೊಂಡಿದ್ದವು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸರ್ಕಾರವು ಇದರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಜತೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ಕೇಸ್ ಸಂಬಂಧ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಅಭ್ಯರ್ಥಿಗಳು ಸೇರಿ ಸಾಕಷ್ಟು ಮಂದಿಯ ವಿಚಾರಣೆ ನಡೆಸಲಾಗಿದೆ. ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಪ್ರಮುಖ ಕಿಂಗ್‌ಪಿನ್ ಹಾಗೂ ಮಧ್ಯವರ್ತಿಯಾಗಿದ್ದ ಬಸವರಾಜ್ ಕನ್ನಾಳೆ ಎಂಬಾತನನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.