ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾರಿಗೆ ನೌಕರರಿಗೆ ಸಿಹಿ ಸುದ್ದಿ: 280 ಕೋಟಿ ರೂಪಾಯಿ ವೇತನ ಹಿಂಬಾಕಿ ಬಿಡುಗಡೆ

ಸಾರಿಗೆ ನಿಗಮ ಗಳ ನೌಕರರಿಗೆ ಒಟ್ಟು 1200 ಕೋಟಿ ರೂಪಾಯಿಗಳ ವೇತನ ಬಾಕಿ ಇತ್ತು. ಈ ಪೈಕಿ ನಮ್ಮ ಸರ್ಕಾರ ಮೊದಲ ಕಂತಿನಲ್ಲಿ 450 ಕೋಟಿ ರೂಪಾಯಿಗಳನ್ನು ಮತ್ತು ಎರಡನೇ ಕಂತಿನಲ್ಲಿ 170 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಮೂರನೇ ಕಂತಿನಲ್ಲಿ 280 ಕೋಟಿ ರೂಪಾಯಿ ಗಳನ್ನು ಬಿಡುಗಡೆ ಮಾಡಿದೆ

ಸಾರಿಗೆ ನೌಕರರಿಗೆ 280 ಕೋಟಿ ರೂಪಾಯಿ ವೇತನ ಹಿಂಬಾಕಿ ಬಿಡುಗಡೆ

-

Profile
Ashok Nayak Nov 16, 2026 10:56 PM

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ 4 ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಾಕಿ ಇರುವ ವೇತನದ ಹಿಂಬಾಕಿ ಪೈಕಿ 280 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌(Byrati Suresh) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮ ಗಳ ನೌಕರರಿಗೆ ಒಟ್ಟು 1200 ಕೋಟಿ ರೂಪಾಯಿಗಳ ವೇತನ ಬಾಕಿ ಇತ್ತು. ಈ ಪೈಕಿ ನಮ್ಮ ಸರ್ಕಾರ ಮೊದಲ ಕಂತಿನಲ್ಲಿ 450 ಕೋಟಿ ರೂಪಾಯಿಗಳನ್ನು ಮತ್ತು ಎರಡನೇ ಕಂತಿನಲ್ಲಿ 170 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಮೂರನೇ ಕಂತಿನಲ್ಲಿ 280 ಕೋಟಿ ರೂಪಾಯಿ ಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಬಾಕಿ ಉಳಿಯುವ ಮುನ್ನೂರು ಕೋಟಿ ರೂಪಾಯಿಗಳನ್ನು ಹಣದ ಲಭ್ಯತೆ ನೋಡಿಕೊಂಡು ಶೀಘ್ರದಲ್ಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಈ ಮೂಲಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(D K Shivakumar) ಮತ್ತು ಕಾಂಗ್ರೆಸ್‌ ಸರ್ಕಾರ ಸಾರಿಗೆ ಇಲಾಖೆಯ ನೌಕರರ ಹಿತ ಕಾಯುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.

ಇದನ್ನೂ ಓದಿ: Byrati Suresh: ಎಲ್ಲರನ್ನೂ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಭಾಷೆ ಕನ್ನಡ: ಬೈರತಿ ಸುರೇಶ್

ಗ್ರೀನ್‌ ಎಸ್‌ ಎಂ ಟ್ಯಾಕ್ಸಿಗೆ ನಿರ್ಬಂಧ: ವಿಯಟ್ನಾಂ ಮೂಲದ ಗ್ರೀನ್‌ ಎಸ್‌ ಎಂ ಟ್ಯಾಕ್ಸಿ(Green S M Taxi)ಗೆ ಈಗಾಗಲೇ 100 ಟ್ಯಾಕ್ಸಿಗಳ ನೋಂದಣಿ ಮಾಡಲಾಗಿದೆ. ಆದರೆ, ಮುಂದಿನ ಆದೇಶ ದವರೆಗೆ ಹೊಸದಾಗಿ ಯಾವುದೇ ಗ್ರೀನ್‌ ಎಸ್‌ ಎಂ ಟ್ಯಾಕ್ಸಿಗಳನ್ನು ನೋಂದಣಿ ಮಾಡದಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಚಾಲಕರ ಹಿತ ಕಾಪಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಇನ್ನು ಮುಂದೆ ಈ ಟ್ಯಾಕ್ಸಿಗೆ ಅನುಮತಿ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ಮುಖ್ಯಮಂತ್ರಿ ಗಳ ಜೊತೆ ಚರ್ಚಿಸಿ, ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಓಲಾ, ಉಬರ್‌ ಸೇರಿ ಎಲ್ಲಾ ಟ್ಯಾಕ್ಸಿಗಳಿಗೂ ಮೀಟರ್‌ ಕಡ್ಡಾಯ: ಇನ್ನು ಮುಂದೆ ಆಟೋ ರಿಕ್ಷಾಗಳಲ್ಲಿ ಅಳವಡಿಸಿರುವ ರೀತಿಯಲ್ಲಿ ಓಲಾ, ಉಬರ್‌ ಸೇರಿದಂತೆ ಎಲ್ಲಾ ಮಾದರಿಯ ಟ್ಯಾಕ್ಸಿ ಗಳಿಗೆ ಮೀಟರ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗುತ್ತದೆ. ಸರ್ಕಾರ ನಿಗದಿಪಡಿಸುವ ದರ ವನ್ನೇ ಟ್ಯಾಕ್ಸಿ ಸಂಸ್ಥೆಗಳು ಪ್ರಯಾಣಿಕರಿಂದ ವಸೂಲಿ ಮಾಡಬೇಕು ಎಂದು ಬೈರತಿ ಸುರೇಶ್‌ ತಿಳಿಸಿದರು.

ಒಂದು ವೇಳೆ ಸರ್ಕಾರದ ನೀತಿಯನ್ನು ಉಲ್ಲಂಘಿಸಿ ಸಂಚರಿಸುವ ಟ್ಯಾಕ್ಸಿಗಳನ್ನು ಸೀಜ್‌ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಟ್ಯಾಕ್ಸಿಗಳಿಗೆ ಮೀಟರ್‌ ಅಳವಡಿಕೆಯನ್ನು ಕಡ್ಡಾಯ ಮಾಡುವ ರೂಪುರೇಷೆಗಳು ಮತ್ತು ಕಾನೂನುಗಳನ್ನು ಸಿದ್ಧಪಡಿಸಲಾಗುತ್ತಿದೆ. ಸದ್ಯದಲ್ಲಿಯೇ ಈ ಕಾನೂನನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ ಅವರು, ವಾಹನ ಮಾಲೀಕರು ಮತ್ತು ಚಾಲಕರಿಗೆ ಟ್ಯಾಕ್ಸಿ ಆಪ್‌ ಹೊಂದಿರುವ ಕಂಪನಿಗಳಿಂದ ಆಗುತ್ತಿರುವ ಶೋಷಣೆಯನ್ನು ತಪ್ಪಿಸಲು ಈ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂದರು.

ಚಾಲಕರಿಂದಲೇ ಬೇಡಿಕೆ: ಅಲ್ಲದೇ, ಆಪ್‌ ಆಧಾರಿತ ಟ್ಯಾಕ್ಸಿ ಸಂಸ್ಥೆಗಳಿಂದ ಶೋಷಣೆಯಾಗುತ್ತಿದೆ. ಈ ಕಾರಣದಿಂದ ಮೀಟರ್‌ ಅಳವಡಿಸಿ ನಮ್ಮ ನೆರವಿಗೆ ಬರಬೇಕೆಂದು ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಇದನ್ನು ಪರಿಗಣಿಸಿ ಮತ್ತು ಸಾವಿರಾರು ಮಾಲೀಕರು ಮತ್ತು ಚಾಲಕರ ಹಿತವನ್ನು ಕಾಯುವ ದೃಷ್ಟಿಯಿಂದ ಮೀಟರ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಾಫ್‌ ಹೆಲ್ಮೆಟ್‌ ನಿಷೇಧ ಕಾಯ್ದೆ ಸಿದ್ಧ: ದ್ವಿಚಕ್ರ ವಾಹನ ಚಾಲಕರು ಮತ್ತು ಸಹ ಪ್ರಯಾಣಿಕರ ರಕ್ಷಣೆ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಹಾಫ್‌ ಹೆಲ್ಮೆಟ್‌ ನಿಷೇಧ(Half Helmet ban) ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಕಾನೂನು ರೂಪಿಸುವ ಪ್ರಕ್ರಿಯೆ ಪೂರ್ಣ ಗೊಳ್ಳುತ್ತಿದ್ದು ಸದ್ಯದಲ್ಲೇ ಜಾರಿಗೆ ತರಲಾಗುತ್ತದೆ. ಹೊಸ ವರ್ಷದ ವೇಳೆಗೆ ಸಂಪೂರ್ಣವಾಗಿ ಹಾಫ್‌ ಹೆಲ್ಮೆಟ್‌ ಅನ್ನು ನಿಷೇಧಿಸುವ ಈ ಕಾಯ್ದೆ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದರು.

ಅದೇ ರೀತಿ ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ದಂಡವನ್ನು ದುಪ್ಪಟ್ಟು ಮಾಡಲಾಗಿದೆ. ಮೊದಲ ಬಾರಿಗೆ ಕಾನೂನು ಉಲ್ಲಂಘನೆ ಮಾಡಿದರೆ 5,000 ರೂಪಾಯಿ ದಂಡ ಮತ್ತು ಎರಡನೇ ಬಾರಿ ಉಲ್ಲಂಘಿಸಿದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ಉಲ್ಲಂಘನೆ ಮಾಡಿದರೆ ವಾಹನವನ್ನೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಈ ಸಂಬಂಧವೂ ಕಾನೂನು ರೂಪಿಸಲಾಗುತ್ತಿದ್ದು, ಸರ್ಕಾರದ ಅನುಮೋದನೆ ಪಡೆದು ಜಾರಿಗೆ ತರಲಾಗುತ್ತದೆ ಎಂದರು.