ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಲಾಟೆ ಕೇಸ್‌ನಲ್ಲಿ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಪುತ್ರನಿಗೆ ತಾತ್ಕಾಲಿಕ ರಿಲೀಫ್‌; ವಿಚಾರಣೆಗೆ ಹೈಕೋರ್ಟ್‌ ತಡೆ

Road rage case: ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಗಲಾಟೆ ಪ್ರಕರಣದಿಂದ ಪಾಸ್‌ಪೋರ್ಟ್ ಪಡೆಯಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಮಗನ ಹೆಸರನ್ನು ಪ್ರಕರಣದಿಂದ ಕೈಬಿಡಿ ಎಂದು ಮಾಜಿ ಸಂಸದ ಅನಂತಕುಮಾರ್ ಹೆಗಡೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಹೈಕೋರ್ಟ್‌ ಆದೇಶದಿಂದ ದಾಬಸ್‌ಪೇಟೆ ಬಳಿ ನಡೆದಿದ್ದ ರೋಡ್‌ ರೇಜ್‌ ಪ್ರಕರಣದಲ್ಲಿ ಅಶುತೋಷ್‌ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದಿದೆ.

ಅನಂತಕುಮಾರ್‌ ಹೆಗಡೆ ಪುತ್ರನ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆ

ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ -

Prabhakara R
Prabhakara R Apr 16, 2026 7:41 PM

ಬೆಂಗಳೂರು: ದಾಬಸ್‌ಪೇಟೆ ಬಳಿ ಕಾರು ಓವರ್‌ ಟೇಕಿಂಗ್‌ ವಿಚಾರಕ್ಕೆ ನಡೆದಿದ್ದ ಗಲಾಟೆ ಪ್ರಕರಣದಲ್ಲಿ (Road rage case) ಬಿಜೆಪಿ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ (Anantkumar Hegde) ಪುತ್ರ ಅಶುತೋಷ್‌ ಹೆಗಡೆ (Ashutosh hegde) ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ. ಎಫ್‌ಐಆರ್‌ ಮತ್ತು ಆರೋಪ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೇ ಇರುವುದರಿಂದ ಪ್ರಕರಣದಿಂದ ಕೈಬಿಡುವಂತೆ ಕೋರಿ ಅಶುತೋಷ್‌ ಹೆಗಡೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿ, ಪ್ರಕರಣದಲ್ಲಿ ಅಶುತೋಷ್‌ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿದೆ.

ನಾಲ್ಕನೇ ಆರೋಪಿ ಅಶುತೋಷ್‌ ವಿರುದ್ಧ ಮೇಲ್ನೋಟಕ್ಕೆ ಅಪರಾಧವಾಗುವಂಥ ಆರೋಪಗಳಿಲ್ಲ. ಮುಂದಿನ ವಿಚಾರಣೆಗೆ ಒಳಪಟ್ಟು ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ನಾಲ್ಕನೇ ಆರೋಪಿಗೆ ಮಾತ್ರ ಮಧ್ಯಂತರ ಆದೇಶ ಸೀಮೀತವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಶುತೋಷ್‌ ಪರ ವಕೀಲ ಪವನ್‌ಚಂದ್ರ ಶೆಟ್ಟಿ ಅವರು, “ಎಫ್‌ಐಆರ್‌ ಅಥವಾ ಆರೋಪ ಪಟ್ಟಿಯಲ್ಲಿ ಅಶುತೋಷ್‌ ಹೆಸರಿಲ್ಲ. ತನ್ನ ಅಜ್ಜನನ್ನು ನೋಡಲು ಅವರು ಭಾರತಕ್ಕೆ ಬಂದಿದ್ದರು. ತಂದೆಯ ಅಧಿಕೃತ ಕಾರಿನಲ್ಲಿ ವಾಪಸ್‌ ಬರುವಾಗ ಕೃತ್ಯ ನಡೆದಿದ್ದು, ಅದರಲ್ಲಿ ಅಶುತೋಷ್‌ ಪಾತ್ರವಿಲ್ಲ” ಎಂದಿದ್ದರು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು, “ಅರ್ಜಿಯಲ್ಲಿ ಮೊದಲಿಗೆ ಅಶುತೋಷ್‌ ಪಕ್ಷಕಾರರಾಗಿಲ್ಲ. ಹೀಗಾಗಿ, ತಿದ್ದುಪಡಿ ಅಥವಾ ಪ್ರತ್ಯೇಕ ಅರ್ಜಿ ಸಲ್ಲಿಸಿದರೆ ನ್ಯಾಯಾಲಯದ ಅದನ್ನು ಪರಿಗಣಿಸಬಹುದು” ಎಂದರು.

ಏನಿದು ಪ್ರಕರಣ?

2025ರ ಜೂನ್‌​ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪ ಅನಂತ್‌ ಕುಮಾರ್‌ ಹೆಗಡೆ ಅವರ ವಿರುದ್ಧ ಕೇಳಿಬಂದಿತ್ತು. ಮಾಜಿ ಸಂಸದ ತೆರಳುತ್ತಿದ್ದ ಕಾರನ್ನು, ಓವರ್​ ಟೇಕ್​ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್​ ಹೆಗಡೆ ಪುತ್ರ ಅಶುತೋಷ್, ಚಾಲಕ ಹಾಗೂ ಗನ್​​ಮ್ಯಾನ್​ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇನ್ನೋವಾ ಕಾರಿನಲ್ಲಿ ಸಲ್ಮಾನ್, ಸೈಫ್‌, ಇಲಿಯಾಜ್ ಖಾನ್‌ ಹಾಗೂ ಉನ್ನೀಸಾ ಎಂಬವರ ಮೇಲೆ ಹಲ್ಲೆ ಆರೋಪ ಕೇಳಿಬಂದಿತ್ತು.

Judges Transfer: ಶಾಸಕ ವಿನಯ್‌ ಕುಲಕರ್ಣಿ ಕೇಸ್‌ ತೀರ್ಪು ನೀಡಿದ್ದ ಜಡ್ಜ್‌ ಸಂತೋಷ್‌ ಗಜಾನನ ಭಟ್‌ ವರ್ಗಾವಣೆ!

ನಂತರ ಹಲ್ಲೆಗೊಳಗಾಗಿದ್ದ ಸೈಫ್ ಖಾನ್‌ ನೀಡಿದ ದೂರಿನ ಮೇರೆಗೆ ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಅನಂತಕುಮಾರ್ ಹೆಗಡೆ ಎ1, ಗನ್‌ಮ್ಯಾನ್ ಶ್ರೀಧರ್‌ ಎ2, ಕಾರು ಚಾಲಕ ಮಹೇಶ್‌ ಎ3 ಮತ್ತು ಇತರರ ವಿರುದ್ಧ ಬಿಎನ್​ಎಸ್ ಕಾಯ್ದೆಯ 6 ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಾಗಿತ್ತು