Shobha Malavalli: ವಿಶ್ವೇಶ್ವರ ಭಟ್ಟರಷ್ಟು ಬ್ರೇಕಿಂಗ್ ನ್ಯೂಸ್ ಇನ್ಯಾರೂ ನೀಡಿಲ್ಲ: ಶೋಭಾ ಮಳವಳ್ಳಿ
Vishwavani Book Release: ''ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟರಷ್ಟು ಬ್ರೇಕಿಂಗ್ ನ್ಯೂಸ್ ಇನ್ಯಾರೂ ಕೊಟ್ಟಿಲ್ಲ'' ಎಂದು ರಿಪಬ್ಲಿಕ್ ಕನ್ನಡ ಟಿವಿ ವಾಹಿನಿ ಸಂಪಾದಕಿ ಶೋಭಾ ಮಳವಳ್ಳಿ ನುಡಿದರು. ಅವರು ಬೆಂಗಳೂರಿನಲ್ಲಿ ನಡೆದ ವಿಶ್ವವಾಣಿ ಪ್ರಕಾಶನದ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಿಪಬ್ಲಿಕ್ ಕನ್ನಡ ಟಿವಿ ವಾಹಿನಿ ಸಂಪಾದಕಿ ಶೋಭಾ ಮಳವಳ್ಳಿ.

ಬೆಂಗಳೂರು: ''ವಿಶ್ವವಾಣಿ (Vishwavani) ಸಂಪಾದಕ ವಿಶ್ವೇಶ್ವರ ಭಟ್ಟರು (Vishweshwar Bhat) ತಾವು ಟಿವಿ ಸಂಪಾದಕರಾಗಿದ್ದಾಗಿನ ಅನುಭವಗಳನ್ನೇ ಒಂದು ಪುಸ್ತಕ ಮಾಡಬಹುದು. ಅವರಷ್ಟು ಬ್ರೇಕಿಂಗ್ ನ್ಯೂಸ್ ಇನ್ಯಾರೂ ಕೊಟ್ಟಿಲ್ಲ'' ಎಂದು ರಿಪಬ್ಲಿಕ್ ಕನ್ನಡ ಟಿವಿ ವಾಹಿನಿ ಸಂಪಾದಕಿ ಶೋಭಾ ಮಳವಳ್ಳಿ (Shobha Malavalli) ನುಡಿದರು. ಅವರು ಬೆಂಗಳೂರಿನಲ್ಲಿ ಶನಿವಾರ (ಜುಲೈ 26) ನಡೆದ ವಿಶ್ವವಾಣಿ ಪ್ರಕಾಶನದ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
''ವಿಶ್ವೇಶ್ವರ ಭಟ್ಟರು ಮುದ್ರಣ ಮಾಧ್ಯಮದಲ್ಲಿ ಮಾಡಿದಷ್ಟೇ ಪ್ರಯೋಗಗಳನ್ನು ಟಿವಿ ಮಾಧ್ಯಮದಲ್ಲೂ ಮಾಡಿದ್ದಾರೆ. ಅಷ್ಟೇ ಹೊಸತನವನ್ನು ತಂದಿದ್ದರು. ಆದರೆ ಇದು 17 ವರ್ಷಗಳ ಹಿಂದೆ ನಡೆದಿದ್ದು ಹಾಗೂ ಆಗ ಇಷ್ಟು ಸಾಮಾಜಿಕ ಜಾಲತಾಣಗಳು ಇಲ್ಲದಿದ್ದರಿಂದ ಅವು ದಾಖಲಾಗದೆ ಹೋಗಿವೆ. ಮುದ್ರಣ ಮಾಧ್ಯಮದಲ್ಲಿದ್ದ ಅವರು ಹೊಸದಾಗಿ ಟಿವಿಗೆ ಬಂದಾದ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ನಮಗಿತ್ತು. ಆದರೆ ಹೊಸ ವಿದ್ಯಾರ್ಥಿಯಂತೆ ಅವರು ಎಲ್ಲವನ್ನೂ ಕೂಡಲೇ ಕಲಿತರು. ಹೊಸ ಹೊಸ ಐಡಿಯಾಗಳನ್ನು ನ್ಯೂಸ್‌ರೂಮಿಗೆ ತರುತ್ತಿದ್ದರುʼʼ ಎಂದರು.
ಈ ಸುದ್ದಿಯನ್ನೂ ಓದಿ: Vishwavani Book Release: ಅಸಂಖ್ಯಾತ ಹೊಸ ಓದುಗರನ್ನು ಸೃಷ್ಟಿಸಿದ ಕೀರ್ತಿ ವಿಶ್ವೇಶ್ವರ ಭಟ್ಟರಿಗೆ ಸಲ್ಲಬೇಕು: ಬೊಮ್ಮಾಯಿ

ಒತ್ತಡಗಳಿಗೆ ಮಣಿಯುತ್ತಿರಲಿಲ್ಲ
ʼʼಎಂತಹುದೇ ಸಂದರ್ಭದಲ್ಲಿಯೂ ತಣ್ಣಗೆ ಸ್ಥಿತಪ್ರಜ್ಞತೆ ಕಾಪಾಡಿಕೊಂಡಿರುತ್ತಿದ್ದರು. ಇಬ್ಬರು ಶಾಸಕರು ಹೊಡೆದಾಡಿಕೊಂಡ ಬ್ರೇಕಿಂಗ್ ಸುದ್ದಿಯನ್ನು ಧೈರ್ಯಯುತವಾಗಿ ಪ್ರಸಾರ ಮಾಡಿ, ಎಂಎಲ್‌ಎಯ ಕಾರ್ಯಕರ್ತರು ಟಿವಿ ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದಾಗಲೂ ಅದನ್ನು ತಣ್ಣಗೆ ನಿರ್ವಹಿಸಿದರು. ಯಾರದೇ ಒತ್ತಡಗಳಿಗೆ ಮಣಿಯದೆ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದರು. ಟಿಆರ್‌ಪಿಯ ಒತ್ತಡವನ್ನು ಸಿಬ್ಬಂದಿಯ ತಲೆ ಮೇಲೆ ಹಾಕುತ್ತಿರಲಿಲ್ಲ. ಅದನ್ನು ಮ್ಯಾನೇಜ್‌ಮೆಂಟ್ ಮುಂದೆ ತಾವೇ ನಿರ್ವಹಿಸುತ್ತಿದ್ದರುʼʼ ಎಂದು ಶೋಭಾ ಬಣ್ಣಿಸಿದರು.
ʼʼಹೊಸ ಕಾರ್ಯಕ್ರಮಗಳನ್ನು ರೂಪಿಸಿದರು. ಉತ್ತರ ಕರ್ನಾಟಕದ ಭಾಷೆಯಲ್ಲಿ ʼಚಹಾ ಚೂಡಾ ಸುದ್ದಿ ನೋಡಾʼ ಎಂಬ ಕಾರ್ಯಕ್ರಮ ಮಾಡಿಸಿದರು. ನವೆಂಬರ್‌ನಲ್ಲಿ ಪೂರ್ತಿ ತಿಂಗಳು ಕನ್ನಡದ ಕಾರ್ಯಕ್ರಮಗಳು, ಬ್ರೇಕಿಂಗ್ ನ್ಯೂಸ್‌ಗೆ ದೊಡ್ಡ ಸುದ್ದಿ ಮುಂತಾದ ಕನ್ನಡದ ಪದಗಳ ಬಳಕೆ, ಟಿಆರ್‌ಪಿ ಇಲ್ಲದ ಕಾಲದಲ್ಲಿ ಗಂಭೀರ ಸಂವಾದ ಮೊದಲಾದ ಜವಾಬ್ದಾರಿ ಜರ್ನಲಿಸಂ ಮುಂತಾದ ಹೊಸ ಕಾರ್ಯಕ್ರಮಗಳನ್ನು ರೂಪಿಸಿ ಮುನ್ನಡೆಸಿದರುʼʼ ಎಂದು ಹೇಳಿದರು.

ʼʼಸಿದ್ದರಾಮಯ್ಯ ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡ ಕಾಲದಲ್ಲಿ ಒಂದು ವಾರವಿಡೀ ಅದನ್ನೇ ಪ್ರಸಾರ ಮಾಡಿದರು. ಸಿದ್ದರಾಮಯ್ಯ ಅವರಂಥ ನಾಯಕ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದವರು, ಅವರು ಒಂದಲ್ಲ ಒಂದು ದಿನ ಸಿಎಂ ಆಗುತ್ತಾರೆʼʼ ಎಂದು ಅಂದೇ ಹೇಳಿದ್ದರು ಎಂದು ನೆನಪಿಸಿಕೊಂಡರು.
ವಿಶ್ವೇಶ್ವರ ಭಟ್ ಅವರ ನಾಲ್ಕು ಪುಸ್ತಕ ಸೇರಿದಂತೆ ವಿಶ್ವವಾಣಿ ಪುಸ್ತಕ ಪ್ರಕಾಶನದ 8 ಕೃತಿಗಳು ಬಿಡುಗಡೆಯಾದವು. ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ, ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ವಿಶ್ವೇಶ್ವರ ಭಟ್ ಉದ್ಯಮಿ ಹಾಗೂ ಲೇಖಕರಾದ ಎಸ್. ಷಡಕ್ಷರಿ, ಉದ್ಯಮಿ ಮತ್ತು ಅಂಕಣಕಾರ ಕಿರಣ್ ಉಪಾಧ್ಯಾಯ, ಪತ್ರಕರ್ತ ರಾಜು ಅಡಕಳ್ಳಿ, ನಿರೂಪಕಿ ಹಾಗೂ ಲೇಖಕಿ ರೂಪಾ ಗುರುರಾಜ್ ಉಪಸ್ಥಿತರಿದ್ದರು.

ವಿಶ್ವೇಶ್ವರ ಭಟ್ ಅವರ 100ನೇ ಪುಸ್ತಕ ʼವಿದೇಶ ಕಾಲʼ, ಸಂಪಾದಕರ ʼಸದ್ಯಶೋಧನೆʼ ಭಾಗ 7, ʼಸಂಪಾದಕರ ಸದ್ಯಶೋಧನೆʼ 8, ʼAsk The Editorʼ ಭಾಗ 3, ರೂಪಾ ಗುರುರಾಜ್ ಅವರ ʼಒಂದೊಳ್ಳೆ ಮಾತುʼ-4, ರಾಜು ಅಡಕಳ್ಳಿಯವರ ʼಗೆದ್ದವರ ಕಥೆಗಳುʼ, ಕಿರಣ್ ಉಪಾಧ್ಯಾಯ ಅವರ ʼಉಭಯದೇಶ ವಾಸಿʼ, ಎಸ್.ಷಡಕ್ಷರಿ ಅವರ ʼಯಶಸ್ವಿ ಬದುಕಿಗೆ ಸರಳ ಸೂತ್ರಗಳುʼ ಬಿಡುಗಡೆಯಾದವು.