Komala J: ಯೋಗದಲ್ಲಿ ಅಸಾಧಾರಣ ಪ್ರತಿಭೆ ತೋರಿದ ಕೋಮಲಾ; ಮಾರಣಾಂತಿಕ ಕಾಯಿಲೆ ಗೆದ್ದುಬಂದ ಈಕೆಯ ಯಶೋಗಾಥೆ ಇಲ್ಲಿದೆ
Yoga Practitioner Komalaʼs success story: ಡಬ್ಲ್ಯುಎಫ್ಎಫ್‌ವೈಎಸ್ಐ ರಾಜ್ಯ ಮಟ್ಟದ 4ನೇ ಯೋಗಾಸನ ಸ್ಪರ್ಧೆಯ 2026ರ ʼಚಾಂಪಿಯನ್ ಆಫ್ ಚಾಂಪಿಯನ್ಸ್ʼ ಪ್ರಶಸ್ತಿ ವಿಜೇತರಾಗುವ ಮೂಲಕ ಬೆಂಗಳೂರಿನ ಕೋಮಲಾ ಗಮನ ಸೆಳೆದಿದ್ದಾರೆ. ಇಲ್ಲಿವರೆಗಿನ ಜೀವನದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ; ಅದು ಕಲ್ಲು ಮುಳ್ಳುಗಳ ಹಾದಿಯಾಗಿತ್ತು. ಇವರ ಯಶೋಗಾಥೆ ಇಲ್ಲಿದೆ.
ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಪ್ರಶಸ್ತಿ ವಿಜೇತೆ ಯೋಗಪಟು ಕೋಮಲಾ. -
| ಲಕ್ಷ್ಮೀಶ ಹೆಗಡೆ ಹೊಸಾಕುಳಿ, ಹೊನ್ನಾವರ
ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಕಳೆದ ಏಪ್ರಿಲ್ 26 ರಂದು ನಡೆದ ಡಬ್ಲ್ಯುಎಫ್ಎಫ್‌ವೈಎಸ್ಐ ಕರ್ನಾಟಕ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನ (World Fitness Federation Sports International Karnataka) 31ರಿಂದ 40 ವರ್ಷಗಳ ನಡುವಿನ ಮಹಿಳಾ ಸ್ಪರ್ಧೆಯ ವಿಭಾಗದಲ್ಲಿ ಉದ್ಯಾನ ನಗರಿಯ ಕೋಮಲಾ ಜೆ. ಮೊದಲ ಸ್ಥಾನ ಪಡೆಯುವ ಮೂಲಕ ʼಚಾಂಪಿಯನ್ ಆಫ್ ಚಾಂಪಿಯನ್ಸ್ʼ ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದಾಳೆ.
ಡಬ್ಲ್ಯುಎಫ್ಎಫ್‌ವೈಎಸ್ಐ ರಾಜ್ಯ ಮಟ್ಟದ 4ನೇ ಯೋಗಾಸನ ಸ್ಪರ್ಧೆಯ 2026ರ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿ ವಿಜೇತರಾದ ಕೋಮಲಾಳ ಇಲ್ಲಿವರೆಗಿನ ಜೀವನದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ; ಅದು ಕಲ್ಲು ಮುಳ್ಳುಗಳ ಹಾದಿಯಾಗಿತ್ತು. ಹಾಗಾದರೆ ಯಾರಿವಳು? ವಜ್ರದಷ್ಟು ಕಠಿಣವೂ, ಹೂವಿನಷ್ಟು ಕೋಮಲವೂ ಆಗಿರುವ ಕೋಮಲಾ, ಯಮನನ್ನೇ ಎದುರಿಸಿ ಗೆದ್ದು ಬಂದ ಯಶೋಗಾಥೆ ಇಲ್ಲಿದೆ.

ಮಾರಣಾಂತಿಕ ಕಾಯಿಲೆ ಗೆದ್ದುಬಂದ ಕೋಮಲಾ!
2012-14ನೇ ಇಸವಿಯಲ್ಲಿ ತಾಯಿಯ ಕೈ ಹಿಡಿದು ಬೆಂಗಳೂರಿನ ಸುಂಕದಕಟ್ಟೆಯ ʼಸಂಯೋಗ ಕಲಾ ಶಾಲೆ ಶಾಖೆಗೆ ಬಂದಿದ್ದಳು. ಅವರನ್ನು ಬರಮಾಡಿಕೊಳ್ಳಲು, ತಾನು ಯೋಗ ಕಲಿಯಲು ಬಂದಿರುವುದಾಗಿ ತಿಳಿಸಿದಳು. ಅದಾಗಲೇ ಎಂಜಿನಿಯರಿಂಗ್ ದ್ವಿತೀಯ ವರ್ಷ ಕಾಲೇಜಿನಲ್ಲಿ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥನಿ ಕೋಮಲಾಳಿಗೆ, ಬರಸಿಡಿಲಿನಂತೆ ಮಾರಣಾಂತಿಕ ಎಸ್‌ಎಲ್‌ಇ ಡಿಸೀಸ್ (Systemic Lupus Erytematosus desiese) ಬಡಿದಿತ್ತು.

ಸಾಮಾನ್ಯವಾಗಿ 20 ರಿಂದ 30 ವಯೋಮಾನದ ನಡುವಿನ ಮಹಿಳೆಯರಿಗೇ ಬರುವ ಮಾರಣಾಂತಿಕ ಕಾಯಿಲೆಗಳ ಗೂಡು ಅದು. Lupus ಅದು ನಮ್ಮ ಇಮ್ಯೂನ್ ಸಿಸ್ಟಂ ಅನ್ನು ಏರುಪೇರು ಮಾಡಿ, ದೇಹದ ಹೃದಯ, ಮೂತ್ರಪಿಂಡ, ಮಿದುಳು, ನರಮಂಡಲ, ಜಠರ, ಕರುಳು ಕಣ್ಣುಗಳಂಥ ಪ್ರಮುಖ ಅಂಗಾಂಗಗಳ ಮೇಲೆ ತನ್ನ ದಾಳಿಯನ್ನು ಮಾಡುತ್ತದೆ. ಇದರ ದುಷ್ಪರಿಣಾಮ ಹತ್ತಾರಲ್ಲ, ನೂರಾರು ಸಾವಿರಾರು. ಅಸಾಧಾರಣ ವೇದನೆ. ಹೀಗಾಗಿ ಈ ಲ್ಯೂಪಸ್ ಕಾಯಿಲೆಯಿಂದ ವರ್ಷಾನುಗಟ್ಟಲೆ ಬಳಲುತ್ತಿದ್ದ ಕೋಮಲಾ ಹೋಮಿಯೋಪಥಿ, ಅಲೋಪಥಿ ವೈದ್ಯಕೀಯ ಚಿಕಿತ್ಸೆಯನ್ನು ನಿರಂತರ ಪಡೆದರೂ ಬದುಕುಳಿಯುವ ಸಾಧ್ಯತೆಗಳನ್ನು ಯಾವುದೇ ವೈದ್ಯರುಗಳೂ ಹೇಳಲಿಲ್ಲ.

ಸಂಯೋಗ ಕಲಾ ಶಾಲೆಗೆ ಬರುವಾಗಲೇ ಕೋಮಲಾ, ಬಹಳ ನಿಶ್ಯಕ್ತಳಾಗಿ ಇದ್ದಳು. ಕೋಮಲಾಳಿಗೆ ಕಾಲೇಜಿನ ದಾರಿಯಲ್ಲಿ ಸಾಗುವಾಗಲೇ ಕಣ್ಣುಗಳು ಇದ್ದಕ್ಕಿದ್ದಂತೆ ಮಂಜಾಗಿ ದಾರಿ ಗೋಚರವಾಗದಷ್ಟು ಕುರುಡಾಗುತ್ತಿದ್ದವಂತೆ. ಸ್ನಾನಕ್ಕೆ ನಿಂತಾಗ ತನ್ನ ತಲೆಯನ್ನೇ ತಾನು ಗೆಡಸಿಕೊಂಡು ಉಜ್ಜಿಕೊಳ್ಳಲಾರದಷ್ಟು ನಿತ್ರಾಣ ಕೈಗಳಲ್ಲಿತ್ತಂತೆ. ಇನ್ನು ನೀಳ ಕಾಯದ ಕೋಮಲಾಳ ಬೆನ್ನು ಬಾಗಿ ಮುದುರಿಹೋಗಿತ್ತು. ಕಣ್ಣುಗಳು ತನ್ನ ತೇವವನ್ನೂ ಕಳೆದುಕೊಂಡು ಕಣ್ಣುಗುಡ್ಡೆಗಳು ಆಳಕ್ಕೆ ಇಳಿದು ಹುದುಗಿ ಹೋಗಿದ್ದವು. ಕೋಮಲಾಳ ಎರಡೂ ಮೂತ್ರ ಪಿಂಡಗಳಲ್ಲಿ ಪ್ರೋಟೀನ್ ನಂತಹ ಪೋಷಕಾಂಶಗಳು ಸೋರಿ ಹೋಗುತ್ತಿದೆ ಎಂದು ವೈದ್ಯರುಗಳು ಹೇಳಿದ್ದರಂತೆ. ಶೌಚಾಲಯ ಬಳಸಲು ಹೋದರೆ ಕೈ ಹಿಡಿದು ಎಬ್ಬಿಸಿ ನಿಲ್ಲಿಸಿ ಕರೆದುಕೊಂಡು ಬೇಕಾಗುತ್ತದೆ ಎಂದು ಕೋಮಲಾಳ ತಾಯಿ ಕಣ್ಣೀರು ಸುರಿಸುತ್ತಿದ್ದರು. ಇನ್ನೂ ಅನೇಕ ವೈಪರೀತ್ಯಗಳನ್ನು ಹೊಂದಿರುವ ಕೋಮಲಾಳಿಗೆ ಯೋಗಾಭ್ಯಾಸವೊಂದೇ ಬದುಕಲು ಕೊನೆಯ ಆಶಾದಾಯಕ ಉಪಚಾರವಾಗಿತ್ತು.

ನಂತರ ಯೋಗ ತರಗತಿಗಳನ್ನು ಶುರುಮಾಡಲಾಯಿತು. ಕೇವಲ ಜೀವಚ್ಚವದಂತಿದ್ದ ಕೋಮಲಾ ಯಾವುದೇ ಯೋಗಾಸನಗಳನ್ನು ಮಾಡುವಷ್ಟು ತ್ರಾಣವನ್ನು ಹೊಂದಿರಲಿಲ್ಲ. ಕೇವಲ ಸುಖಾಸನ, ವಜ್ರಾಸನ, ಪದ್ಮಾಸನ, ವೀರಾಸನಗಳಲ್ಲಿ ಪ್ರಾಣಾಯಾಮ ಕಲಿಯಲು ಶುರು ಮಾಡಿದ ಕೋಮಲಾ, ದಿನದ ಮೂರೂ ಹೊತ್ತು ಔಷದೋಪಚಾರ ಮಾಡಿದಂತೇ ಯೋಗಾಭ್ಯಾಸ ಮಾಡಲು ಶುರುಮಾಡಿದಳು. ದಿನಗಳು ವಾರಗಳು ತಿಂಗಳು ಉರುಳುತ್ತಿದ್ದಂತೇ, ಸೂರ್ಯ ನಮಸ್ಕಾರಗಳು, ಗುರು ನಮಸ್ಕಾರಗಳು, ದುರ್ಗಾ ನಮಸ್ಕಾರಗಳು, ಸರ್ವಾಂಗ ಸುಂದರ ವ್ಯಾಯಾಮವನ್ನು ಕಲಿತ ಕೋಮಲಾ, ಸರಿಯಾದ ಆಹಾರ-ವಿಹಾರ, ಪಥ್ಯ, ನಿದ್ರೆ, ವಿಶ್ರಾಂತಿ, ಎಣ್ಣೆ ಮಸಾಜಿನಿಂದಾಗಿ ಮೈ ಕೈ ತುಂಬಿಕೊಂಡು ಒಂದು ಸಹಜ ಸುಂದರ ಯುವತಿಯಂತಾದಳು.

ಕೋಮಲಾಳಿಗೆ ಯೋಗಾಭ್ಯಾಸದ ಆಸಕ್ತಿ ನೂರ್ಮಡಿಗೊಂಡಿತು. ಮುಂಬಾಗುವ, ಹಿಂಬಾಗುವ, ತಿರುಗುವ, ತಲೆಕೆಳಗಾಗಿ ಮಾಡುವ ಯೋಗಾಸನಗಳ ಜತೆಗೆ ನಿಂತು ಮಾಡುವ, ಕುಳಿತು ಮಾಡುವ, ಕೈಗಳ ಮೇಲೆ ಸಮತೋಲನ ಸಾಧಿಸುವ ಯೋಗಾಭ್ಯಾಸದ ಅನೇಕ ಪಾಠ ಪ್ರವಚನಗಳನ್ನು ಕಲಿತಳು.

ಬಹುಮುಖ ಪ್ರತಿಭೆಯ ಯೋಗ ಶಿಕ್ಷಕಿ
ಸುಮಾರು ಮೂರು ತಿಂಗಳುಗಳ ಕಾಲ ಮೂರೂ ಹೊತ್ತು ತದೇಕಚಿತ್ತದಿಂದ ಯೋಗಾಸನ ಅಭ್ಯಾಸ ಮಾಡ್ತಾ ಬಂದ ಕೋಮಲ Lupus ಕಾಯಿಲೆಗಳ ಔಷಧೋಪಚಾರಗಳನ್ನು ತನ್ನ ವೈದ್ಯರುಗಳ ಸಲಹೆಯಂತೇ ಕಡಿಮೆ ಮಾಡುತ್ತಾ ಬಂದು ಪೂರ್ತಿ ನಿಲ್ಲಿಸಿ, ಕೇವಲ ಯೋಗಾಭ್ಯಾಸವೊಂದನ್ನೇ ತನ್ನ ಉಸಿರಾಟದಂತೇ ಮಾಡುತ್ತಾ ಬಂದು, ಮುಂಬರುವ ದಿನಗಳಲ್ಲಿ ವಿಶ್ವ ಯೋಗ ದಿನಾಚರಣೆಯ ಶುಭದಿನ (108) ನೂರಾ ಎಂಟು ಸೂರ್ಯ ನಮಸ್ಕಾರಗಳನ್ನು ಏಕ ಕಾಲದಲ್ಲಿ ಮಾಡುವ ಮೂಲಕ ತಾನೊಂದು ಮಹಾ ತಪಸ್ವಿಯಂತೇ ಕಂಗೊಳಿಸಿದಳು. ಇನ್ನು ಮುಂದೆ ಕೋಮಲಾ ಅವಳು ಮುಟ್ಟಿದ್ದೆಲ್ಲಾ ಚಿನ್ನದಂತಾಗಿ ಭರತನಾಟ್ಯ, ಸಂಗೀತ, ಯಕ್ಷಗಾನವನ್ನೂ ತನ್ನ ಏಕಮಾತ್ರ ಗುರುಕುಲ "ಸಂಯೋಗ ಕಲಾ ಶಾಲೆ" ಯಲ್ಲಿಯೇ ಕಲಿತು ಪರೀಕ್ಷೆ/ಪ್ರದರ್ಶಗಳನ್ನೂ ನೀಡಿ, ಅಲ್ಲಿಯೇ ಯೋಗ ಶಿಕ್ಷಕಿಯೂ ಆಗಿ ಬಹುಮುಖ ಪ್ರತಿಭೆಯ ಕೋಮಲಾ ಆಗಿ ಹೊರಹೊಮ್ಮಿದಳು.

ಆಮೇಲೆ ಕೋಮಲಾ ನಿಂತ ನೀರಾಗಿ ಉಳಿಯದೇ ತನ್ನ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದಳು. ಆನ್‌ಲೈನ್ ಆಫ್‌ಲೈನ್ ಜಾಬನ್ನು, ಎಂ. ಎನ್. ಸಿ. ಕಂಪನಿಗಳಲ್ಲೂ ಶೃದ್ಧೆಯಿಂದ ನೌಕರಿ ಮಾಡಿದರೂ ಯೋಗಾಭ್ಯಾಸವನ್ನು ಮಾತ್ರ ಬಿಟ್ಟಿರಲಿಲ್ಲ.
ಕೋಮಲಾ ನಂತರದ ದಿನಗಳಲ್ಲಿ ವಿವಾಹ ಆಗಿ ಈಗ ಎರಡೆರಡು ಗಂಡುಮಕ್ಕಳ ತಾಯಿಯಾಗಿ, ತನ್ನ ಇಡೀ ಕುಟುಂಬದ ಸದಸ್ಯರಿಗೆ ಯೋಗ ಹೇಳಿ ಕೊಟ್ಟಿದ್ದಾಳೆ. ಗುರು ಶ್ರೀ ಲಕ್ಷ್ಮೀಶ ಹೆಗಡೆ ಅವರ ಮಾರ್ಗದರ್ಶನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹತ್ತಾರು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕೋಮಲಾ, ಅನೇಕ ಪ್ರಶಸ್ತಿಗಳನ್ನು ಪುರಸ್ಕಾರಗಳನ್ನು ತನ್ನದಾಗಿಸಿಕೊಳ್ಳುತ್ತಲೇ ಬಂದಿದ್ದಾಳೆ.
ಯೋಗಾಸನ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿ

ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾದ ಸ್ಪರ್ಧೆಯ ನಾಲ್ಕು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಹಿರಿಯ, ಕಿರಿಯ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಟಾಸ್ ಆರಿಸಿ ಆಯ್ಕೆ ಮಾಡಿದ ಕಠಿಣತಮ ಯೋಗಾಸನ -ವೀರಭದ್ರಾಸನದ ಮೂರನೆಯ ಭಂಗಿಯಾಗಿತ್ತು. ಅದು ಒಂಟಿಕಾಲಿನಲ್ಲಿ T ಆಕಾರದಲ್ಲಿ ಸಮತೋಲನ ಸಾಧಿಸಿ ನಿಲ್ಲಬೇಕಾದ ಯೋಗಾಸನ ಆಗಿತ್ತು. ಅರ್ಧ, ಒಂದು, ಒಂದೂವರೆ ನಿಮಿಷಗಳಲ್ಲಿ ಇತರ ಸ್ಪರ್ಧಿಗಳು ವಿರಮಿಸಲಾಗಿ, ಕೋಮಲಾ ಮಾತ್ರ ಅದೇ ಭಂಗಿಯಲ್ಲಿ ನಿರಾಯಿಸವಾಗಿ ಮುಂದುವರಿದಿದ್ದಳು. ನಾಲ್ಕೈದಾರು ನಿಮಿಷಗಳ ಕಾಲ ನಿಲ್ಲಬಹುದಾದ ಸಾಮರ್ಥ್ಯವನ್ನು ಹೊಂದಿರುವ ಕೋಮಲಾ, ಸುಮ ಕೋಮಲಳಾಗಿರದೇ ಕಲ್ಲಿನಂತೇ ಘಟ್ಟಿಯಾಗಿ ನಿಂತು ʼWFFYSI KARNATAKA YOGASANA CHAMPIONSHIP COMPETITIONʼನ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿ ಗಳಿಸಿ, ಸೇರಿದ ಎಲ್ಲಾ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ವಿಶೇಷವೆಂದರೆ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಈಕೆಯ ಆರೇಳು ವರ್ಷದ ಮೊದಲ ಮಗ ಪೂರ್ಣಚಂದ್ರ ಎಂಟನೇ ಸ್ಥಾನದಲ್ಲಿ ವಿಜೇತನಾಗಿದ್ದಾನೆ. ಈಕೆ ಗೃಹಿಣಿಯ ಕೆಲಸ ಕಾರ್ಯಗಳನ್ನೂ ಶೃದ್ಧೆಯಿಂದ ನಿರ್ವಹಿಸುತ್ತಾ, ಕಠಿಣತಮವಾದ ಯೋಗಾಭ್ಯಾಸವನ್ನು ಗುರುವಿನ ಅಣತಿಯಂತೇ, ಮಹಾಭಾರತದ ಏಕಲವ್ಯನಂತೇ ಸ್ವಯಂ ತನಗೆ ತಾನೇ ಗುರುವಾಗಿ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್‌ನಲ್ಲಿ ಗೆಲ್ಲುವ ಗುರಿಯೆಡೆಗೆ ಮುನ್ನಡಿಯಿಡುತ್ತಿದ್ದಾಳೆ. ದೇಶ ವಿದೇಶಗಳಲ್ಲಿ ಕೆಲವು ಶಿಷ್ಯರುಗಳನ್ನೂ ಹೊಂದಿರುವ ಕರುನಾಡ ಕೋಮಲಾಳಿಗೆ, ಅವಳ ಕ್ಷಾತ್ರ ತೇಜಸ್ಸಿನ ಸಾಧನೆಗೆ ಸರಿಯಾಗಿ, ಅವಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ಗೆದ್ದು ಬರಲಿ ಎಂದು ಹೃದಯದುಂಬಿ ಹಾರೈಸೋಣ.
(ಲೇಖಕರು ಯೋಗಗುರುಗಳು, ಸಂಯೋಗ ಕಲಾ ಶಾಲೆ, ಸುಂಕದಕಟ್ಟೆ, ಬೆಂಗಳೂರು)