KPSC recruitment scam: ಕೆಪಿಎಸ್‌ಸಿ ನೇಮಕಾತಿ ಹಗರಣ; ಶಿವಶಂಕರಪ್ಪ ಸಾಹುಕಾರ್, ಬಿ.ವಿ. ಗೀತಾ 13 ದಿನ ಇಡಿ ಕಸ್ಟಡಿಗೆ
ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಅವರನ್ನು ಮಂಗಳವಾರ ಇ.ಡಿ. ಅಧಿಕಾರಿಗಳು ಬಂಧಿಸಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ 13 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಲಾಗಿದೆ.
-
ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣಲ್ಲಿ (KPSC recruitment scam) ಬಂಧನವಾಗಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಅವರನ್ನು 13 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಬೆಂಗಳೂರಿನ 4ನೇ ಸಿಸಿಹೆಚ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಇಬ್ಬರನ್ನೂ ಮಂಗಳವಾರ ಬಂಧಿಸಿದ್ದ ಇಡಿ ಅಧಿಕಾರಿಗಳು ಇಂದು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗಳನ್ನು ಅಕ್ಟೋಬರ್ 19ರವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ಇಬ್ಬರು ಆರೋಪಿಗಳು ಇಡಿ ತನಿಖೆಗೆ ಸಹಕರಿಸುವಂತೆ ಜಡ್ಜ್ ಸೂಚನೆ ನೀಡಿದ್ದಾರೆ. ಇನ್ನು ಕಸ್ಟಡಿ ವೇಳೆ ಆರೋಪಿಗಳಿಗೆ ಆರೋಗ್ಯ ತಪಾಸಣೆ ನಡೆಸುವಂತೆ ಇಡಿ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ ಹೊರಬಿದ್ದ ತಕ್ಷಣ, ಸುಮಾರು 50ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಬೆನ್ನಲ್ಲೇ ಮಧ್ಯವರ್ತಿಗಳು ಪ್ರತಿ ಪಶು ವೈದ್ಯಾಧಿಕಾರಿ ಹುದ್ದೆಗೆ 70 ಲಕ್ಷ ದಿಂದ 80 ಲಕ್ಷದವರೆಗೆ ಲಂಚ ಕೇಳುತ್ತಿರುವ ಆಡಿಯೋ ಸಂಭಾಷಣೆಗಳು ಬಹಿರಂಗಗೊಂಡಿದ್ದವು. ಪ್ರಕರಣದ ಗಂಭೀರತೆ ಪರಿಗಣಿಸಿ ಸರಕಾರವು ಇದರ ತನಿಖೆ ಸಿಐಡಿಗೆ ವಹಿಸಿತ್ತು.
ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ, ಅಕ್ರಮ ಮಾರ್ಗಗಳ ಮೂಲಕ ಒಎಂಆರ್ ಶೀಟ್ ಮೌಲ್ಯ ಮಾಪನ ಮತ್ತು ಮೆರಿಟ್ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ತನಿಖಾ ವರದಿಗಳ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ದಾಳಿ ನಡೆಸಿದ್ದರು. ನಂತರ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಮತ್ತು ಸದಸ್ಯೆ ಬಿ.ವಿ.ಗೀತಾ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.