ಮಕ್ಕಳಲ್ಲಿ ನರ ಬೆಳವಣಿಗೆಯ ಸಮಸ್ಯೆಗಳು: ಆರಂಭಿಕ ಪತ್ತೆ ಮತ್ತು ಪರಿಹಾರವೇ ಯಶಸ್ಸಿನ ಕೀಲಿಕೈ
ವಿಶೇಷವಾಗಿ ಎರಡನೇ ಹಂತದ ನಗರಗಳಲ್ಲಿ ನೆಲೆಸಿರುವ ಪೋಷಕರಿಗೆ ಇಂತಹ ಸಂಕೀರ್ಣ ಸಮಸ್ಯೆಗಳಿಗೆ ಸೂಕ್ತ ಹಾಗೂ ತ್ವರಿತ ಚಿಕಿತ್ಸೆ ದೊರಕುವುದು ಸವಾಲಿನ ಕೆಲಸ. ಆದುದರಿಂದ, ಆರಂಭಿಕ ಹಂತದಲ್ಲೇ ಈ ಲಕ್ಷಣಗಳನ್ನು ಗುರುತಿಸುವುದು ಅತ್ಯಗತ್ಯ. ಬಾಲ್ಯದ ಆರಂಭಿಕ ಹಂತವು ಮಗುವಿನ ಮೆದುಳಿನ ಬೆಳವಣಿಗೆಗೆ 'ಸುವರ್ಣ ಕಾಲ' ವಿದ್ದಂತೆ.
-
ಲೇಖನ: ಡಾ. ಸೊಹೈಲ್ ಅಂಬಿ
ಕನ್ಸಲ್ಟೆಂಟ್ ಪೀಡಿಯಾಟ್ರಿಷಿಯನ್ (ಮಕ್ಕಳ ತಜ್ಞರು), ಎಚ್‌ಸಿಜಿ ಸುಚಿರಾಯು ಆಸ್ಪತ್ರೆ, ಹುಬ್ಬಳ್ಳಿ.
ಹುಬ್ಬಳ್ಳಿ: ಪ್ರತಿಯೊಬ್ಬ ಪೋಷಕರಿಗೂ ಅಥವಾ ಮಗುವಿನ ಪಾಲನೆ ಮಾಡುವವರಿಗೂ ಒಂದು ವಿಶಿಷ್ಟವಾದ ಅಂತಃಪ್ರಜ್ಞೆ ಇರುತ್ತದೆ; ಅದು ಮಗುವಿನ ಬೆಳವಣಿಗೆಯಲ್ಲಿನ ಅಸಹಜತೆಯನ್ನು ಸೂಕ್ಷ್ಮವಾಗಿ ಗ್ರಹಿಸುವ ಒಳದನಿ. ಮಗು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಹಿಂದೇಟು ಹಾಕುತ್ತಿರಬಹುದು, ಮಾತನಾಡಲು ಅಥವಾ ಶಬ್ದಗಳನ್ನು ಉಚ್ಛರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರಬಹುದು, ಅಥವಾ ಪದೇ ಪದೇ ಒಂದೇ ರೀತಿಯ ವರ್ತನೆ ಗಳನ್ನು ತೋರುತ್ತಿರಬಹುದು. ಇಂತಹ ಸೂಕ್ಷ್ಮ ಬದಲಾವಣೆಗಳನ್ನು ನಾವು ಸಾಮಾನ್ಯ ವಾಗಿ "ಇದು ಬೆಳೆಯುವ ಹಂತವಷ್ಟೇ" ಅಥವಾ "ಸ್ವಲ್ಪ ತಡವಾಗಿ ಕಲಿಯುವ ಮಗು" ಎಂದು ಸಮಾಧಾನ ಹೇಳಿಕೊಂಡು ನಿರ್ಲಕ್ಷಿಸುವುದುಂಟು. ಆದರೆ, ಎಚ್ಚರ ವಹಿಸಬೇಕಾದ ಸಂಗತಿಯೆಂದರೆ, ಇವೇ ಲಕ್ಷಣಗಳು ನರ ಬೆಳವಣಿಗೆಯ ಅಸ್ವಸ್ಥತೆಯ ಆರಂಭಿಕ ಮುನ್ಸೂ ಚನೆಗಳಾಗಿರಬಹುದು.
ವಿಶೇಷವಾಗಿ ಎರಡನೇ ಹಂತದ ನಗರಗಳಲ್ಲಿ ನೆಲೆಸಿರುವ ಪೋಷಕರಿಗೆ ಇಂತಹ ಸಂಕೀರ್ಣ ಸಮಸ್ಯೆಗಳಿಗೆ ಸೂಕ್ತ ಹಾಗೂ ತ್ವರಿತ ಚಿಕಿತ್ಸೆ ದೊರಕುವುದು ಸವಾಲಿನ ಕೆಲಸ. ಆದುದರಿಂದ, ಆರಂಭಿಕ ಹಂತದಲ್ಲೇ ಈ ಲಕ್ಷಣಗಳನ್ನು ಗುರುತಿಸುವುದು ಅತ್ಯಗತ್ಯ. ಬಾಲ್ಯದ ಆರಂಭಿಕ ಹಂತವು ಮಗುವಿನ ಮೆದುಳಿನ ಬೆಳವಣಿಗೆಗೆ 'ಸುವರ್ಣ ಕಾಲ' ವಿದ್ದಂತೆ. ಈ ಅವಧಿಯಲ್ಲಿ ಮೆದುಳಿನ ನರಮಂಡಲವು ಅತ್ಯಂತ ಚುರುಕಾಗಿರುವುದಲ್ಲದೆ, ಯಾವುದೇ ಬದಲಾವಣೆಗಳಿಗೆ ಹೊಂದಿಕೊಳ್ಳುವ ಅದ್ಭುತ ಸಾಮರ್ಥ್ಯವನ್ನು ಹೊಂದಿ ರುತ್ತದೆ. ಈ ಸಮಯದಲ್ಲಿ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು ಕೇವಲ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಅಥವಾ ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ADHD) ನಂತಹ ಕಾಯಿಲೆಗಳನ್ನು ಪತ್ತೆಹಚ್ಚುವುದಕ್ಕಷ್ಟೇ ಸೀಮಿತವಾಗಿಲ್ಲ; ಬದಲಾಗಿ, ಮಗುವಿನ ಮೆದುಳಿನ ನೈಸರ್ಗಿಕ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಮಹತ್ತರ ಪ್ರಯತ್ನವಾಗಿದೆ.
ಇದನ್ನೂ ಓದಿ: Health Tips: ಚಳಿಗಾಲದಲ್ಲಿ ಮೆಂತೆ ಸೊಪ್ಪು ಸೇವಿಸುವುದರಿಂದ ಸಿಗಲಿದೆ ಹತ್ತಾರು ಪ್ರಯೋಜನ
ಭಾರತದಲ್ಲಿ ಆರಂಭಿಕ ತಪಾಸಣೆ ಏಕೆ ಅನಿವಾರ್ಯ?
ನರ ಬೆಳವಣಿಗೆಯ ಸಮಸ್ಯೆಗಳು ನಮ್ಮಲ್ಲಿ ವಿರಳವೇನಲ್ಲ. ಇವು ದೇಶದಾದ್ಯಂತ ವ್ಯಾಪಿಸಿ ರುವ ಒಂದು ಗಂಭೀರವಾದ, ಆದರೆ ಕಣ್ಣಿಗೆ ಕಾಣದ ಸಾರ್ವಜನಿಕ ಆರೋಗ್ಯ ಸಮಸ್ಯೆ ಯಾಗಿ ಮಾರ್ಪಟ್ಟಿವೆ. ಭಾರತದಲ್ಲಿ 2 ರಿಂದ 9 ವರ್ಷದ ಮಕ್ಕಳ ಮೇಲೆ ನಡೆಸಲಾದ ಒಂದು ಬೃಹತ್ ಸಮೀಕ್ಷೆಯ ಪ್ರಕಾರ, ಪ್ರತಿ ಎಂಟರಿಂದ ಹತ್ತು ಮಕ್ಕಳಲ್ಲಿ ಒಬ್ಬರು ಯಾವು ದಾದರೂ ಒಂದು ರೀತಿಯ ಬೆಳವಣಿಗೆಯ ಸಮಸ್ಯೆಯಿಂದ ಬಳಲುತ್ತಿರಬಹುದು. ಇದರರ್ಥ ಲಕ್ಷಾಂತರ ಮಕ್ಕಳಿಗೆ ಇಂದಿಗೂ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲದ ತುರ್ತು ಅಗತ್ಯವಿದೆ.
ದುರದೃಷ್ಟವಶಾತ್, ನಮ್ಮ ಸಮಾಜದಲ್ಲಿ ಇಂತಹ ಸಮಸ್ಯೆಗಳ ಬಗ್ಗೆ ಬೇರೂರಿರುವ ತಪ್ಪು ಕಲ್ಪನೆಗಳು ಮತ್ತು ಕಳಂಕದ ಭಯದಿಂದಾಗಿ ಅನೇಕ ಪೋಷಕರು ವೈದ್ಯರನ್ನು ಸಂಪರ್ಕಿ ಸಲು ಹಿಂಜರಿಯುತ್ತಾರೆ. ಈ ವಿಳಂಬವು ರೋಗನಿರ್ಣಯವನ್ನು ತಡವಾಗಿಸುತ್ತದೆ. ಮಗುವಿನ ಮೆದುಳು ಹೊಸ ವಿಷಯಗಳನ್ನು ಗ್ರಹಿಸುವ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಜೀವನದ ಮೊದಲ ಕೆಲವು ವರ್ಷಗಳಲ್ಲಿ ಗರಿಷ್ಠ ಮಟ್ಟದಲ್ಲಿ ಹೊಂದಿರು ತ್ತದೆ. ಈ ಅಮೂಲ್ಯ ಸಮಯವನ್ನು ಕಳೆದುಕೊಂಡರೆ, ಸ್ಪೀಚ್ ಥೆರಪಿ (ವಾಕ್ ಚಿಕಿತ್ಸೆ) ಅಥವಾ ಆಕ್ಯುಪೇಷನಲ್ ಥೆರಪಿ (ವೃತ್ತಿಪರ ಚಿಕಿತ್ಸೆ) ಮೂಲಕ ಮಗುವಿನ ಬೌದ್ಧಿಕ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಸುಧಾರಿಸುವ ಅವಕಾಶವನ್ನು ಕಳೆದುಕೊಂಡಂತಾ ಗುತ್ತದೆ.
ಕಾರಣಗಳ ಅವಲೋಕನ
ನರ ಬೆಳವಣಿಗೆಯ ಸಮಸ್ಯೆಗಳು ಸಂಕೀರ್ಣ ಸ್ವರೂಪದ್ದಾಗಿದ್ದು, ಇವು ಸಾಮಾನ್ಯವಾಗಿ ಅನುವಂಶೀಯ ಕಾರಣಗಳು ಮತ್ತು ಪರಿಸರದ ಅಂಶಗಳ ಸಮ್ಮಿಲನದಿಂದ ಉಂಟಾಗುತ್ತವೆ. ಇವು ಪೋಷಕರ ನಿರ್ಲಕ್ಷ್ಯದಿಂದ ಬರುವ ಕಾಯಿಲೆಗಳಲ್ಲ; ಬದಲಾಗಿ ಮಗುವಿನ ಮೆದುಳಿನ ಆರಂಭಿಕ ಬೆಳವಣಿಗೆಯ ಹಂತದಲ್ಲಿ ಉಂಟಾಗುವ ಅಡಚಣೆಗಳಿಂದ ಸಂಭವಿಸುತ್ತವೆ ಎಂಬುದನ್ನು ಅರಿಯಬೇಕು. ಭಾರತೀಯ ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಕಡಿಮೆ ತೂಕದ ಜನನ ಅಥವಾ ಹೆರಿಗೆಯ ಸಮಯದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ ಉಂಟಾಗುವ ತೊಡಕುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಅಲ್ಲದೆ, ಗರ್ಭಾವಸ್ಥೆಯಲ್ಲಿ ತಾಯಿಯ ಆರೋಗ್ಯ ಮತ್ತು ಪೋಷಣೆ ಕೂಡ ಮಗುವಿನ ಬೆಳವಣಿಗೆಯಲ್ಲಿ ನಿರ್ಣಾಯಕವಾಗಿರುತ್ತದೆ. ಇತ್ತೀಚಿನ ಆಧುನಿಕ ಜೀವನಶೈಲಿಯಲ್ಲಿ ನಿದ್ರೆ ಯ ಕೊರತೆ, ಅಪೌಷ್ಟಿಕ ಆಹಾರ ಪದ್ಧತಿ ಮತ್ತು ಮೊಬೈಲ್/ಟಿವಿ ಪರದೆಯ ಮುಂದೆ ಹೆಚ್ಚು ಸಮಯ ಕಳೆಯುವುದು ಮಕ್ಕಳ ನೈಸರ್ಗಿಕ ಆಟ ಮತ್ತು ಸಾಮಾಜಿಕ ಬಾಂಧವ್ಯದ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಇದು ಮಕ್ಕಳ ದೈಹಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಮಾರಕ ವಾಗಬಲ್ಲದು. ತಾಯಿಯ ಶಿಕ್ಷಣ ಮತ್ತು ಜಾಗೃತಿ ಕೂಡ ಮಗುವಿನ ಸರ್ವತೋ ಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಅಧ್ಯಯನಗಳಿಂದ ದೃಢ ಪಟ್ಟಿದೆ.
ಸರಿಯಾದ ಮಾರ್ಗದ ಅನ್ವೇಷಣೆ
ಮಕ್ಕಳ ಬೆಳವಣಿಗೆಯ ಪಯಣವು ಪೋಷಕರು ಮತ್ತು ಆರೈಕೆದಾರರ ನಿರಂತರ ನಿಗಾ ವಹಿಸುವಿಕೆಯಿಂದಲೇ ಪ್ರಾರಂಭವಾಗುತ್ತದೆ. ಕೇವಲ ತಜ್ಞರಿಗಾಗಿ ಕಾಯುವ ಬದಲು, ಪೋಷಕರು ಮತ್ತು ಮಕ್ಕಳ ವೈದ್ಯರು ಬಾಲ್ಯದಿಂದಲೇ ಕೆಲವು ನಿರ್ದಿಷ್ಟ 'ಎಚ್ಚರಿಕೆಯ ಸೂಚನೆಗಳನ್ನು' ಪೂರ್ವಭಾವಿಯಾಗಿ ಗಮನಿಸಬಹುದು. ಈ ಚಿಹ್ನೆಗಳು ಸ್ವತಃ ರೋಗ ನಿರ್ಣಯಗಳಲ್ಲದಿದ್ದರೂ, ವೃತ್ತಿಪರ ಮೌಲ್ಯಮಾಪನವನ್ನು ಪಡೆಯಲು ಪ್ರೇರೇಪಿಸುವ ಎಚ್ಚರಿಕೆಯ ಗಂಟೆಗಳಾಗಿವೆ.
ಸಾಮಾಜಿಕ ಮತ್ತು ಸಂವಹನ ಸೂಚನೆಗಳು: 9 ತಿಂಗಳ ವಯಸ್ಸಿಗೆ, ಮಗು ಸಂತೋಷ ದಾಯಕ ಭಾವನೆಗಳನ್ನು ಅಥವಾ ನಗುವನ್ನು ಹಂಚಿಕೊಳ್ಳಬೇಕು. 12 ತಿಂಗಳ ಹೊತ್ತಿಗೆ, ಕೈಬೀಸುವುದು (ಟಾಟಾ ಮಾಡುವುದು) ಅಥವಾ ಬೇಕಾದ ವಸ್ತುವಿನ ಕಡೆಗೆ ಬೆರಳು ತೋರಿಸುವಂತಹ ಸಂಜ್ಞೆಗಳನ್ನು ಮಾಡಲು ಸ್ಪಷ್ಟ ಪ್ರಯತ್ನಗಳನ್ನು ಮಾಡ ಬೇಕು. ಒಂದು ವರ್ಷ ತುಂಬುವಷ್ಟರಲ್ಲಿ, ಮಗು ಕಣ್ಣಿನ ನೋಟವನ್ನು ಸ್ಥಿರವಾಗಿ ತಪ್ಪಿಸು ವುದು ಅಥವಾ ಕರೆದಾಗ ತನ್ನ ಹೆಸರಿಗೆ ಪ್ರತಿಕ್ರಿಯಿಸದಿರುವುದು ಆತಂಕಕಾರಿ ವಿಷಯ ವಾಗಿದೆ. ಮಾತಿನ ಬೆಳವಣಿಗೆಯಲ್ಲಿ ಗಮನಾರ್ಹ ವಿಳಂಬ ಅಥವಾ ಈ ಹಿಂದೆ ಕಲಿತ ಭಾಷಾ ಕೌಶಲ್ಯಗಳಲ್ಲಿ ಹಠಾತ್ ಹಿನ್ನಡೆ ಕಂಡುಬಂದರೆ, ತಕ್ಷಣದ ವೈದ್ಯಕೀಯ ಸಲಹೆ ಅತ್ಯಗತ್ಯ.
ವರ್ತನೆಯ ಸೂಚನೆಗಳು: ಮಗು ನಿರಂತರವಾಗಿ ಕೈಬಡಿಯುವುದು, ಸುಮ್ಮನೆ ತಿರುಗು ತ್ತಿರುವುದು ಅಥವಾ ನಿರ್ದಿಷ್ಟ ವಸ್ತುಗಳ ಮೇಲೆ ತೀವ್ರವಾದ, ಗಮನವನ್ನು ಕೇಂದ್ರೀಕರಿಸು ವಂತಹ ಪುನರಾವರ್ತಿತ ನಡವಳಿಕೆಗಳನ್ನು ತೋರುತ್ತಿದ್ದರೆ ಎಚ್ಚರ ವಹಿಸಿ. ದಿನಚರಿ ಯಲ್ಲಿನ ಸಣ್ಣ ಬದಲಾವಣೆಗಳಿಗೆ ಅಸಾಮಾನ್ಯ ಹಠ ಅಥವಾ ತೀವ್ರ ಪ್ರತಿರೋಧ ವ್ಯಕ್ತ ಪಡಿಸುವುದನ್ನು ಸಹ ಗಂಭೀರವಾಗಿ ಪರಿಗಣಿಸಬೇಕು.
ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ನರ ಬೆಳವಣಿಗೆ ತಜ್ಞರನ್ನು (Neurodevelop mental Specialist) ಸಂಪರ್ಕಿಸುವುದು ಸೂಕ್ತ. ಅವರು ಭಾರತೀಯ ಸಂದರ್ಭಕ್ಕೆ ಅನುಗುಣವಾಗಿ ರೂಪಿಸಲಾದ ಪ್ರಮಾಣೀಕೃತ ತಪಾಸಣಾ ವಿಧಾನಗಳ ಮೂಲಕ ಮಗುವಿನ ಸಮಸ್ಯೆಯನ್ನು ವೈಜ್ಞಾನಿಕವಾಗಿ ಪತ್ತೆಹಚ್ಚುತ್ತಾರೆ. ಆರಂಭಿಕ ಪತ್ತೆಯು ಕಾಯಿಲೆಗೆ ಸಂಪೂರ್ಣ "ಮದ್ದು" ಅಲ್ಲದಿದ್ದರೂ, ಮಗುವಿನ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಿ, ಮುಂದಿನ ದಿನಗಳಲ್ಲಿ ಅವರು ಸ್ವತಂತ್ರವಾಗಿ ಮತ್ತು ನೆಮ್ಮದಿಯಿಂದ ಬದುಕಲು ಭದ್ರ ಬುನಾದಿ ಹಾಕಿಕೊಡುತ್ತದೆ.
ಭರವಸೆಯ ಭವಿಷ್ಯದತ್ತ ಒಂದು ಹೆಜ್ಜೆ
ನರ ಬೆಳವಣಿಗೆಯ ಸಮಸ್ಯೆಗಳನ್ನು ಮುಚ್ಚಿಡಬೇಕಾದ ಕೌಟುಂಬಿಕ ರಹಸ್ಯಗಳಂತೆ ನೋಡದೆ, ಅವನ್ನು ನಿರ್ವಹಿಸಬಹುದಾದ ಸಾಮಾನ್ಯ ಆರೋಗ್ಯ ಸವಾಲುಗಳಂತೆ ಸ್ವೀಕರಿ ಸುವ ಮನೋಭಾವ ನಮ್ಮ ಸಮಾಜದಲ್ಲಿ ಬೆಳೆಯಬೇಕಿದೆ. ಈ ಹಾದಿ ಕಷ್ಟಕರವೆನಿಸಿ ದರೂ, ಸಕಾಲಿಕ ಚಿಕಿತ್ಸೆಯ ಮೂಲಕ ಮಗುವಿನ ಭವಿಷ್ಯವನ್ನು ಉಜ್ವಲಗೊಳಿಸುವ ವಿಫುಲ ಅವಕಾಶಗಳಿವೆ. ಪ್ರತಿಯೊಂದು ಮಗುವಿಗೂ ತನ್ನ ಸುಪ್ತ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳುವ ಹಕ್ಕಿದೆ. ಪೋಷಕರಾಗಿ ನಿಮ್ಮ ಅಂತಃಪ್ರಜ್ಞೆಯನ್ನು ನಂಬಿ, ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತವನ್ನೂ ಗಮನಿಸಿ ಮತ್ತು ಸಂಶಯ ಬಂದರೆ ತಡಮಾಡದೆ ತಪಾಸಣೆ ಮಾಡಿಸಿ. ಇದು ನಿಮ್ಮ ಮಗುವಿನ ಭವಿಷ್ಯದ ಯಶಸ್ಸಿಗೆ ನೀವು ನೀಡಬಹುದಾದ ಅತ್ಯಮೂಲ್ಯ ಹಾಗೂ ಶ್ರೇಷ್ಠ ಕೊಡುಗೆಯಾಗಿದೆ.