ಪಾಕಿಸ್ತಾನದ ಡ್ರೋನ್ ಮೂಲಕ ಏಕಕಾಲಕ್ಕೆ ಬಾಂಬ್ ಸಾಗಿಸಲು ಸಂಚು ರೂಪಿಸಿದ್ದ ಉಗ್ರರು; ಫರಿದಾಬಾದ್ ಸ್ಫೋಟಕ ಪತ್ತೆಯೊಂದಿಗೆ ಬಯಲಾಗಿದ್ದು ಬಹುದೊಡ್ಡ ವಿಧ್ವಂಸಕ ಕೃತ್ಯ
White-Collar Terror Module: ನವೆಂಬರ್ 10ರಂದು ದೆಹಲಿ ಕೆಂಪು ಕೋಟೆ ಬಳಿ ನಡೆದ ಬಾಂಬ್ ದಾಳಿಯ ಜಾಡು ಹಿಡಿದು ಹೊರಟ ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಒಂದೊಂದೇ ರಹಸ್ಯ ಬಿಚ್ಚಿಕೊಳ್ಳುತ್ತಿದೆ. ಉಗ್ರರು ಪಾಕಿಸ್ತಾನದಿಂದ ಬಹು ದೂರ ಸಾಗಬಲ್ಲ ಡ್ರೋನ್ ತರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು ಎನ್ನುವುದು ಇದೀಗ ಗೊತ್ತಾಗಿದೆ.
ದೆಹಲಿಯಲ್ಲಿ ಬಾಂಬ್ ಸ್ಫೋಟ ನಡೆದ ಸ್ಥಳ (ಸಂಗ್ರಹ ಚಿತ್ರ). -
ದೆಹಲಿ, ನ. 23: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದ ಬಳಿಕ ದೇಶಾದ್ಯಂತ ಹರಡಿರುವ ವೈಟ್ ಕಾಲರ್ ಭಯೋತ್ಪಾದನೆ ಜಾಲದ (White-Collar Terror Module) ಒಂದೊಂದೇ ಮಾಹಿತಿ ಹೊರ ಬೀಳುತ್ತಿದೆ. ಜೈಶ್-ಎ-ಮೊಹಮ್ಮದ್ (Jaish-e-Mohammed) ಉಗ್ರ ಸಂಘಟನೆಯ ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್‌ನ ಭಾಗವಾಗಿ ಬಂಧಿತರಾದ ವೈದ್ಯರು ಮತ್ತು ಇತರ ಶಂಕಿತರು ಪಾಕಿಸ್ತಾನದಿಂದ ದೀರ್ಘ ವ್ಯಾಪ್ತಿಯ ಡ್ರೋನ್ ತರಿಸಿಕೊಳ್ಳಲು ಮುಂದಾಗಿದ್ದರು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಆ ಮೂಲಕ ವೈದ್ಯರ ಸೋಗಿನಲ್ಲಿದ್ದ ಉಗ್ರರು ಬಹುದೊಡ್ಡ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನುವುದು ಗೊತ್ತಾಗಿದೆ.
ನವೆಂಬರ್ 10ರಂದು ಹರಿಯಾಣದ ಫರಿದಾಬಾದ್‌ನ ಬಾಡಿಗೆ ನಿವಾಸದಲ್ಲಿ ಉಗ್ರರು ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 2,900 ಕೆಜಿ ಸ್ಫೋಟಕಗಳು ಪತ್ತೆಯಾದಾಗ ಬಹುದೊಡ್ಡ ಸಂಚಿನ ಪ್ರಯತ್ನ ವಿಫಲವಾಯಿತು. ಅಲ್ಲದೆ ಆ ಮೂಲಕ ಪಾಕಿಸ್ತಾನದಿಂದ ಡ್ರೋನ್‌ಗಳನ್ನು ತರಿಸಿಕೊಳ್ಳುವ ಯೋಜನೆ ಕೂಡ ಮುರಿದು ಬಿತ್ತು. ಇದರಿಂದ ಹತಾಶರಾದ ಉಗ್ರರು ಅದೇ ದಿನ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಿಸಿದರು. ಜಮ್ಮು ಮತ್ತು ಕಾಶ್ಮೀರ ಮೂಲದ ವೈದ್ಯ ಡಾ. ಉಮರ್ ಮೊಹಮ್ಮದ್ ಚಲಾಯಿಸುತ್ತಿದ್ದ ಕಾರ್ ಸ್ಫೋಟಗೊಂಡು 13 ಮಂದಿ ಸಾವನ್ನಪ್ಪಿದರು.
ದೆಹಲಿ ಸ್ಫೋಟದ ಮತ್ತೊಬ್ಬ ಆರೋಪಿ ಫೋಟೋ ರೀವೀಲ್; ಈತನ ಪ್ಲಾನ್ ಏನಿತ್ತು ಗೊತ್ತಾ?
ಈ ಹಿಂದೆ ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳನ್ನು ಕಳ್ಳ ಸಾಗಣೆ ಮಾಡುವ ವೇಳೆ ಸಿಕ್ಕಿಬಿದ್ದ ಡ್ರೋನ್‌ಗಳು ಕೂಡ ಹಲವಾರು ಕಿಲೋ ಮೀಟರ್ ಹಾರುವ ಸಾಮರ್ಥ್ಯವನ್ನು ಹೊಂದಿದ್ದವು. ಬಂಧಿತ ಭಯೋತ್ಪಾದಕ ಮಾಡ್ಯೂಲ್ ಕಾರ್ಯಕರ್ತರು ಬಿಡಿ ಬಿಡಿಯಾಗಿ ಬರುವ ಡ್ರೋನ್ ಭಾಗಗಳನ್ನು ಜೋಡಿಸಿ ಅವುಗಳಲ್ಲಿ ಸ್ಫೋಟಕ ಅಳವಡಿಸುವ ಮೂಲಕ ದಾಳಿ ನಡೆಸಲು ಮುಂದಾಗಿದ್ದರು ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.
ದೆಹಲಿ ಕಾರ್ ಬಾಂಬರ್ ಡಾ. ಉಮರ್ ಮೊಹಮ್ಮದ್‌ನ ಸಹಚರ ಜಾಸಿರ್ ಬಿಲಾಲ್ ವಾನಿಯನ್ನು ನವೆಂಬರ್ 17ರಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ. ದೆಹಲಿ ಕಾರ್ ಬಾಂಬ್ ಸ್ಫೋಟಕ್ಕೂ ಮುನ್ನ ಡ್ರೋನ್ ಅಭಿವೃದ್ಧಿಪಡಿಸಲು ಆತ ಪ್ರಯತ್ನಿಸಿದ್ದ ಎನ್ನಲಾಗಿದೆ.
ಉಗ್ರರ ಜಾಡು ಹಿಡಿದು...
ಬಾಂಬ್ ಸ್ಫೋಟದ ಹಿಂದಿನ ಸಂಪೂರ್ಣ ಪಿತೂರಿಯನ್ನು ಕಂಡು ಹಿಡಿಯಲು ಎನ್‌ಐಎ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಭಯೋತ್ಪಾದನ ನಿಗ್ರಹ ಸಂಸ್ಥೆಯ ಹಲವು ತಂಡಗಳು ವಿವಿಧ ಸುಳಿವುಗಳ ಆಧಾರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ದಾಳಿಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸಲು ಬೇರೆ ಬೇರೆ ರಾಜ್ಯಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಭಾರಿ ಸಂಚು
ತನಿಖೆ ವೇಳೆ ಮತ್ತೊಂದು ಪ್ರಮುಖ ಅಂಶವೂ ಬೆಳಕಿಗೆ ಬಂದಿದೆ. ಆರೋಪಿಗಳು ದೆಹಲಿ ಮತ್ತು ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಸ್ಫೋಟ ನಡೆಸಲು ಸುಮಾರು 200 ಬಾಂಬ್‌ಗಳನ್ನು ಸಿದ್ಧಪಡಿಸಲು ಮುಂದಾಗಿದ್ದರು ಎನ್ನುವ ವಿವಾರವನ್ನು ಮೂಲಗಳು ಬಹಿರಂಗಪಡಿಸಿವೆ. ಇದಕ್ಕಾಗಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಫರಿದಾಬಾದ್ ಮಾಡ್ಯೂಲ್‌ನ ಭಾಗವಾಗಿದ್ದ ಆರೋಪಿಗಳಿಗೆ ತರಬೇತಿ ನೀಡಲು ಜೆಇಎಂ ಕಾರ್ಯಕರ್ತನನ್ನು ಆಯ್ಕೆ ಮಾಡಿತ್ತು.
ದೆಹಲಿ ಸ್ಫೋಟ ಪ್ರಕರಣ; ಶೂನಲ್ಲಿ ಸ್ಫೋಟಕ ಇಟ್ಟು ಬ್ಲಾಸ್ಟ್ ಮಾಡಲು ಪ್ಲಾನ್?
ಭಯೋತ್ಪಾದಕ ಸಂಘಟನೆಯಲ್ಲಿ ಭಾಗಿಯಾಗಿರುವ ವೈದ್ಯರ ಬ್ರೈನ್ ವಾಶ್ ಪ್ರಕ್ರಿಯೆ 2019ರ ಆರಂಭದಲ್ಲಿಯೇ ಸೋಶಿಯಲ್ ಮೀಡಿಯಾದ ಮೂಲಕ ಪ್ರಾರಂಭವಾಯಿತು ಎಂಬ ಅಂಶ ತನಿಖೆಯಲ್ಲಿ ಕಂಡುಬಂದಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಪಾಕಿಸ್ತಾನ ಮತ್ತು ವಿಶ್ವದ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಹ್ಯಾಂಡ್ಲರ್‌ಗಳು ಸಾಂಪ್ರದಾಯಿಕ ವಿಧಾನ ಬಿಟ್ಟು ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ಆಯ್ಕೆ ಮಾಡಿ ಡಿಜಿಟಲ್ ವಿಧಾನಗಳ ಮೂಲಕ ತರಬೇತಿ ನೀಡುವ ಹೊಸ ಭಯೋತ್ಪಾದಕ ತಂತ್ರ ಅನುಸರಿಸುತ್ತಿರುವುದು ಕೂಡ ತನಿಖೆ ವೇಳೆ ಕಂಡು ಬಂದಿದೆ.