ಜಿಬಿಎ ವ್ಯಾಪ್ತಿಯಲ್ಲಿ ಮರದ ಕೊಂಬೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ; 2.77 ಕೋಟಿ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ
ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರುದ್ಧ ಹೈಕೋರ್ಟ್ ಕ್ರಮ ಕೈಗೊಂಡಿದೆ. ಸಂತ್ರಸ್ತ ಜಿ. ಚಂದನ್ ಅವರಿಗೆ 2,77,29,695 ರೂ. ಪರಿಹಾರವನ್ನು ಶೇ.6ರ ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರುದ್ಧ ಹೈಕೋರ್ಟ್ ಕ್ರಮ ಕೈಗೊಂಡಿದೆ. ಸಂತ್ರಸ್ತ ಜಿ. ಚಂದನ್ ಅವರಿಗೆ 2,77,29,695 ರೂ. ಪರಿಹಾರವನ್ನು ಶೇ.6ರ ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ತೀರ್ಪು ನೀಡಿದ್ದು, ತೀರ್ಪಿನ ಪ್ರತಿ ದೊರೆತ 12 ವಾರಗಳೊಳಗೆ ಆರ್‌ಟಿಜಿಎಸ್ ಮೂಲಕ ಪರಿಹಾರ ಮೊತ್ತ ಪಾವತಿಸುವಂತೆ ಜಿಬಿಗೆ ಸಂಸ್ಥೆಗಳಿಗೆ ಸೂಚಿಸಿದೆ.
ಸಾರ್ವಜನಿಕ ರಸ್ತೆ ಮತ್ತು ಜನರ ಸುರಕ್ಷತೆಗೆ ಅಪಾಯವಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ, ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅವರ ಕಾನೂನುಬದ್ಧ ಕರ್ತವ್ಯ ಎಂದು ನ್ಯಾಯಪೀಠ ಹೇಳಿದೆ.ಅಪಘಾತಕ್ಕೆ ದೈವಿಕ ಕಾರಣವನ್ನು ನೆಪವಾಗಿ ಬಳಸಲಾಗದು ಎಂಬ ಬಿಬಿಎಂಪಿಯ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಏನಿದು ಘಟನೆ?
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಜಿ. ಚಂದನ್ 2024ರ ಮಾರ್ಚ್ 7ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಕಚೇರಿಗೆ ತೆರಳುವಾಗ ಶಾಂತಲಾ ನಗರದ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯ ಆವರಣದಲ್ಲಿದ್ದ ಗುಲ್ಮೊಹರ್ ಮರದ ಭಾರೀ ಕೊಂಬೆ ಅವರ ಕುತ್ತಿಗೆಯ ಮೇಲೆ ಬಿದ್ದಿತ್ತು. ಘಟನೆಯಲ್ಲಿ ಅವರ ಬೆನ್ನುಹುರಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಅವರು ಟ್ರಾಮಾಟಿಕ್ ಪ್ಯಾರಾಪ್ಲೀಜಿಯಾ ಸಮಸ್ಯೆಗೆ ಒಳಗಾಗಿದ್ದರು. ವೈದ್ಯಕೀಯ ಪ್ರಮಾಣಪತ್ರದ ಪ್ರಕಾರ ಶೇ.85ರಷ್ಟು ಅಂಗವೈಕಲ್ಯವಿದ್ದರೂ, ಜೀವನೋಪಾಯ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಉಂಟಾದ ಪರಿಣಾಮವನ್ನು ಪರಿಗಣಿಸಿ ನ್ಯಾಯಾಲಯವು ಅವರ ಅಂಗವೈಕಲ್ಯವನ್ನು ಶೇ.100 ಎಂದು ಪರಿಗಣಿಸಿದೆ.
ಸಲ್ವಾರ್ ತೆಗೆಯುವುದು, ಎದೆ ಒತ್ತುವುದು ಲೈಂಗಿಕ ದೌರ್ಜನ್ಯವಲ್ಲ ಎಂದ ಪಾಟ್ನಾ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ತರಾಟೆ
ಮರದ ಕೊಂಬೆಯ ಬಗ್ಗೆ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯು 2024ರ ಫೆಬ್ರವರಿ 16ರಂದು ಬಿಬಿಎಂಪಿಗೆ ಪತ್ರ ಬರೆದಿತ್ತು. ಫೆಬ್ರವರಿ 22ರಂದು ಈ ಮಾಹಿತಿ ಅಧಿಕಾರಿಗಳಿಗೆ ತಲುಪಿತ್ತು. ಕೊಂಬೆ ಯಾವುದೇ ಸಮಯದಲ್ಲಾದರೂ ಮುರಿದು ಬೀಳುವ ಸಾಧ್ಯತೆಯಿದ್ದು, ಮಕ್ಕಳು, ನಿವಾಸಿಗಳು ಹಾಗೂ ವಾಹನಗಳಿಗೆ ಅಪಾಯವಿದೆ ಎಂದು ಶಾಲೆ ಎಚ್ಚರಿಸಿತ್ತು. ಆದರೆ ಬಿಬಿಎಂಪಿ ಅದನ್ನು ನಿರ್ಲ್ಯಕ್ಷಿಸಿತ್ತು.