Fire Accident: ಬೆಂಗಳೂರಿನಲ್ಲಿ ಭಾರಿ ಅಗ್ನಿ ಅವಘಡ; 19 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಭಸ್ಮ
Massive fire breaks out in Bengaluru: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ 19 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಭಸ್ಮವಾಗಿದೆ. ಯಲಚೇನಹಳ್ಳಿಯ ಡೋಮಿನೋಸ್ ಪಿಜ್ಜಾ ಕಟ್ಟಡದ ನೆಲಮಹಡಿಯಲ್ಲಿ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

-

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರಿ ಅಗ್ನಿ ದುರಂತ (Fire outbreak) ಸಂಭವಿಸಿದೆ. 19 ಎಲೆಕ್ಟ್ರಿಕ್ ಸ್ಕೂಟರ್‌ಗಳು (Electric scooters) ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಕನಕಪುರ ರಸ್ತೆ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಯಲಚೇನಹಳ್ಳಿಯ ಡೋಮಿನೋಸ್ ಪಿಜ್ಜಾ ಕಟ್ಟಡದ ನೆಲಮಹಡಿಯಲ್ಲಿ ಈ ದುರ್ಘಟನೆ ನಡೆದಿದೆ.
ಮೆಟ್ರೋ ನಿಲ್ದಾಣದ ಬಳಿಯ ಕಮರ್ಷಿಯಲ್ ಕಟ್ಟಡದ ನೆಲಮಹಡಿಯಲ್ಲಿ ಸ್ಥಾಪಿಸಲಾಗಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಚಾರ್ಜಿಂಗ್ ವೇಳೆ ಓವರ್‌ಹೀಟ್‌ನಿಂದಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ನಂತರ ಪಾರ್ಕಿಂಗ್ ಪ್ರದೇಶದಲ್ಲಿದ್ದ ಗ್ಯಾಸ್ ಲೈನ್‌ಗೂ ಬೆಂಕಿ ವ್ಯಾಪಿಸಿದೆ. ಈ ವೇಳೆ ಒಂದು ಸಿಲಿಂಡರ್ ಸ್ಫೋಟಗೊಂಡಿದ್ದು, ಅದರ ತೀವ್ರತೆಗೆ ಅಗ್ನಿ ದುರಂತ ಸಂಭವಿಸಿದೆ.
ಇದನ್ನೂ ಓದಿ: Gruhalakshmi scheme: ಗೃಹಲಕ್ಷ್ಮಿ ಹಣದಲ್ಲಿ ಆಯುಧ ಪೂಜೆ ದಿನದಂದು ವಾಷಿಂಗ್ ಮಷಿನ್ ಖರೀದಿಸಿದ ಮಹಿಳೆ; ಸಿಎಂ ಸಂತಸ
ಇನ್ನು ಈ ದುರಂತದಲ್ಲಿ ಪಾರ್ಕಿಂಗ್‍ನಲ್ಲಿ ನಿಲ್ಲಿಸಲಾಗಿದ್ದ 19 ಎಲೆಕ್ಟ್ರಿಕ್ ಬೈಕ್‌ಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿವೆ. ಈ ವೇಳೆ ಆರು ಗ್ಯಾಸ್ ಸಿಲಿಂಡರ್‌ನಲ್ಲಿ ಸೋರಿಕೆ ಕಾಣಿಸಿಕೊಂಡಿತ್ತು. ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ವಾಹನ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ಕೆ.ಎಸ್. ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ಈ ಅವಘಢ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಕಟ್ಟಡದ ನೆಲಮಹಡಿ ಸಂಪೂರ್ಣ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ. ಈ ಘಟನೆಯ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದೆ.
ಈ ಹಿಂದೆ ನಗರತ್ ಪೇಟೆಯಲ್ಲಿ ಸಂಭವಿಸಿತ್ತು ಅಗ್ನಿ ದುರಂತ
ಇತ್ತೀಚೆಗಷ್ಟೇ ಬೆಂಗಳೂರಿನ ನಗರತ್ ಪೇಟೆಯಲ್ಲಿ ನಸುಕಿನ ಜಾವ 3:30ಕ್ಕೆ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಮೃತಪಟ್ಟಿದ್ದರು. ನಗರತ್ ಪೇಟೆಯ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ತಡರಾತ್ರಿ ಅಗ್ನಿ ದುರಂತ ಸಂಭವಿಸಿತ್ತು. ಪ್ಲಾಸ್ಟಿಕ್ ಅಂಗಡಿಯೊಳಗೆ ರಾತ್ರಿ ಕೆಲಸಗಾರರು ಮಲಗಿ ನಿದ್ರಿಸಿರುವಾಗ ಬೆಂಕಿ ಹೊತ್ತಿಕೊಂಡಿತ್ತು. ತೀವ್ರ ದಹನಕಾರಿ ವಸ್ತುಗಳು ಅಂಗಡಿಯಲ್ಲಿ ಇದ್ದುದರಿಂದ ಬೆಂಕಿ ಶೀಘ್ರವಾಗಿ ವ್ಯಾಪಿಸಿ ಈ ದುರಂತ ಸಂಭವಿಸಿತ್ತು.
ಇದನ್ನೂ ಓದಿ: Viral News: ಇದಪ್ಪ ಮಾನವೀಯತೆ ಅಂದ್ರೆ; ಗಾಯಗೊಂಡ ಮಹಿಳೆಯನ್ನು ಬೆನ್ನಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಕಾನ್ಸ್‌ಟೇಬಲ್