ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Microfinance companies: ಮೈಕ್ರೋ ಫೈನಾನ್ಸ್‌ಗಳಿಗೆ ಸರ್ಕಾರದ ಅಂಕುಶ; ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ಜಾರಿ ಎಂದ ಸಿಎಂ

Microfinance companies: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಶನಿವಾರ ನಡೆಸಿದರು.‌

ಮೈಕ್ರೋ ಫೈನಾನ್ಸ್‌ಗಳಿಗೆ ಸರ್ಕಾರದ ಅಂಕುಶ; ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ಜಾರಿ ಎಂದ ಸಿಎಂ

Profile Prabhakara R Jan 25, 2025 3:21 PM

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ನವರು (Microfinance companies) ಸಾಲ ವಸೂಲಿ ವೇಳೆ ಆರ್‌ಬಿ‌ಐ ನಿಯಮಗಳನ್ನು ಮೀರಿ ಕಿರುಕುಳ ನೀಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ವರದಿಯಾಗುತ್ತಿದ್ದು, ಈ ನಿಯಮ ಬಾಹಿರ ಸಾಲ ವಸೂಲಿಗೆ ಅಂಕುಶ ಹಾಕುವ ಸಂಬಂಧ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಸಭೆ ನಡೆಸಿದರು.

ಸಭೆಯಲ್ಲಿ ಬ್ಯಾಂಕಿಂಗ್, ಫೈನಾನ್ಸ್, ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳ ಮೇಲೆ ಅಸಮಾಧಾನ ಹೊರಹಾಕಿರುವ ಸಿಎಂ ಅವರು, ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆಯುವವರ ಹಿತವನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸಾಲಗಾರರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ‌ ಕೈಗೊಳ್ಳಲಾಗುವುದು. ಸಾಲಗಾರರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಆದಷ್ಟು ಬೇಗನೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಹೊಸ ಕಾನೂನು ರಚನೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ರಾಜ್ಯದ ಮಹಿಳೆಯರು, ವೃದ್ಧರ ಮೇಲೆ ಫೈನಾನ್ಸ್‌ನವರು ದಬ್ಬಾಳಿಕೆ ನಡೆಸಿರುವ ಪತ್ರಿಕಾ ವರದಿಗಳೂ ನಿತ್ಯ ಬರುತ್ತಿವೆ. ನಾನು ಇದನ್ನೆಲ್ಲಾ ಸಹಿಸುವುದಿಲ್ಲ. ನನ್ನ ಜನರ ರಕ್ಷಣೆಗೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ.ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದರು.

ನಿಮ್ಮ ಸಿಬ್ಬಂದಿ ನಿಯಮ ಬಾಹಿರವಾಗಿ ಸಾಲ ವಸೂಲಿಗೆ ಇಳಿಯುತ್ತಿರುವುದನ್ನು ನಿಯ೦ತ್ರಿಸಲು ಏನು ಮಾಡಿದ್ದೀರಿ? ಅಂತಹ ಸಿಬ್ಬಂದಿ ವಿರುದ್ಧ ನಿಮ್ಮ ಸಂಸ್ಥೆಗಳಿಂದ ಏನು ಕ್ರಮ ಕೈಗೊಂಡಿದ್ದೀರಿ? ಸಾಲಗಾರರ ಮನೆ ಜಪ್ತಿ ಮಾಡುವ ಮೊದಲು ನೀವು ನ್ಯಾಯಾಲಯದಿಂದ ಅನುಮತಿ ಪಡೆದಿದ್ದೀರಾ? ಕಾನೂನು ಕೈಗೆತ್ತಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಅನುಮತಿ ಕೊಟ್ಟವರು ಯಾರು? ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತಿದ್ದೀರಾ? ಎಂದು ಕಿಡಿಕಾರಿದ್ದಾರೆ.



ರಿಸರ್ವ್ ಬ್ಯಾಂಕಿನ ಷರತ್ತು ಮತ್ತು ನಿಬಂಧನೆಗಳನ್ನು ಸಾಲಗಾರರಿಗೆ ಅವರ ಆಡು ಭಾಷೆಯಲ್ಲಿ ಅರ್ಥ ಮಾಡಿಸಿದ್ದೀರಾ? ಆ‌ರ್.ಬಿ.ಐ ನಿಯಮ ಮೀರಿ ಸಾಲ ಕೊಡುತ್ತಿದ್ದೀರಾ? ಮರುಪಾವತಿಯ ಸಾಮರ್ಥ್ಯ ಗಮನಿಸದೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುತ್ತಿರುವುದು ಏಕೆ? ಸಾಲಗಾರರಿಗೆ ಸಾಲ ಕೊಡುವ ಮೊದಲು ಆಧಾ‌ರ್ ಕೆವೈಸಿ ಮಾಡಿಸುತ್ತಿಲ್ಲ ಏಕೆ? ಇದನ್ನು ಮಾಡಿಸಿದ್ದರೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುವುದು ತಪ್ಪುತ್ತಿತ್ತು ಅಲ್ಲವಾ ಎಂದು ಪ್ರಶ್ನಿಸಿದರು.

ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದೀರಿ. ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನಿಯಮ ಬಾಹಿರ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಒಬ್ಬರೇ ಸಾಲಗಾರರು ಬೇರೆ ಬೇರೆ ಗುರುತಿನ ಚೀಟಿ ಕೊಟ್ಟು ಸಾಲ ಪಡೆದಿರುವುದು ನಿಮ್ಮ ದಾಖಲೆಗಳಲ್ಲಿದೆ. ಆದರೆ ಸಾಲಗಾರರು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲು ಯಾವ ಪದ್ಧತಿ ಪಾಲಿಸುತ್ತಿದ್ದೀರಿ ಎಂದು ಕೇಳಿದರು.

ಈ ಸುದ್ದಿಯನ್ನೂ ಓದಿ | Viral News: ಹಣದ ಬದಲು ಯುಪಿಐ ಪಾವತಿ ಮಾಡಿ ಎಂದ ಆಟೋ ಚಾಲಕ; ಮಹಿಳೆ ಹೇಳಿದ್ದೇನು?

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವರಾದ ಜಿ.ಪರಮೇಶ್ವರ್, ಕಾನೂನು ಸಚಿವರಾದ ಎಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಗೃಹ ಇಲಾಖೆ, ಒಳಾಡಳಿತ, ಕಂದಾಯ, ಗುಪ್ತಚರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.