Namma Metro: 3 ಮೆಟ್ರೋ ನಿಲ್ದಾಣಗಳ ಹೆಸರು ಬದಲಿಸಲು ಬಿಎಂಆರ್‌ಸಿಎಲ್‌ಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ
ಬೆಂಗಳೂರು ನಗರದ ಬಿಟಿಎಂ ಲೇಔಟ್ ಕ್ಷೇತ್ರ ವ್ಯಾಪ್ತಿಯ ಜೆ.ಪಿ. ನಗರ 4ನೇ ಹಂತ ನಿಲ್ದಾಣ, ತಾವರೆಕೆರೆ’ ನಿಲ್ದಾಣ ಹಾಗೂ ಡೈರಿ ವೃತ್ತ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಮಾಡಲು ಬಿಎಂಆರ್‌ಸಿಎಲ್‌ಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಯಾವ ನಿಲ್ದಾಣಕ್ಕೆ ಯಾವ ಹೆಸರು ಮರುನಾಮಕರಣ ಮಾಡಲು ಪ್ರಸ್ತಾಪಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಸಚಿವ ರಾಮಲಿಂಗಾರೆಡ್ಡಿ -
ಬೆಂಗಳೂರು: ನಗರದ ಬಿಟಿಎಂ ಲೇಔಟ್ (BTM Layout) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ಮೂರು ಮೆಟ್ರೋ ನಿಲ್ದಾಣಗಳಿಗೆ (Metro Stations) ಸ್ಥಳೀಯ ಪ್ರದೇಶದ ಹೆಸರುಗಳನ್ನೇ ಮರುನಾಮಕರಣ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪ್ರಸ್ತುತ ಗುರುತಿಸಲಾಗಿರುವ ಕೆಲವು ಮೆಟ್ರೋ ನಿಲ್ದಾಣಗಳ ಹೆಸರುಗಳು ಅವುಗಳು ನೆಲೆಗೊಂಡಿರುವ ನಿಖರ ಜಾಗವನ್ನು ಸರಿಯಾಗಿ ಬಿಂಬಿಸುತ್ತಿಲ್ಲ. ಇದರಿಂದಾಗಿ ದೈನಂದಿನ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ನಿಲ್ದಾಣದ ನಿಖರ ಸ್ಥಳವನ್ನು ಗುರುತಿಸಲು ಸಾಕಷ್ಟು ಗೊಂದಲಗಳು ಉಂಟಾಗುತ್ತಿವೆ. ಆದ್ದರಿಂದ ಸ್ಥಳೀಯವಾಗಿ ಜನಜನಿತವಾಗಿರುವ ಹೆಸರುಗಳು, ಐತಿಹಾಸಿಕ ಹಾಗೂ ಭೌಗೋಳಿಕ ಮಹತ್ವವನ್ನು ಪರಿಗಣಿಸಿ ಹೆಸರು ಬದಲಾವಣೆ ಮಾಡುವುದು ಸೂಕ್ತ ಎಂದು ಸಚಿವರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಪ್ರಸ್ತುತ ‘ಜೆ.ಪಿ. ನಗರ 4ನೇ ಹಂತ’ ಎಂದು ಕರೆಯಲಾಗುತ್ತಿರುವ ಮೆಟ್ರೋ ನಿಲ್ದಾಣವನ್ನು ‘ಎನ್.ಎಸ್. ಪಾಳ್ಯ ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡಲು ಕೋರಲಾಗಿದೆ. ಅದೇ ರೀತಿ ‘ತಾವರೆಕೆರೆ’ ನಿಲ್ದಾಣವನ್ನು ‘ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣ’ ಎಂದು ಹಾಗೂ, ‘ಡೈರಿ ವೃತ್ತ’ ಮೆಟ್ರೋ ನಿಲ್ದಾಣವನ್ನು ‘ಲಕ್ಕಸಂದ್ರ ಮೆಟ್ರೋ ನಿಲ್ದಾಣ’ ಎಂದೂ ಬದಲಾಯಿಸುವಂತೆ ಪ್ರಸ್ತಾಪಿಸಲಾಗಿದೆ.
ಮೆಟ್ರೋ ನಿಲ್ದಾಣದ ಪ್ರಸ್ತುತ ಹೆಸರು ಮತ್ತು ಬದಲಿಸಬೇಕಾದ ಹೆಸರು:
- ಜೆ.ಪಿ. ನಗರ 4ನೇ ಹಂತ ಮೆಟ್ರೋ ನಿಲ್ದಾಣ- ಎನ್.ಎಸ್. ಪಾಳ್ಯ ಮೆಟ್ರೋ ನಿಲ್ದಾಣ
- ತಾವರೆಕೆರೆ ಮೆಟ್ರೋ ನಿಲ್ದಾಣ- ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣ
- ಡೈರಿ ವೃತ್ತ ಮೆಟ್ರೋ ನಿಲ್ದಾಣ- ಲಕ್ಕಸಂದ್ರ ಮೆಟ್ರೋ ನಿಲ್ದಾಣ
ಮೆಟ್ರೋ ನಿಲ್ದಾಣಗಳ ನಾಮಕರಣವನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಮುಖಂಡರ ಅಭಿಪ್ರಾಯಗಳಿಗೆ ಪ್ರಾಶಸ್ತ್ಯ ನೀಡಬೇಕು. ನಿಲ್ದಾಣವು ಇರುವ ಪ್ರಚಲಿತ ಸ್ಥಳದ ಹೆಸರು, ಜನರಿಗೆ ಸುಲಭವಾಗಿ ತಿಳಿಯುವ ಗುರುತು ಮತ್ತು ಸಾಂಸ್ಕೃತಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಬದಲಾವಣೆಯನ್ನು ಜಾರಿಗೆ ತರಲು ತಕ್ಷಣವೇ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ಬಿಎಂಆರ್‌ಸಿಎಲ್ ಆಡಳಿತ ಮಂಡಳಿಗೆ ಪತ್ರದಲ್ಲಿ ತಿಳಿಸಿದ್ದಾರೆ.