Bengaluru stampede: ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ
Bengaluru stampede: ಕಾಲ್ತುಳಿತ ಪ್ರಕರಣದಲ್ಲಿ ಕೆಎಸ್ಸಿಎ ಪದಾಧಿಕಾರಿಗಳಿಗೆ ಕೊಂಚ ರಿಲೀಫ್ ಸಿಕ್ಕಿದೆ. ಆದರೆ, ಕೇಸ್ನಲ್ಲಿ ಬಂಧನವಾಗಿರುವ ಆರ್ಸಿಬಿ ಮ್ಯಾನೇಜ್ಮೆಂಟ್ನ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಸೇರಿ ನಾಲ್ವರಿಗೆ ಕೋರ್ಟ್, 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.


ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ (Bengaluru stampede) ಸಂಬಂಧ ಬಂಧನವಾಗಿರುವ ಆರ್ಸಿಬಿ ಮ್ಯಾನೇಜ್ಮೆಂಟ್ನ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಸೇರಿ ನಾಲ್ವರು ಆರೋಪಿಗಳಿಗೆ ಜೂನ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿರುವ 41ನೇ ಎಸಿಜೆಎಂ ನ್ಯಾಯಾಲಯ, ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದೆ.
ಕಾಲ್ತುಳಿತಕ್ಕೆ ಸಂಬಂಧಿಸಿ ಕಬ್ಬನ್ಪಾರ್ಕ್ ಠಾಣೆಯಲ್ಲಿ ಸ್ವಯಂ ಪ್ರೇರಿಯ ಪ್ರಕರಣ ದಾಖಲಾಗಿದ್ದರಿಂದ ಆರ್ಸಿಬಿ ಮ್ಯಾನೇಜ್ಮೆಂಟ್ನ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ, ಆರ್ಸಿಬಿ ಸಿಬ್ಬಂದಿ ಸುಮಂತ್, ಡಿಎನ್ಎ ಮ್ಯಾನೇಜರ್ ಕಿರಣ್ ಹಾಗೂ ಡಿಎನ್ಎ ಮ್ಯಾನೇಜ್ಮೆಂಟ್ನ ಸುನೀಲ್ ಮ್ಯಾಥ್ಯೂ ಅವರನ್ನು ಬಂಧಿಸಲಾಗಿತ್ತು. ಆರೋಪಿಗಳನ್ನು ಜೂನ್ 19ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ನಿಖಿಲ್ ಸೋಸಲೆ ಅರ್ಜಿ ವಿಚಾರಣೆ ಮುಂದೂಡಿಕೆ
ಕಾಲ್ತುಳಿತ ಪ್ರಕರಣದಲ್ಲಿ ಕೆಎಸ್ಸಿಎ ಪದಾಧಿಕಾರಿಗಳಿಗೆ ಕೊಂಚ ರಿಲೀಫ್ ಸಿಕ್ಕಿತ್ತು. ಆದರೆ, ಕೇಸ್ನಲ್ಲಿ ಬಂಧನವಾಗಿರುವ ಆರ್ಸಿಬಿ ಮ್ಯಾನೇಜ್ಮೆಂಟ್ನ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಗೆ ಸಂಕಷ್ಟ ಎದುರಾಗಿದೆ. ನಿಖಿಲ್ ಸೋಸಲೆ ಬಂಧನ ಪ್ರಶ್ನಿಸಿ ಪತ್ನಿ ಅರ್ಜಿ ರಿಟ್ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿದ್ದು, ವಿಚಾರಣೆ ಜೂನ್ 9 ಮಧ್ಯಾಹ್ನ 2.30 ಕ್ಕೆ ಮುಂದೂಡಿಕೆಯಾಗಿದೆ.
ಕೆಎಸ್ಸಿಎ ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ (Bengaluru stampede case) ಕೆಎಸ್ಸಿಎ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ರಿಲೀಫ್ ಸಿಕ್ಕಿದೆ. ಪ್ರಕರಣದಲ್ಲಿ ತನಿಖೆಗೆ ತಡೆ ನೀಡುವುದಿಲ್ಲ, ಆದರೆ ಕೆಎಸ್ಸಿಎ ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಇದರಿಂದ ಅರ್ಜಿದಾರರಾದ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್. ಜೈರಾಮ್ ಅವರು ಕೊಂಚ ನಿರಾಳರಾಗುವಂತಾಗಿದೆ.
ಎಫ್ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ. ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ಪೀಠ ನಡೆಸಿದೆ. ಕೆಎಸ್ಸಿಎ ಪರ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಸಿಎಂ ಅವರೇ ಸ್ವತಃ ಅಧಿಕಾರಿಗಳನ್ನು ಬಂಧಿಸಲು ಸೂಚಿಸಿದ್ದಾರೆ. ಡಾ.ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ, ಮ್ಯಾಜಿಸ್ಟ್ರಿಯಲ್ ತನಿಖೆ ಹಾಗೂ ಎಫ್ಐಆರ್ ದಾಖಲಿಸಿ ಸಿಐಡಿಯಿಂದಲೂ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಈ ಪ್ರತಿಕ್ರಿಯಿಸಿದ ಜಡ್ಜ್, ಪ್ರಕರಣದ ತನಿಖೆಗೆ ತಡೆ ಕೊಡುವುದಿಲ್ಲ, ಯಾವ ರಕ್ಷಣೆ ಅಗತ್ಯವಿದೆ ನೋಡೋಣ. ಇನ್ನು ಪ್ರಕರಣದಲ್ಲಿ ಆರೋಪಿಗಳು ವಿಚಾರಣೆಗೆ ಸಹಕರಿಸಬೇಕು ಹಾಗೂ ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸಿ, ಕೆಎಸ್ಸಿಎ ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಮಧ್ಯಂತರ ಆದೇಶ ನೀಡಿದರು.