ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಕ್ರಮ ಕೈಗೊಳ್ಳಲಿ: ಆರ್. ಅಶೋಕ್ ಆಗ್ರಹ
R Ashok: ಕೇಂದ್ರ ಸರ್ಕಾರವು ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟಗಳನ್ನು ಪರಿಹರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತ್ರ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
ಆರ್. ಅಶೋಕ್ ಮತ್ತು ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ). -
ಬೆಂಗಳೂರು, ಅ.23: ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತ್ರ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ (R Ashok) ಆಗ್ರಹಿಸಿದ್ದಾರೆ. ಈ ಕುರಿತು ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ (CM DK Shivakumar) ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ
ರಾಜ್ಯದ ಕಬ್ಬು ಬೆಳೆಗಾರರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಹಲವೆಡೆ ರೈತ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ. ಕಬ್ಬು ಬೆಳೆಯಲು ಬೀಜ, ರಸಗೊಬ್ಬರ, ಕೀಟನಾಶಕ, ಕಾರ್ಮಿಕರ ಕೂಲಿ, ನೀರಾವರಿ ಮತ್ತು ಸಾಗಣೆ ವೆಚ್ಚಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಈ ಬಾರಿ ಬರಗಾಲ ಇರುವುದರಿಂದ ನೀರಿನ ಸಮಸ್ಯೆ ಹಿಂದಿಗಿಂತಲೂ ತೀವ್ರವಾಗಿದೆ. ಆದರೆ ರೈತರು ಜೇಬಿನಿಂದ ಖರ್ಚು ಮಾಡುವ ಹಣಕ್ಕೆ ತಕ್ಕಂತೆ ಲಾಭ ದೊರೆಯುತ್ತಿಲ್ಲ. ಇದರಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ ಕೂಡಲೇ ಮಾನ್ಯ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ, ಸಾರ್ವಜನಿಕ ವಿತರಣೆ, ನವ ಮತ್ತು ನವೀಕೃತ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬೆಳೆಗಾರರ ಅಹವಾಲುಗಳನ್ನು ಆಲಿಸಿದ್ದಾರೆ ಎಂದು ಹೇಳಿದ್ದಾರೆ.
ಕಬ್ಬು ಬೆಳೆಗಾರರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರ್ಕಾರ, ನೀತಿ ಆಯೋಗದ ಮಾಜಿ ಸದಸ್ಯ ರಮೇಶ್ ಚಂದ್ ಅಧ್ಯಕ್ಷತೆಯ ಜಂಟಿ ಸಮಿತಿ ರಚಿಸಿದೆ. ಈ ಸಮಿತಿಯು, ಬೆಳೆಗಾರರ ಆದಾಯ ಹೆಚ್ಚಿಸುವುದು, ಉತ್ಪಾದನಾ ವೆಚ್ಚ ಮತ್ತು ಸಕ್ಕರೆ ಉದ್ಯಮದ ಆರ್ಥಿಕ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡಲಿದೆ. ಕಬ್ಬು ಬೆಳೆಗಾರರ ಒಟ್ಟು ಏಳು ಬೇಡಿಕೆಗಳನ್ನು ಈಡೇರಿಸುವ ಕುರಿತು ಸಮಿತಿ ಶಿಫಾರಸು ಮಾಡಲಿದೆ. ಈ ಸಮಿತಿ ವಿಜಯದಶಮಿಯ ದಿನವೇ ಮೊದಲ ಸಭೆ ನಡೆಸಿದ್ದು, ಸಕ್ಕರೆ ವಲಯಕ್ಕೆ ಹೊಸ ಮಾರ್ಗಸೂಚಿ ರೂಪಿಸಲು ತೀರ್ಮಾನಿಸಲಾಗಿದೆ. ಬೆಳೆಗಾರರು, ಕಾರ್ಖಾನೆಗಳು, ಒಕ್ಕೂಟಗಳು, ಸಂಶೋಧಕರನ್ನು ಒಂದುಗೂಡಿಸಿ ಸಮಾಲೋಚಿಸಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ಸಂಶೋಧಕರನ್ನು ಸಮಾಲೋಚನಾ ಪ್ರಕ್ರಿಯೆಯಲ್ಲಿ ಸೇರಿಸಲಾಗುತ್ತದೆ. ಜೊತೆಗೆ ರಾಜ್ಯ ಸರ್ಕಾರದ ಜತೆ ಸೇರಿ ಜಂಟಿ ಸಮಿತಿಗಳನ್ನು ರಚಿಸಲಿದ್ದು, ಈ ಬಗ್ಗೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ 2026-27 ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ಗೆ 365 ರೂ. ಎಫ್ಆರ್ಪಿ ನಿಗದಿಪಡಿಸಿದೆ. ಕಳೆದ ವರ್ಷ ಎಫ್ಆರ್ಪಿ 355 ರೂ. ಆಗಿತ್ತು. 10.25% ರ ಮೂಲ ಇಳುವರಿ ದರವನ್ನು ಆಧರಿಸಿ ಎಫ್ಆರ್ಪಿ ನಿಗದಿ ಮಾಡಲಾಗಿದೆ. 10.25% ಕ್ಕಿಂತ ಹೆಚ್ಚಿನ ಇಳುವರಿಯಲ್ಲಿ ಪ್ರತಿ 0.1% ಹೆಚ್ಚಳಕ್ಕೆ ಕ್ವಿಂಟಾಲ್ಗೆ 3.56 ರೂ. ನಷ್ಟು ಜಾಸ್ತಿಯಾಗುತ್ತದೆ. ಎನ್ಡಿಎ ಅಧಿಕಾರಕ್ಕೆ ಬಂದ ನಂತರ 2018 ರಲ್ಲಿ ಕಬ್ಬಿಗೆ ಎಂಎಸ್ಪಿ (ಕನಿಷ್ಠ ಮಾರಾಟ ಬೆಲೆ) ನೀಡಲಾಗಿದೆ. ಈಗ ಎಂಎಸ್ಪಿ ದರ 31 ರೂ. ಇದ್ದು, ಕನಿಷ್ಠ ಮಾರಾಟ ದರ 47 ರೂ. ನಷ್ಟಿದೆ. ನಡುವೆ ಈ ದರ 63 ರೂ. ಆಗಿತ್ತು. ಹೀಗೆ ಕೇಂದ್ರ ಸರ್ಕಾರ ತನ್ನ ವತಿಯಿಂದ ಮಾಡಬೇಕಾದ ಸಂಪೂರ್ಣ ಪ್ರಯತ್ನಗಳನ್ನು ಮಾಡಿದೆ. ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಜವಾಬ್ದಾರಿ
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವುದು ಕೇವಲ ಕೇಂದ್ರ ಸರ್ಕಾರದ ಕೆಲಸವಲ್ಲ. ರಾಜ್ಯ ಸರ್ಕಾರ ಕೂಡ ತನ್ನ ಜವಾಬ್ದಾರಿಯನ್ನು ಹೊರಬೇಕಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಎಲ್ಲ ಜವಾಬ್ದಾರಿಗಳಿವೆ ಎಂಬಂತೆ ಬಿಂಬಿಸಿ ತನ್ನದೇನೂ ಹೊಣೆ ಇಲ್ಲ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಇಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
- 2025ರ ನವೆಂಬರ್ 7 ರಂದು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬ್ಬು ಬೆಳೆಗಾರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,300 ದರ ನೀಡುವ ನಿರ್ಧಾರವನ್ನು ಪ್ರಕಟಿಸಿದರು. ಇದರಲ್ಲಿ 100 ರೂ. ಹೆಚ್ಚುವರಿ ಸಹಾಯಧನವಾಗಿದ್ದು, ರಾಜ್ಯ ಸರ್ಕಾರದಿಂದ 50 ರೂ. ಹಾಗೂ ಸಕ್ಕರೆ ಕಾರ್ಖಾನೆಗಳಿಂದ 50 ರೂ. ನೀಡುವುದಾಗಿ ತೀರ್ಮಾನವಾಗಿತ್ತು. ಆದರೆ ಇದನ್ನು ವಿರೋಧಿಸಿ ಕಾರ್ಖಾನೆಗಳು ಕೋರ್ಟ್ ಮೊರೆ ಹೋಗಿದ್ದು, ಈವರೆಗೂ ಕಾರ್ಖಾನೆಗಳ ಪಾಲಿನ 50 ರೂ. ಕೊಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದು ಕಾಂಗ್ರೆಸ್ ಸರ್ಕಾರ ರೈತರ ಹಿತರಕ್ಷಣೆಯನ್ನು ಯಾವ ಮಟ್ಟಿಗೆ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ. ಕೂಡಲೇ ಈ ಕುರಿತು ಕ್ರಮ ವಹಿಸಿ ಆ 50 ರೂ. ಸಹಾಯಧನವನ್ನು ರೈತರಿಗೆ ಕೊಡಿಸಬೇಕಿದೆ.
- ತೂಕದಲ್ಲಿ ಮೋಸವಾಗುವುದನ್ನು ತಪ್ಪಿಸಲು ಕಾರ್ಖಾನೆಗಳ ಬಳಿ ವೇ ಬ್ರಿಡ್ಜ್ ಅಳವಡಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು.
- ಒಂದೇ ಕಬ್ಬಿಗೆ ವಿವಿಧ ಕಾರ್ಖಾನೆಗಳಲ್ಲಿ ಇಳುವರಿ ವ್ಯತ್ಯಾಸ ತೋರಿಸಲಾಗುತ್ತದೆ. ಈ ರಿಕವರಿ ವಂಚನೆ ತಪ್ಪಿಸಲು ಕ್ರಮ ವಹಿಸಬೇಕು.
- ವಾಸ್ತವಕ್ಕಿಂತ ಹೆಚ್ಚು ತ್ಯಾಜ್ಯ ತೋರಿಸಿ ರೈತರಿಗೆ ವಂಚಿಸುತ್ತಿದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.
- ಲ್ಯಾಬ್ ಪರೀಕ್ಷೆ ಮತ್ತು ಬೆಳೆ ವಿಮೆ ವಿಚಾರದಲ್ಲಿ ಬೆಳಗಾರರ ಹಿತರಕ್ಷಣೆಗೆ ಕ್ರಮ ವಹಿಸಬೇಕು.
- ಬೇರೆ ರಾಜ್ಯಗಳಲ್ಲಿ ಜಾರಿಯಾದ SAP- ರಾಜ್ಯ ಸಲಹಾ ಬೆಲೆಯನ್ನು ನಮ್ಮಲ್ಲೂ ಜಾರಿ ಮಾಡಬೇಕು.
- ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಪ್ರತಿ ಯುನಿಟ್ ವಿದ್ಯುತ್ಗೆ ರಾಜ್ಯ ಸರ್ಕಾರ 2.80 ರೂ. ನಿಗದಪಡಿಸಿದೆ. ಅದೇ ಖಾಸಗಿ ಕಂಪನಿಗಳಿಂದ ಯುನಿಟ್ಗೆ 22 ರೂ. ಕೊಟ್ಟು ಖರೀದಿಸಲಾಗುತ್ತಿದೆ. ಇದನ್ನು ಹೆಚ್ಚಳ ಮಾಡಿದರೆ ಅದರ ಲಾಭ ರೈತರಿಗೆ ಸಿಗುತ್ತದೆ.
- ಸಕ್ಕರೆ ಕಾರ್ಖಾನೆಗಳಿಗೆ ನೀರಿನ ಬಾಬ್ತು 5 ಲಕ್ಷ ರೂ. ಇದ್ದು, ಅದನ್ನು 1 ಕೋಟಿ ರೂ.ಗೆ ಏರಿಸಿ ಕಾರ್ಖಾನೆಗಳಿಗೆ ಹೊರೆ ಹೇರಲಾಗಿದೆ. ಇದನ್ನು ಕೂಡಲೇ ಕಡಿಮೆ ಮಾಡಬೇಕು.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಕಾರ್ಯನಿರ್ವಹಿಸಿದರೆ ರೈತರಿಗೆ ಒಳಿತಾಗುತ್ತದೆ. ಈ ಸಮಯದಲ್ಲಿ ರೈತರ ಹಿತದೃಷ್ಟಿಯನ್ನು ನೋಡಬೇಕು. ಕೇವಲ ರಾಜಕೀಯ ಆರೋಪಗಳನ್ನು ಮಾಡುವುದರಿಂದ ರೈತರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕೇಂದ್ರ ಸರ್ಕಾರ ಹೇಗೆ ತನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದೆಯೋ, ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಜವಾಬ್ದಾರಿ ನಿಭಾಯಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರ ಈ ಕುರಿತು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನಿರೀಕ್ಷಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದ್ದಾರೆ.