ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

63 Percent Corruption: ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಶೇ.63 ಭ್ರಷ್ಟಾಚಾರ ಹೇಳಿಕೆಗೆ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಸ್ಪಷ್ಟನೆ

Upalokayukta Justice B Veerappa: ಶೇ. 63ರಷ್ಟು ಭ್ರಷ್ಟಾಚಾರ ಕುರಿತ ಹೇಳಿಕೆಗೆ ನ್ಯಾಯಮೂರ್ತಿ ವೀರಪ್ಪ ಅವರು ಸ್ಪಷ್ಟನೆ ನೀಡಿದ್ದು, ತಾವು ಯಾವುದೇ ನಿರ್ದಿಷ್ಟ ಸರ್ಕಾರ ಅಥವಾ ಅವಧಿಯನ್ನು ಉಲ್ಲೇಖಿಸಿಲ್ಲ. ಅಲ್ಲದೇ ನಾನು ಯಾವ ಸರ್ಕಾರವನ್ನೂ ಗಮನದಲ್ಲಿಟ್ಟುಕೊಂಡು ಹೇಳಿಲ್ಲ. ಇಂಡಿಯಾ ಕರಪ್ಷನ್ ಸರ್ವೆಯಲ್ಲಿ ಇದ್ದ ಮಾಹಿತಿಯನ್ನು ಮಾತ್ರ ಹೇಳಿದ್ದೇನೆ ಎಂದು ತಿಳಿಸಿದ್ಧಾರೆ.

ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಉಪ ಲೋಕಾಯುಕ್ತ ವೀರಪ್ಪ ಸ್ಪಷ್ಟನೆ

ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ. -

Prabhakara R
Prabhakara R Dec 5, 2025 4:01 PM

ಬೆಂಗಳೂರು, ಡಿ.5: ರಾಜ್ಯದಲ್ಲಿ 'ಶೇ. 63ರಷ್ಟು ಭ್ರಷ್ಟಾಚಾರವಿದೆ' ಎಂಬ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ (Upalokayukta Justice B Veerappa) ಅವರು ತಮ್ಮ ಮಾತುಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ರಾಜಕೀಯ ನಾಯಕರು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನ್ಯಾಯಮೂರ್ತಿ ವೀರಪ್ಪ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, ತಾವು ಯಾವುದೇ ನಿರ್ದಿಷ್ಟ ಸರ್ಕಾರ ಅಥವಾ ಅವಧಿಯನ್ನು ಉಲ್ಲೇಖಿಸಿಲ್ಲ. ಅಲ್ಲದೇ ನಾನು ಯಾವ ಸರ್ಕಾರವನ್ನೂ ಗಮನದಲ್ಲಿಟ್ಟುಕೊಂಡು ಹೇಳಿಲ್ಲ. ಇಂಡಿಯಾ ಕರಪ್ಷನ್ ಸರ್ವೆಯಲ್ಲಿ ಇದ್ದ ಮಾಹಿತಿಯನ್ನು ಮಾತ್ರ ಹೇಳಿದ್ದೇನೆ. 2019 ರಲ್ಲಿ ನಡೆದಿದ್ದ ಸರ್ವೇ ಪ್ರಕಾರ, ಆಗ ಶೇ. 63ರಷ್ಟು ಭ್ರಷ್ಟಾಚಾರ ಇದೆ ಎಂದು ವರದಿಯಾಗಿತ್ತು. ನಾನು ಅದನ್ನು ಮಾತ್ರ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ನನ್ನ ಹೇಳಿಕೆಯನ್ನು ತಿರುಚಲಾಗಿದೆ

ನನ್ನ ಹೇಳಿಕೆಯನ್ನು ತಿರುಚಲಾಗಿದೆ. ರಾಜಕೀಯ ನಾಯಕರು ಇದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ನಾನು 'ನಮ್ಮ ದೇಶ, ನಮ್ಮ ರಾಜ್ಯ' ಎಂದು ಸಾಮಾನ್ಯೀಕರಿಸಿ ಮಾಡಿ ಮಾತನಾಡಿದ್ದೇನೆ. ನನ್ನ ಹೇಳಿಕೆಯನ್ನು ಈ ರೀತಿ ಬಳಕೆ ಮಾಡಿಕೊಂಡಿರುವುದು ನನಗೆ ನಿಜಕ್ಕೂ ನೋವು ತಂದಿದೆ. ಈ ಭ್ರಷ್ಟಾಚಾರಕ್ಕೆ ಸಮಾಜ ಮತ್ತು ಜನರು ಕೂಡ ಕಾರಣ. ಆರಂಭದಿಂದಲೂ ಎಲ್ಲಾ ಸರ್ಕಾರಗಳು ಕೂಡ ಭ್ರಷ್ಟಾಚಾರದಲ್ಲಿ ಇವೆ. ನಾನು ಯಾವುದೇ ಒಂದು ನಿರ್ದಿಷ್ಟ ಸರ್ಕಾರ ಅಂತ ಗುರಿಯಾಗಿಸಿ ಹೇಳಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಉಪಲೋಕಾಯುಕ್ತರು ಏನು ಹೇಳಿದ್ದರು?

ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ಇತ್ತೀಚೆಗೆ ನಡೆದಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು, ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಇರುವ ರಾಜ್ಯಗಳಲ್ಲಿ ಕರ್ನಾಟಕವು ಐದನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಮಹಿಳಾ ಅಧಿಕಾರಿಗಳು, ನೌಕರರು ಸಹ ಭ್ರಷ್ಟಾಚಾರದಲ್ಲಿ ಮುಳುಗಿರುವುದು ವಿಪರ್ಯಾಸ. ನಾನು ಉಪ ಲೋಕಾಯುಕ್ತ ಆದ ಮೇಲೆ ಇದನ್ನೆಲ್ಲಾ ನೋಡುವ ಅವಕಾಶ ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಉಪಲೋಕಾಯುಕ್ತರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಅಶೋಕ್‌-ಸಿದ್ದರಾಮಯ್ಯ ನಡುವೆ ಮಾತಿನ ಸಮರ

ಉಪಲೋಕಾಯುಕ್ತರ ಹೇಳಿಕೆಯನ್ನು ಆಧರಿಸಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್‌.ಅಶೋಕ್‌ ಹರಿಹಾಯ್ದಿದ್ದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಉಪಲೋಕಾಯುಕ್ತರು ಹೇಳಿದ್ದ ಶೇ.63 ಭ್ರಷ್ಟಾಚಾರದ ವಿಚಾರ ಉಲ್ಲೇಖಿಸಿ, ನಿಮಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ನಮ್ಮ ವಿರುದ್ಧ ಶೇ.40 ಕಮಿಷನ್ ಎಂದು ಎಸ್‍ಐಟಿ ಮಾಡಿದ್ದೀರಲ್ಲವೇ? ಈಗ ಶೇ. 63 ಭ್ರಷ್ಟಾಚಾರ ಸಂಬಂಧ ಯಾವ ಎಸ್‍ಐಟಿ ತನಿಖೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು.

ಆರ್‌.ಅಶೋಕ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಷನಲ್ ನವರು 2019ರ ನವೆಂಬರ್‌ನಲ್ಲಿ ನೀಡಿರುವ ವರದಿಯಲ್ಲಿ ರಾಜ್ಯದಲ್ಲಿ 63% ಭ್ರಷ್ಟಾಚಾರ ಇದೆ ಎಂಬುದಾಗಿತ್ತು. ಅದೇ ವರದಿಯನ್ನು ಆಧರಿಸಿ ಗೌರವಾನ್ವಿತ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಮಾತನಾಡಿದ್ದಾರೆ. ಈ ವರದಿ ಹೊರಬರುವ ವೇಳೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇತ್ತು. ಆರ್.ಅಶೋಕ್ ಅವರು ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದರು.