ಎಂಬೆಸಿ ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿ ಅದ್ದೂರಿ ಸಂಭ್ರಮಾಚರಣೆ
ಬೆಂಗಳೂರು: ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ಮತ್ತು ಎಂಬೆಸಿ ಆರ್‌ಇಐಟಿ ಸಂಸ್ಥೆಗಳು ಬೆಂಗಳೂರಿನ ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಸಕ್ರಿಯ ಜೀವನಶೈಲಿ ಮತ್ತು ಯೋಗಕ್ಷೇಮ ಪಾಲನೆಯ ಕುರಿತು ಜಾಗೃತಿ ಮೂಡಿಸಲು ಆಯೋಜಿಸಿದ್ದ 5ಕೆ ರನ್ನಿಂಗ್ ಯೋಜನೆಯಾದ ನೊವೊಹೆಲ್ತ್@ಎಂಬೆಸ್ಸಿಮಾನ್ಯತಾ ಕಾರ್ಯಕ್ರಮವು 100ನೇ ವಾರವನ್ನು ಪೂರೈಸಿದೆ. ಈ ಮಹತ್ವದ ಸಾಧನೆಯನ್ನು ಸಂಭ್ರಮಿಸಲು ಅದ್ದೂರಿ ಸಮಾರಂಭ ಆಯೋಜಿಸಲಾಗಿತ್ತು.
ಈ ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಶ್ರೀ ವಿಕ್ರಾಂತ್ ಶ್ರೋತ್ರೀಯ ಮತ್ತು ಎಂಬೆಸಿ ಆರ್‌ಇಐಟಿಯ ಸಿಇಓ ಅಮಿತ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಇವರೊಂದಿಗೆ ರೋಲ್ಸ್ ರಾಯ್ಸ್, ರೋಡ್ ಮತ್ತು ಶ್ವಾರ್ಟ್ಜ್ ಮತ್ತು ನೋಕಿಯಾದಂತಹ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಸಿಇಓಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಿಟ್ ನೆಸ್, ಪರಸ್ಪರ ತೊಡಗಿಸಿಕೊಳ್ಳುವಿಕೆ ಮತ್ತು ಸುಸ್ಥಿರತೆಯ ಕುರಿತು ಚರ್ಚೆ ಗಳನ್ನು ನಡೆಸಿದರು.
ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ನ ವ್ಯವಸ್ಥಾಪಕ ಟ್ರಸ್ಟಿ ಶ್ರೀ ವಿಕ್ರಾಂತ್ ಶ್ರೋತ್ರಿಯ ಅವರು ಈ ಸಂದರ್ಭದಲ್ಲಿ ಮಾತನಾಡಿ, “ನೊವೊ ರನ್ ಕಾರ್ಯಕ್ರಮ 100 ವಾರ ಪೂರೈಸಿರುವುದು ಕೇವಲ ಒಂದು ಮೈಲಿಗಲ್ಲು ಮಾತ್ರವೇ ಅಲ್ಲ, ಬದಲಿಗೆ ಇದು ಉತ್ತಮ ಆರೋಗ್ಯದ ಕಡೆಗೆ ಒಟ್ಟಾರೆಯಾಗಿ ಇಟ್ಟ 85,500 ಹೆಜ್ಜೆಗಳು! ನೊವೊ ನಾರ್ಡಿಸ್ಕ್ ನಲ್ಲಿ ನಾವು ಆರೋಗ್ಯ ಮತ್ತು ಯೋಗಕ್ಷೇಮ ಎಂಬುದು ಒಂದು ಸಕ್ರಿಯ ಪ್ರಕ್ರಿಯೆ ಎಂದು ನಂಬುತ್ತೇವೆ. ನಮ್ಮ ಕೆಲಸದ ಸ್ಥಳವು ಈ ಬದಲಾವಣೆ ನಿಟ್ಟಿನಲ್ಲಿ ಸಾಗಲು ನೈಸರ್ಗಿಕ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗಿಗಳು ಮತ್ತು ಪಾಲುದಾರರು ಸಕ್ರಿಯ ಜೀವನಶೈಲಿ ಯನ್ನು ಕೇವಲ ಫಿಟ್‌ನೆಸ್ ದಿನಚರಿಯಾಗಿ ಮಾತ್ರವಲ್ಲದೆ, ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವ ಕ್ರಮವಾಗಿ ಬದುಕಲ್ಲಿ ಅಳವಡಿಸಿಕೊಳ್ಳುತ್ತಿರುವುದನ್ನು ಕಂಡು ನಮಗೆ ಹೆಮ್ಮೆಯಾಗುತ್ತಿದೆ. ಎಂಬೆಸಿ ಆರ್‌ಇಐಟಿ ಜೊತೆಗಿನ ಈ ಪಯಣವು ಸುಸ್ಥಿರ ಆರೋಗ್ಯ ಪಾಲನೆಯ ಜಾಗೃತಿ ಹೊಂದಿರುವ ಮತ್ತು ಆರೋಗ್ಯಕರವಾಗಿ ಅಭಿವೃದ್ಧಿ ಹೊಂದುವ ಸಮಾಜವನ್ನು ನಿರ್ಮಿಸುವ ನಮ್ಮ ದೂರದೃಷ್ಟಿಗೆ ಪೂರಕವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Dr Narendra K Shetty Column: ಕ್ಯಾನ್ಸರ್ ಎದುರು ಜೀವನಶೈಲಿಯ ತತ್ವಶಕ್ತಿ
ಎಂಬೆಸಿ ಆರ್‌ಇಐಟಿ ಸಂಸ್ಥೆಯ ಸಿಇಓ ಅಮಿತ್ ಶೆಟ್ಟಿ ಮಾತನಾಡಿ, "ಕಳೆದ 100 ವಾರಗಳಲ್ಲಿ, ನೊವೊ ರನ್ ಕಾರ್ಯಕ್ರಮವು ದೊಡ್ಡದಾಗಿ ಬೆಳೆದಿದೆ. ಉದ್ಯೋಗಿಗಳಲ್ಲಿ ಆರೋಗ್ಯ ಮತ್ತು ಕ್ಷೇಮವನ್ನು ಪಾಲಿಸಲು ಪ್ರೋತ್ಸಾಹಿಸುವ ಒಂದು ದೊಡ್ಡ ಚಳವಳಿಯಾಗಿ ಬದಲಾಗಿರುವುದನ್ನು ನಾವು ನೋಡಿದ್ದೇವೆ. ನಮ್ಮ ಜನರು ನಮ್ಮ ಯಶಸ್ಸಿನ ಮೂಲಾಧಾರ ವಾಗಿದ್ದು, ಅವರ ಆರೋಗ್ಯ ನಮಗೆ ಅತ್ಯಂತ ಮುಖ್ಯವಾದುದು. ಈ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಎಂಬೆಸಿ ಆರ್‌ಇಐಟಿಯಲ್ಲಿ ನೆಲೆಸಿರುವ ಎಲ್ಲಾ ಬಹು ರಾಷ್ಟ್ರೀಯ ಕಂಪನಿಗಳನ್ನು ನಾನು ಅಭಿನಂದಿಸುತ್ತೇನೆ. ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ಜೊತೆಗಿನ ಈ ಪಾಲುದಾರಿಕೆಯ ಬಗ್ಗೆ ನಮಗೆ ಹೆಮ್ಮೆಯಿದೆ ಮತ್ತು ಸುಸ್ಥಿರತೆಯ ಉದ್ದೇಶ ಸಾಕಾರಕ್ಕಾಗಿ ನಾವು ಇದೇ ರೀತಿ ಮುಂದುವರಿಯಲು ಬಯಸುತ್ತೇವೆ" ಎಂದರು.
2024ರ ವಿಶ್ವ ಸ್ಥೂಲಕಾಯ ದಿನದಿಂದು ಪ್ರಾರಂಭವಾದ ಈ ಯೋಜನೆಯು ಇಂದು ಬೆಂಗಳೂರಿನ ಮಾನ್ಯತಾ ಬಿಸಿನೆಸ್ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುವ 1,50,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ದೈಹಿಕ ಚಟುವಟಿಕೆ ಮತ್ತು ಸಮಗ್ರ ಯೋಗಕ್ಷೇಮ ಪಾಲನಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಒಂದು ಸೊಗಸಾದ ಸಾರ್ವಜನಿಕ ಕಾರ್ಯಕ್ರಮವಾಗಿ ಬೆಳೆದಿದೆ. ಕೇರ್ಲಾನ್, ನೋಕಿಯಾ, ಎಚ್‌ಸಿಎಲ್, ಐಬಿಎಂ, ಕಾಗ್ನಿಜೆಂಟ್, ಕಿಂಡ್ರಿಲ್, ಫಿಡೆಲಿಟಿ, ಮೇವೆನಿರ್, ಡಬ್ಲ್ಯೂಎಸ್‌ಪಿ ಮತ್ತು ಟಾರ್ಗೆಟ್ ಸೇರಿದಂತೆ ಪ್ರಮುಖ ಸಂಸ್ಥೆಗಳ ಉದ್ಯೋಗಿಗಳು ಈ ಕಾರ್ಯಕ್ರಮಕ್ಕೆ ಸತತವಾಗಿ ಬೆಂಬಲ ನೀಡುತ್ತಾ ಬಂದಿದ್ದು, ಅವರೆಲ್ಲರ ಭಾಗವಹಿಸುವಿಕೆಯಿಂದ 'ನೊವೊ ರನ್' ಕಾರ್ಯಕ್ರಮವು ಕೆಲಸದ ಸ್ಥಳದ ಯೋಗಕ್ಷೇಮ ಯೋಜನೆಗಳಿಗೆ ಒಂದು ಮಾನದಂಡವಾಗಿ ರೂಪುಗೊಂಡಿದೆ.
ಭಾರತವು ಪ್ರಸ್ತುತ ಹೆಚ್ಚುತ್ತಿರುವ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸುಮಾರು 101 ಮಿಲಿಯನ್ ಜನರು ಮಧುಮೇಹದೊಂದಿಗೆ ಮತ್ತು 254 ಮಿಲಿಯನ್ ಜನರು ಸಾಮಾನ್ಯ ಬೊಜ್ಜಿನೊಂದಿಗೆ ಜೀವಿಸುತ್ತಿದ್ದಾರೆ.1 ನಗರೀಕರಣವು ಮಧುಮೇಹ, ಬೊಜ್ಜು ಮತ್ತು ಹೃದಯ ಸಂಬಂಧಿ ಕಾಯಿಲೆಗಳಂತಹ ಸಾಂಕ್ರಾಮಿಕವಲ್ಲದ ರೋಗಗಳನ್ನು ವೇಗವಾಗಿ ಹರಡುತ್ತಿದೆ. ವ್ಯಕ್ತಿಗಳು ತಮ್ಮ ಹೆಚ್ಚಿನ ಸಮಯವನ್ನು ಕೆಲಸದ ಸ್ಥಳದಲ್ಲಿ ಕಳೆಯುವುದರಿಂದ, ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸಲು ಪ್ರೋತ್ಸಾಹಿಸುವಲ್ಲಿ ಕೆಲಸದ ಸ್ಥಳಗಳು ಪ್ರಮುಖ ಪಾತ್ರ ವಹಿಸುತ್ತವೆ.
ಜಾಗತಿಕವಾಗಿ, ಕೆಲಸದ ಸ್ಥಳ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳು ಆರೋಗ್ಯ ಸುಧಾರಣೆಯಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಬದಲಾವಣೆಯನ್ನು ತರಲು, ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ಮತ್ತು ಎಂಬೆಸಿ ಆರ್‌ಇಐಟಿ ಪಾಲುದಾರಿಕೆ ಯಲ್ಲಿ ನೊವೊಹೆಲ್ತ್@ಎಂಬೆಸ್ಸಿಮಾನ್ಯತಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಇದು ಉದ್ಯೋಗಿಗಳು ಮತ್ತು ಸುತ್ತಮುತ್ತಲಿನ ಸಮಾಜ ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಿಕೊಳ್ಳಲು ಸಶಕ್ತಗೊಳಿ ಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯು ತನ್ನ ಮುಂದಿನ ಹಂತಕ್ಕೆ ಸಾಗುತ್ತಿರುವಂತೆ ತನ್ನ ಪ್ರಮುಖ ಚಟುವಟಿಕೆ ಗಳಲ್ಲಿ ಸುಸ್ಥಿರತೆ ಮತ್ತು ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆಯನ್ನು ಸಂಯೋಜಿಸಲಿದ್ದು, ಆ ಮೂಲಕ "ಆರೋಗ್ಯ ಮತ್ತು ಪರಿಸರದ ಜವಾಬ್ದಾರಿಯು ಪರಸ್ಪರ ಪೂರಕ" ಎಂಬ ಸಂದೇಶವನ್ನು ಸಾರಲಿದೆ.