ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro: ನಮ್ಮ ಮೆಟ್ರೊದಲ್ಲಿ ತ್ವರಿತ ಅಂಗಾಂಗ ರವಾನೆ, ನಾಲ್ಕು ರೋಗಿಗಳಿಗೆ ಜೀವದಾನ

organ donation: ಅತಿಯಾದ ಒತ್ತಡದಿಂದ ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿ ಮಿದುಳು ನಿಷ್ಕ್ರಿಯಗೊಂಡ 33 ವರ್ಷದ ಯುವಕನಿಂದ ಪಡೆದ ಅಂಗಾಂಗವನ್ನು ‘ನಮ್ಮ ಮೆಟ್ರೊ’ ರೈಲಿನಲ್ಲಿ ರವಾನಿಸುವ ಮೂಲಕ ನಾಲ್ವರು ರೋಗಿಗಳಿಗೆ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡಲಾಗಿದೆ. ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ದಾನಿಯಿಂದ ಪಡೆದ ಅಂಗಾಂಗಗಳ ಪೈಕಿ ಶ್ವಾಸಕೋಶವನ್ನು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ, ಆರ್.ವಿ. ರಸ್ತೆಯ ನಿಲ್ದಾಣಕ್ಕೆ ಹಾಗೂ ಅಲ್ಲಿಂದ ಹಳದಿ ಮಾರ್ಗವಾಗಿ ಬೊಮ್ಮಸಂದ್ರ ನಿಲ್ದಾಣಕ್ಕೆ 61 ನಿಮಿಷಗಳಲ್ಲಿ (30-33ಕಿ.ಮೀ.) ನಾರಾಯಣ ಹೆಲ್ತ್ ಆಸ್ಪತ್ರೆಗೆ ತಲುಪಿಸಲಾಯಿತು.

ನಮ್ಮ ಮೆಟ್ರೊದಲ್ಲಿ ತ್ವರಿತ ಅಂಗಾಂಗ ರವಾನೆ, ನಾಲ್ಕು ರೋಗಿಗಳಿಗೆ ಜೀವದಾನ

-

ಹರೀಶ್‌ ಕೇರ ಹರೀಶ್‌ ಕೇರ Oct 31, 2025 6:53 AM

ಬೆಂಗಳೂರು : ರಾಜಧಾನಿಯ (Bengaluru) ನಮ್ಮ ಮೆಟ್ರೊದಲ್ಲಿ (Namma Metro) ಮೂರನೇ ಬಾರಿ ಅಂಗಾಂಗ ರವಾನಿಸಲಾಗಿದ್ದು, ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ದಾನಿಯಿಂದ ಪಡೆದ ಅಂಗಾಂಗವನ್ನು (organ donation) ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದ ಮೂಲಕ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ಸಾಗಾಟ ಮಾಡಲಾಯಿತು. ಯಾವುದೇ ಟ್ರಾಫಿಕ್‌ ಅಡೆತಡೆಗಳಿಲ್ಲದೆ 61 ನಿಮಿಷದಲ್ಲಿ ನಿಗದಿತ ಆಸ್ಪತ್ರೆ ತಲುಪಿಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.

ಅತಿಯಾದ ಒತ್ತಡದಿಂದ ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿ ಮಿದುಳು ನಿಷ್ಕ್ರಿಯಗೊಂಡ 33 ವರ್ಷದ ಯುವಕನಿಂದ ಪಡೆದ ಅಂಗಾಂಗವನ್ನು ‘ನಮ್ಮ ಮೆಟ್ರೊ’ ರೈಲಿನಲ್ಲಿ ರವಾನಿಸುವ ಮೂಲಕ ನಾಲ್ವರು ರೋಗಿಗಳಿಗೆ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡಲಾಗಿದೆ.

ದಾನಿಯು ನಗರದ ಮತ್ತಿಕೆರೆ ನಿವಾಸಿಯಾಗದ್ದು, ಮನೆಯಲ್ಲಿ ಸ್ನಾನ ಮುಗಿಸಿ ಹೊರ ಬಂದವರೇ ತಲೆ ಸುತ್ತಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದರು. ಆರಂಭದಲ್ಲಿ ನಿಮ್ಹಾನ್ಸ್‌ ಗೆ ಸೇರಿಸಲಾಗಿತ್ತು. ಆನಂತರ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ರೋಗಿಯ ಮಿದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ತಿಳಿಸಿದ ಬಳಿಕ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಸಿದರು. ಬಳಿಕ ನಮ್ಮ ಮೆಟ್ರೋದಲ್ಲಿ ಅಂಗಾಂಗ ಸಾಗಾಟ ಮಾಡಲಾಯಿತು.



61 ನಿಮಿಷಗಳಲ್ಲಿ ರವಾನೆ:

ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ದಾನಿಯಿಂದ ಪಡೆದ ಅಂಗಾಂಗಗಳ ಪೈಕಿ ಶ್ವಾಸಕೋಶವನ್ನು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ, ಆರ್.ವಿ. ರಸ್ತೆಯ ನಿಲ್ದಾಣಕ್ಕೆ ಹಾಗೂ ಅಲ್ಲಿಂದ ಹಳದಿ ಮಾರ್ಗವಾಗಿ ಬೊಮ್ಮಸಂದ್ರ ನಿಲ್ದಾಣಕ್ಕೆ 61 ನಿಮಿಷಗಳಲ್ಲಿ (30-33ಕಿ.ಮೀ.) ನಾರಾಯಣ ಹೆಲ್ತ್ ಆಸ್ಪತ್ರೆಗೆ ತಲುಪಿಸಲಾಯಿತು. ಇದೇ ರೀತಿ, ಜೆ.ಪಿ.ನಗರದ ಆಸ್ಟ‌ರ್ ಆ‌ರ್.ವಿ. ಆಸ್ಪತ್ರೆಗೆ ಹೃದಯವನ್ನು ಸಹ ಮೆಟ್ರೋ ಮೂಲಕ ರವಾನಿಸಲಾಯಿತು.

ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಆರೆಂಜ್‌ ಲೈನ್‌​ಗಾಗಿ 6500 ಮರ ಕಡಿಯಲು ಮುಂದಾದ ಬಿಎಂಆರ್‌ಸಿಎಲ್‌

ಉಳಿದಂತೆ ಯಶವಂತಪುರ ಸ್ಪರ್ಶ್ ಆಸ್ಪತ್ರೆಗೆ ಒಂದು ಕಿಡ್ನಿ, ವಿಕ್ಟೋರಿಯಾ ಆವರಣದಲ್ಲಿನ ನೆರೆ ಯುರಾಲಜಿ ಸಂಸ್ಥೆಗೆ ಮತ್ತೊಂದು ಕಿಡ್ನಿ ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆಗೆ ಎರಡು ಕಾರ್ನಿಯಾವನ್ನು ರಸ್ತೆ ಮೂಲಕ ರವಾನಿಸಿ, ಅಗತ್ಯವಿದ್ದ ರೋಗಿಗಳಿಗೆ ಕಸಿ ಶಸಚಿಕಿತ್ಸೆ ನಡೆಸಲಾಯಿತು. ಸಂಚಾರ ಸಿಕ್ಕಿನ ಸಮಯದಲ್ಲಿ ದಾನಿಯ ಪ್ರಮುಖ ಅಂಗವನ್ನು ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಲು ಸಹಕರಿಸಿದ ಬೆಂಗಳೂರು ಮೆಟ್ರೋ ನಿಗಮದ ಸಹಕಾರಕ್ಕೆ ನಾರಾಯಣ ಹೆಲ್ತ್ ಆಸ್ಪತ್ರೆಯು ಧನ್ಯವಾದ ತಿಳಿಸಿದೆ.