ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bike wheeling: ಆಂಬ್ಯುಲೆನ್ಸ್​ಗೆ ದಾರಿ ಬಿಡದೆ ವ್ಹೀಲಿಂಗ್ ಮಾಡಿದ್ದ ಆರು ಮಂದಿ ವಶಕ್ಕೆ; ದ್ವಿಚಕ್ರ ವಾಹನಗಳ ಜಪ್ತಿ

ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ದಾರಿ ಬಿಡದೇ ಕೆಲವರು ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದರು. ದ್ವಿಚಕ್ರ ವಾಹನ ನೋಂದಣಿ ಸಂಖ್ಯೆ ಆಧರಿಸಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿರುವ ಪೊಲೀಸರು, ವ್ಹೀಲಿಂಗ್ ಮಾಡಿದ್ದ ಮೂರು ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ.

ಆಂಬ್ಯುಲೆನ್ಸ್​ಗೆ ದಾರಿ ಬಿಡದೆ ವ್ಹೀಲಿಂಗ್ ಮಾಡಿದ್ದ ಆರು ಮಂದಿ ವಶಕ್ಕೆ

-

Prabhakara R
Prabhakara R Jul 7, 2026 10:48 PM

ಬೆಂಗಳೂರು: ಆಂಬ್ಯುಲೆನ್ಸ್​ಗೆ ದಾರಿ ಬಿಡದೆ ವ್ಹೀಲಿಂಗ್ ಮಾಡಿ ಪುಂಡಾಟ ತೋರಿದ್ದ ಆರು ಮಂದಿಯನ್ನು ಯಶವಂತಪುರ ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡು, ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಸಾದೀಕ್ ಪಾಷಾ ಸೇರಿ ನಾಲ್ವರು ಅಪ್ರಾಪ್ತರಾಗಿದ್ದು, ದ್ವಿಚಕ್ರ ವಾಹನ ನೋಂದಣಿ ಸಂಖ್ಯೆ ಆಧರಿಸಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿರುವ ಪೊಲೀಸರು ವ್ಹೀಲಿಂಗ್ ಮಾಡಿದ್ದ ಮೂರು ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ಸದ್ಯ ಬಿಎನ್​ಎಸ್ ಹಾಗೂ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



ಜುಲೈ 4ರಂದು ಮಧ್ಯರಾತ್ರಿ 2.30ರ ಸುಮಾರಿಗೆ ಗೊರಗುಂಟೆಪಾಳ್ಯದಿಂದ ಯಶವಂತಪುರಕ್ಕೆ ಮೂರು ಬೈಕ್ ಗಳಲ್ಲಿ ಆರೋಪಿಗಳು ವ್ಹೀಲಿಂಗ್ ಮಾಡಿ ವಾಹನ ಚಲಾಯಿಸಿದ್ದರು. ಹಿಂದೆ ಬರುತ್ತಿದ್ದ ಆಂಬ್ಯುಲೆನ್ಸ್ ದಾರಿ ಬಿಡದೇ ಮೊಂಡಾಟ ತೋರಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸಂಚಾರ ಪೊಲೀಸರು ವಾಹನ ಸವಾರರನ್ನ ಪತ್ತೆ ಹಚ್ಚಿದ್ದಾರೆ. ವ್ಹೀಲಿಂಗ್ ಮಾಡುವಾಗ ಆಂಬ್ಯುಲೆನ್ಸ್ ಬರುತ್ತಿರುವುದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸದ್ಯ ವಿಚಾರಣೆ ನಡೆಸಿ ಆರೋಪಿಗಳನ್ನ ಬಿಟ್ಟುಕಳುಹಿಸಲಾಗಿದೆ. ಮೂರು ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?

ಆಂಬ್ಯುಲೆನ್ಸ್​ಗೆ ದಾರಿ ಬಿಡದ ಯುವಕರ ಗುಂಪೊಂದು ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ್ದ ಘಟನೆ ಬೆಂಗಳೂರಿನಲ್ಲಿ ಜೂನ್ 4 ರಂದು ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ನಡೆದಿತ್ತು. ಆಂಬ್ಯುಲೆನ್ಸ್‌ನೊಳಗಿದ್ದ ವ್ಯಕ್ತಿಯೊಬ್ಬರು ಈ ದೃಶ್ಯಗಳನ್ನ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.

ಬೆಂಗಳೂರಿನಲ್ಲಿ ಮತ್ತೊಂದು ರೋಡ್‌ ರೇಜ್‌; ರಸ್ತೆ ಮಧ್ಯೆಯೇ ಕಾರ್ ಅಡ್ಡಗಟ್ಟಿ ಕುಟುಂಬದ ಮೇಲೆ ಅಪರಿಚಿತರಿಂದ ಹಲ್ಲೆ

ತುರ್ತು ಸೇವೆಗಳಿಗೆ ಅಡ್ಡಿಪಡಿಸಿದ ಆರೋಪಿಗಳ ವಾಹನಗಳನ್ನು ಜಪ್ತಿಗೊಳಿಸಿ, ಚಾಲನಾ ಪರವಾನಗಿ ರದ್ದುಗೊಳಿಸಬೇಕು. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.