ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಫೈನಲ್; ಇಂದು ಘೋಷಣೆ ಆಗುತ್ತಾ?
ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತ ತಲುಪಿದ್ದು, ಇಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಹಿರಿಯ ನಾಯಕರು ಹಾಗೂ ಹೈಕಮಾಂಡ್ ಮಟ್ಟದಲ್ಲಿ ಸಮಾಲೋಚನೆ ನಡೆಸುತ್ತಿದ್ದು, ಖಾತೆಗಳ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ -
ಬೆಂಗಳೂರು: ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತ ತಲುಪಿದ್ದು, ಇಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K Shivakumar) ಅವರು ಪಕ್ಷದ ಹಿರಿಯ ನಾಯಕರು ಹಾಗೂ ಹೈಕಮಾಂಡ್ ಮಟ್ಟದಲ್ಲಿ ಸಮಾಲೋಚನೆ ನಡೆಸುತ್ತಿದ್ದು, ಖಾತೆಗಳ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಡರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಖರ್ಗೆ ಭೇಟಿ ಬಳಿಕ ಮಾತನಾಡಿದ ಸಿಎಂ, ಖಾತೆ ಹಂಚಿಕೆ ಕುರಿತು ಏನು ಮಾಡಬೇಕೆಂದು ಹೈಕಮಾಂಡ್ ತಿಳಿಸುತ್ತದೆ ಎಂದು ಹೇಳಿದ್ದಾರೆ. ಸಚಿವರಿಗೆ ಖಾತೆ ಹಂಚಿಕೆ ವಿಳಂಬವಾಗುತ್ತಿರುವುದು ಕಾಂಗ್ರೆಸ್ ವಲಯದಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವು ಸಚಿವರು ತಮಗೆ ನಿರೀಕ್ಷಿತ ಖಾತೆ ಸಿಗಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೊಸ ಸಚಿವರು ತಮ್ಮ ಕ್ಷೇತ್ರಗಳ ಅಭಿವೃದ್ಧಿ, ವಿಶೇಷ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುವ ಇಲಾಖೆಗಳನ್ನು ಆಶಿಸುತ್ತಿದ್ದಾರೆ. ಇದರೊಂದಿಗೆ ಹಲವು ಹಿರಿಯ ಸಚಿವರು ಕೈಯಲ್ಲಿರುವ ಪ್ರಮುಖ ಇಲಾಖೆಗಳನ್ನು ಕಳೆದುಕೊಳ್ಳಲು ಸಿದ್ಧವಿಲ್ಲ ಎನ್ನಲಾಗಿದೆ.
ಇದುವರೆಗೆ ರಾಜ್ಯದಲ್ಲಿ ಸಾಮಾನ್ಯವಾಗಿ ಆರ್ಥಿಕ, ಗೃಹ, ಕಂದಾಯ, ಶಿಕ್ಷಣ, ಆರೋಗ್ಯ, ಪಂಚಾಯತ್ ರಾಜ್ ಮುಂತಾದ ಪ್ರಮುಖ ಖಾತೆಗಳನ್ನು ಹಿರಿಯ ಸಚಿವರಿಗೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಈ ಪದ್ಧತಿಯಲ್ಲಿ ಬದಲಾವಣೆಯಾಗುವ ಸೂಚನೆಗಳಿವೆ. ಕೆಲವು ಯುವ ಸಚಿವರಿಗೂ ಪ್ರಮುಖ ಇಲಾಖೆಗಳನ್ನು ನೀಡಿ ಅವಕಾಶ ಕಲ್ಪಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಖಾತೆ ಹಂಚಿಕೆ ಕಗ್ಗಂಟು; ಮತ್ತೆ ದೆಹಲಿಗೆ ಸಿಎಂ ಡಿಕೆಶಿ?
ಸಚಿವರ ಖಾತೆ ಹಂಚಿಕೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಕೆಲವು ಸಚಿವರೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕೆಲವು ಸಚಿವರು ತಮಗೆ ನಿರ್ದಿಷ್ಟ ಖಾತೆಗಳನ್ನು ನೀಡುವಂತೆ ಆಗ್ರಹಿಸಿದ್ದು, ಅದನ್ನು ಸಮತೋಲನದಿಂದ ಪರಿಹರಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಒಟ್ಟಾರೆ ಖಾತೆ ಹಂಚಿಕೆಯಲ್ಲಿ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ, ಅನುಭವದ ಆಧಾರದ ಮೇಲೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.