ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Art of Living Dhyan Mandir: ಬೆಂಗಳೂರಿನಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ

PM Modi in Bengaluru: ಬೆಂಗಳೂರಿನ ಕನಕಪುರ ರಸ್ತೆಯಲ್ಲಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವ ಮತ್ತು ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ 70 ನೇ ಜನ್ಮದಿನದ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಭಾಗವಹಿಸಿದ್ದಾರೆ.

ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ

ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲಿ ಧ್ಯಾನ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ. -

Prabhakara R
Prabhakara R May 10, 2026 4:17 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಗರದ ಆರ್ಟ್‌ ಆಫ್‌ ಲಿವಿಂಗ್‌ನ 45ನೇ ವರ್ಷಾಚರಣೆ ಹಾಗೂ ರವಿಶಂಕರ್‌ ಗುರೂಜಿಯವರ 70ನೇ ವರ್ಷದ ಹುಟ್ಟುಹಬ್ಬ ಆಚರಣೆಯಲ್ಲಿ ಭಾನುವಾರ ಭಾಗಿಯಾದರು. ಈ ವೇಳೆ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಧ್ಯಾನ ಮಂದಿರವನ್ನು (Art of Living Dhyan Mandir) ಪ್ರಧಾನಿಗಳು ಉದ್ಘಾಟಿಸಿದರು.

ಈ ಧ್ಯಾನಮಂದಿರವು ಆಂತರಿಕ ಶಾಂತಿ ಮತ್ತು ಸಮಗ್ರ ಯೋಗಕ್ಷೇಮಕ್ಕಾಗಿ ಮೀಸಲಾದ ಧ್ಯಾನ ಮಂದಿರವಾಗಿದೆ. ಇದೇ ವೇಳೆ ಮಾನಸಿಕ ಯೋಗಕ್ಷೇಮ, ಗ್ರಾಮೀಣಾಭಿವೃದ್ಧಿ, ಪ್ರಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಪರಿವರ್ತನೆಯ ಮೇಲೆ ಕೇಂದ್ರೀಕರಿಸಿದ ವರ್ಷವೀಡಿ ನಡೆಯುವ ಕಾರ್ಯಕ್ರಮಗಳನ್ನು ಒಳಗೊಂಡ ಆರ್ಟ್ ಆಫ್ ಲಿವಿಂಗ್‌ನ ರಾಷ್ಟ್ರವ್ಯಾಪಿ ಸೇವಾ ಉಪಕ್ರಮಗಳಿಗೂ ಮೋದಿ ಅವರು ಚಾಲನೆ ನೀಡಿದರು.

Art of Living anniversary (2)

ಅದ್ಭುತ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ: ಮೋದಿ

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಇಂದು ಬೆಳಗ್ಗೆ ಒಂದು ವಿಶಿಷ್ಟವಾದ ಅನುಭವವಾಗಿದೆ. ಮಕ್ಕಳ ವೇದಘೋಷದೊಂದಿಗೆ ದೊರೆತ ಸ್ವಾಗತ, ಭಗವಾನ್ ಶ್ರೀ ಗಣೇಶನ ದರ್ಶನ, ಶ್ರೀ ಶ್ರೀ ರವಿಶಂಕರ್ ಅವರ 70 ವರ್ಷಗಳು ಮತ್ತು ಆರ್ಟ್ ಆಫ್ ಲಿವಿಂಗ್‌ನ 45 ವರ್ಷಗಳು — ಈ ಕ್ಷಣಗಳು ಯಾವಾಗಲೂ ನನ್ನ ನೆನಪಿನಲ್ಲಿ ಅಚ್ಚೊತ್ತಿರುತ್ತವೆ. ಈ ಅದ್ಭುತ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆ. ಗುರುದೇವ್ ಅವರು ಈಗಷ್ಟೇ ಅನೇಕ ವಿಷಯಗಳನ್ನು ಹಂಚಿಕೊಂಡರು. ಅವರು ನನ್ನನ್ನು ಸ್ತುತಿಸುತ್ತಿದ್ದಾರೆ ಎಂದು ನಿಮಗೆ ಅನಿಸಿರಬಹುದು. ಆದರೆ, ಅವರು ನನಗೆ ಹೆಚ್ಚಿನ ಜವಾಬ್ದಾರಿಗಳನ್ನು ಒಪ್ಪಿಸುತ್ತಿದ್ದಾರೆ ಎಂದು ನನಗೆ ಅನಿಸಿತು ಎಂದು ತಿಳಿಸಿದರು.

Art of Living anniversary (1)

ಧ್ಯಾನ, ಪ್ರಾಣಾಯಾಮ ಮತ್ತು ಪ್ರಜ್ಞೆ ಯಾವಾಗಲೂ ಭಾರತದ ಸಾಂಸ್ಕೃತಿಕ ಮೌಲ್ಯಗಳ ಅವಿಭಾಜ್ಯ ಅಂಗವಾಗಿವೆ. ಗುರುದೇವ್ ಅವರು ಹೇಳಿದಂತೆ, ಇಂದು ಪ್ರಪಂಚದಾದ್ಯಂತದ ಜನರು ಭಾರತದ ಈ ಆಧ್ಯಾತ್ಮಿಕ ಸಂಪ್ರದಾಯಗಳಿಂದ ಆಳವಾಗಿ ಪ್ರಭಾವಿತರಾಗಿದ್ದಾರೆ ಮತ್ತು ಈ ಪ್ರಾಚೀನ ಮೌಲ್ಯಗಳು ದೇಶಾದ್ಯಂತ ಅನೇಕ ಸಂಸ್ಥೆಗಳಿಗೆ ಸ್ಫೂರ್ತಿ ನೀಡಿವೆ. 45 ವರ್ಷಗಳ ಹಿಂದೆ, ಇದೇ ಸ್ಫೂರ್ತಿಯಿಂದ ಪ್ರೇರಿತರಾದ ಶ್ರೀ ಶ್ರೀ ರವಿಶಂಕರ್ ಅವರು 'ಆರ್ಟ್ ಆಫ್ ಲಿವಿಂಗ್' ಎಂಬ ಬೀಜವನ್ನು ಬಿತ್ತಿದರು. ಇಂದು ಅದು ನಮ್ಮ ಮುಂದೆ ಒಂದು ಬೃಹತ್ ಆಲದ ಮರದಂತೆ ನಿಂತಿದೆ. ಅದರ ಸಾವಿರಾರು ಶಾಖೆಗಳು ವಿಶ್ವದಾದ್ಯಂತ ಅಸಂಖ್ಯಾತ ಜೀವಗಳನ್ನು ಸ್ಪರ್ಶಿಸುತ್ತಿವೆ. ಅಧಿಕೃತ ಕೆಲಸದ ನಿಮಿತ್ತ ನಾನು ವಿದೇಶಕ್ಕೆ ಎಲ್ಲಿಗೆ ಪ್ರಯಾಣಿಸಿದರೂ, ಅಲ್ಲಿ ಆರ್ಟ್ ಆಫ್ ಲಿವಿಂಗ್ ಜೊತೆ ಗುರುತಿಸಿಕೊಂಡಿರುವ ಯಾರಾದರೂ ಒಬ್ಬರು ನನಗೆ ಖಂಡಿತವಾಗಿ ಭೇಟಿಯಾಗುತ್ತಾರೆ.

Art of Living anniversary

ಇಂದು ದಿವ್ಯ ಹಾಗೂ ಭವ್ಯವಾದ 'ಧ್ಯಾನ ಮಂದಿರ'ವನ್ನು ಉದ್ಘಾಟಿಸಲಾಗಿದೆ. ಸಂಕಲ್ಪವು ಸ್ಪಷ್ಟವಾಗಿದ್ದಾಗ ಮತ್ತು ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ, ಪ್ರತಿಯೊಂದು ಪ್ರಯತ್ನವೂ ಅರ್ಥಪೂರ್ಣ ಫಲಿತಾಂಶಗಳನ್ನು ನೀಡುತ್ತದೆ. ಏನೇ ಆಗಲಿ ಅಥವಾ ಆಗದಿರಲಿ, ನಾವೆಲ್ಲರೂ ಕಮಲದ ಆಶ್ರಯದಲ್ಲಿದ್ದೇವೆ. ಗುರುದೇವ್ ಅವರ ಆಶೀರ್ವಾದದೊಂದಿಗೆ, ಕಮಲದ ಈ ಆಶ್ರಯವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸಲಿದೆ. ಈ ಧ್ಯಾನ ಮಂದಿರಕ್ಕಾಗಿ ನಾನು ಆರ್ಟ್ ಆಫ್ ಲಿವಿಂಗ್ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

PM Modi in Bengaluru: ಪ್ರಧಾನಿ ಮೋದಿ ಸಂಚರಿಸಿದ ಮಾರ್ಗದಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆ; ಶಂಕಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ವಶಕ್ಕೆ

ಸೇವೆಯೇ ಪರಮೋಚ್ಚ ಕರ್ತವ್ಯ

ನಮ್ಮ ಧರ್ಮಗ್ರಂಥಗಳು ಹೇಳುವಂತೆ, 'ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನಂ ದ್ವಯಂ, ಪರೋಪಕಾರಃ ಪುಣ್ಯಾಯ, ಪಾಪಾಯ ಪರಪೀಡನಂ'. ಅಂದರೆ, ಇತರರಿಗೆ ಸೇವೆ ಮಾಡುವುದು ಪುಣ್ಯ, ನೋವುಂಟು ಮಾಡುವುದು ಪಾಪ. ಸೇವೆಯೇ ಪರಮೋಚ್ಚ ಕರ್ತವ್ಯ ಮತ್ತು ಇದು ಯಾವಾಗಲೂ ನಮ್ಮ ಸಮಾಜದ ಸಹಜ ಗುಣವಾಗಿದೆ. ತಲೆಮಾರುಗಳಿಂದ ಈ ಮೌಲ್ಯಗಳು ನಮಗೆ ಮಾರ್ಗದರ್ಶನ, ಸ್ಫೂರ್ತಿ ನೀಡುತ್ತಿವೆ ಮತ್ತು ನಮ್ಮನ್ನು ಬಲಗೊಳಿಸುತ್ತಿವೆ. ಭಾರತದ ಅನೇಕ ಆಧ್ಯಾತ್ಮಿಕ ಚಳವಳಿಗಳು ಅಂತಿಮವಾಗಿ ಮಾನವ ಸೇವೆಯ ಮೂಲಕವೇ ಅಭಿವ್ಯಕ್ತಗೊಂಡಿವೆ. ಆರ್ಟ್ ಆಫ್ ಲಿವಿಂಗ್‌ನ ಪ್ರತಿಯೊಂದು ಉಪಕ್ರಮದಲ್ಲೂ ಇದೇ ಸೇವಾ ಮನೋಭಾವ ಪ್ರತಿಫಲಿಸುತ್ತಿರುವುದು ನನಗೆ ಸಂತೋಷ ತಂದಿದೆ. ಸ್ವಲ್ಪ ಸಮಯದ ಹಿಂದೆ ತೋರಿಸಲಾದ ವಿಡಿಯೊ ಸಂಪೂರ್ಣವಾಗಿ ಜನರ ಸೇವೆ ಮತ್ತು ಕಲ್ಯಾಣದ ಬಗ್ಗೆಯೇ ಇತ್ತು. ಆರ್ಟ್ ಆಫ್ ಲಿವಿಂಗ್‌ನ ಈ ಪಯಣದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ಸ್ವಯಂಸೇವಕರಿಗೆ ನಾನು ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.