ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಾಲ್‌ನಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ; ಬಳಸಿದ ಕಪ್‌ಗಳಲ್ಲೇ ಜ್ಯೂಸ್ ವಿತರಣೆ ಆರೋಪದ ಬೆನ್ನಲ್ಲೇ PVR ಜ್ಯೂಸ್ ಕೌಂಟರ್‌ಗೆ ಬೀಗ

PVR INOX ಮಲ್ಟಿಪ್ಲೆಕ್ಸ್‌ನಲ್ಲಿ ಗ್ರಾಹಕರು ಕುಡಿದು ಬಿಸಾಡಿದ ಪೇಪರ್ ಕಪ್‌ಗಳನ್ನೇ ತೊಳೆದು ಮರುಬಳಕೆ ಮಾಡುತ್ತಿದ್ದ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅಧಿಕಾರಿಗಳು ಜ್ಯೂಸ್ ಕೌಂಟರ್ ಅನ್ನು ಬಂದ್ ಮಾಡಿಸಿದ್ದಾರೆ.

ಬಳಸಿದ ಕಪ್‌ಗಳಲ್ಲೇ ಜ್ಯೂಸ್ ವಿತರಣೆ ಆರೋಪ; PVR ಜ್ಯೂಸ್ ಕೌಂಟರ್‌ಗೆ ಬೀಗ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 6, 2026 3:24 PM

ಬೆಂಗಳೂರು: PVR INOX ಮಲ್ಟಿಪ್ಲೆಕ್ಸ್‌ನಲ್ಲಿ ಗ್ರಾಹಕರು ಕುಡಿದು ಬಿಸಾಡಿದ ಪೇಪರ್ ಕಪ್‌ಗಳನ್ನೇ ತೊಳೆದು ಮರುಬಳಕೆ ಮಾಡುತ್ತಿದ್ದ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ (Viral News)ಎಚ್ಚೆತ್ತ ಕರ್ನಾಟಕ ಆಹಾರ ಸುರಕ್ಷತಾ ಅಧಿಕಾರಿಗಳು ಜ್ಯೂಸ್ ಕೌಂಟರ್ ಅನ್ನು ಬಂದ್ ಮಾಡಿಸಿ, ಬೀಗ ಜಡಿಯುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ.

ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ನವೆಂಬರ್ 5ರಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ PVR INOX ನ ಜ್ಯೂಸ್ ಕೌಂಟರ್ ಸಿಬ್ಬಂದಿ ಈಗಾಗಲೇ ಗ್ರಾಹಕರು ಬಳಸಿ ಬಿಸಾಡಿದ್ದ ಪೆಪ್ಸಿ ಬ್ರ್ಯಾಂಡ್‌ನ ಕಪ್‌ಗಳನ್ನು ಒಟ್ಟಿಗೆ ಜೋಡಿಸಿಟ್ಟು, ಅವುಗಳನ್ನೇ ಸ್ವಚ್ಛಗೊಳಿಸಿ ಮತ್ತೊಮ್ಮೆ ಜ್ಯೂಸ್ ವಿತರಿಸಲು ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಇದು ಸಾರ್ವಜನಿಕರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಡಿಯೋ ಮತ್ತು ಗ್ರಾಹಕರ ದೂರಿನ ಬೆನ್ನಲ್ಲೇ ಆಹಾರ ಸುರಕ್ಷತಾ ಅಧಿಕಾರಿಗಳು ಮಾಲ್‌ನ PVR ಕೌಂಟರ್‌ಗೆ ಭೇಟಿ ನೀಡಿ ದಿಢೀರ್ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ನಿಯಮಗಳ ಉಲ್ಲಂಘನೆ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಕಾರಣ ತಕ್ಷಣವೇ ಜ್ಯೂಸ್ ಕೌಂಟರ್ ಅನ್ನು ಮುಚ್ಚಿಸಲಾಗಿದೆ.

ಆಸ್ತಿಗಾಗಿ ಪ್ರತಿದಿನ ಮಾನಸಿಕ, ದೈಹಿಕ ಹಿಂಸೆ: ಪತ್ನಿಯ ದೌರ್ಜನ್ಯ ವಿವರಿಸಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ನಾಯಕನ ಪುತ್ರ; ಕೊನೆಯ ವಿಡಿಯೊ ವೈರಲ್‌

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ನಿಯಮ ಉಲ್ಲಂಘಿಸಿರುವ ಸಂಸ್ಥೆಗೆ ನೋಟಿಸ್ ನೀಡಲಾಗಿದ್ದು, ಜ್ಯೂಸ್ ಕೌಂಟರ್ ಅನ್ನು ಮುಚ್ಚಿಸಲಾಗಿದೆ. ದೊಡ್ಡ ಬ್ರ್ಯಾಂಡ್ ಆಗಿರಲಿ ಅಥವಾ ಸಣ್ಣ ವ್ಯಾಪಾರಿಯಾಗಿರಲಿ, ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಎಲ್ಲರಿಗೂ ಒಂದೇ ನಿಯಮ ಅನ್ವಯಿಸುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಯಾವುದೇ ಅಖಾದ್ಯ ಅಥವಾ ಅಶುಚಿತ್ವದ ಪ್ರಕರಣಗಳಿದ್ದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.