ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Python Found: ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲೇ ಹೆಬ್ಬಾವು ಸಾಕಿದ್ದ ಭೂಪ; ದಿನವೂ‌ ಬರುತ್ತಿತ್ತು ಕೆಜಿಗಟ್ಟಲೇ ಮಾಂಸ!

ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಹೆಬ್ಬಾವು ಸಾಕಿದ್ದ ಆಂಧ್ರಪ್ರದೇಶ ಮೂಲದ ಯುವಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಧಿಕಾರಿಗಳು ತೆರಳಿ ಪರಿಶೀಲಿಸಿದಾಗ ಹೆಬ್ಬಾವು ಪತ್ತೆಯಾಗಿದೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲೇ ಹೆಬ್ಬಾವು ಸಾಕಿದ್ದ ಭೂಪ!

-

Prabhakara R
Prabhakara R Jul 5, 2026 6:57 PM

ಬೆಂಗಳೂರು: ಎಲ್ಲಾದರೂ ಒಂದು ಸಣ್ಣ ಹಾವು ಕಂಡರೇ ನಾವು ಭಯದಿಂದ ದೂರ ಓಡಿ ಹೋಗುತ್ತೇವೆ. ಅಂತಹುದರಲ್ಲಿ ಇಲ್ಲೊಬ್ಬ ಯುವಕ, ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ನಲ್ಲೇ ಯಾರಿಗೂ ತಿಳಿಯದಂತೆ ಹೆಬ್ಬಾವನ್ನು (Python) ಸಾಕುತ್ತಿದ್ದ ಆಘಾತಕಾರಿ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಾಟನ್ ಬಾಕ್ಸ್‌ನಲ್ಲಿ ಇರಿಸಲಾಗಿದ್ದ ಹೆಬ್ಬಾವನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಆಂಧ್ರಪ್ರದೇಶ ಮೂಲದ ಯುವಕ ಹೆಬ್ಬಾವು ಸಾಕಿದ್ದ. ಕಳೆದ ಕೆಲವು ದಿನಗಳಿಂದ ಆತನ ಮನೆಗೆ ಕೆಲವರು ಶಂಕಾಸ್ಪದವಾಗಿ ಬಂದು ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ಅಷ್ಟೇ ಅಲ್ಲದೆ, ಆ ಮನೆಗೆ ಭಾರಿ ಪ್ರಮಾಣದಲ್ಲಿ ಮಾಂಸವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯ ನಿವಾಸಿಗಳು ತಕ್ಷಣವೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿದ್ದರು.

ಸ್ಥಳೀಯರ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಾಮಾಕ್ಷಿಪಾಳ್ಯ ಪೊಲೀಸರು ಜಂಟಿಯಾಗಿ ಫ್ಲ್ಯಾಟ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಇಡೀ ತಂಡವೇ ಶಾಕ್ ಆಗಿದೆ. ಫ್ಲ್ಯಾಟ್‌ನ ಒಳಗಡೆ ಇದ್ದ ದೊಡ್ಡ ಬಾಕ್ಸ್ ಒಂದರಲ್ಲಿ ಹೆಬ್ಬಾವನ್ನು ಅಕ್ರಮವಾಗಿ ಇರಿಸಿರುವುದು ಪತ್ತೆಯಾಗಿದೆ. ಅಧಿಕಾರಿಗಳು ತಕ್ಷಣವೇ ಆ ಹೆಬ್ಬಾವನ್ನು ವಶಕ್ಕೆ ಪಡೆದಿದ್ದು, ನಿಯಮಬಾಹಿರವಾಗಿ ವನ್ಯಜೀವಿ ಸಾಕಿದ ಆರೋಪದಡಿ ಯುವಕ ಹಾಗೂ ಆತನ ಸಹಚರರ ವಿರುದ್ಧ ಕೇಸ್ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

ಪೊಲೀಸರ ತೀವ್ರ ವಿಚಾರಣೆಯ ವೇಳೆ ಯುವಕ ಆಘಾತಕಾರಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಸಾಮಾಜಿಕ ಜಾತಾಣದಲ್ಲಿ ಹಾವಿನ ಕುರಿತಾದ ರೀಲ್ಸ್ ನೋಡಿ ತಾನು ಆಕರ್ಷಿತನಾಗಿದ್ದಾಗಿ ತಿಳಿಸಿದ್ದಾನೆ. ನಂತರ ಆ ರೀಲ್ಸ್ ಅಪ್‌ಲೋಡ್ ಮಾಡಿದ್ದ ಮಾಲೀಕನನ್ನು ಸಂಪರ್ಕಿಸಿದ್ದಾಗ, ಆತನ ಬಳಿ ಮೂರು 'ಬಾಲ್ ಪೈಥಾನ್' ಇರುವುದಾಗಿ ಹೇಳಿದ್ದ. ಅದರಲ್ಲಿ ತನಗೆ ಇಷ್ಟವಾದ ಒಂದು ಹೆಬ್ಬಾವನ್ನು ಆರಿಸಿಕೊಂಡಿದ್ದಾಗಿ ಹಾಗೂ ಆ ಹಾವು ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ ಮೂಲಕ ನೇರವಾಗಿ ತನ್ನ ಮನೆ ಬಾಗಿಲಿಗೆ ಬಂದಿಳಿಯಿತು ಎಂದು ಯುವಕ ಒಪ್ಪಿಕೊಂಡಿದ್ದಾನೆ.

ಅರಣ್ಯ ಇಲಾಖೆಯ ತಜ್ಞ ಅಧಿಕಾರಿಗಳು ಪರಿಶೀಲಿಸಿದಾಗ, ಯುವಕನ ಬಳಿ ಇದ್ದ ಹೆಬ್ಬಾವು ಅತ್ಯಂತ ವಿರಳ ಹಾಗೂ ವಿದೇಶಿ ತಳಿಯ 'ಬಾಲ್ ಪೈಥಾನ್' ಎಂದು ದೃಢಪಟ್ಟಿದೆ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ, ಇಂತಹ ವಿದೇಶಿ ಅಥವಾ ಅಪರೂಪದ ವನ್ಯಜೀವಿಗಳನ್ನು ಸಾಕಲು ಮತ್ತು ತಳಿ ಅಭಿವೃದ್ಧಿ ಮಾಡಲು ಸರ್ಕಾರದ ಅಧಿಕೃತ ಪರವಾನಗಿ ಹಾಗೂ ನೋಂದಣಿ ಕಡ್ಡಾಯವಾಗಿರುತ್ತದೆ. ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲದೆ ಇವುಗಳನ್ನು ಸಾಕುವುದು ಅಥವಾ ಮಾರಾಟ ಮಾಡುವುದು ಸಂಪೂರ್ಣ ಶಿಕ್ಷಾರ್ಹ ಅಪರಾಧವಾಗಿದೆ.

Bengaluru Viral Video: ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್‌ ನಾಗರಹಾವು; ಬೆಚ್ಚಿಬಿದ್ದ ಪೋಷಕರು!

ಸದ್ಯ ಈ ಘಟನೆ ಬೆಂಗಳೂರಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆನ್‌ಲೈನ್ ಡೆಲಿವರಿ ಮೂಲಕ ಇಷ್ಟು ದೊಡ್ಡ ಹೆಬ್ಬಾವನ್ನು ಸಪ್ಲೈ ಮಾಡಿದ ಆ ನಕಲಿ ಜಾಲದ ಕಿಂಗ್‌ಪಿನ್ ಯಾರು? ಬೆಂಗಳೂರಿನಲ್ಲಿ ಇಂತಹ ಅಕ್ರಮ ವನ್ಯಜೀವಿ ಮಾರಾಟದ ಜಾಲ ಸಕ್ರಿಯವಾಗಿದೆಯೇ? ಎಂಬ ಕುರಿತು ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ತೀವ್ರ ತನಿಖೆ ಮುಂದುವರಿಸಿದ್ದಾರೆ.