ಅಂಡಾಣುಗಳ ಕೊರತೆಯ ನಡುವೆಯೂ ತಾಯ್ತನದ ಕನಸು ಸಾಕಾರ: ವೈಯಕ್ತೀಕರಿಸಿದ ಐವಿಎಫ್, ಫಲವತ್ತತೆ ಸಂರಕ್ಷಣೆ ಚಿಕಿತ್ಸೆಯ ಮೂಲಕ ಮಿಲನ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ
Milann IVF Hospital: ಅಂಡಾಶಯದ ಗೆಡ್ಡೆಯಿಂದ ಬಳಲುತ್ತಿದ್ದ 32 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನ ಮಿಲನ್ ಫರ್ಟಿಲಿಟಿ ಮತ್ತು ಬರ್ತಿಂಗ್ ಆಸ್ಪತ್ರೆಯ ತಜ್ಞರ ತಂಡದ ನೆರವಿನೊಂದಿಗೆ ಯಶಸ್ವಿಯಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಅತ್ಯಂತ ಯೋಜಿತ ಫಲವತ್ತತೆ ಸಂರಕ್ಷಣೆ ಹಾಗೂ ಐವಿಎಫ್ ಚಿಕಿತ್ಸಾ ವಿಧಾನವು ಆಕೆಯ ತಾಯ್ತನದ ಕನಸನ್ನು ನನಸುಗೊಂಡಿದೆ.
-
ಬೆಂಗಳೂರು, ಅ. 24: ಪದೇ ಪದೆ ಮರುಕಳಿಸುತ್ತಿದ್ದ ಅಪರೂಪದ ಅಂಡಾಶಯದ ಗೆಡ್ಡೆಯಿಂದ ಬಳಲುತ್ತಿದ್ದ 32 ವರ್ಷದ ಮಹಿಳೆಯೊಬ್ಬರು, ಬೆಂಗಳೂರಿನ ಮಿಲನ್ ಫರ್ಟಿಲಿಟಿ ಮತ್ತು ಬರ್ತಿಂಗ್ ಆಸ್ಪತ್ರೆಯ (Milann IVF Hospital) ತಜ್ಞರ ತಂಡದ ನೆರವಿನೊಂದಿಗೆ ಯಶಸ್ವಿಯಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಅತ್ಯಂತ ಯೋಜಿತ ಫಲವತ್ತತೆ ಸಂರಕ್ಷಣೆ ಹಾಗೂ ಐವಿಎಫ್ ಚಿಕಿತ್ಸಾ ವಿಧಾನವು ಆಕೆಯ ತಾಯ್ತನದ ಕನಸನ್ನು ಸಾಕಾರಗೊಳಿಸಿದೆ.
ಮಿಲನ್ ಆಸ್ಪತ್ರೆಯ ರಿಪ್ರೊಡಕ್ಟಿವ್ ಮೆಡಿಸಿನ್ ಆ್ಯಂಡ್ ಗೈನಾಕಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಶಿಲ್ಪಾ ರೆಡ್ಡಿ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ವಾರಿಣಿ ಎನ್., ಎಂಬ್ರಿಯಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಸೈಂಟಿಫಿಕ್ ಡೈರೆಕ್ಟರ್ ಡಾ. ಮೊಹಮ್ಮದ್ ಅಶ್ರಫ್ ಸಿ. ಮತ್ತು ರಿಪ್ರೊಡಕ್ಟಿವ್ ಮೆಡಿಸಿನ್ ಜೂನಿಯರ್ ಕನ್ಸಲ್ಟೆಂಟ್ ಡಾ. ಮೋನಿಷಾ ರವಿ ಅವರ ನೇತೃತ್ವದಲ್ಲಿ ಈ ಸಂಕೀರ್ಣ ಚಿಕಿತ್ಸೆ ನೆರವೇರಿದೆ ಎಂದು ಮಿಲನ್ ಆಸ್ಪತ್ರೆಯ ನಿರ್ದೇಶಕಿ ಅಂಜಲಿ ಅಜಯ್ಕುಮಾರ್ ವಿವರಿಸಿದ್ದಾರೆ. ಮಹಿಳೆ ಈ ಹಿಂದೆಯೇ ಬೇರೊಂದು ಆಸ್ಪತ್ರೆಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ, ಅಂಡಾಶಯದ ಅಂಗಾಂಶ ಗಣನೀಯವಾಗಿ ಕ್ಷೀಣಿಸಿತ್ತು ಹಾಗೂ ಅಂಡಾಣುಗಳ ಸಂಖ್ಯೆಯೂ ತೀರಾ ಇಳಿಮುಖವಾಗಿತ್ತು. ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ, ತನ್ನದೇ ಅಂಡಾಣುಗಳ ಮೂಲಕ ಮಗು ಪಡೆಯಬೇಕೆಂಬ ಆಕೆಯ ಅದಮ್ಯ ಇಚ್ಛಾಶಕ್ತಿಯನ್ನು ವೈದ್ಯರ ತಂಡ ಯಶಸ್ವಿಯಾಗಿ ಕೈಗೂಡಿಸಿದೆ.
ಮಹಿಳೆಗೆ 30 ವರ್ಷ ವಯಸ್ಸಿದ್ದಾಗ ಬೇರೊಂದು ಆಸ್ಪತ್ರೆಯಲ್ಲಿ ಆಕೆಯ ಬಲ ಅಂಡಾಶಯದಲ್ಲಿ 11.2×7.6×8 ಸೆಂ.ಮೀ. ಗಾತ್ರದ ದೊಡ್ಡ ಸಿಸ್ಟ್ ಹಾಗೂ ಎಡ ಅಂಡಾಶಯದಲ್ಲಿ ಸಣ್ಣ ಎಂಡೊಮೆಟ್ರಿಯೋಟಿಕ್ ಸಿಸ್ಟ್ ಇರುವುದು ಪತ್ತೆಯಾಗಿತ್ತು. 'ಮಿನಿಮಲಿ ಇನ್ವೇಸಿವ್ ಸರ್ಜರಿ'ಗೆ ಒಳಗಾಗಿದ್ದ ಆಕೆಗೆ, 'ಬಾರ್ಡರ್ಲೈನ್ ಸೆರೋಮ್ಯುಸಿನಸ್ ಓವೇರಿಯನ್ ಟ್ಯೂಮರ್ ವಿತ್ ಮೈಕ್ರೋಇನ್ವೇಷನ್' ಎಂಬ ಅಪರೂಪದ ಗೆಡ್ಡೆಯಿರುವುದು ದೃಢಪಟ್ಟಿತ್ತು. ಇದು ಸಂಪೂರ್ಣವಾಗಿ ಕ್ಯಾನ್ಸರ್ ಆಗಿರದಿದ್ದರೂ, ಅಸಹಜ ಜೀವಕೋಶಗಳು ಅಂಡಾಶಯದ ಸುತ್ತಲಿನ ಅಂಗಾಂಶವನ್ನು ಪ್ರವೇಶಿಸುವ ಆರಂಭಿಕ ಲಕ್ಷಣಗಳು ಗೋಚರಿಸಿದ್ದವು. ಅಲ್ಲದೆ, ಹೊಟ್ಟೆಯ ಅಂಗಗಳ ಸುತ್ತಲಿನ ದ್ರವದಲ್ಲೂ ಅಸಹಜ ಜೀವಕೋಶಗಳು ಪತ್ತೆಯಾಗಿದ್ದರಿಂದ ನಿರಂತರ ಅಲ್ಟ್ರಾಸೌಂಡ್ ನಿಗಾದಲ್ಲಿ ಇರಿಸಲಾಗಿತ್ತು.
ಮೊದಲ ಶಸ್ತ್ರಚಿಕಿತ್ಸೆಯ ಹದಿನೈದು ತಿಂಗಳ ಬಳಿಕ ನಡೆಸಿದ ಎಂಆರ್ಐ ಸ್ಕ್ಯಾನಿಂಗ್ನಲ್ಲಿ, ಎಡ ಅಂಡಾಶಯದಲ್ಲಿ 15 x 10 ಸೆಂ.ಮೀ. ಗಾತ್ರದ ದೊಡ್ಡ ಸಿಸ್ಟ್ ಇರುವುದು ಪತ್ತೆಯಾಯಿತು. ಇದಕ್ಕಾಗಿ ಮರು ಶಸ್ತ್ರಚಿಕಿತ್ಸೆ ನಡೆಸಿದಾಗ, ಅಸಹಜ ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುವ ಅಪಾಯಕಾರಿ ಅಂಶವಾದ 'ಮೈಕ್ರೋಇನ್ವೇಸಿವ್ ಸೆರೋಮ್ಯುಸಿನಸ್ ಬಿಒಟಿ' ದೃಢಪಟ್ಟಿತ್ತು.
ದುರದೃಷ್ಟವಶಾತ್, ಕೇವಲ ಮೂರು ತಿಂಗಳ ಅಂತರದಲ್ಲಿ ಅದೇ ಎಡ ಅಂಡಾಶಯದಲ್ಲಿ ಮತ್ತೆ ಗೆಡ್ಡೆ ಕಾಣಿಸಿಕೊಂಡಿತು. ಈ ಹಂತದಲ್ಲಿ ಕ್ಯಾನ್ಸರ್ ಅಥವಾ ತತ್ಸಂಬಂಧಿ ಪರಿಸ್ಥಿತಿಗಳಿರುವ ರೋಗಿಗಳಲ್ಲಿ ಫಲವತ್ತತೆಯನ್ನು ಕಾಪಾಡುವಲ್ಲಿ ಪರಿಣತಿ ಹೊಂದಿರುವ ಮಿಲನ್ ಆಸ್ಪತ್ರೆಯ ವಿಶೇಷ ಆಂಕೊಫರ್ಟಿಲಿಟಿ ವಿಭಾಗಕ್ಕೆ ಅವರನ್ನು ಉನ್ನತ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಯಿತು.
ಮಿಲನ್ ಆಸ್ಪತ್ರೆಯಲ್ಲಿ ಇಮೇಜಿಂಗ್ ಸ್ಕ್ಯಾನಿಂಗ್ ನಡೆಸಿದಾಗ, ಎಡ ಅಂಡಾಶಯದಲ್ಲಿ 11.3×7.4× 7.4 ಸೆಂ.ಮೀ ಅಳತೆಯ ಸಂಕೀರ್ಣ ಸಿಸ್ಟ್ ಇರುವುದು ಹಾಗೂ ಕೇವಲ ಎರಡು ಫಾಲಿಕಲ್ಸ್ (ಅಂಡಾಣುಗಳನ್ನು ಹೊಂದಿರುವ ರಚನೆಗಳು) ಮಾತ್ರ ಇರುವುದು ಕಂಡುಬಂತು. ಬಲ ಅಂಡಾಶಯ ಸಂಪೂರ್ಣವಾಗಿ ಅಗೋಚರವಾಗಿತ್ತು. ಆಕೆಯ AMH ಮಟ್ಟ 0.6 ng/ml ಗೆ ಕುಸಿದಿದ್ದು, ಅಂಡಾಣುಗಳ ಉತ್ಪಾದನಾ ಸಾಮರ್ಥ್ಯ ತೀರಾ ಕ್ಷೀಣಿಸಿರುವುದನ್ನು ಸ್ಪಷ್ಟಪಡಿಸುತ್ತಿತ್ತು.
ಈ ಸಂಕೀರ್ಣ ಪ್ರಕರಣವನ್ನು ರಿಪ್ರೊಡಕ್ಟಿವ್ ಮೆಡಿಸಿನ್, ಗೈನಾಕಾಲಜಿಕ್ ಆಂಕೊಲಾಜಿ ಹಾಗೂ ಪೆಥಾಲಜಿ ತಜ್ಞರ ತಂಡ ಕೂಲಂಕಷವಾಗಿ ಪರಿಶೀಲಿಸಿತು. ರೋಗಿಯ ದೀರ್ಘಕಾಲೀನ ಸುರಕ್ಷತೆಯ ದೃಷ್ಟಿಯಿಂದ, ಎರಡೂ ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್ಗಳು ಮತ್ತು ಹೊಟ್ಟೆಯ ಅಂಗಗಳನ್ನು ಆವರಿಸುವ ಕೊಬ್ಬಿನ ಅಂಗಾಂಶದ ಪದರವಾದ ಒಮೆಂಟಮ್ ಸಂಪೂರ್ಣವಾಗಿ ತೆಗೆದುಹಾಕುವುದೇ ಸೂಕ್ತ ಪರಿಹಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ವೈದ್ಯಕೀಯ ಸವಾಲುಗಳ ನಡುವೆಯೂ ದಂಪತಿಯು ಸ್ವಂತ ಅಂಡಾಣುಗಳ ಮೂಲಕವೇ ಜೈವಿಕ ಮಗುವನ್ನು ಪಡೆಯುವ ಆಶಯ ವ್ಯಕ್ತಪಡಿಸಿದ್ದರು.
ದಂಪತಿಗೆ ವಿಸ್ತೃತ ಕೌನ್ಸೆಲಿಂಗ್ ನಡೆಸಿದ ತಜ್ಞರ ತಂಡವು, ಎರಡು ಹಂತದ ನಿಖರ ಚಿಕಿತ್ಸಾ ಯೋಜನೆಯನ್ನು ರೂಪಿಸಿತು. ಅದರಂತೆ, ರೋಗಿಯ ಅಂಡಾಶಯದ ಹಾನಿಗೊಳಗಾದ ಅಂಗಾಂಶವನ್ನು ತೆಗೆದುಹಾಕಲು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬಯಾಪ್ಸಿ ಪರೀಕ್ಷೆಯಲ್ಲಿ ಇದು 'ಬಾರ್ಡರ್ಲೈನ್ ಸೆರೋಮ್ಯುಸಿನಸ್ ಓವೇರಿಯನ್ ಟ್ಯೂಮರ್ ವಿತ್ ಮೈಕ್ರೋಇನ್ವೇಷನ್' ಎಂದು ಮರುದೃಢಪಟ್ಟರೂ, ಗೆಡ್ಡೆಯು ಸುತ್ತಲಿನ ಅಂಗಾಂಶಗಳಿಗೆ ಹರಡಿರಲಿಲ್ಲ ಎಂಬುದು ವೈದ್ಯರ ತಂಡಕ್ಕೆ ಬಹುದೊಡ್ಡ ನಿರಾಳತೆ ನೀಡಿತ್ತು.
ಶಸ್ತ್ರಚಿಕಿತ್ಸೆಯ ಬಳಿಕ, ಈಸ್ಟ್ರೊಜೆನ್ ಹಾರ್ಮೋನ್ ಪರಿಣಾಮವನ್ನು ಕನಿಷ್ಠ ಮಟ್ಟದಲ್ಲಿರಿಸುವ ಉದ್ದೇಶದಿಂದ ಫರ್ಟಿಲಿಟಿ ತಂಡವು ಐವಿಎಫ್ ಪ್ರಕ್ರಿಯೆಗೆ ಚಾಲನೆ ನೀಡಿತು. ಉಳಿದಿರುವ ಅಂಗಾಂಶದಲ್ಲಿ ಅಂಡಾಣು ಉತ್ಪಾದನೆಯನ್ನು ಪ್ರಚೋದಿಸಲು 'ಲೋ-ಈಸ್ಟ್ರೊಜೆನ್ ಸ್ಟಿಮ್ಯುಲೇಶನ್ ಪ್ರೋಟೋಕಾಲ್' ಅಳವಡಿಸಲಾಯಿತು.
ಮುಂದಿನ ಪ್ರಯತ್ನದಲ್ಲಿ, ಕೃತಕ ಹಾರ್ಮೋನುಗಳ ಪ್ರಭಾವವನ್ನು ತಪ್ಪಿಸಲು ವೈದ್ಯರ ತಂಡವು 'ನ್ಯಾಚುರಲ್-ಸೈಕಲ್ ಫ್ರೋಜನ್ ಎಂಬ್ರಿಯೋ ಟ್ರಾನ್ಸ್ಫರ್' ವಿಧಾನವನ್ನು ಅನುಸರಿಸಿತು. ಈ ಬಾರಿ ಗರ್ಭಾಶಯದ ಒಳಪದರ ಅತ್ಯುತ್ತಮವಾಗಿ ಅಭಿವೃದ್ಧಿಗೊಂಡಿದ್ದರಿಂದ, ಉತ್ತಮ ಗುಣಮಟ್ಟದ ಒಂದೇ ಒಂದು '4AA ಬ್ಲಾಸ್ಟೊಸಿಸ್ಟ್' ಅನ್ನು ಯಶಸ್ವಿಯಾಗಿ ವರ್ಗಾಯಿಸಲಾಯಿತು.
ಗರ್ಭಾವಸ್ಥೆಯ ಆರೈಕೆಯ ಜತೆಜತೆಗೆ ನಿಯಮಿತ ಕ್ಯಾನ್ಸರ್ ನಿಗಾ ವಹಿಸಿದ್ದರ ಫಲವಾಗಿ, ರೋಗಿಯು ಕಡೆಗೂ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದರು. ಮಹಿಳೆಯ ಸುರಕ್ಷತೆಯನ್ನು ಕೇಂದ್ರಬಿಂದುವಾಗಿರಿಸಿಕೊಂಡು, ಫರ್ಟಿಲಿಟಿ-ಪ್ರಿಸರ್ವಿಂಗ್ ಶಸ್ತ್ರಚಿಕಿತ್ಸೆ, ಲೋ-ಈಸ್ಟ್ರೊಜೆನ್ ಸ್ಟಿಮ್ಯುಲೇಶನ್, ಎಂಬ್ರಿಯೋ ಪೂಲಿಂಗ್ ಹಾಗೂ ನಿಖರವಾದ ಭ್ರೂಣ ವರ್ಗಾವಣೆಯಂತಹ ನವೀನ ತಂತ್ರಜ್ಞಾನಗಳ ಸಮ್ಮಿಲನದೊಂದಿಗೆ ವೈದ್ಯರ ತಂಡ ಈ ಅಪರೂಪದ ತಾಯ್ತನವನ್ನು ಸಾಕಾರಗೊಳಿಸಿದೆ.