Richest CM list: ಚಂದ್ರಬಾಬು ನಾಯ್ಡು ದೇಶದಲ್ಲೇ ಅತ್ಯಂತ ಶ್ರೀಮಂತ ಸಿಎಂ; ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?
Richest CM list: ಸಿಎಂಗಳ ಸಂಪತ್ತಿನ ಕುರಿತ ಎಡಿಆರ್ ವರದಿಯ ಪ್ರಕಾರ ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಸಿಎಂ ಆಗಿದ್ದಾರೆ.

ಬೆಂಗಳೂರು: ದೇಶದ ಅತಿ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ (Richest CM list) ಬಿಡುಗಡೆಯಾಗಿದ್ದು, ಇದರಲ್ಲಿ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಮೊದಲ ಸ್ಥಾನ ಪಡೆದಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ದೇಶದ ಸಿಎಂಗಳ ಸಂಪತ್ತಿನ ಬಗ್ಗೆ ಕುತೂಹಲಕಾರಿ ವರದಿಯನ್ನು ಪ್ರಕಟಿಸಿದೆ.
ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 52.59 ಕೋಟಿ ರೂಪಾಯಿಗಳಷ್ಟಿದೆ ಎಂದು ವರದಿ ಹೇಳಿದೆ. ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ ಅಥವಾ ಎನ್‌ಎನ್‌ಐ 2023-2024ಕ್ಕೆ ಸರಿ ಸುಮಾರು ರೂ. 1,85,854 ಆಗಿದ್ದರೆ, ಒಬ್ಬ ಮುಖ್ಯಮಂತ್ರಿಯ ಸರಾಸರಿ ಸ್ವ-ಆದಾಯ ರೂ 13,64,310 ಆಗಿದೆ. ಇದು ಭಾರತದ ಸರಾಸರಿ ತಲಾ ಆದಾಯಕ್ಕಿಂತ 7.3 ಪಟ್ಟು ಹೆಚ್ಚು ಎಂದು ADR ತನ್ನ ವರದಿಯಲ್ಲಿ ತಿಳಿಸಿದೆ.
31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1,630 ಕೋಟಿ ರೂಪಾಯಿಗಳಷ್ಟಿದೆ ಎಂದು ಎಡಿಆರ್ ವರದಿಯ ಮೂಲಕ ತಿಳಿದುಬಂದಿದೆ. ಸಿಎಂಗಳ ಸಂಪತ್ತಿನ ಕುರಿತ ಎಡಿಆರ್ ವರದಿಯ ಪ್ರಕಾರ ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಸಿಎಂ ಆಗಿದ್ದಾರೆ.
ದೇಶದ ಅತ್ಯಂತ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೆಮಾ ಖಂಡು ಅವರಿದ್ದಾರೆ. ಪೆಮಾ ಖಂಡು ಅವರು ಒಟ್ಟು 332 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಕರ್ನಾಟಕದ ಸಿದ್ದರಾಮಯ್ಯ ಅವರಿದ್ದು, ಒಟ್ಟು 51 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಖಂಡು ಅವರು 180 ಕೋಟಿ ರೂ.ಗಳಷ್ಟು ಹೆಚ್ಚಿನ ಸಾಲ ಹೊಂದಿದ್ದಾರೆ. ಸಿದ್ದರಾಮಯ್ಯ ಅವರು 23 ಕೋಟಿ ಸಾಲ ಹೊಂದಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಬರೊಬ್ಬರಿ 931 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ನಾಯ್ಡು 10 ಕೋಟಿ ರೂ.ಗೂ ಹೆಚ್ಚು ಸಾಲ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಎಡಿಆರ್ ವರದಿಯ ಪ್ರಕಾರ ಕೇವಲ 15 ಲಕ್ಷ ಹೊಂದಿರುವ ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಸಿಎಂ ಆಗಿದ್ದಾರೆ.
ಮಮತಾ ಬಳಿಕ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ 55 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ದೇಶದಲ್ಲಿ 2ನೇ ಬಡ ಸಿಎಂ ಆಗಿದ್ದರೆ, 18 ಕೋಟಿಯೊಂದಿಗೆ ಪಿಣರಾಯಿ ವಿಜಯನ್ 3 ನೇ ಸ್ಥಾನದಲ್ಲಿದ್ದಾರೆ.
ಈ ಸುದ್ದಿಯನ್ನೂ ಓದಿ | Govt Employees: ಒಪಿಎಸ್ ಮರು ಜಾರಿ, ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಿಎಂ ಭರವಸೆ