Sourabha 2026: ಬೆಂಗಳೂರಿನಲ್ಲಿ ಫೆ.11ರಿಂದ 28ರವರೆಗೆ ಸೌರಭ-ರಾಜ್ಯಮಟ್ಟದ ಅಂತರ ಕಾಲೇಜು ರಂಗಸ್ಪರ್ಧೆ-2026
Sourabha State Level Theatre Competition: ರಂಗಸೌರಭ ವತಿಯಿಂದ ಆಯೋಜಿರುವ ಸೌರಭ 2026 ಕಾರ್ಯಕ್ರಮವು, ರಂಗಾಸಕ್ತ ಯುವ ಮನಸ್ಸುಗಳನ್ನು ಒಂದೇ ಸೂರಿನಡಿಯಲ್ಲಿ ಕಲೆಯುವಿಕೆಯ ಅತ್ಯದ್ಭುತ ಪರಿಕಲ್ಪನೆಯಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಯಿಂದ ಈಗಾಗಲೇ ನೂರಾರು ವಿದ್ಯಾರ್ಥಿಗಳು ಹಾಗೂ ಕಾಲೇಜು ಕಲಾತಂಡಗಳು ನೋಂದಾಯಿಸಿಕೊಂಡಿದೆ.
-
ಬೆಂಗಳೂರು: ಹವ್ಯಾಸಿ ರಂಗಭೂಮಿಯಲ್ಲಿ ವೈಶಿಷ್ಟ್ಯತೆ ಹಾಗೂ ವಿಭಿನ್ನ ರಂಗಪ್ರಯೋಗಗಳ ಮೂಲಕ ಹೆಸರುವಾಸಿಯಾಗಿರುವ ರಂಗಸೌರಭ (Rangasourabha), ಕಾಲೇಜು ರಂಗಭೂಮಿಯನ್ನು ಸದೃಢಗೊಳಿಸಲು ಅವ್ಯಾಹತ ಪ್ರಯತ್ನ ನಡೆಸುತ್ತಿದೆ. ಈ ಪ್ರಯತ್ನದ ಸಾಫಲ್ಯತೆಯೇ ಸೌರಭ – ರಾಜ್ಯಮಟ್ಟದ ಅಂತರ ಕಾಲೇಜು ರಂಗಸ್ಪರ್ಧೆಗಳು. ಇದೀಗ ಸೌರಭ 26ಕ್ಕೆ (Sourabha 2026) ವೇದಿಕೆ ಸಿದ್ಧಗೊಂಡಿದ್ದು, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಫೆಬ್ರವರಿ 11ರಿಂದ 28ರವರೆಗೆ ವಿವಿಧ ರಂಗ ಸ್ಪರ್ಧೆಗಳು ನಡೆಯಲಿವೆ.
ಫೆಬ್ರವರಿ 11ರ ಸಂಜೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ರಂಗಮಂದಿರದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಹಿರಿಯ ರಂಗಕರ್ಮಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀ ಅವರು ನೆರವೇರಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜ ಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರು ಹಾಜರಾಗಲಿದ್ದು, ಜಯನಗರದ ವಿಜಯ ಕಾಲೇಜು ನಿವೃತ್ತ ಪ್ರಾಚಾರ್ಯರು ಹಾಗೂ ರಂಗಸೌರಭ ಅಧ್ಯಕ್ಷರಾದ ಪ್ರೊ.ಡಿ.ಎನ್. ವೆಂಕಟರಾವ್ ಅವರು ಉಪಸ್ಥಿತರಿರಲಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯುತ್ತಿರುವ ಸೌರಭ 26ರ ಆವೃತ್ತಿಯಲ್ಲಿ ಸರಿಸುಮಾರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ. ಸೌರಭ ಕಾರ್ಯಕ್ರಮವು ರಂಗಾಸಕ್ತ ಯುವ ಮನಸ್ಸುಗಳನ್ನು ಒಂದೇ ಸೂರಿನಡಿಯಲ್ಲಿ ಕಲೆಯುವಿಕೆಯ ಅತ್ಯದ್ಭುತ ಪರಿಕಲ್ಪನೆಯಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಯಿಂದ ಈಗಾಗಲೇ ನೂರಾರು ವಿದ್ಯಾರ್ಥಿಗಳು ಹಾಗೂ ಕಾಲೇಜು ಕಲಾತಂಡಗಳು ನೋಂದಾಯಿಸಿಕೊಂಡಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಎಂಜಿನಿಯರಿಂಗ್ ಸೇರಿ ಪದವಿ ಕಾಲೇಜುಗಳು ನಾಟಕ ಪ್ರದರ್ಶಿಸಲಿವೆ.
ಸೌರಭ ರಂಗಸ್ಪರ್ಧೆಯಲ್ಲಿ ನಾಟಕ ಜತೆಗೆ ಮೂಕಾಭಿನಯ, ಜಾನಪದ ನೃತ್ಯ ಹಾಗೂ ರಂಗಗೀತೆಗಳನ್ನೊಳಗೊಂಡ ರಂಗಗೀತೆ ದೃಶ್ಯಾವಳಿ ಸ್ಪರ್ಧೆಯು ಸಹ ನಡೆಯಲಿದೆ. ವೈಯಕ್ತಿಕ ವಿಭಾಗದ ಸ್ಪರ್ಧೆಗಳು ಸೇರಿದಂತೆ ಒಟ್ಟು 20 ವಿವಿಧ ಸ್ಪರ್ಧೆಗಳು ನಡೆಯಲಿದ್ದು ವಿಜೇತರಿಗೆ ಫೆಬ್ರವರಿ 28 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.
ಎಲ್ಲಾ ಸ್ಪರ್ಧೆಗಳಲ್ಲಿಯೂ ಅತ್ಯುತ್ತಮ ನಿರ್ವಹಣೆ ತೋರಿದ ಕಾಲೇಜಿಗೆ ಪದ್ಮಭೂಷಣ ಡಾ. ರಾಜ್‌ಕುಮಾರ್ ಸರ್ವೋತ್ತಮ ಕಾಲೇಜು ಪಾರಿತೋಷಕವನ್ನು ನೀಡಲಾಗುತ್ತಿದೆ. ಈ ಪಾರಿತೋಷಕವನ್ನು ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪ್ರಾಯೋಜಿಸಿದ್ದಾರೆ. 70 ಕೆ.ಜಿ. ತೂಕವುಳ್ಳ ಕಂಚಿನ ಮಹಾನಟನ ಮೂರ್ತಿಯನ್ನು ಕನ್ನಡ ನಾಡಿನ ಹೆಸರಾಂತ ಕಲಾ ನಿರ್ದೇಶಕ ಶಶಿಧರ ಅಡಮ ಅವರು ನಿರ್ಮಿಸಿಕೊಟ್ಟಿದ್ದಾರೆ.
ನಟಿ ಗಿರಿಜಾ ಲೋಕೇಶ್ ಅವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಯನ್ನು ನಟ ಹಾಗೂ ನಿರ್ಮಾಪಕ ಸೃಜನ್ ಲೋಕೇಶ್ ಅವರು ಪ್ರಾಯೋಜಿಸಿದ್ದಾರೆ. ಇದಲ್ಲದೇ ನಾಟಕ ವಿವಿಧ ವಿಭಾಗಗಳಿಗೆ ನೀಡುವ ಪ್ರಶಸ್ತಿಯನ್ನು ನಾಡಿನ ಹೆಸರಾಂತ ಹವ್ಯಾಸಿ ರಂಗ ತಂಡಗಳು ನೀಡಿವೆ.
ವಾಣಿಜ್ಯ ನಗರಿಯಲ್ಲಿ ಸಾಂಸ್ಕೃತಿಕ ರಸದೌತಣ; ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅದ್ಧೂರಿ ತೆರೆ
ಸೌರಭ ರಂಗ ಸ್ಪರ್ಧೆಗಳು ವಿಜೃಂಭಣೆಯಿಂದ ನಡೆದಿದೆ. ಇಲ್ಲಿಯವರೆಗೂ ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತ್ ನಾಗ್, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಕಿಶೋರ್, ಶರತ್ ಲೋಹಿತಾಶ್ವ,ಶ್ವೇತಾ ಶ್ರೀವಾತ್ಸವ್, ಅಭಿಷೇಕ್ ಅಂಬರೀಷ್, ಸಪ್ತಮಿ ಗೌಡ ಮುಂತಾದ ಖ್ಯಾತನಾಮರು ಆಗಮಿಸಿ ರಂಗಾಸಕ್ತ ಯುವಜನತೆಗೆ ಉತ್ಸಾಹ ತುಂಬಿದ್ದಾರೆ ಎಂದು ರಂಗ ಸೌರಭ ತಿಳಿಸಿದೆ.