ಕೋಲಾರದ ಕುರುಡುಮಲೈನಿಂದ ಆರಂಭ: ಇಂದಿನಿಂದ ಬಿಜೆಪಿ ಸೇವಾ ಸಂಕಲ್ಪ ಯಾತ್ರೆಗೆ ಚಾಲನೆ
ಪ್ರಧಾನಿ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ಸಾರ್ಥಕ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದಿನಿಂದ ಸೇವಾ ಸಂಕಲ್ಪ ಅಭಿಯಾನ ಹಾಗೆಯೇ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ವಿಜಯಸಂಕಲ್ಪ ಯಾತ್ರೆ ಒಟ್ಟೊಟ್ಟಿಗೆ ನಡೆಸಲಿದೆ.
-
ಬೆಂಗಳೂರು: ಮುಂಬರುವ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಆಡಳಿತಾರೂಢ ಕಾಂಗ್ರೆಸ್ ಇಂದಿನಿಂದ ಭಾರತ್ ಜೋಡೋ-2 ಯಾತ್ರೆ ಆರಂಭಿಸುತ್ತಿದ್ದರೆ, ಅತ್ತ ಸೇವಾ ಸಂಕಲ್ಪ-ವಿಜಯ ಸಂಕಲ್ಪ ಯಾತ್ರೆಯನ್ನು ಬಿಜೆಪಿ ಸಂಘಟಿಸಿ ಯಾತ್ರಾ ರಾಜಕಾರಣಕ್ಕೆ ಮುಂದಾಗಿದೆ.
ಪ್ರಧಾನಿ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ಸಾರ್ಥಕ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದಿನಿಂದ ಸೇವಾ ಸಂಕಲ್ಪ ಅಭಿಯಾನ ಹಾಗೆಯೇ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ವಿಜಯಸಂಕಲ್ಪ ಯಾತ್ರೆ ಒಟ್ಟೊಟ್ಟಿಗೆ ನಡೆಸಲಿದೆ. ಕೇಂದ್ರ ಸರಕಾರದ ಯೋಜನೆಗಳನ್ನು ಜನರ ಮನೆ ಮನೆಗೆ ತಲುಪಿಸಲು ಹಾಗೂ ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಈ ವಿಜಯ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ.
ಗುರುವಾರ ಕೋಲಾರ ಜಿಲ್ಲೆಯ ಕುರುಡುಮಲೆಯ ಗಣೇಶ ದೇವಾಲಯದಿಂದ ಈ ಯಾತ್ರೆಗೆ ಬಿಜೆಪಿ ಚಾಲನೆ ನೀಡಲಿದ್ದು, ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿ ಸಲು ವಿಜಯ ಸಂಕಲ್ಪ ಯಾತ್ರೆ ಬಿಜೆಪಿ ಹಮ್ಮಿಕೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸೇವಾ ಸಂಕಲ್ಪ ಅಭಿಯಾ ನದಡಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ದಂತಹ ಕಾರ್ಯಕ್ರಮಗಳ ಜತೆಗೆ ರೈತರು, ಮಹಿಳೆಯರು, ಕಾರ್ಮಿಕರ ಜತೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹಾಗೆಯೇ ಪ್ರತಿ ಬೂತ್ ಮಟ್ಟದಲ್ಲಿ ಪ್ರಮುಖ ಮುಖಂಡರುಗಳ ಸಭೆ, ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಬಿಜೆಪಿ ನಡೆಸುತ್ತಿದೆ. ಸೇವಾ ಸಂಕಲ್ಪ ವಿಜಯ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣ ಸ್ವಾಮಿ, ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಸೇರಿದಂತೆ ಪಕ್ಷದ ಎಲ್ಲ ಮುಖಂಡರು, ಶಾಸಕರು, ಸಂಸದರು ಪಾಲ್ಗೊಳ್ಳುವರು.
ಬೆಳಿಗ್ಗೆ 9 ಗಂಟೆಗೆ ಕೋಲಾರದ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೈ ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಗೊಳ್ಳಲಿದೆ ಬಳಿಕ ಬಂಗಾರಪೇಟೆ ಹಾಗೂ ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗಲಿದೆ.
![]()
ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು 100 ದಿನಗಳ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ರನ್ನು ಕರೆಯದೇ ಬಹಿಷ್ಕರಿಸಿದ್ದಾರೆ. ಹಾಗಾಗಿ ಬಿ.ಕೆ.ಹರಿಪ್ರಸಾದ್ ಹತಾಶರಾಗಿ ಪರ್ಯಾಯ ಪಾದಯಾತ್ರೆ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಬ್ಯಾನರ್ ಹರಿದು ಹಾಕುವ ಕೀಳುಮಟ್ಟದ ರಾಜಕಾರಣದ ಅವಶ್ಯಕತೆ ನಮಗಿಲ್ಲ. ನಮಗೆ ಅಂಥ 420 ರಾಜಕಾರಣದ ಅವಶ್ಯಕತೆ ಇಲ್ಲ .
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ