ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯಪಾಲರ ಭಾಷಣ; ರಾಜ್ಯ ಸರ್ಕಾರದ ವಂದನಾ ನಿರ್ಣಯಕ್ಕೆ ಆರ್‌.ಅಶೋಕ್‌ ತೀವ್ರ ವಿರೋಧ

Karnataka Assembly Session: ರಾಜ್ಯ ಸರ್ಕಾರ ರಾಜ್ಯಪಾಲರಿಂದ ಮಾಡಿಸಿರುವ ಸುಳ್ಳಿನ ಕಂತೆಗಳ ಭಾಷಣಕ್ಕೆ ವಿರೋಧವಿದೆ. ಹೀಗಾಗಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ' ಪ್ರಸ್ತಾವವನ್ನು ನಾನು ವಿರೋಧಿಸುತ್ತೇನೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ.

ರಾಜ್ಯಪಾಲರಿಂದ ಸುಳ್ಳಿನ ಭಾಷಣ ಮಾಡಿಸಲು ಯತ್ನ: ಆರ್‌.ಅಶೋಕ್‌

ವಿಧಾನಸಭೆಯಲ್ಲಿ ಆರ್‌.ಅಶೋಕ್‌ ಭಾಷಣ. -

Prabhakara R
Prabhakara R Feb 2, 2026 4:33 PM

ಬೆಂಗಳೂರು: ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಹಗರಣಗಳು ಹೊರ ಬಿದ್ದಿವೆ. ಅಭಿವೃದ್ಧಿ ಶೂನ್ಯವಾಗಿದೆ. ಹೀಗಾಗಿ ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ರಾಜ್ಯಪಾಲರ ಜತೆ ಜಟಾಪಟಿ, ಕೇಂದ್ರದ ವಿರುದ್ಧ ಕ್ಯಾತೆಗಳಂತಹ ಕೀಳೂ ರಾಜಕಾರಣವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಈ ವಾಸ್ತವ ಸಂಗತಿಗಳನ್ನು ಮರೆಮಾಚಿ ರಾಜ್ಯಪಾಲರಿಂದ ಸುಳ್ಳಿನ ಭಾಷಣ ಮಾಡಿಸುವ ಯತ್ನ ಮಾಡಿದೆ. ಹೀಗಾಗಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ರಾಜ್ಯ ಸರ್ಕಾರದ ಪ್ರಸ್ತಾವವನ್ನು ನಾನು ವಿರೋಧಿಸುತ್ತೇನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ.

ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ವಿಧಾನಸಭೆಯಲ್ಲಿ ಭಾಷಣ ಮಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಇದುವರೆಗೆ ಕೇಂದ್ರ ಸರ್ಕಾರದ ವಿರುದ್ಧ 18 ನಿರ್ಣಯ ಕೈಗೊಂಡಿದೆ. ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಕಾಲು ಕೆರೆದು ಜಗಳ ಮಾಡುವ ಪರಿಣಾಮ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಗಾಂಧೀಜಿಯ ಹೆಸರನ್ನು ಹೇಳುವ ಕಾಂಗ್ರೆಸ್‌ ತನ್ನ ಅವಧಿಯ ಯೋಜನೆಗಳಿಗೆ ಗಾಂಧಿ ಅವರ ಹೆಸರಿಗಿಂತ ಹೆಚ್ಚಾಗಿ ನೆಹರೂ, ರಾಜೀವ್‌ ಗಾಂಧಿ, ಇಂದಿರಾ ಗಾಂಧಿ ಅವರ ಹೆಸರಿಟ್ಟಿತ್ತು. ಈಗ ಮಹಾತ್ಮ ಗಾಂಧಿ ಅವರ ಹೆಸರನ್ನು ಬಳಸಿಕೊಂಡು ಅಧಿಕಾರ ಹಿಡಿಯಲು ಹವಣಿಸುತ್ತಿದೆ ಎಂದು ಟೀಕಿಸಿದರು.

ಸನ್ಮಾನ್ಯ ಸಭಾಧ್ಯಕ್ಷರೆ, ʼರಾಮʼನ ಹೆಸರಿನ ಬಗ್ಗೆ, ಕಾಂಗ್ರೆಸ್ ಸರ್ಕಾರಕ್ಕೆ ಬಹು ದೊಡ್ಡ ಅಲರ್ಜಿ ಇದೆ. ಆದರೆ ಭಾರತೀಯರಿಗೆ "ರಾಮ ಎಂಬುದು ಒಂದು ಹೆಸರಲ್ಲ. ಅದು ಒಂದು ಆದರ್ಶ". ಇಂತಹ ರಾಮನ ಬಗ್ಗೆ ಕಾಂಗ್ರೆಸ್ಸಿಗರಿಗೆ ಇರುವ ತಾತ್ಸಾರ ಭಾವನೆ ಎಂತಹದ್ದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಇದೇ ಸಿದ್ದರಾಮಯ್ಯ ಸರ್ಕಾರ ರಾಮನಗರ ಜಿಲ್ಲೆ ಎಂದಿದ್ದ ಹೆಸರಿನಲ್ಲಿ "ರಾಮ"ನನ್ನು ತೆಗೆದುಹಾಕಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕಾರಣ ಮಾಡಿದರು.

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು; ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಈ ಬಜೆಟ್‌ ಉತ್ತರ ಎಂದ ಕುಮಾರಸ್ವಾಮಿ

ಹೆಸರು ಬದಲಿಸುವಂತೆ ಯಾವುದೇ ಸಾರ್ವಜನಿಕರಾಗಲೀ, ಸಂಘ ಸಂಸ್ಥೆಗಳಾಗಲೀ ಕೇಳಿಕೊಂಡಿರಲಿಲ್ಲ. ಇದೀಗ ರಾಜ್ಯಪಾಲರ ಭಾಷಣ ಅವರ ವಿಕೃತ ಮನೋಭಾವಕ್ಕೆ ಮತ್ತೊಂದು ನಿದರ್ಶನವಾಗಿದೆ. ಈಗಾಗಲೇ ಲೋಕಸಭೆಯಲ್ಲಿ ಮಂಡನೆಯಾಗಿ ಅನುಮೋದನೆ ಪಡೆದು ರಾಷ್ಟ್ರಪತಿಗಳು ಅಂಕಿತ ಹಾಕಿರುವ "ವಿಬಿ - ಜಿ ರಾಮ್ ಜಿ” ಯೋಜನೆ ಬಗ್ಗೆ ತಕರಾರು ಎತ್ತಿದ್ದಾರೆ. ಇನ್ನೂ ಉದ್ಧಟತನ ಮೆರೆದು ರಾಜ್ಯಪಾಲರ ಭಾಷಣದಲ್ಲಿ "ವಿಬಿ ಗ್ರಾಮ್ ಜಿ" ಎಂದು ಉಲ್ಲೇಖ ಮಾಡಿ "ರಾಮ"ನ ಹೆಸರಿಗೆ ಕತ್ತರಿ ಹಾಕಿದೆ.

ತಕರಾರು ತೆಗೆಯಲು ಮಾತ್ರವೇ ʼಗಾಂಧಿʼ ಬೇಕು

ಕಾಂಗ್ರೆಸ್‌ನವರಿಗೆ ತಕರಾರು ತೆಗೆಯಲು ಮಾತ್ರವೇ “ಗಾಂಧಿ" ಹೆಸರು ಬೇಕು. ಆದರೆ ಅದೇ ಮಹಾತ್ಮ ಗಾಂಧಿ ತಮ್ಮ ಬದುಕಿನ ಉದ್ದಕ್ಕೂ "ಯಾವ ಮರ್ಯಾದಾ ಪುರುಷೋತ್ತಮ ರಾಮನನ್ನು ಆದರ್ಶ" ಎಂದು ಭಾವಿಸಿದ್ದರೋ ಆ "ರಾಮ" ಇವರಿಗೆ ಬೇಕಾಗಿಲ್ಲ. ಈ ಸರ್ಕಾರ ರಾಜ್ಯಪಾಲರ ಮೂಲಕ ಮಾಡಿಸಿರುವ ಭಾಷಣ ಸಂಪೂರ್ಣ ರಾಜಕೀಯ ದುರುದ್ದೇಶ ಮತ್ತು ಸುಳ್ಳುಗಳಿಂದ ಕೂಡಿದೆ.

ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡುವುದು, ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುವುದು, ಕೇಂದ್ರದ ವಿರುದ್ಧ ಜನರನ್ನು ಎತ್ತಿಕಟ್ಟಲು ಯತ್ನಿಸುವುದನ್ನೇ ಕಾಯಕ ಮಾಡಿಕೊಳ್ಳಲಾಗಿದೆ.

ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಸಾಧನೆ, ಜನರ ಸಮಸ್ಯೆಗಳು, ಸರ್ಕಾರ ಜಾರಿಗೊಳಿಸಿರುವ ಯೋಜನೆ, ನೀತಿ -ನಿರೂಪಣೆಗಳ ಬಗ್ಗೆ ಚರ್ಚೆ ಮಾಡಲು ತೋರಬೇಕಿರುವ ಆಸಕ್ತಿಯನ್ನು ರಾಜಕೀಯ ಕಾರಣಗಳಿಗಾಗಿ ಬಳಕೆ ಮಾಡುತ್ತಿರುವುದು ದುರದೃಷ್ಟಕರ. ಅತ್ಯಂತ ವಿಷಾದನೀಯ.

ಕಳೆದ 2023ರ ಮೇ ತಿಂಗಳಿನಿಂದ 2025ರ ಡಿಸೆಂಬರ್ ಅಂತ್ಯದವರೆಗೆ ವಿಧಾನಮಂಡಲದ ಒಟ್ಟು 8 ಅಧಿವೇಶನ ನಡೆದಿವೆ. ಈ ಅವಧಿಯಲ್ಲಿ ಕೇಂದ್ರದ ವಿರುದ್ಧ ಒಟ್ಟು 18 ನಿರ್ಣಯಗಳನ್ನು ಮಂಡಿಸಲಾಗಿದೆ. ಈಗ ರಾಜ್ಯಪಾಲರ ಭಾಷಣದಲ್ಲೂ ಅದೇ ಚಾಳಿ ಮುಂದುವರಿಸಲಾಗಿದೆ. 46 ಪುಟಗಳ 122 ಪ್ಯಾರಾಗಳ ಭಾಷಣದ ಮೊದಲ 12 ಪ್ಯಾರಾ ಕೇಂದ್ರದ ಯೋಜನೆ ವಿರುದ್ಧದ ಟೀಕೆಗೆ ಸೀಮಿತವಾಗಿದೆ ಎಂದು ಕಿಡಿಕಾರಿದರು.

ಬಾಬಾ ಸಾಹೇಬರ ಆಶಯಗಳಿಗೆ ತಣ್ಣೀರು

ಕೊನೆಯ 122 ನೇ ಪ್ಯಾರಾದಲ್ಲಿ ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೀರಿ. ಸಂವಿಧಾನ ಮತ್ತು ಬಾಬಾ ಸಾಹೇಬರ ಆಶಯಗಳ ಬಗ್ಗೆ ಅಪಾರ ಗೌರವ ಇದೆ ಎಂದು ಸುಳ್ಳು ಹೇಳುವ ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಮಾಡಿರುವ ತಿದ್ದುಪಡಿಗಳು ಮತ್ತು ಬಾಬಾ ಸಾಹೇಬರನ್ನು ನಡೆಸಿಕೊಂಡ ರೀತಿ ಕುರಿತು ಮಾಹಿತಿ ನೀಡಿದರು.

ಬಾಬಾಸಾಹೇಬರ ಇಚ್ಛೆಗೆ ವಿರುದ್ಧವಾಗಿ ಅವರು ಬದುಕಿರುವಾಗಲೇ ಸಂವಿಧಾನವನ್ನು ತಿದ್ದಿದ ಕಾಂಗ್ರೆಸ್ಸಿಗರು ಅವರ ದೇಹತ್ಯಾಗದ ನಂತರವೂ ಬಿಡದೇ ಸಂವಿಧಾನದ ಮೂಲ ಆಶಯಗಳನ್ನು ಪ್ರತಿಬಿಂಬಿಸುವ ಮೂಲ ಪ್ರಸ್ತಾವನೆಗೇ ತಿದ್ದುಪಡಿ ಮಾಡಿ ಬಾಬಾ ಸಾಹೇಬರ ಆಶಯಗಳಿಗೆ ತಣ್ಣೀರು ಎರಚಿಬಿಟ್ಟರು.

ಎಷ್ಟು ಸಂಸ್ಥೆ, ಪ್ರದೇಶಗಳಿಗೆ ಗಾಂಧಿ ಹೆಸರು ಇಟ್ಟಿದ್ದೀರಿ?

ಇನ್ನು ಮಹಾತ್ಮ ಗಾಂಧಿ ಅವರ ವಿಷಯದ ಬಗ್ಗೆ ಗಮನಿಸಿದರೆ, 10 ನೇ ಪ್ಯಾರಾದಲ್ಲಿ “ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕಲಾಗಿದೆ" ಎಂದು ಆರೋಪ ಮಾಡಲಾಗಿದೆ. ಯೋಜನೆ ವಿಚಾರವಾಗಿ ಮತ್ತೆ ಮಾತನಾಡೋಣ. ಅದಕ್ಕಾಗಿ ನೀವು ಹಾತೊರೆಯುತ್ತಿದ್ದೀರಿ, ಅದಕ್ಕಾಗಿಯೇ ಈ ಸೆಷನ್ ಕರೆಯಲಾಗಿದೆ ಎಂಬುದು ಗೊತ್ತಿದೆ.

ಮೊದಲು ಗಾಂಧೀಜಿ ಅವರ ಪೂರ್ಣ ಹೆಸರು ಹೇಳುವುದನ್ನು ರೂಢಿಸಿಕೊಳ್ಳಿ. ಅದನ್ನು ಕತ್ತರಿಸಿ "ಗಾಂಧಿ", "ಗಾಂಧೀಜಿ” ಎಂದಷ್ಟೇ ಕರೆಯುತ್ತಿದ್ದೀರಿ. ಅವರ ಪೂರ್ಣ ಹೆಸರು, "ಮೋಹನ್ ದಾಸ್ ಕರಮಚಂದ್ ಗಾಂಧಿ" ಅಂತ. ಎಂ.ಕೆ. ಗಾಂಧಿ ಅವರ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತೀದ್ದೀರಲ್ಲಾ, ಅವರ ಹೆಸರಿನಲ್ಲಿ ನೀವು ಏನು ಮಾಡಿದ್ದೀರಿ? ಎಷ್ಟು ಯೋಜನೆ ? ಕಾರ್ಯಕ್ರಮಗಳಿಗೆ ಹೆಸರು ಇಟ್ಟಿದ್ದೀರಿ? ಎಷ್ಟು ಸಂಸ್ಥೆ, ಪ್ರದೇಶಗಳಿಗೆ ಅವರ ಹೆಸರು ನಾಮಕರಣ ಮಾಡಿದ್ದೀರಿ? ಎಷ್ಟು ರಾಷ್ಟ್ರೀಯ ಅಭಯಾರಣ್ಯಗಳಿಗೆ ಅವರ ಹೆಸರು ಇಡಲಾಗಿದೆ? ಎಷ್ಟು ವಿಜ್ಞಾನ - ಸಂಶೋಧನಾ ಸಂಸ್ಥೆಗಳಿಗೆ ಇಡಲಾಗಿದೆ? ಎಷ್ಟು ಕ್ರೀಡಾ ಕೂಟ, ಪ್ರಶಸ್ತಿಗಳಿಗೆ ಇಟ್ಟಿದ್ದೀರಿ? ಎಷ್ಟು ನ್ಯಾಷನಲ್ ಪಾರ್ಕ್‌ಳಿಗೆ ಇಟ್ಟಿದ್ದೀರಿ? ಎಂದು ಪ್ರಶ್ನಿಸಿದರು.

ನನ್ನ ಬಳಿ ದೊಡ್ಡದೊಂದು ಪಟ್ಟಿ ಇದೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು "ಗಾಂಧಿ" ಹೆಸರನ್ನು ಹೈಜಾಕ್ ಮಾಡಿಕೊಂಡಿರುವ "ನಕಲಿ ಗಾಂಧಿ"ಗಳ ಕುಟುಂಬಕ್ಕೆ ಸಂಬಂಧಿಸಿದ್ದು. ಈ ನಕಲಿ ಗಾಂಧಿಗಳ ಹೆಸರನ್ನು ಎಷ್ಟು ಸಂಸ್ಥೆ, ಯೋಜನೆ, ಕಾರ್ಯಕ್ರಮ, ಕ್ರೀಡಾಕೂಟಗಳು, ನ್ಯಾಷನಲ್ ಪಾರ್ಕ್‌ಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಮತ್ತು ವಿಜ್ಞಾನ ಕೇಂದ್ರಗಳು....ಹೀಗೆ ಎಷ್ಟು ಕಡೆ ಇಟ್ಟಿದ್ದೀರಿ ಎಂಬ ಪಟ್ಟಿ ಇದೆ ಎಂದು ಪ್ರದರ್ಶಿಸಿದರು.

ರಾಜ್ಯಪಾಲರ ಭಾಷಣದ 87 ನೇ ಪ್ಯಾರಾದಲ್ಲಿ ಗುತ್ತಿಗೆದಾರರಿಗೆ ಸಂಬಂಧಿಸಿದಂತೆ ಮಹತ್ವದ ಕಾರ್ಯಕ್ರಮ ಜಾರಿಗೊಳಿಸಿರುವುದಾಗಿ ಹೇಳಿಸಿದ್ದಾರೆ. ಆದರೆ ರಾಜ್ಯದಲ್ಲಿ ಯಾಕೆ ಗುತ್ತಿಗೆದಾರರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ? ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟು ಕಮಿಷನ್ ಕಿತ್ತುಕೊಳ್ಳಲಾಗುತ್ತಿದೆ" ಎಂದೂ ಗುತ್ತಿಗೆದಾರರು ಆರೋಪಿಸಿದ್ದಾರೆ. ರಾಜ್ಯದ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಹಣ ಬಿಡುಗಡೆಗೆ ಕಮಿಷನ್ ನೀಡಬೇಕು ಅದರ ಪ್ರಮಾಣವು ಡಬಲ್ ಆಗಿದೆ ಎಂಬ ಆರೋಪ ಮಾಡಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ವಲಸಿಗರು

ಇನ್ನೂ ಬಾಂಗ್ಲಾ ವಲಸಿಗರ ವಿಷಯಕ್ಕೆ ಬಂದರೆ, ನನಗೆ ಇರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ವಲಸಿಗರು ನೆಲೆಸಿರುವ ಮಾಹಿತಿ ಇದೆ. ಬೆಂಗಳೂರು ನಗರ ಸುತ್ತಮುತ್ತ 6 ಲಕ್ಷಕ್ಕೂ ಹೆಚ್ಚು ವಲಸಿಗರು ನೆಲೆಸಿದ್ದಾರೆ. ಇದರಿಂದ ಬೆಂಗಳೂರಿಗೆ ನಮ್ಮದೇ ರಾಜ್ಯದ ನಾನಾ ಗ್ರಾಮೀಣ ಭಾಗಗಳಿಂದ ಬಂದಿರುವ ಕಾರ್ಮಿಕರ ಉದ್ಯೋಗಗಳನ್ನು ಕಸಿದುಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಕಟ್ಟಡ ನಿರ್ಮಾಣ, ಸಲೂನ್‌ ಗಳು, ಚಿಂದಿ ಆಯುವ ಕೆಲಸ, ಆಸ್ಪತ್ರೆ ಕಚೇರಿ-ಬಹುರಾಷ್ಟ್ರೀಯ ಕಂಪನಿ ಹಾಗೂ ಇತರೆಡೆಗಳಲ್ಲಿ ಹೌಸ್ ಕೀಪಿಂಗ್, ಹೋಟೆಲ್‌ಗಳು, ಪೆಟ್ರೋಲ್ ಬಂಕ್, ದಿನಬಳಕೆ ವಸ್ತುಗಳ ಮಾರಾಟ, ಆಟೊ, ಸರಕು ಸಾಗಿಸುವ ಆಟೊ ಓಡಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ.

ಮಲೆನಾಡು ಭಾಗದ ಕಾಫಿ, ಟೀ ತೋಟಗಳು, ಹೊಂ ಸ್ಟೇಗಳು, ರೆಸಾರ್ಟ್‌ಗಳು, ಫಾರ್ಮ್‌ ಹೌಸ್‌ಗಳಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸರಣಿ ಲೇಖನಗಳು ಪ್ರಕಟವಾಗಿವೆ. ದಶಕಳಿಂದ ನೆಲೆ ನಿಂತಿರುವ ಕೆಲವರು ರಾಜ್ಯದಲ್ಲಿ ಅಪರಾಧ ಕೃತ್ಯಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ದುರಂತದ ಮತ್ತು ದುರದೃಷ್ಟಕರ ವಿಷಯ ಎಂದರೆ, ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳ ಕ್ಯಾಂಪ್‌ಗಳು ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚಿ ತೋರಿಸಿಕೊಡುತ್ತಿರುವವರ ವಿರುದ್ಧವೇ ಪೊಲೀಸರು ಕೇಸುಗಳ ಮೇಲೆ ಕೇಸುಗಳನ್ನು ಜಡಿಯುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದುಳಿಯುವಿಕೆಗೆ ಕಾಂಗ್ರೆಸ್ ನೇರ ಹೊಣೆ

ಕೊನೆಯದಾಗಿ, ಹಿಂದುಳಿಯುವಿಕೆಗೆ ಕಾಂಗ್ರೆಸ್ ನೇರ ಹೊಣೆ ಎಂದು ಹೇಳುವೆ. ಪ್ರೊ. ಗೋವಿಂದರಾವ್ ಸಮಿತಿ ಎರಡು ದಿನಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿನ ಮಾಹಿತಿ ಪ್ರಕಾರ ಹಿಂದುಳಿದ ಪ್ರದೇಶಗಳ ಸಂಖ್ಯೆ ಹಿಂದಿಗಿಂತಲೂ ಹೆಚ್ಚಾಗಿದೆ. ಕೋಟ್ಯಂತರ ರೂ. ಅನುದಾನ ಹರಿದರೂ ಅಭಿವೃದ್ಧಿಯಲ್ಲಿ ಹಿನ್ನಡೆ ಎಂದು ವರದಿ ಬಹಿರಂಗಪಡಿಸಿದೆ.

ಡಿ.ಎಂ.ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತಂದ ಎರಡು ದಶಕಗಳ ಬಳಿಕವೂ ತಾರತಮ್ಯ ನಿವಾರಣೆ ಬದಲಿಗೆ ಹೆಚ್ಚಾಗಿದೆ. 114 ಇದ್ದ ಹಿಂದುಳಿದ ತಾಲೂಕುಗಳ ಸಂಖ್ಯೆ ಇದೀಗ 177ಕ್ಕೆ ಹೆಚ್ಚಾಗಿದೆ. ಸಾಕಷ್ಟು ಅನುದಾನ ಹರಿದರೂ ಅಭಿವೃದ್ಧಿ ಆಗಿಲ್ಲ ಎಂದು ವರದಿ ತಿಳಿಸಿದೆ. ಹೀಗಿರುವಾಗ ಹಂಚಿಕೆ ಮಾಡಿದ್ದ ಅನುದಾನ ಏನಾಯಿತು ? ಇದಕ್ಕೆ ಯಾರು ಹೊಣೆ ಎಂಬುದನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕಾಗಿದೆ.

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಯೇತರ ಪಕ್ಷಗಳು ಅಧಿಕಾರ ನಡೆಸಿರುವುದು ಅತ್ಯಂತ ಕಡಿಮೆ ಅವಧಿ ಮಾತ್ರ. ಉಳಿದಂತೆ ಕಾಂಗ್ರೆಸ್ ಪಕ್ಷವೇ ಈ ರಾಜ್ಯವನ್ನು ಆಳಿದೆ. ಅದರಲ್ಲೂ ಸಿದ್ದರಾಮಯ್ಯನವರು 16 ಬಜೆಟ್ ಮಂಡನೆ ಮಾಡಿ, 17ನೇ ಬಜೆಟ್‌ಗೆ ಸಿದ್ಧತೆ ನಡೆಸಿದ್ದಾರೆ.

ಇದರ ಅರ್ಥ, ಈ ರಾಜ್ಯವನ್ನು ಅತಿ ಹೆಚ್ಚು ಆಳಿರುವ ಕಾಂಗ್ರೆಸ್ ಪ್ರಾದೇಶಿಕ ಅಸಮತೋಲನಕ್ಕೆ ಪ್ರಮುಖ ಕಾರಣ. ಹಾಗೆಯೇ 16 ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಈ ವೇಳೆಗಾಗಲೇ ತಾರತಮ್ಯ ನಿವಾರಣೆಗೆ ಕಟಿಬದ್ದರಾಗಿ ಕೆಲಸ ಮಾಡಬಹುದಿತ್ತು. ಆ ಕೆಲಸ ಮಾಡಿಲ್ಲ ಎಂಬುದನ್ನು ವರದಿ ಬಹಿರಂಗ ಮಾಡಿದೆ. ಹೀಗಾಗಿ ಹಿಂದುಳಿಯುವಿಕೆ, ಅಸಮತೋಲನಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯನವರೇ ಮುಖ್ಯ ಕಾರಣ ಎಂದು ನಾನು ನೇರವಾಗಿ ಆರೋಪಿಸುತ್ತಿದ್ದೇನೆ ಎಂದರು.

ಇಷ್ಟಾದರೂ ಸತ್ಯ ಸಂಗತಿ ಮರೆ ಮಾಚಿ ರಾಜ್ಯಪಾಲರ ಭಾಷಣದಲ್ಲಿ (ಪ್ಯಾರಾ 62, ಪುಟ 23) "ಅಸಮತೋಲನ ನಿವಾರಣೆ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ" ಎಂದು ಸುಳ್ಳು ಹೇಳಿಸಿದೆ. ಈ ಹಿಂದಿನ 16 ಬಜೆಟ್ ಭಾಷಣಗಳಲ್ಲಿ ಸಿದ್ದರಾಮಯ್ಯನವರು ಪ್ರಾದೇಶಿಕ ಅಸಮತೋಲನದ ಬಗ್ಗೆ ಪ್ರಸ್ತಾಪ ಮಾಡುತ್ತಲೇ ಬಂದಿದ್ದಾರೆ. ಆದರೂ ಏಕೆ ಆ ಭಾಗಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ? ಎಂಬುದಕ್ಕೆ ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಹೀಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜಕೀಯ ಪ್ರತಿಷ್ಠೆ, ಸಿಎಂ - ಡಿಸಿಎಂ ನಡುವಿನ ಕಚ್ಚಾಟ, ಹೈಕಮಾಂಡ್ ಓಲೈಕೆಗಾಗಿ ಅನೇಕ ವಿಷಯಗಳಲ್ಲಿ ರಾಜ್ಯದ ಹಿತಾಸಕ್ತಿ ಮತ್ತು ಪ್ರತಿಷ್ಠೆಗಳನ್ನು ಬಲಿ ಕೊಟ್ಟಿದೆ. ಈ ಸರ್ಕಾರ ರಾಜ್ಯಪಾಲರಿಂದ ಮಾಡಿಸಿರುವ ಸುಳ್ಳಿನ ಕಂತೆಗಳ ಭಾಷಣಕ್ಕೆ ವಿರೋಧವಿದೆ. ಹೀಗಾಗಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ' ಪ್ರಸ್ತಾವವನ್ನು ನಾನು ವಿರೋಧಿಸುತ್ತೇನೆ ಎಂದು ತಿಳಿಸಿದರು.