ಟೆಕ್ಕಿ ಶರ್ಮಿಳಾ ಕೊಲೆ ಕೇಸ್; ಯುವತಿ ಮೋಹಕ್ಕೆ ಬಿದ್ದಿದ್ದ ಆರೋಪಿ ಎಸ್‌ಎಸ್‌ಎಲ್‌ಸಿ ಟಾಪರ್!
Bengaluru Techie murder Case: ಬೆಂಗಳೂರು ಟೆಕ್ಕಿ ಕೊಲೆ ಪ್ರಕರಣದದ ಆರೋಪಿ ಕರ್ನಲ್ ಕುರೈ, ಕಳೆದ ಎರಡು ತಿಂಗಳಿನಿಂದ ಯುವತಿಯ ಚಲನವಲನವನ್ನು ನಿತ್ಯ ಗಮನಿಸುತ್ತಿದ್ದ. ಆರೋಪಿ ಮತ್ತು ಯುವತಿ ನಡುವೆ ಈ ಹಿಂದೆ ಯಾವುದೇ ಪರಿಚಯವೂ ಇರಲಿಲ್ಲ. ಮನೆಯ ಬಾಲ್ಕನಿಯ ಸ್ಲೈಡಿಂಗ್ ಕಿಟಕಿ ಮೂಲಕ ಆತ ಒಳನುಗ್ಗಿರುವುದು ತನಿಖೆ ವೇಳೆ ಗೊತ್ತಾಗಿದೆ.
ಆರೋಪಿ ಕರ್ನಲ್ ಕುರೈ ಮತ್ತು ಕೊಲೆಯಾದ ಟೆಕ್ಕಿ ಶರ್ಮಿಳಾ. -
ಬೆಂಗಳೂರು: ನಗರದ ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣದಲ್ಲಿ (Bengaluru Techie murder) ಬಂಧನವಾಗಿರುವ ಆರೋಪಿ ಕರ್ನಲ್ ಕುರೈ ಸದ್ಯ ಜೈಲಿನಲ್ಲಿದ್ದಾನೆ. ಆದರೆ ತನಿಖೆ ವೇಳೆ ಈತ ನೀಡಿರುವ ಹಲವು ಹೇಳಿಕೆಗಳು ಪೊಲೀಸರನ್ನೇ ಬೆಚ್ಚಿಬೀಳಿಸುವಂತಿವೆ. ಆರೋಪಿಯು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97 ಅಂಕ ಗಳಿಸಿದ್ದ ಪ್ರತಿಭಾವಂತ ಎಂಬ ಅಂಶವೂ ಇದೀಗ ಬೆಳಕಿಗೆ ಬಂದಿದೆ.
ಆರೋಪಿ ಕಳೆದ ಎರಡು ತಿಂಗಳಿನಿಂದ ಯುವತಿಯ ಚಲನವಲನವನ್ನು ನಿತ್ಯ ಗಮನಿಸುತ್ತಿದ್ದ. ಓದುವ ನೆಪದಲ್ಲಿ ಹಾಗೂ ಬಟ್ಟೆ ತೊಳೆಯುವ ನೆಪದಲ್ಲಿ ಟೆರೇಸ್‌ಗೆ ಹೋಗುತ್ತಿದ್ದ ಆತ, ಯುವತಿಯ ಮನೆ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದ. ಆರೋಪಿ ಮತ್ತು ಯುವತಿ ನಡುವೆ ಈ ಹಿಂದೆ ಯಾವುದೇ ಪರಿಚಯವೂ ಇರಲಿಲ್ಲ. ಇದೇ ಮೊದಲ ಬಾರಿಗೆ ಆತ ಶರ್ಮಿಳಾ ಮನೆಗೆ ಪ್ರವೇಶಿಸಿದ್ದ. ಮನೆಯ ಬಾಲ್ಕನಿಯ ಸ್ಲೈಡಿಂಗ್ ಕಿಟಕಿ ಮೂಲಕ ಆತ ಒಳನುಗ್ಗಿರುವುದು ಗೊತ್ತಾಗಿದೆ.
ಆರೋಪಿ ಕರ್ನಲ್ ಕುರೈ ತುಂಬಾ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97 ಪರ್ಸೆಂಟ್ ಅಂಕ ಪಡೆದಿದ್ದು, ಪಿಯುಸಿ ಸೈನ್ಸ್ ವಿಭಾಗಕ್ಕೆ ಸೇರಿದ್ದ. ಆರೋಪಿ ಕರ್ನಲ್ ಹಾಗೂ ಆತನ ತಾಯಿ ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಈತನ ತಾಯಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.
ಸ್ಲೈಡ್ ವಿಂಡೋ ತೆರೆಯುವ ಟೆಕ್ನಿಕ್ ಕಲಿತಿದ್ದ
ಕಾಲೇಜು ದಿನಗಳಲ್ಲಿ ಸ್ಲೈಡಿಂಗ್ ಕಿಟಕಿಯಲ್ಲಿ ಪುಸ್ತಕ ಸಿಲುಕಿದ್ದ ಸಂದರ್ಭದಿಂದ ಆ ರೀತಿಯ ಕಿಟಕಿಗಳನ್ನು ಹೇಗೆ ತೆರೆಯಬೇಕು ಎಂಬುದನ್ನು ಆರೋಪಿ ಕಲಿತಿದ್ದ. ಅದೇ ತಂತ್ರ ಬಳಸಿ ಜನವರಿ 3ರಂದು ಯುವತಿಯ ಸ್ನೇಹಿತೆ ಮನೆಯಲ್ಲಿ ಇಲ್ಲದ ಸಮಯವನ್ನು ಖಚಿತಪಡಿಸಿಕೊಂಡು, ಸ್ಲೈಡಿಂಗ್ ವಿಂಡೋ ತೆರೆದು ಬೆಡ್‌ರೂಮ್‌ಗೆ ಪ್ರವೇಶಿಸಿದ್ದ.
ಕುರೈ ಮನೆಯೊಳಗೆ ಪ್ರವೇಶಿಸಿದ ವೇಳೆ ಯುವತಿ ಅಡುಗೆ ಮನೆಯಲ್ಲಿ ಹಾಲು ಕಾಯಿಸಲು ಸ್ಟವ್ ಆನ್ ಮಾಡಿದ್ದಳು. ಈ ವೇಳೆ ಹಿಂದಿನಿಂದ ತಳ್ಳಿದಾಗ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಇದೇ ವೇಳೆ ಹಾಲು ಉಕ್ಕಿ ಸ್ಟವ್ ಬೆಂಕಿ ಆರಿಹೋಗಿದೆ. ನಂತರ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಆಗ ಉಸಿರುಗಟ್ಟಿ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಶಿಡ್ಲಘಟ್ಟ ಮಹಿಳಾ ಅಧಿಕಾರಿಗೆ ಧಮ್ಕಿ; ಕಾಂಗ್ರೆಸ್ ಮುಖಂಡನ ಬಂಧನಕ್ಕೆ ಎಚ್.ಡಿ.ಕುಮಾರಸ್ವಾಮಿ ಆಗ್ರಹ
ಪ್ರಾರಂಭದಲ್ಲಿ ಅಡುಗೆ ಕೋಣೆಯಲ್ಲಿ ಯುವತಿಯ ಮೃತದೇಹ ಪತ್ತೆಯಾದಾಗ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿತ್ತು. ಬೆಂಕಿಯ ತೀವ್ರತೆಯಿಂದ ಮೊಬೈಲ್ ಕೂಡ ಕರಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿತ್ತು. ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಮೀಪದ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕೆಲವರನ್ನು ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಕರ್ನಲ್ ಕುರೈನನ್ನೂ ಪ್ರಶ್ನಿಸಲು ಮುಂದಾದರು. ಈ ನಡುವೆ ಯುವತಿಯ ಮೊಬೈಲ್ ಫೋನ್ ಆರೋಪಿಯ ಬಳಿಯೇ ಪತ್ತೆಯಾಗಿದ್ದು, ಇದನ್ನಾಧರಿಸಿ ಆತನನ್ನು ಬಂಧಿಸಲಾಗಿದೆ.