ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru Karaga 2026: ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವಕ್ಕೆ ಮುಹೂರ್ತ ನಿಗದಿ

ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಮಾರ್ಚ್ 24ರಂದು ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ. ಮಾರ್ಚ್ 30ರಂದು ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್ 1ರ ಮಧ್ಯರಾತ್ರಿ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ.

ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವಕ್ಕೆ ಮುಹೂರ್ತ ನಿಗದಿ

ಬೆಂಗಳೂರು ಕರಗ (ಸಂಗ್ರಹ ಚಿತ್ರ) -

Prabhakara R
Prabhakara R Feb 27, 2026 4:51 PM

ಬೆಂಗಳೂರು: ಐಸಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ (Bengaluru Karaga 2026) ಮುಹೂರ್ತ ನಿಗದಿಯಾಗಿದೆ. ಏಪ್ರಿಲ್ 1ರ ಮಧ್ಯರಾತ್ರಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಅರ್ಚಕ ಎ.ಜ್ಞಾನೇಂದ್ರಸ್ವಾಮಿ ಅವರು 16ನೇ ಬಾರಿಗೆ ಬೆಂಗಳೂರು ಕರಗ ಹೊರಲಿದ್ದಾರೆ. ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯಿಂದ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಪಡಿಸಲಾಗಿದೆ.

ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಮಾರ್ಚ್ 24ರಂದು ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ. ಮಾರ್ಚ್ 30ರಂದು ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್ 1ರ ಮಧ್ಯರಾತ್ರಿ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ.

ಬೆಂಗಳೂರು ಕರಗ ದಕ್ಷಿಣ ಭಾರತದ ಅತ್ಯಂತ ಪುರಾತನ ಮತ್ತು ವೈಶಿಷ್ಟ್ಯಪೂರ್ಣ ಹಬ್ಬಗಳಲ್ಲಿ ಒಂದಾಗಿದೆ. ಸುಮಾರು 8 ಶತಮಾನಗಳ ಪರಂಪರೆಯನ್ನು ಹೊಂದಿರುವ ಈ ಆಚರಣೆಯಲ್ಲಿ, ದ್ರೌಪದಿ ದೇವಿಯನ್ನು ಆದಿಶಕ್ತಿಯ ರೂಪದಲ್ಲಿ ಆರಾಧಿಸಲಾಗುತ್ತಿದೆ. ಪ್ರತೀ ವರ್ಷ ಚೈತ್ರ ಮಾಸದ ಪೌರ್ಣಮಿಯ ಸಂದರ್ಭದಲ್ಲಿ ನಡೆಯುವ ಈ ಉತ್ಸವವು ಸಾಮಾನ್ಯವಾಗಿ 9 ರಿಂದ 11 ದಿನಗಳವರೆಗೆ ನಡೆಯುತ್ತದೆ.

ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರುತ್ತವೆ. ತಿಗಳ ಸಮುದಾಯದವರು ಈ ಹಬ್ಬದ ಮುಖ್ಯ ಆಯೋಜಕರಾಗಿದ್ದು, ಶತಮಾನಗಳಿಂದ ಬಂದಿರುವ ಆಚರಣೆಗಳನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಬೆಂಗಳೂರು ಕರಗದ ಐತಿಹ್ಯ

ಕರಗ ಆಚರಣೆಯ ಮೂಲವನ್ನು ಹೇಳುವ ಒಂದು ಐತಿಹ್ಯ ಹೀಗಿದೆ. ಮಹಾಭಾರತದಲ್ಲಿ ಕುರುಕ್ಷೇತ್ರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮಾರ್ಛಿತಳಾಗಿ ಬಿದ್ದಳಂತೆ. ದ್ರೌಪದಿ ಮೂರ್ಛೆ ಹೋಗಿದ್ದು ಪಾಂಡವರಿಗೆ ತಿಳಿಯದೆ ಮುಂದೆ ನಡೆಯುತ್ತಾರೆ. ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಟಿ ಮಾಡುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದುರು ಹೋರಾಡಿ ಗೆಲ್ಲುತ್ತಾರೆ. ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರೌಪದಿ ಆದಿಶಕ್ತಿಯಾಗಿ, ಭೂಮಿಗೆ ಮರಳದೆ ಕೈಲಾಸಕ್ಕೆ ಹೋಗುವುದು ಮಕ್ಕಳಿಗೆ ದುಗುಡ ಉಂಟು ಮಾಡುತ್ತದೆ.

ದ್ರೌಪತಿ ಹೋಗದಂತೆ ಬೇಡಿಕೊಳ್ಳಲು ಕೃಷ್ಣನು, ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ‘ಅಲಗುಸೇವೆ’ ಎನ್ನುತ್ತಾರೆ) “ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು” ಎಂದು ಅಲವತ್ತು ಕೊಳ್ಳಲು ಹೇಳುವನು. ಇದನ್ನು ನೋಡಿ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವ ಮಾತು ನೀಡುತ್ತಾಳೆ. ಆ ಮೂರು ದಿನಗಳೇ ಕರಗ ಹಬ್ಬದ ದಿನಗಳು. ಇದರ ನೆನಪಿಗೆ ಕರಗ ನಡೆಯುತ್ತದೆಂದು ಹೇಳಲಾಗಿದೆ.

ಶಿರಸಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಶ್ರೀ ಮಾರಿಕಾಂಬಾ ದೇವಿ ರಥೋತ್ಸವ

ಇದರ ಜತೆಗೆ ಇನ್ನೊಂದು ಐತಿಹ್ಯವಿದೆ. ದ್ವಾಪರ ಯುಗದಲ್ಲಿ, ಒಂದು ಸರ್ವಾಲಂಕಾರ ಭೂಷಿತೆಯಾದ ದ್ರೌಪದಿ ಮಂಗಳ ಕಲಶವನ್ನು ಹಿಡಿದು ಸ್ವಯಂವರ ಮಂಟಪವನ್ನು ಪ್ರವೇಶಿಸಿದಳು. ಮತ್ಸ್ಯವನ್ನು ಭೇದಿಸುವ ಅರ್ಜುನನ್ನೂ, ಕುಂತಿಯ ಅಭಿಲಾಷೆಯಂತೆ ಉಳಿದ ನಾಲ್ವರು ಪಾಂಡವ ಸಹೋದರರನ್ನೂ ಶಾಸ್ತ್ರೋಸ್ತವಾಗಿ ವಿವಾಹವಾದಳು. ಆಗ ಸಂತೋಷದಿಂದ ಕೈಯಲಿದ್ದ ಕಲಶವನ್ನು ಶಿರದಲ್ಲಿ ಧರಿಸಿದಳು. ಅದೇ ಕರಗವಾಯಿತು ಎಂಬ ನಂಬಿಕೆಯೂ ಇದೆ.