KV Prabhakar: ಕರಾವಳಿಯಲ್ಲಿ ಧರ್ಮದ ಹೆಸರಲ್ಲಿ ಬಲಿ ಆಗುತ್ತಿರುವವರೆಲ್ಲಾ ಹಿಂದುಳಿದ ಜಾತಿಗಳವರೇ: ಕೆ.ವಿ.ಪ್ರಭಾಕರ್
ಶೋಷಿಸುವ ಮನಸ್ಥಿತಿ, ಶೋಷಣೆಗೆ ಒಳಗಾಗುವ ಮನಸ್ಥಿತಿ, ಗುಲಾಮಗಿರಿಯ ಮನಸ್ಥಿತಿಗೆ ನಾರಾಯಣಗುರುಗಳು ನೈಸರ್ಗಿಕ ಚಿಕಿತ್ಸೆ ಕೊಡಲು ಯತ್ನಿಸಿದರು. ಅವರ ಬೋಧನೆಗಳು ಮತ್ತು ಸುಧಾರಣಾ ಕಾರ್ಯಗಳು ಆವತ್ತಿನ ಮತ್ತು ಇವತ್ತಿನ ಹಲವು ಸಾಮಾಜಿಕ ಸಮಸ್ಯೆಗಳಿಗೆ ದಾರಿದೀಪವಾಗಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಾರಾಯಣಗುರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ. -
ಬೆಂಗಳೂರು, ನ.23: ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುವಾಗ ನಾರಾಯಣ ಗುರುಗಳ ಆದರ್ಶ ಪ್ರಸ್ತುತ ಆಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು. ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ಮಂದಿಗೆ ನಾರಾಯಣಗುರು ಪ್ರಶಸ್ತಿ ಪ್ರದಾನ ಮಾಡಿ, ಐದು ಸಾಧಕರಿಗೆ ಗೌರವಿಸಿ ಮಾತನಾಡಿದರು.
ದಿನೇ ದಿನೇ ಜಾತಿ ವ್ಯವಸ್ಥೆ ಗಟ್ಟಿಗೊಳ್ಳುತ್ತಾ, ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುತ್ತಿರುವ ಹೊತ್ತಿನಲ್ಲಿ, ನಾರಾಯಣ ಗುರುಗಳ ಬದುಕೇ ಅಪ್ಪಟ ಮನುಷ್ಯರನ್ನು ರೂಪಿಸುವುದಾಗಿತ್ತು ಎನ್ನುವುದನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶೋಷಿಸುವ ಮನಸ್ಥಿತಿ, ಶೋಷಣೆಗೆ ಒಳಗಾಗುವ ಮನಸ್ಥಿತಿ, ಗುಲಾಮಗಿರಿಯ ಮನಸ್ಥಿತಿಗೆ ನಾರಾಯಣಗುರುಗಳು ನೈಸರ್ಗಿಕ ಚಿಕಿತ್ಸೆ ಕೊಡಲು ಯತ್ನಿಸಿದರು. ಇವರ ಬೋಧನೆಗಳು ಮತ್ತು ಸುಧಾರಣಾ ಕಾರ್ಯಗಳು ಆವತ್ತಿನ ಮತ್ತು ಇವತ್ತಿನ ಹಲವು ಸಾಮಾಜಿಕ ಸಮಸ್ಯೆಗಳಿಗೆ ದಾರಿದೀಪವಾಗಿವೆ ಎಂದರು.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಅಂದರೆ ಕೇವಲ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ: ಕೆ.ವಿ.ಪ್ರಭಾಕರ್
ಒಂದು ಜಾತಿ, ಒಂದು ಮತ, ಒಬ್ಬನೇ ದೇವರು ಮಾನವನಿಗೆ ಎನ್ನುವುದು ಅವರ ಪ್ರಸಿದ್ಧ ಘೋಷಣೆಯಾಗಿತ್ತು. ಹಾಗೆಯೇ, ಶಿಕ್ಷಣದಿಂದ ಸ್ವಾತಂತ್ರ್ಯವನ್ನು ಗಳಿಸಿ ಎನ್ನುವುದು ಅವರ ಪ್ರಮುಖ ಕರೆಯಾಗಿತ್ತು. ಇಂದು ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಧರ್ಮದ ಹೆಸರಲ್ಲಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವವರೆಲ್ಲಾ ಬಿಲ್ಲವ, ಈಳವ ಮತ್ತು ಈಡಿಗ, ಬೆಸ್ತ ಸಮುದಾಯಗಳ ಮಕ್ಕಳೇ ಆಗಿದ್ದಾರೆ. ಇವರಿಗೆ ನಾರಾಯಣಗುರುಗಳ ಬದುಕಿನ ಪಾಠವನ್ನು ಅರ್ಥ ಮಾಡಿಸಬೇಕಾದ ತುರ್ತು ಇದೆ. ಆದರೆ, ನಾರಾಯಣ ಗುರುಗಳ ಮಾತುಗಳಿಂದ ಅವರ ಆದರ್ಶಗಳನ್ನು ಅಳಿಸಿ ಕೇವಲ ಮಾತುಗಳನ್ನು ಅಪಾರ್ಥವಾಗಿ ಬಳಸುವ ಪರಿಪಾಠ ಶುರುವಾಗಿರುವುದು ಬೇಸರದ ಸಂಗತಿಯಾಗಿದೆ.
ಒಂದು ಜಾತಿ, ಒಂದು ಮತ, ಒಬ್ಬನೇ ದೇವರು ಮಾನವನಿಗೆ ಎಂದು ಗುರುಗಳು ಕರೆ ಕೊಟ್ಟಿದ್ದರ ಅರ್ಥ ಎಲ್ಲರೂ ನಾರಾಯಣಗುರುಗಳ ಹೆಸರಲ್ಲಿ ಒಂದೊಂದು ದೇವಸ್ಥಾನ ಕಟ್ಟಿ ಅನ್ನುವುದಾಗಿರಲಿಲ್ಲ. ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಪ್ರವೇಶ ಪಡೆಯಲು ಒದ್ದಾಡುವುದಕ್ಕಿಂತ ನಿಮ್ಮದೇ ದೇವರ ಗುಡಿಯನ್ನು ಸೃಷ್ಟಿಸಿಕೊಳ್ಳಿ ಎನ್ನುವುದಾಗಿತ್ತು.
ನಾರಾಯಣ ಗುರುಗಳು ಶಿವನ ಪ್ರತಿಷ್ಠಾಪನೆ ಮಾಡಿದಾಗ ಜಾತಿವಾದಿಗಳಿಂದ ಬಂದ ವಿರೋಧಕ್ಕೆ ತಣ್ಣಗೆ ಪ್ರತಿಕ್ರಿಯಿಸಿದ್ದ ಗುರುಗಳು, "ಇದು ನಿಮ್ಮ ಶಿವ ಅಲ್ಲ, ಈಳವರ ಶಿವ" ಎಂದು ಅವರ ಬಾಯಿ ಮುಚ್ಚಿಸಿದ್ದರು. ಬಳಿಕ ಎಲ್ಲರೂ ದೇವಸ್ಥಾನಗಳನ್ನೇ ಕಟ್ಟಲು ಮುಂದಾದಾಗ ಹೆದರಿದ ಗುರುಗಳು ಕೊನೆಗೆ ದೇವಸ್ಥಾನ ಕಟ್ಟಿ ಶಿವನ ಬದಲಿಗೆ ಕನ್ನಡಿಯನ್ನು ಪ್ರತಿಷ್ಠಾಪಿಸಿ ದೇವರು ನಿಮ್ಮೊಳಗೇ ಇದ್ದಾನೆ, ಹೊರಗೆ ಹುಡುಕುವ ಅಗತ್ಯ ಇಲ್ಲ ಎನ್ನುವ ಸಂದೇಶ ನೀಡಿದ್ದರು ಎಂದು ವಿವರಿಸಿದರು.
ದೇವಸ್ಥಾನಗಳನ್ನು ಕಟ್ಟಿ ಕೆಳ ಜಾತಿಯ ಅರ್ಚಕರುಗಳನ್ನು ನೇಮಿಸಿದ್ದು ನಾರಾಯಣಗುರುಗಳ ಮತ್ತೊಂದು ಕ್ರಾಂತಿಯಾಗಿತ್ತು. ಆದರೆ ಎಷ್ಟು ಮಂದಿ ಹಿಂದುಳಿದವರು ಇಂದು ಕೆಳ ಜಾತಿಯ ಅರ್ಚಕರನ್ನು ಕರೆಸುತ್ತಾರೆ, ನಂಬುತ್ತಾರೆ ಎನ್ನುವುದನ್ನು ಪ್ರಶ್ನಿಸಬೇಕಿದೆ ಎಂದರು.
ನಾರಾಯಣಗುರುಗಳು ಶಿಕ್ಷಣದ ಮೂಲಕ ಸ್ವಾತಂತ್ರ್ಯ ಗಳಿಸಿ ಎಂದು ಕರೆ ನೀಡುವುದರ ಹಿಂದೆ ಶಾಲಾ ಶಿಕ್ಷಣದ ಜೊತೆಗೆ ಸಾಮಾಜಿಕ ಶಿಕ್ಷಣವನ್ನೂ ಪಡೆಯುವ ಮೂಲಕ ಶೋಷಕ, ಶೋಷಿತ ಮತ್ತು ಗುಲಾಮಗಿರಿ ಮನಸ್ಥಿತಿಯಿಂದ ಮುಕ್ತಿ ಹೊಂದಿ ಎನ್ನುವುದಾಗಿತ್ತು. ಆದರ್ಶಗಳನ್ನು ಅಳಿಸಿ ಕೇವಲ ಮಾತುಗಳಿಗೆ ಮಾತ್ರ ಮಾನ್ಯತೆ ನೀಡಿದರೆ ಅಪಾರ್ಥದ ಆಚರಣೆಗಳಿಗೆ ದಾರಿ ಮಾಡಿ ಕೊಡುತ್ತದೆ. ಅಂಬೇಡ್ಕರ್, ನಾರಾಯಣಗುರುಗಳು ಮೀಸಲಾತಿಯನ್ನು ಜಾತ್ಯತೀತ ಸಮಾಜ ನಿರ್ಮಾಣದ ಭಾಗವಾಗಿ ಬೆಂಬಲಿಸಿದ್ದರು.
ಆದರೆ ಇಂದು ಮೀಸಲಾತಿ ಚಳವಳಿ ಜಾತೀಯತೆಯ ಭಾಗವಾಗಿ ನಡೆಯುತ್ತಿದೆ. ಎಲ್ಲಾ ಜಾತಿಯವರಿಗೂ ಮೀಸಲಾತಿ, ಒಳ ಮೀಸಲಾತಿ ಬೇಕಾಗಿದೆ. ಹೀಗಾಗಿ ಇಂದು ಮೀಸಲಾತಿಯ ಹೋರಾಟ ಜಾತಿ ಸಮಾಜವನ್ನು ಗಟ್ಟಿಗೊಳಿಸುವ ಭಾಗವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗಲೂ ಒಂದು ಮಾತು ಹೇಳ್ತಾರೆ. "ಶಿಕ್ಷಣ ಪಡೆದವರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿದ್ದಾರೆ ಎನ್ನುವ ಮಾತನ್ನು ಪದೇ ಪದೇ ಹೇಳುತ್ತಾರೆ. ಈ ಎಲ್ಲಾ ಕಾರಣಗಳಿಂದ ಇಂದು ಜಾತ್ಯತೀತತೆಯ ಮಾರ್ಯಾದಾ ಹತ್ಯೆ ನಡೆಯುತ್ತಿದೆ. ಜಾತಿ ಜಾತಿಯವರನ್ನೇ ಸುತ್ತ ತುಂಬಿಕೊಂಡು ಓಡಾಡುವುದೇ ದೊಡ್ಡ ಶಕ್ತಿ ಅನ್ನಿಸಿಕೊಳ್ಳುವ ದುರಂತದ ಸಾಮಾಜಿಕ, ರಾಜಕೀಯ ಸಂದರ್ಭವನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಧಾರ್ಮಿಕ ಸಹಿಷ್ಣುತೆ ಮತ್ತು ವಿಶ್ವಬಂಧುತ್ವವನ್ನು ಆಚರಿಸುವ ಮೂಲಕ ನಾರಾಯಣಗುರುಗಳ ಆದರ್ಶಗಳಿಗೆ ನಾವು ಚೈತನ್ಯ ತುಂಬಬೇಕಿದೆ ಎಂದರು.
ಇದನ್ನೂ ಓದಿ : KV Prabhakar: ಬದುಕು ನೀಡುವ ಸಂಕಟ, ನೋವಿಗೆ ದೈವದ ನುಡಿಗಳು ಮದ್ದಾಗುತ್ತವೆ: ಕೆ.ವಿ. ಪ್ರಭಾಕರ್
ಯಾವುದೇ ಧರ್ಮವಿರಲಿ, ಮನುಷ್ಯನನ್ನು ಉತ್ತಮಗೊಳಿಸಿದರೆ ಸಾಕು ಎನ್ನುವುದು ಅವರ ವಿಶಾಲ ದೃಷ್ಟಿಕೋನವಾಗಿತ್ತು. ಎಲ್ಲಾ ರೀತಿಯ ತಾರತಮ್ಯದ ಮನಸ್ಥಿತಿಯಿಂದ ಮುಕ್ತವಾದ ಅಪ್ಪಟ ಮನುಷ್ಯನನ್ನು ರೂಪಿಸುವುದೇ ನಾರಾಯಣಗುರುಗಳ ಬದುಕಿನ ಸಂದೇಶವಾಗಿತ್ತು ಎನ್ನುವುದನ್ನು ನಾವುಗಳು ಮರೆಯಬಾರದು ಎಂದರು.