MP Tejasvi Surya: ಬೆಲೆ ಏರಿಕೆ, ಭ್ರಷ್ಟಾಚಾರವೇ ಸಾಧನೆ; 2.5 ವರ್ಷ ಪೂರೈಸಿದ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆ ಎಂದ ತೇಜಸ್ವಿ ಸೂರ್ಯ
Congress government in Karnataka: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು 2.5 ವರ್ಷಗಳ ತನ್ನ ದುರಾಡಳಿತ ಮತ್ತು ಏಕಪಕ್ಷೀಯ ಆಡಳಿತವನ್ನು ಪೂರೈಸಿದಕ್ಕೆ ಅಭಿನಂದನೆಗಳು. ʼಗ್ಯಾರಂಟಿ ಸರ್ಕಾರʼ ಎಂಬ ಲೇಬಲ್‌ನ ಹಿಂದೆ ಅಡಗಿರುವ 'ಹಗರಣಗಳ ಸರ್ಕಾರ' ವಾಗಿ ಮಾರ್ಪಟ್ಟಿದ್ದು, ಆಡಳಿತವು ಸಂಪೂರ್ಣ ಕುಸಿದಿರುವುದು ದುರಂತ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಸಂಸದ ತೇಜಸ್ವಿ ಸೂರ್ಯ -
ಬೆಂಗಳೂರು, ನ.23: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2.5 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ವ್ಯಂಗ್ಯವಾಗಿ ಅಭಿನಂದನೆ ಸಲ್ಲಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (MP Tejasvi Surya) ಅವರು, ಸರ್ಕಾರದ ಆಡಳಿತ ವೈಫಲ್ಯ, ಭಷ್ಟಾಚಾರ ಹಾಗೂ ಬೆಲೆ ಏರಿಕೆ ಸೇರಿ ವಿವಿಧ ಅಂಶಗಳನ್ನು ಉಲ್ಲೇಖಿಸಿ ತೀವ್ರವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ಸಂಸದರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು 2.5 ವರ್ಷಗಳ ತನ್ನ ದುರಾಡಳಿತ ಮತ್ತು ಏಕಪಕ್ಷೀಯ ಆಡಳಿತವನ್ನು ಪೂರೈಸಿದಕ್ಕೆ ಅಭಿನಂದನೆಗಳು ಎಂದು ಛೇಡಿಸಿದ್ದಾರೆ.
ದರ ಏರಿಕೆ:
ದರ ಏರಿಕೆ, ಭ್ರಷ್ಟಾಚಾರವೇ ಕಾಂಗ್ರೆಸ್‌ನ ಸಾಧನೆಯಾಗಿದೆ. ಮೆಟ್ರೋ ದರ ಸುಮಾರು ಶೇ.71ರಷ್ಟು ಹೆಚ್ಚಳ, ಹಾಲಿನ ಬೆಲೆ 4 ರೂ. ಹೆಚ್ಚಳ, ತುಪ್ಪದ ಬೆಲೆ ಕೆಜಿಗೆ 90 ರೂ. ಹೆಚ್ಚಳ, ವಿದ್ಯುತ್ ಸುಂಕ ಏರಿಕೆ. ಸ್ಥಿರ ಶುಲ್ಕ 120 ರಿಂದ 145 ರೂ.ಗೆ ಏರಿಕೆ, ಆಸ್ತಿ ನೋಂದಣಿ ಶುಲ್ಕ ದ್ವಿಗುಣಗೊಂಡಿದೆ.
ನಕಲು ಮಾಡಿದ ಡಿಪಿಆರ್ (DPR) ಮತ್ತು ಸಾಧ್ಯತಾ ಅಧ್ಯಯನದೊಂದಿಗೆ 43,000 ಕೋಟಿ ರೂ. ಸುರಂಗ ರಸ್ತೆ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಭ್ರಷ್ಟಾಚಾರದ ಫಲವಾಗಿ ರಸ್ತೆಗಳಲ್ಲಿನ ಗುಂಡಿಗಳು ಸವಾರರಿಗೆ ಮಾರಕವಾಗುತ್ತಿವೆ. ಮಾರ್ಗದರ್ಶಿ ಮೌಲ್ಯ ಶೇ.25-30ರಷ್ಟು ಹೆಚ್ಚಳವಾಗಿದ್ದು, ಸ್ಟಾಂಪ್ ಡ್ಯೂಟಿ ಶೇ. 200 ರಿಂದ 500ರಷ್ಟು ಹೆಚ್ಚಳವಾಗಿದೆ. ಬಸ್ ದರಗಳು ಶೇ.15 ರಷ್ಟು ಏರಿಕೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಲೆ ಏರಿಕೆಯಾಗಿದ್ದು, ಸಿಂಗಲ್ ಬೆಡ್ ವಿಶೇಷ ವಾರ್ಡ್‌ನ ವೆಚ್ಚವನ್ನು ₹750 ರಿಂದ ₹2000 ಕ್ಕೆ ಏರಿಸಲಾಗಿದೆ.
ಇದನ್ನೂ ಓದಿ :ಶೀಘ್ರವೇ ರಾಜ್ಯ ದಲ್ಲಿ ಸ್ಫೋಟಕ ಬೆಳವಣಿಗೆ; ಸಿಎಂ ಬದಲಾವಣೆ ಸುಳಿವು ಕೊಟ್ರಾ ಕುಮಾರಸ್ವಾಮಿ?
ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ಶುಲ್ಕ ಮತ್ತು ಒಳರೋಗಿ ಪ್ರವೇಶ ಶುಲ್ಕ ದ್ವಿಗುಣಗೊಂಡಿದೆ. ಕಸ ಸುಂಕ (Garbage Cess) 10 ರಿಂದ 400 ರೂ. ವ್ಯಾಪ್ತಿಯಲ್ಲಿದೆ. ಮೃಗಾಲಯ ಪ್ರವೇಶ ಶುಲ್ಕ ಹೆಚ್ಚಳವಾಗಿದ್ದು, ಬಹುಮಹಡಿ ಕಟ್ಟಡಗಳ ಮೇಲೆ ಅಗ್ನಿಶಾಮಕ ಸುಂಕ (Fire cess), ಕ್ಯಾಬ್‌ಗಳು, ಆಟೋಗಳು ಮತ್ತು ಇತರ ವಾಣಿಜ್ಯ ವಾಹನಗಳ ಮೇಲೆ 3% ಸಾರಿಗೆ ಸುಂಕ (Transport Cess), ಖಾಸಗಿ ಕಾಲೇಜುಗಳಲ್ಲಿ 10% ಶುಲ್ಕ ಹೆಚ್ಚಳ ಮಾಡಲಾಗಿದೆ. ಒಟಿಟಿ (OTT), ಸಿನಿಮಾ ಟಿಕೆಟ್‌ಗಳ ಮೇಲೆ 2% ಸುಂಕ, ಬೆಂಗಳೂರಿನಲ್ಲಿ ನೀರಿನ ಸುಂಕ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಫೇಸ್‌ಬುಕ್ ಫೋಸ್ಟ್
ಹಗರಣಗಳು:
ಈ ಸರ್ಕಾರದಲ್ಲಿ ಹಗರಣಗಳನ್ನು ನೋಡುವುದಾದರೆ, 613 ಕೋಟಿ ವೆಚ್ಚದ ಕಸ ಗುಡಿಸುವ ಯಂತ್ರಗಳ ಹಗರಣ; ಇದು ದೇಶದಲ್ಲಿಯೇ ಅತಿ ಹೆಚ್ಚು ಎಂದು ವರದಿಯಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣ.
ಅಬಕಾರಿ ಇಲಾಖೆಯಲ್ಲಿ ಸುಮಾರು 300 ರಿಂದ 700 ಕೋಟಿಗಳಷ್ಟು ಭ್ರಷ್ಟಾಚಾರದ ಆರೋಪ, ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಹೇಳಿಕೆಯ ಪ್ರಕಾರ, ಪರವಾನಗಿಗಾಗಿ 30-40 ಲಕ್ಷ ಪಾವತಿಸಲಾಗುತ್ತದೆ. ಗುತ್ತಿಗೆದಾರರ ಸಂಘದಿಂದ ಹ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.
ಕಳಪೆ ಆಡಳಿತ, ಆಡಳಿತಾತ್ಮಕ ವೈಫಲ್ಯಗಳು:
ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ (KKRTC) ಸಿಬ್ಬಂದಿಗೆ ವೇತನ ಪಾವತಿಸದಿರುವುದು. ಬೆಂಗಳೂರು ಈಗ ಗುಂಡಿಗಳ ನಗರ ಎಂದು ಕರೆಯಲ್ಪಡುತ್ತಿದೆ. ಕಳಪೆ ನಿರ್ವಹಣೆಯಿಂದಾಗಿ ಆರ್‌ಸಿಬಿ ವಿಜಯೋತ್ಸವದ ಮೆರವಣಿಗೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇವುಗಳ ಜತೆಗೆ, ರಾಜ್ಯ ಸರ್ಕಾರವು ಅಪರಾಧಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಅವರಿಗೆ ಕ್ಲೀನ್ ಚಿಟ್ ನೀಡುವುದು, ಆರ್‌ಎಸ್‌ಎಸ್ (RSS) ರ‍್ಯಾಲಿಗಳು ಮತ್ತು ಶಾಂತಿಯುತ ಪಾದಯಾತ್ರೆಗಳಲ್ಲಿ ಭಾಗವಹಿಸುವ ಅಧಿಕಾರಿಗಳನ್ನು ಗುರಿಯಾಗಿಸುವುದು. ಸಿಬಿಐಗೆ ನೀಡಿದ್ದ ಸಾಮಾನ್ಯ ಸಮ್ಮತಿಯನ್ನು ಹಿಂಪಡೆಯುವುದು ಮತ್ತು ಮೂಲಭೂತ ಆಡಳಿತಕ್ಕಿಂತ ರಾಜಕೀಯ ವಿಷಯಗಳಿಗೆ ಆದ್ಯತೆ ನೀಡುವುದಕ್ಕೆ ಹೆಸರುವಾಸಿಯಾಗಿದೆ.
ಇದನ್ನೂ ಓದಿ : DK Shivakumar: ಗಾಳ ಹಾಕಿ ಮೀನು ಹಿಡಿಯುವುದು ಹೇಗೆಂದು ನನಗೆ ಗೊತ್ತು: ಡಿ.ಕೆ. ಶಿವಕುಮಾರ್
ಒಟ್ಟಾರೆಯಾಗಿ, ಕರ್ನಾಟಕವು 'ಗ್ಯಾರಂಟಿ ಸರ್ಕಾರ' ಎಂಬ ಲೇಬಲ್‌ನ ಹಿಂದೆ ಅಡಗಿರುವ 'ಹಗರಣಗಳ ಸರ್ಕಾರ'ವಾಗಿ ಮಾರ್ಪಟ್ಟಿದ್ದು, ಆಡಳಿತವು ಸಂಪೂರ್ಣ ಕುಸಿದಿರುವುದು ದುರಂತ ಎಂದು ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ.