ನಾಳೆ ಸಾರಿಗೆ ಮುಷ್ಕರ ನಡೆಯುತ್ತಾ? ಸಂಘಟನೆಗಳಲ್ಲಿಯೇ ಒಡಕು?
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟಗಳು ಜಂಟಿಯಾಗಿ ಮೇ 20ರಿಂದ (ಬುಧವಾರ) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಆದರೆ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಮುಷ್ಕರದಿಂದ ಹಿಂದೆ ಸರಿದಿದೆ. ಜಂಟಿ ಕ್ರಿಯಾ ಸಮಿತಿಯಿಂದ ಹೊರ ಬಂದಿದೆವೆಂದು ಪತ್ರ ಬರೆದಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ (KSRTC Strike) ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟಗಳು ಜಂಟಿಯಾಗಿ ಮೇ 20ರಿಂದ (ಬುಧವಾರ) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಆದರೆ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಮುಷ್ಕರದಿಂದ ಹಿಂದೆ ಸರಿದಿದೆ. ಜಂಟಿ ಕ್ರಿಯಾ ಸಮಿತಿಯಿಂದ ಹೊರ ಬಂದಿದೆವೆಂದು ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳೋದು ಅನುಮಾನವಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಮುಷ್ಕರದಿಂದ ಹಿಂದೆ ಸರಿದಿರೋದಾಗಿ KSRTC ಎಂಡಿಗೆ ಪತ್ರ ಬರೆದಿದೆ. ನಾವು ಮುಷ್ಕರಕ್ಕೆ ಬೆಂಬಲ ನೀಡುತ್ತಿಲ್ಲ, ಜಂಟಿ ಕ್ರಿಯಾ ಸಮಿತಿಯಿಂದ ಹೊರ ಬಂದಿದೆವೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ನೌಕರರು ಶೇ 25 ರ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದು, 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಸದ್ಯಕ್ಕೆ ಶೇ 12.5 ವೇತನ ಪರಿಷ್ಕರಣೆಗೆ ಒಪ್ಪಿದೆ. ಅಲ್ಲದೆ, 26 ತಿಂಗಳ ವೇತನ ಹಿಂಬಾಕಿಯ ಮೊದಲ ಕಂತಾಗಿ 450 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ನೌಕರರು ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆಗಳು ಈಡೇರದ ಹೊರತು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಬ್ಬಂದಿಗೆ ಸರ್ಕಾರ ಖಡಕ್ ಎಚ್ಚರಿಕೆ
ಮೇ.20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ನೌಕರರಿಗೆ ರಾಜ್ಯ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ. ಬುಧವಾರ ಮುಷ್ಕರದಲ್ಲಿ ಭಾಗಿಯಾಗದಂತೆ ಸಿಬ್ಬಂದಿಗೆ ಸೂಚಿಸಿದ್ದು, ಯಾವುದೇ ಮುಷ್ಕರ ಮಾಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ ಎಂದು ಹೇಳಿದೆ. ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಕಾರಣ ಮೇ 20ರಂದು ಬಸ್ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗೆ ಯಾವುದೇ ರೀತಿಯ ರಜೆ ಮಂಜೂರು ಮಾಡಬಾರದು. ಕೆಲಸಕ್ಕೆ ಗೈರಾಗುವ ನೌಕರರ ವಿರುದ್ಧ ‘ನೋ ವರ್ಕ್ ನೋ ಪೇ’ ಜಾರಿ ಮಾಡಿ. ಅನಿವಾರ್ಯ ಸಂದರ್ಭದಲ್ಲಿ ಅಥವಾ ಅವಶ್ಯವಿದ್ದಲ್ಲಿ, ನೌಕರರ ವಾರದ ರಜೆಯನ್ನು ರದ್ದುಗೊಳಿಸಿ ಕರ್ತವ್ಯದ ಮೇಲೆ ನಿಯೋಜಿಸುವಂತೆ ಅಕ್ರಂ ಪಾಷಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.