ಕೇಂದ್ರ ಬಜೆಟ್‌ನಲ್ಲಿ ನಮ್ಮ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ ಕಿಡಿ
ಕೇಂದ್ರ ಬಜೆಟ್ ಬಗ್ಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. 2023-24ರಲ್ಲಿ ಭದ್ರಾ ಯೋಜನೆಗೆ ಘೋಷಿಸಿದ್ದ ₹5,300 ಕೋಟಿ ಅನುದಾನವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಮೂರು ಬಜೆಟ್‌ಗಳು ಕಳೆದರೂ ಒಂದು ರುಪಾಯಿ ನೀಡಿಲ್ಲ ಎಂದು ಸಿಎಂ ಟೀಕಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. -
ವಿಶ್ವವಾಣಿ ಸುದ್ದಿಮನೆ, ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026–27ನೇ ಸಾಲಿನ 13ನೇ ಕೇಂದ್ರ ಬಜೆಟ್ ನಿರಾಶಾದಾಯಕ, ದೂರದೃಷ್ಟಿಯಿಲ್ಲದ ಹಾಗೂ ಹೇಳಿಕೆಗಳಷ್ಟೇ ಇರುವ ಆಯವ್ಯಯವಾಗಿದೆ. ಬಜೆಟ್‌ನಲ್ಲಿ ಕರ್ನಾಟಕಕ್ಕೂ, ದಕ್ಷಿಣ ಭಾರತಕ್ಕೂ ಏನೂ ಸಿಕ್ಕಿಲ್ಲ. ರಾಜ್ಯಕ್ಕೆ ಚೊಂಬು ಕೊಟ್ಟಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 2025–26ರಲ್ಲಿ ಬಜೆಟ್ ಗಾತ್ರ ₹50.65 ಲಕ್ಷ ಕೋಟಿ ಇದ್ದು, ಪರಿಷ್ಕೃತ ಅಂದಾಜಿನಲ್ಲಿ ಅದು ₹49.64 ಲಕ್ಷ ಕೋಟಿಗೆ ಇಳಿಕೆಯಾಗಿತ್ತು. ಅಂದರೆ ಸುಮಾರು ₹1 ಲಕ್ಷ ಕೋಟಿ ಕಡಿತವಾಗಿತ್ತು. ಇದೀಗ 2026–27ರಲ್ಲಿ ಬಜೆಟ್ ಗಾತ್ರ ₹53.47 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಕೇವಲ 5.56 ಶೇಕಡಾ ವೃದ್ಧಿ ಮಾತ್ರ. ದೇಶದ ಅಭಿವೃದ್ಧಿಗೆ ಕನಿಷ್ಠ 7–8 ಶೇಕಡಾ ವೃದ್ಧಿ ಅಗತ್ಯವಿರುವಾಗ, ಈ ಪ್ರಮಾಣ ಸಾಲದು ಎಂದು ಹೇಳಿದರು.
ರಾಜಸ್ವ ಕೊರತೆ ₹5.92 ಲಕ್ಷ ಕೋಟಿ ಆಗಿದ್ದು, ಅದು ಬಜೆಟ್ ಗಾತ್ರದ 1.5 ಶೇಕಡಾ ನಷ್ಟಕ್ಕೆ ಸಮನಾಗಿದೆ. ಕಳೆದ ವರ್ಷದಿಗಿಂತ ಸುಮಾರು ₹70,000 ಕೋಟಿ ಹೆಚ್ಚಾಗಿದೆ. ಆದರೂ ರಾಜ್ಯಗಳ ಅಗತ್ಯಗಳಿಗೆ ಸ್ಪಂದಿಸುವ ಯಾವುದೇ ಸ್ಪಷ್ಟ ಕ್ರಮಗಳು ಇಲ್ಲ ಎಂದು ಅವರು ದೂರಿದರು.
ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಅನುಕೂಲ ಆಗಿಲ್ಲ, ಯಾವ ಹೈ ಸ್ಪೀಡ್ ರೈಲೂ ಬರಲ್ಲ: ಡಿಕೆಶಿ ಟೀಕೆ
ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ ಶೇ. 5.56ರಷ್ಟು ಹೆಚ್ಚಾಗಿದ್ದರೂ ಕರ್ನಾಟಕಕ್ಕೆ ನಯಾಪೈಸೆ ಲಾಭವಾಗಿಲ್ಲ. ಹೈ ಸ್ಪೀಡ್ ರೈಲು ಘೋಷಣೆ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಕ್ಕೆ ಸೀಮಿತವಾಗಿದೆ. ನಾವು ಕೇಳಿದ್ದು ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು ಮಾರ್ಗಗಳನ್ನು. ಇದರಿಂದ ರಾಜ್ಯದ ಜನರಿಗೆ ಯಾವುದೇ ಅನುಕೂಲವಿಲ್ಲ. ಕೇವಲ ‘ವಿಕಸಿತ ಭಾರತ’ ಎಂಬ ಮಾತಿನ ಚಮತ್ಕಾರ ಬಿಟ್ಟರೆ ವಾಸ್ತವದಲ್ಲಿ ಏನೂ ಇಲ್ಲ ಎಂದು ಸಿಎಂ ಟೀಕಿಸಿದರು.
ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು–ಹೈದರಾಬಾದ್ ಹಾಗೂ ಬೆಂಗಳೂರು–ಚೆನ್ನೈ ಹೈ ಸ್ಪೀಡ್ ರೈಲು ಘೋಷಣೆ ಹೊರತುಪಡಿಸಿ ಕರ್ನಾಟಕಕ್ಕೆ ಬೇರೆ ಯಾವುದೇ ಮಹತ್ವದ ಕೊಡುಗೆ ಇಲ್ಲ. ನಾವು ಕೇಳಿದ್ದು ಬೆಂಗಳೂರು–ಮುಂಬೈ, ಬೆಂಗಳೂರು–ಮಂಗಳೂರು, ಬೆಂಗಳೂರು–ಪುಣೆ ಮಾರ್ಗಗಳು. ಆದರೆ ಅವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ ಘೋಷಣೆಗಳಿಂದ ಕರ್ನಾಟಕಕ್ಕೆ ವಿಶೇಷ ಲಾಭವಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದ ನೀರಾವರಿ ಯೋಜನೆಗಳಿಗೆ ‘ಜಾಣ ಮೌನ’:
ನಮ್ಮ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಭದ್ರಾ ಮೇಲ್ದಂಡೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿಲ್ಲ. ಇದರ ಬಗ್ಗೆ ಬಜೆಟ್‌ನಲ್ಲಿ ಒಂದು ಶಬ್ದವೂ ಇಲ್ಲ. 2023-24ರಲ್ಲಿ ಭದ್ರಾ ಯೋಜನೆಗೆ ಘೋಷಿಸಿದ್ದ ₹5,300 ಕೋಟಿ ಅನುದಾನವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಮೂರು ಬಜೆಟ್‌ಗಳು ಕಳೆದರೂ ಒಂದು ರುಪಾಯಿ ನೀಡಿಲ್ಲ. ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡಿಲ್ಲ. ಮಹದಾಯಿ ಯೋಜನೆಗೆ ನೀಡಬೇಕಿದ್ದ ಪರಿಸರ ಅನುಮತಿ ನೀಡದೆ ಕೇಂದ್ರ ಸರ್ಕಾರ ಕನ್ನಡಿಗರ ಹಿತಾಸಕ್ತಿಯನ್ನು ಕಡೆಗಣಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಗಜೆಟ್ ನೋಟಿಫಿಕೇಶನ್ ಮಾಡದೆ ಉತ್ತರ ಕರ್ನಾಟಕದ ಜನರಿಗೆ ದ್ರೋಹ ಎಸಗುತ್ತಿದೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ತೆರಿಗೆ ಹಂಚಿಕೆಯಲ್ಲಿ ದ್ರೋಹ: ‘ನೂರು ಕೊಟ್ಟರೆ ಹದಿನಾಲ್ಕು ವಾಪಸ್’
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಅಂಕಿ-ಅಂಶಗಳ ಸಮೇತ ಬಿಡಿಸಿಟ್ಟ ಸಿಎಂ, ಕರ್ನಾಟಕವು ಪ್ರತಿವರ್ಷ ಕೇಂದ್ರಕ್ಕೆ ₹4.5 ಲಕ್ಷ ಕೋಟಿಯಿಂದ ₹5.5 ಲಕ್ಷ ಕೋಟಿವರೆಗೆ ತೆರಿಗೆ ಪಾವತಿಸುತ್ತದೆ. ಆದರೆ, ನಮಗೆ ವಾಪಸ್ ಬರುವುದು ಕೇವಲ ₹14 ಮಾತ್ರ. 2024-25, 2025-26ನೇ ಸಾಲಿನಲ್ಲಿ ತೆರಿಗೆ ವಾಪಸ್‌ನಲ್ಲಿ ಬಿಹಾರಕ್ಕೆ 9.981 ಕೋಟಿ ರು., ಉತ್ತರ ಪ್ರದೇಶಕ್ಕೆ 17.679 ಕೋಟಿ ರು. ನೀಡುವ ಕೇಂದ್ರ, ಕರ್ನಾಟಕಕ್ಕೆ ಮಾತ್ರ 4.131 ಕೋಟಿ ರು. ನೀಡುವ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಬೆನ್ನಿಗೆ ಚೂರಿ ಹಾಕುತ್ತಿದೆ. ತಲಾದಾಯದಲ್ಲಿ ಮೊದಲ ಸ್ಥಾನ, ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನ ಹಾಗೂ ವಿದೇಶಿ ಹೂಡಿಕೆಯಲ್ಲಿ ನಂಬರ್ 1 ಇರೋ ರಾಜ್ಯಕ್ಕೆ ಕೊಡುತ್ತಿರೋ ಬಹುಮಾನ ಇದೇನಾ? ಎಂದು ಪ್ರಶ್ನಿಸಿದರು.
ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಪಾಲು 60:40ಗೆ ಇಳಿಸಲಾಗಿದೆ. ಜಲ ಜೀವನ್ ಮಿಷನ್‌ನಲ್ಲಿ ಮೊದಲು 50:50 ಇದ್ದು, ಈಗ 2024–25 ಮತ್ತು 2025–26ಕ್ಕೆ ಬರಬೇಕಿದ್ದ ಸುಮಾರು ₹13,000 ಕೋಟಿ ಹಣ ಇನ್ನೂ ಬಿಡುಗಡೆ ಆಗಿಲ್ಲ ಎಂದು ಆರೋಪಿಸಿದರು. ಒಟ್ಟಿನಲ್ಲಿ 2026–27ರ ಕೇಂದ್ರ ಬಜೆಟ್ ಕರ್ನಾಟಕಕ್ಕೆ ಭಾರೀ ನಿರಾಸೆ ಮೂಡಿಸಿದೆ ಎಂದು ಸಿಎಂ ಹೇಳಿದರು.
![]()
ಕೆಕೆಆರ್‌ಡಿಬಿಗೆ ಮ್ಯಾಚಿಂಗ್ ಗ್ರ್ಯಾಂಟ್ ನೀಡುವಂತೆ ಮನವಿ ಮಾಡಿದ್ದರೂ ಅದರ ಬಗ್ಗೆ ಬಜೆಟ್‌ನಲ್ಲಿ ಒಂದು ಶಬ್ದವೂ ಇಲ್ಲ. ಕಬ್ಬು, ತೊಗರಿ ಮತ್ತು ಬೇಳೆಕಾಳು ಬೆಳೆಗಾರರಿಗೆ ಸಹಾಯ ಮಾಡುವ ಯಾವುದೇ ಪ್ರಸ್ತಾಪವಿಲ್ಲ. ನಾವು ಈಗಾಗಲೇ, ಕೆಕೆಆರ್‌ಡಿಬಿಗೆ 13,000 ಕೋಟಿ ರು. ಕೊಟ್ಟಿದ್ದೇವೆ. ಕೇಂದ್ರದ ನಿರ್ಲಕ್ಷ್ಯದ ನಡುವೆಯೂ ನಮ್ಮ ಸರ್ಕಾರ ರೈತರು ಮತ್ತು ಬಡವರ ಹಿತ ಕಾಪಾಡಲಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಲ್ಯಾಣ ಕರ್ನಾಟಕಕ್ಕೆ 43 ಸಾವಿರ ಕೋಟಿ ರೂ. ಅಗತ್ಯ: ರಾಜ್ಯ ಬಜೆಟ್‌ನಲ್ಲಿ ಆದ್ಯತೆ
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ಡಾ. ಎಂ. ಗೋವಿಂದರಾವ್ ಸಮಿತಿ ನೀಡಿರುವ ವರದಿಯನ್ನು ಉಲ್ಲೇಖಿಸಿದ ಸಿಎಂ, ಪ್ರಾದೇಶಿಕ ಅಸಮತೋಲನ ನೀಗಿಸಲು ಈ ಭಾಗಕ್ಕೆ 43 ಸಾವಿರ ಕೋಟಿ ರು. ಅನುದಾನದ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕೇಂದ್ರ ಸರಕಾರ ಸಹಾಯ ನೀಡದಿದ್ದರೂ, ಮುಂಬರುವ ರಾಜ್ಯ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಾಮಾಜಿಕ ಸಮಾನತೆ ತರಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು; ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಈ ಬಜೆಟ್ ಉತ್ತರ ಎಂದ ಕುಮಾರಸ್ವಾಮಿ
ಈ ವೇಳೆ ಸಚಿವ ಡಾ. ಶರಣಾಪ್ರಕಾಶ್ ಪಾಟೀಲ್, ಶಿವರಾಜ್ ತಂಗಡಗಿ,ಎನ್. ಎಸ್. ಭೋಸರಾಜು, ಶಾಸಕರಾದ ಎಂ.ವೈ ಪಾಟೀಲ್, ಖನೀಜ್ ಫಾತಿಮಾ, ವಿ.ಪ ಸದಸ್ಯ ಜಗದೇವ್ ಗುತ್ತೇದಾರ, ಮೇಯರ್ ವರ್ಷಾ ಜಾನೆ, ಡಿಸಿ ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿ.ಪಂ ಸಿಇಓ ಭಂವರ ಸಿಂಗ್ ಮೀನಾ, ಜೆಸ್ಕಾಂ ಎಂ.ಡಿ ಕೃಷ್ಣ ಭಾಜಪೇಯಿ, ಉಪ ಆಯುಕ್ತೆ ಸಾಹಿತ್ಯ ಆಲದಕಟ್ಟೆ ಸೇರಿ ಅನೇಕರು ಇದ್ದರು.