ಬೆಂಗಳೂರು, ನ. 19: ಕೆಲವು ದಿನಗಳ ಹಿಂದೆ ರಾಮನಗರ ಜಿಲ್ಲೆಯ (ಬೆಂಗಳೂರು ದಕ್ಷಿಣ ಜಿಲ್ಲೆ) ಹಾರೋಹಳ್ಳಿ ತಾಲೂಕಿನ ದೊಡ್ಡಕುರಬರಹಳ್ಳಿಯ ಬಿಸಿಲು ಮಾರಮ್ಮ ದೇವಾಲಯಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರವೇಶಿಸದಂತೆ ಕಾಂಗ್ರೆಸ್ ಕಾರ್ಯಕರ್ತರು ತಡೆದ ಪ್ರಕರಣ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಸದ್ಯ ಈ ಪ್ರಕರಣ ಇತ್ಯರ್ಥದ ಹಾದಿಯಲ್ಲಿದೆ. ಬಿಸಿಲು ಮಾರಮ್ಮ ದೇವಾಲಯಕ್ಕೆ ಬರಲು ನಿಖಿಲ್ ಅವರಿಗೆ ಇದೀಗ ನೂರಾರು ಮಹಿಳೆಯರು, ಗ್ರಾಮಸ್ಥರು ಹಾಗೂ ಮುಖಂಡರು ಮನವಿ ಸಲ್ಲಿಸಿದ್ದಾರೆ. ಜೆ.ಪಿ. ನಗರದ ಅವರ ನಿವಾಸಕ್ಕೆ ಆಗಮಿಸಿ ಗ್ರಾಮಸ್ಥರು ದೇವಸ್ಥಾನಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆಯುವಂತೆ ತಿಳಿಸಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿಖಿಲ್, ʼʼದೊಡ್ಡಕುರಬರಹಳ್ಳಿ ಜನತೆಯ ನಂಬಿಕೆ, ಪ್ರೀತಿಗೆ ನಾನು ಚಿರಋಣಿ. ನಂಬಿಕೆಗೆ ಮೋಸ ಮಾಡಲ್ಲ. 2-3 ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆಯುತ್ತೇನೆ'' ಎಂದು ಭರವಸೆ ನೀಡಿದ್ದಾರೆ.
ಏನಿದು ವಿವಾದ?
ಕುರುಬರಹಳ್ಳಿಯ ಬಿಸಿಲು ಮಾರಮ್ಮ ದೇವಾಲಯ ಪ್ರವೇಶ ವಿಚಾರವಾಗಿ ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ಅವರಿಗೆ ನಿರ್ಬಂಧ ಹೇರಲಾಗಿತ್ತು. ಈ ಘಟನೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಕಾಂಗ್ರೆಸ್ನ ಕೆಲವೊಂದಷ್ಟು ನಾಯಕರು ದೇವಸ್ಥಾನದ ಅಂಗಳದಲ್ಲಿ ನಿಂತುಕೊಂಡು ಬಾಗಿಲು ಹಾಕಿ ಕೀ ಇಟ್ಟುಕೊಂಡು, ನಿಖಿಲ್ ಬರಬಾರದು, ಕೈಮುಗಿಬಾರದು ಎಂದು ದೊಡ್ಡ ರಾದ್ಧಾಂತ ಸೃಷ್ಟಿಸಿದ್ದರು ಎನ್ನಲಾಗಿದೆ.
ಬೆಂಗಳೂರು ಪ್ರವೇಶಿಸದಂತೆ ಜೆಡಿಎಸ್ ಪಾದಯಾತ್ರೆಗೆ ಪೊಲೀಸರ ತಡೆ; ನಿಖಿಲ್ ಕುಮಾರಸ್ವಾಮಿ ವಶಕ್ಕೆ ಯತ್ನ
ಈ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದರು. ʼʼನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಾಲಯ ಪ್ರವೇಶ ನಿರಾಕರಿಸಿರುವುದು ನಿಜಕ್ಕೂ ಬಹಳ ನೋವಿನ ಸಂಗತಿ. ದೇವರು ಎಲ್ಲರಿಗೂ ಒಂದೇ. ಶ್ರೀ ಬಿಸಿಲು ಮಾರಮ್ಮ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಅವರಿಗೂ ಆಹ್ವಾನ ಬಂದಿತ್ತು. ಅದರಂತೆಯೇ ಅವರು ದೇಗುಲಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯಲು ಉದ್ದೇಶಿಸಿದ್ದರು. ಆದರೆ ಏಕಾಏಕಿ ಬಾಗಿಲಿಗೆ ಬೀಗ ಹಾಕಿ ತಾಯಿಯ ದರ್ಶನ ನಿರಾಕರಿಸಿದ್ದು ಸರಿಯಲ್ಲ” ಎಂದು ಅವರು ಹೇಳಿದ್ದರು.
“ಇದು ರಾಜಕೀಯ ಬೆರೆಸುವ ವಿಚಾರವಲ್ಲ. ಇವತ್ತು ರಾಜಕೀಯ ಚರ್ಚೆ ಮಾಡಲು ನನಗೆ ಇಷ್ಟವೂ ಇಲ್ಲ. ಆದರೆ ಈ ಘಟನೆ ನನ್ನ ಮನಸ್ಸಿಗೆ ನೋವು ಉಂಟುಮಾಡಿದೆ. ಸದಾ ನನ್ನ ಬೆಂಬಲಿಸುವ ಮತ್ತು ದೊಡ್ಡ ಮಟ್ಟದಲ್ಲಿ ನನಗೆ ಮತ ಕೊಟ್ಟು ಗೆಲ್ಲಿಸುವ ಗ್ರಾಮ ಕುರುಬರಹಳ್ಳಿ. ಇಂತಹ ಘಟನೆಗಳ ಅಗತ್ಯ ಇರಲಿಲ್ಲ” ಎಂದಿದ್ದರು.
''ಡಿ.ಕೆ. ಶಿವಕುಮಾರ್ ಬಡವರ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ''; ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿಗೂ ಇದೇ ಅನುಭವ
ಅಚ್ಚರಿ ಎಂದರೆ ಹಿಂದೆ ಕುಮಾರಸ್ವಾಮಿ ಅವರಿಗೂ ಇದೇ ರೀತಿಯ ಅನುಭವವಾಗಿತ್ತು. 2004ರಲ್ಲಿ ರಾಮನಗರ ಜಿಲ್ಲೆಯ ಕೂಟಗಲ್ಲು ಹೊಸೂರಿನ ದೇಗುಲಕ್ಕೆ ಆಗಮಿಸಿದ ಎಚ್.ಡಿ.ಕೆ. ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದರು. ದೇಗುಲಕ್ಕೆ ಬೀಗ ಹಾಕಿದ್ದರು. ನಂತರ ನಡೆದ ಚುನಾವಣೆಯಲ್ಲಿ ಕುಮಾರಸ್ವಾಮಿ 25 ಸಾವಿರಕ್ಕೂ ಹೆಚ್ಚು ಬಹುಮತದಿಂದ ಜಯಗಳಿಸಿದ್ದರು. ಈ ಘಟನೆಯನ್ನು ಅವರು ನೆನಪು ಮಾಡಿಕೊಂಡಿದ್ದರು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.