ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prahlad Joshi: ವಿಶ್ವೇಶ್ವರ ಭಟ್ಟರ ಕೃತಿ ಭಾಷಾನುವಾದವಲ್ಲ, ಭಾವಾನುವಾದ: ಪ್ರಲ್ಹಾದ್‌ ಜೋಶಿ ಜೋಶಿ

ಅವರು ವಿಶ್ವವಾಣಿ, ವಿಶ್ವವಾಣಿ ಟಿವಿ ಮತ್ತು ಪ್ರವಾಸಿ ಪ್ರಪಂಚದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರ 103ನೇ ಪುಸ್ತಕ ʼಬದುಕುಳಿದವರು ಕಂಡಂತೆʼ (Badukulidavaru Kandanthe Book) ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್‌ ಜೋಶಿ ಮಾತನಾಡಿದರು.

ವಿಶ್ವೇಶ್ವರ ಭಟ್ಟರ ಕೃತಿ ಭಾಷಾನುವಾದವಲ್ಲ, ಭಾವಾನುವಾದ:  ಜೋಶಿ

-

Vishakha Bhat
Vishakha Bhat Nov 16, 2025 5:11 PM

ಬೆಂಗಳೂರು: ಇಸ್ಲಾಮಿಕ್‌ ಭಯೋತ್ಪಾದಕರ ಕ್ರೂರ ಬರ್ಬರ ದಾಳಿಯನ್ನು ಇಸ್ರೇಲಿನ ಯೋಧರು ಹಾಗೂ ನಾಗರಿಕರು ಎದುರಿಸಿದ ಬಗೆಯನ್ನು ಕನ್ನಡದ ಜನತೆಗೆ ಕೃತಿ ರೂಪದಲ್ಲಿ ನೀಡುವ ಮೂಲಕ ( Vishweshwar Bhat) ವಿಶ್ವೇಶ್ವರ ಭಟ್ಟರು ದೊಡ್ಡ ಸೇವೆ ಸಲ್ಲಿಸಿದ್ದಾರೆ. ಅವರು ಮಾಡಿರುವುದು ಕೇವಲ ಭಾಷಾನುವಾದವಲ್ಲ, ಅದು ಭಾವಾನುವಾದ. ಅಲ್ಲಿಗೆ ಹೋಗಿ, ಅಲ್ಲಿನ ಜನತೆಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಬರೆದಿದ್ದಾರೆ ಎಂದು ಕೇಂದ್ರ ಸರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ( Prahlad Joshi) ಪ್ರಲ್ಹಾದ್‌ ಜೋಶಿ ನುಡಿದರು.

ಅವರು ವಿಶ್ವವಾಣಿ, ವಿಶ್ವವಾಣಿ ಟಿವಿ ಮತ್ತು ಪ್ರವಾಸಿ ಪ್ರಪಂಚದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರ 103ನೇ ಪುಸ್ತಕ ʼಬದುಕುಳಿದವರು ಕಂಡಂತೆʼ (Badukulidavaru Kandanthe Book) ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಭಾರತಕ್ಕೆ ಕನಿಷ್ಠ 5000 ವರ್ಷಗಳ ಇತಿಹಾಸವಿದೆ. ಆದರೆ ಇಸ್ರೇಲ್‌ ರಚನೆ ಆಗಿರುವುದು 1948ರಲ್ಲಿ. ಆದರೆ ಇದು ನಮ್ಮ ಭೂಮಿ ಮಾತ್ರವಲ್ಲ, ಮಾತೃಭೂಮಿ ಎಂಬ ಭಾವನೆ ಅವರಲ್ಲಿದೆ. ಇಂಥ ಭಾವನೆ ಇಲ್ಲದೆ ಹೋದಲ್ಲಿ ದೇಶವನ್ನು ಉಳಿಸಿಕೊಳ್ಳಲು ಹೋರಾಟ ಸಾಧ್ಯವಾಗುವುದಿಲ್ಲ. ಇಸ್ರೇಲ್‌ ಬಹಳ ಸಣ್ಣ ದೇಶ. ಅದರ ಭೌಗೋಳಿಕತೆ, ಇತಿಹಾಸವನ್ನು ವಿಶ್ವೇಶ್ವರ ಭಟ್ಟರು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ ಎಂದರು.

ಐಹೂದಿಗಳು ತಾವಿದ್ದಲ್ಲಿಂದ ಹಲವು ಬಾರಿ ಓಡಿಸಲ್ಪಟ್ಟು ದೇಶಭ್ರಷ್ಟರಾಗಿದ್ದಾರೆ. ಆದರೆ 1948ರಲ್ಲಿ ಅವರು ಇಸ್ರೇಲ್‌ ರಚಿಸಿಕೊಂಡು ಒಂದೆಡೆ ಗಟ್ಟಿಯಾಗಿ ಕುಳಿತರು. ಹಲವು ಯುದ್ಧಗಳನ್ನು ಎದುರಿಸಿದರು. ಅದರ ಸುತ್ತಲಿನ 8 ಅರಬ್‌ ದೇಶಗಳು ನಿರಂತರ ಅದನ್ನು ತುಳಿಯಲು ಯತ್ನಿಸಿದವು. ಅಷ್ಟೂ ದೇಶಗಳ ಮಿಲಿಟರಿ- ಹಾಗೂ ಇಸ್ರೇಲ್‌ನ ಮಿಲಿಟರಿ ಶಕ್ತಿ- ಎರಡನ್ನೂ ಕಂಪ್ಯೂಟರ್‌ಗೆ ಫೀಡ್‌ ಮಾಡಿ, ಯಾವುದು ಸೋಲುತ್ತೆ ಎಂದು ಕೇಳಿದಾಗ ನಿಸ್ಸಂಶಯವಾಗಿ ಇಸ್ರೇಲ್‌ ಎಂದಿತ್ತು ಕಂಪ್ಯೂಟರ್.‌ ಆದರೆ ಅದು ಇಂದಿಗೂ ಆಗಿಲ್ಲ. ಯಾಕೆಂದರೆ ಕಂಪ್ಯೂಟರ್ ಮಾನವನ ಕೆಚ್ಚು, ಹೋರಾಟದ ಭಾವನೆಯನ್ನು ಗುರುತಿಸದು. ತನ್ನ ಹಿಂದಿನ ಘೋರ ಇತಿಹಾಸದ ಜ್ಞಾನವನ್ನು ಹೊಂದಿರದವನು ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ವಿಶ್ವದ ಜನಸಂಖ್ಯೆಯ ಕೇವಲ 0.22 ಜನಸಂಖ್ಯೆ ಹೊಂದಿರುವ ಇಸ್ರೇಲ್‌, 20ಕ್ಕೂ ಹೆಚ್ಚು ನೊಬೆಲ್‌ ಪ್ರಶಸ್ತಿಗಳನ್ನು ಪಡೆದಿದೆ ಎಂದರು.

Joshi (1)

ನಮ್ಮದೂ ಇಸ್ರೇಲ್‌ನಂತೆಯೇ ಗೆದ್ದ ಇತಿಹಾಸ ಹೊರತು ಸೋತ ಇತಿಹಾಸವಲ್ಲ. ಆದರೆ ಇತಿಹಾಸ ಪಾಠದಲ್ಲಿ ಇದನ್ನೆಲ್ಲ ಹೇಳಿಕೊಡುತ್ತಿಲ್ಲ. ನಮ್ಮಲ್ಲಿ ಮೊದಲಿನಿಂದ ಮಾನಸಿಕ ಗುಲಾಮಿತನ ಬೆಳೆಸಿದ್ದಾರೆ. ನಕ್ಸಲೀಯರು ʼಪಶುಪತಿಯಿಂದ ತಿರುಪತಿವರೆಗೆ ರೆಡ್ ಕಾರಿಡಾರ್ʼ ಎಂದು ಘೋಷಣೆ ಮಾಡಿದರು. ನಾವು ತೀರ್ಮಾನ ಮುಂದಿಟ್ಟೆವು- ನೀವು ಶಸ್ತ್ರಾಸ್ತ್ರ ಒಪ್ಪಿಸಿ, ಇಲ್ಲವೇ ಸಾಯಲು ಸಿದ್ದರಾಗಿ ಎಂದು. ಕೆಲವರು ನಮಗೆ ಮಾನವ ಹಕ್ಕುಗಳ ಬಗ್ಗೆ ಪಾಠ ಮಾಡಿದರು. ಎಕೆ47 ಹೊಂದಿದವರ ಜೊತೆಗೆ ಮಾನವ ಹಕ್ಕುಗಳ ಮಾತೇನು? ಯಾರಲ್ಲಿ ಮಾನವೀಯತೆ ಇದೆಯೋ ಅವರಿಗೆ ಮಾತ್ರ ಮಾನವ ಹಕ್ಕು ಎಂದು ಜೋಶಿ ನುಡಿದರು.

ನಮ್ಮ ದೇಶದೊಳಗೆ ಉಗ್ರರು ಹೇಗೆ ಬಂದರು, ಇದು ಭದ್ರತಾ ವೈಫಲ್ಯ ಎಂದು ಟೀಕೆ ಮಾಡುತ್ತಾರೆ. ಆದರೆ ನಮ್ಮ ಗಡಿಗಳ ಭೌಗೋಳಿಕ ಪರಿಸ್ಥಿತಿ ಭಿನ್ನ ಭಿನ್ನವಾಗಿದೆ. ಕೆಲವೆಡೆ ಭದ್ರವಾದ ಬೇಲಿಯಿದೆ, ಇನ್ನು ಕೆಲವೆಡೆ ಹಾಗೆ ಬೇಲಿ ಹಾಕಲಾಗುವುದಿಲ್ಲ. ಆಪರೇಶನ್‌ ಸಿಂದೂರ್‌ನಲ್ಲಿ ನಮ್ಮ ವಿಮಾನ ಎಷ್ಟು ಉರುಳಿದವು ಎಂದು ಪ್ರಶ್ನಿಸುತ್ತಾರೆ. ಈ ಮಾನಸಿಕತೆ ಹೋಗಬೇಕು. ನಮ್ಮಲ್ಲಿ ಹೋರಾಟದ ವಿಜಿಗೀಷು ಪ್ರವೃತ್ತಿ ಬೆಳೆಯಬೇಕು. ಇಸ್ರೇಲ್‌, ಹಮಾಸ್‌ ಅನ್ನು ಒಂದು ದೇಶವಾಗಿ ಎದುರಿಸಿದ ಬಗೆ, ಜಿಹಾದಿ ಮಾನಸಿಕತೆಯನ್ನು ಇಸ್ರೇಲ್‌ ಎದುರಿಸಿದ ಬಗೆ ನಮಗೆ ಪಾಠವಾಗುವಂತೆ ಭಟ್ಟರ ಪುಸ್ತಕವಿದೆ ಎಂದರು.

ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಇಸ್ರೇಲ್‌ನ ಭಾರತ ಡೆಪ್ಯುಟಿ ಕೌನ್ಸೆಲ್ ಜನರಲ್ ಇನ್ಬಾಲ್ ಸ್ಟೋಮ್ ಉಪಸ್ಥಿತರಿದ್ದರು. ಇಸ್ರೇಲ್‌ನ ಭಾರತ ಕೌನ್ಸೆಲ್ ಜನರಲ್ ಒರ್ಲಿ ವೆಯಿಟ್ಸನ್ ಆನ್‌ಲೈನ್ ಮೂಲಕ ಭಾಗವಹಿಸಿದರು. ರೂಪಾ ಗುರುರಾಜ್‌ ಕಾರ್ಯಕ್ರಮ ನಿರ್ವಹಿಸಿದರು.

ಕೃತಿಯ ಬಗ್ಗೆ:

2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸಿದ ಭಯಾನಕ ದಾಳಿ ಮತ್ತು ಹತ್ಯಾಕಾಂಡದಲ್ಲಿ ಬದುಕಿ ಉಳಿದವರು ಹೇಳಿದ ಮನ ಮಿಡಿಯುವ ರೋಚಕ ಕಥನವನ್ನು ಪುಸ್ತಕ ಒಳಗೊಂಡಿದೆ. ಮೂಲಕೃತಿಯನ್ನು ಯೇನ್‌ ಅಗಮೋನ್‌, ಓರಿಯಾ ಮೇವೊರೊಚ್‌ ರಚಿಸಿದ್ದಾರೆ.ಹಮಾಸ್‌ ಉಗ್ರರು ದಾಳಿ ನಡೆಸಿದ್ದ ಸ್ಥಳವನ್ನು ಸಂದರ್ಶಿಸಿರುವ ವಿಶ್ವೇಶ್ವರ ಭಟ್‌ ಅವರು, ಅಲ್ಲಿಯೇ ಕೃತಿಯನ್ನು ಅನುವಾದಿಸಲು ನಿರ್ಧರಿಸಿದ್ದರು. ಹಮಾಸ್‌ ಉಗ್ರರ ನಡೆಸಿದ ದಾಳಿಯಲ್ಲಿ  251 ಜನರನ್ನು ಅಪಹರಿಸಿದ್ದರು. ಸಾವಿರದ ಇನ್ನೂರಕ್ಕೂ ಹೆಚ್ಚು ಮಂದಿ ಹತರಾದರು. ಈ ಘೋರ ನರಮೇಧದ ಬಗ್ಗೆ ಯೇರ್‌ ಅಗಮೋನ್‌ ಮತ್ಗು ಓರಿಯಾ ಮೇವೊರೊಚ್‌ ಅವರು ಬರೆದ ʼವನ್‌ ಡೇ ಇನ್‌ ಅಕ್ಟೋಬರ್‌ ʼ ಎಂಬ ಕೃತಿಯನ್ನು ವಿಶ್ವೇಶ್ವರ ಭಟ್‌ ಅವರು ಅನುವಾದಿಸಿದ್ದಾರೆ. ಹತ್ಯಾಕಾಂಡದಲ್ಲಿ ಬದುಕಿ ಉಳಿದವರು ಹೇಳಿರುವ, ಮನಮಿಡಿಯುವ, ಹೃದಯವಿದ್ರಾವಕ, ರೋಚಕ ಕಥನವನ್ನು ಇದು ಒಳಗೊಂಡಿದೆ. ಆ ಭೀಕರ ಘಟನೆಯನ್ನು 34 ಮಂದಿ ತಮ್ಮ ಅನುಭವದಿಂದ ವಿವರಿಸಿದ್ದು, ಈ ಅಪರೂಪದ ಧೈರ್ಯಶಾಲಿ ಕಥೆಯನ್ನು ಪುಸ್ತಕದಲ್ಲಿ ನೀವು ಓದಬಹುದು.