Winter Saree Layer Look 2025: ಚಳಿಗಾಲದ ಫ್ಯಾಷನ್‌ನಲ್ಲಿ ಸೀರೆಗೂ ಸಿಕ್ತು ಲೇಯರ್ ಲುಕ್
Winter Saree Layer Look 2025: ಚಳಿಗಾಲದ ಸೀಸನ್‌ನಲ್ಲಿ ಲೇಯರ್ ಲುಕ್ ನೀಡುವ ಸೀರೆಗಳ ಫ್ಯಾಷನ್ ಟ್ರೆಂಡಿಯಾಗಿದೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಇಲ್ಲಿದೆ ವಿವರ.
- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಸೀರೆಗಳಿಗೂ ವೈವಿಧ್ಯಮಯ ಲೇಯರ್ ಲುಕ್ ದೊರಕಿದೆ. ವೈವಿಧ್ಯಮಯ ಡಿಸೈನ್‌ನಲ್ಲಿ ಲೇಯರ್ ಲುಕ್ ನೀಡುವ ಮೇಲುಡುಪುಗಳು, ಸೀರೆಗೆ ಜತೆಯಾಗಿವೆ. ಅದರಲ್ಲೂ, ಸೀರೆಗೆ ಲೇಯರ್ ನೀಡುವ ಜಾಕೆಟ್, ಕೇಪ್, ಶ್ರಗ್‌ಗಳು ಆಗಮಿಸಿವೆ (Winter Saree Layer Look 2025). ಈ ಬಾರಿಯ ಅಪ್‌ಡೇಟ್ ಎಂದರೆ ದಪ್ಪನೆಯ ಫ್ಯಾಬ್ರಿಕ್‌ನ ಜಾಕೆಟ್ ಸೈಡಿಗೆ ಸರಿದಿವೆ. ಬದಲಿಗೆ ಟ್ರಾನ್ಸಪರೆಂಟ್ ಹಾಗೂ ತೆಳುವಾದ ಶೀರ್ ಜಾಕೆಟ್‌ಗಳು ಟ್ರೆಂಡಿಯಾಗಿವೆ.
ಸೀರೆಗೆ ಶೀರ್ ಜಾಕೆಟ್ ಫ್ಯಾಷನ್
ಡಿಸೈನರ್ ಸೀರೆಗೆ ಸಿಂಪಲ್ ಬ್ಲೌಸ್ ಧರಿಸಿ ಡಿಸೈನರ್ ಶೀರ್ ಜಾಕೆಟ್ ಧರಿಸುವುದು ಇಂದಿನ ಫ್ಯಾಷನ್ ಟ್ರೆಂಡ್ ಆಗಿದೆ. ಜಾಕೆಟ್ ಶೈಲಿಯ ಶೀರ್ ಲಾಂಗ್ ಬ್ಲೌಸ್ ಕೂಡ ಇಂದು ಬಾಲಿವುಡ್ ಸೆಲೆಬ್ರಿಟಿಗಳ ಫ್ಯಾಷನ್ ಲಿಸ್ಟ್‌ನಲ್ಲಿಎಂಟ್ರಿ ನೀಡಿದೆ. ಸೀರೆಗೆ ಅದೇ ಮ್ಯಾಚಿಂಗ್ ಬ್ಲೌಸ್‌ಗೆ ಹೊಂದಿಕೊಂಡಂತೆ ಶೀರ್ ಜಾಕೆಟ್ ಬ್ಲೌಸ್ ಬಳಸುವುದು ಇಂದು ಪೇಜ್ 3 ಹಾಗೂ ಸೆಲೆಬ್ರಿಟಿಗಳ ಫ್ಯಾಷನ್‌ನಲ್ಲಿ ಸಾಮಾನ್ಯವಾಗತೊಡಗಿದೆ. ಇದು ನೋಡಲು ಕೊಂಚ ವಿಭಿನ್ನವಾಗಿ ಕಾಣುತ್ತಾದರೂ ಸಾವಿರ ಮಂದಿಯ ಮಧ್ಯೆಯೂ ಸೆಂಟರ್ ಆಫ್ ದಿ ಅಟ್ರಾಕ್ಷನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್.
ಯಾವುದೇ ಸೀರೆಗೆ ಶೀರ್ ಜಾಕೆಟ್ ಬ್ಲೌಸ್ ಮ್ಯಾಚ್ ಮಾಡಬೇಕಿದ್ದಲ್ಲಿಆದಷ್ಟು ಆ ಬ್ಲೌಸ್ ಹಾಗೂ ಸೀರೆಗೆ ಮೆಟೀರಿಯಲ್ ಮ್ಯಾಚ್ ಆಗುವಂತಿರಬೇಕು. ಇಲ್ಲವೇ ಕಾಂಟ್ರಾಸ್ಟ್ ವರ್ಣದ್ದಾಗಿರಬೇಕು. ಆದಷ್ಟೂ ಡಾರ್ಕ್ ಶೇಡ್ಸ್ ಬಳಕೆ ಕಡಿಮೆ ಮಾಡಬೇಕು ಎನ್ನುತ್ತಾರೆ ಮಾಡೆಲ್ ದೀಪ್ತಿ. ಇದು ಸೀರೆಗೆ ಲೇಯರ್ ಲುಕ್ ನೀಡುತ್ತದೆ ಎನ್ನುತ್ತಾರೆ ಅವರು.
ಸೀರೆಗೂ ಕೇಪ್ ಫ್ಯಾಷನ್
ಸೀರೆಗೂ ಇದೀಗ ಕೇಪ್ ಲೇಯರ್ ಡಿಸೈನ್ ಎಥ್ನಿಕ್ ಟಚ್ ನೀಡಿದೆ. ನಮ್ಮ ಭಾರತೀಯ ಮಾನಿನಿಯರಿಗೆ ಹೊಂದುವಂತೆ ಈ ಕೇಪ್ ವಿನ್ಯಾಸವನ್ನು ಪರಿವರ್ತಿಸಲಾಗಿದೆ. ದುಪಟ್ಟಾ ರೀತಿಯಲ್ಲಿ ಕೆಲವು ಕೇಪ್‌ಗಳನ್ನು ನೆಟ್ಟೆಡ್, ಶೀರ್ ಹಾಗೂ ಟ್ರಾನ್ಸ್‌ಪರೆಂಟ್ ಮಾದರಿಯಲ್ಲಿ ಡಿಸೈನ್ ಮಾಡಲಾಗಿರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.
ಸೀರೆಗೆ ಡಬ್ಬಲ್ ಬ್ಲೌಸ್ ವಿನ್ಯಾಸ
ಬ್ಲೌಸ್ ಮೇಲೊಂದು ಬ್ಲೌಸ್ ಎನ್ನುವ ಬದಲು ಲೇಯರ್ ಬ್ಲೌಸ್ ವಿನ್ಯಾಸ ಎನ್ನಬಹುದು. ನೋಡಲು ಕಾಂಪ್ಲಿಕೇಟೆಡ್ ವಿನ್ಯಾಸದಂತೆ ಕಾಣುವ ಈ ಬ್ಲೌಸ್‌ಗಳು ಮೊದಲೆಲ್ಲಾ ರಾಯಲ್ ಫ್ಯಾಮಿಲಿಯ ಮಹಿಳೆಯರು ಹೆಚ್ಚಾಗಿ ಧರಿಸುತ್ತಿದ್ದರು. ಇದೀಗ ಈ ಬ್ಲೌಸ್ ವಿನ್ಯಾಸಕ್ಕೆ ಒಂದಿಷ್ಟು ಹೊಸ ರೂಪ ದೊರೆತಿದೆ. ರಾಣಿಯರ ಮೇಲುಡುಪುಗಳಂತೆ ಕಾಣುವ ಈ ಬ್ಲೌಸ್ ವಿನ್ಯಾಸ, ಲೇಯರ್ ಡಿಸೈನ್ ಹೊಂದಿರುತ್ತದೆ. ಚಳಿಗಾಲದಲ್ಲಿಇವು ಬೆಚ್ಚಗಿಡುತ್ತವೆ ಕೂಡ. ಬ್ಲೌಸ್ ಮೇಲೆ ಅದೇ ವರ್ಣದ ಇಲ್ಲವೇ ಕಾಂಟ್ರಾಸ್ಟ್ ವೇಸ್ಟ್ ಲೆಂಥ್ ಕೋಟ್ ಧರಿಸುವುದು ಇಂದು ಟ್ರೆಂಡಿಯಾಗಿದೆ ಎನ್ನುತ್ತಾರೆ ಡಿಸೈನರ್ಸ್.
ಈ ಸುದ್ದಿಯನ್ನೂ ಓದಿ | Airport Fashion Show 2025: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಡೆಲ್‌ಗಳ ಕ್ಯಾಟ್‌ವಾಕ್
ಲೇಯರ್ ಲುಕ್ ಸೀರೆಗೆ ಸಲಹೆಗಳು
* ಈ ಲುಕ್‌ಗೆ ಹೆಚ್ಚು ಆಕ್ಸೆಸರೀಸ್ ಧರಿಸುವುದು ಬೇಡ.
* ಸ್ಕಿನ್ ಟೋನ್ ಹಾಗೂ ಮೆಟೀರಿಯಲ್‌ಗೆ ತಕ್ಕಂತೆ ವಿನ್ಯಾಸ ಆಯ್ಕೆ ಮಾಡಿ.
* ಉದ್ದವಾಗಿರುವವರಿಗೆ ಕೇಪ್ ಸೀರೆಗಳು ಡ್ರೆಸ್‌ಗಳು ಆಕರ್ಷಕವಾಗಿ ಕಾಣುತ್ತವೆ.
* ಹೈಟ್‌ಗೆ ತಕ್ಕಂತೆ ಕೇಪ್ ಲೆಂಥ್ ಇರುವುದು ಅಗತ್ಯ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)