ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's Day: ವೃತ್ತಿಪರತೆ, ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪತ್ರಕರ್ತೆಯರ ಪಾತ್ರ ದೊಡ್ಡದು: ಕೆ.ವಿ.ಪ್ರಭಾಕರ್‌

Women's Day: ಭಾರತೀಯ ಪತ್ರಿಕೋದ್ಯಮದ ಮೊದಲ ಛಾಯಾಗ್ರಾಹಕಿ ಹೋಮೈ ವ್ಯಾರಾವಾಲಾ ಮತ್ತು ಮೊದಲ ಯುದ್ಧ ವರದಿಗಾರ್ತಿ ಪ್ರಭಾ ದತ್‌ ಅವರ ಹೆಸರಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಬೇಕು. ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತೆಯರನ್ನು ಗುರುತಿಸಿ ಪ್ರತೀ ವರ್ಷವೂ ಪ್ರಶಸ್ತಿ ನೀಡಬೇಕು. ಈ ಎರಡೂ ಪ್ರಶಸ್ತಿಗಳಿಗೆ ತಲಾ 1 ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ನಾನು ಮುಖ್ಯಮಂತ್ರಿಗಳಿಂದ ಕೊಡಿಸಲು ಸಿದ್ಧನಿದ್ದೇನೆ. ಇದು ಈ ವರ್ಷದಿಂದಲೇ ಆರಂಭಿಸಿದರೂ ನಾನು ಸಿದ್ದನಿದ್ದೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌ ಘೋಷಿಸಿದರು.

ಕರ್ನಾಟಕ ಪತ್ರಕರ್ತೆಯರ ಸಂಘದಿಂದ ʼಮಹಿಳಾ ದಿನಾಚರಣೆʼ

Profile Siddalinga Swamy Mar 28, 2025 3:57 PM

ಬೆಂಗಳೂರು: ಪತ್ರಿಕಾ ವೃತ್ತಿ ಮಹಿಳೆಯರಿಗಲ್ಲ ಎನ್ನುವ ಮಾತು ಈಗ ಸಂಪೂರ್ಣ ಸುಳ್ಳಾಗಿದ್ದು, ಪತ್ರಿಕಾ ವೃತ್ತಿಯ ಘನತೆ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪತ್ರಕರ್ತೆಯರ ಪಾತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌ (KV Prabhakar) ಅಭಿಪ್ರಾಯಪಟ್ಟರು. ಕರ್ನಾಟಕ ಪತ್ರಕರ್ತೆಯರ ಸಂಘ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಸಾಧಕಿಯರನ್ನು ಅಭಿನಂದಿಸಿ, ಬಳಿಕ ಮಾತನಾಡಿದ ಅವರು, ಸಂಘದ ಪ್ರಶಸ್ತಿಗೆ ಸಬೀಹಾ ಬಾನು, ಪೂರ್ಣಿಮಾ ರವಿ, ಪದ್ಮಾ ಕೋಲಾರ ಅವರನ್ನು ಆಯ್ಕೆ ಮಾಡಿರುವುದು ಬಹಳ ಖುಷಿಯಾಯಿತು. ಪತ್ರಕರ್ತೆಯರ ಸಂಘ ಬಹಳ ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಆದವರನ್ನು ಆಯ್ಕೆ ಮಾಡಿದೆ ಎಂದು ಹೇಳಿದರು.

ನ್ಯೂಸ್‌ ಆಂಕರ್‌ಗಳು ಎಂದರೆ ತೆಳ್ಳಗೆ ಬೆಳ್ಳಗೆ ಇರಬೇಕು. 20 ರಿಂದ 25 ವರ್ಷದೊಳಗಿನ ಅವಿವಾಹಿತ ಹೆಣ್ಣು ಮಕ್ಕಳೇ ಇರಬೇಕು ಎನ್ನುವ ನಂಬಿಕೆ ಇದೆ. ಪುರುಷ ಆಂಕರ್‌ಗಳಿಗೆ ಇಲ್ಲದ ವಯಸ್ಸಿನ ಮಿತಿ ಮಹಿಳಾ ಆಂಕರ್‌ಗಳಿಗೆ ಮಾತ್ರ ಇರುವುದು ಸರಿಯಲ್ಲ. ಈ ಅಸಹಜ ನಂಬಿಕೆಯನ್ನು ಸುಳ್ಳಾಗಿಸಿ ಅರ್ಹತೆ ಮೆರೆದವರು ನಮ್ಮ ಸಬೀಹಾ ಬಾನು, ನ್ಯೂಸ್‌ ಆಂಕರಿಂಗ್‌ನ ಘನತೆಯನ್ನು ಹೆಚ್ಚಿಸಿದವರು. ಹಾಗೆಯೇ ಮಲೆನಾಡಿನ ಹುಡುಗಿ ಪೂರ್ಣಿಮಾ ರವಿ. ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಿಕಾ ಛಾಯಾಗ್ರಾಹಕಿಯಾಗಿ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತೆ ಹೋಮೈ ವ್ಯಾರಾವಾಲಾ ಅವರ ಪರಂಪರೆಯನ್ನು ಮುಂದುವರೆಸಿದ್ದಾರೆ.

ನಾವು ಬೆಳಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುವ ಮೊದಲೇ ಬೀದಿಯನ್ನು ಗುಡಿಸಿ, ನಮ್ಮ ಕಸವನ್ನು ತೆಗೆಯುವ ಪೌರ ಕಾರ್ಮಿಕರು ಮತ್ತು ಸಫಾಯಿ ಕರ್ಮ ಚಾರಿಗಳ ಪರವಾಗಿ ಹೋರಾಟ ನಡೆಸುತ್ತಿರುವ ಪದ್ಮಾ ಕೋಲಾರ ಅವರ ಆಯ್ಕೆ ಪತ್ರಕರ್ತೆಯರ ಸಂಘದ ಸಮಾಜಮುಖಿ ದೃಷ್ಠಿಕೋನಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಇವತ್ತು ತಂತ್ರಜ್ಞಾನದ ಕಾರಣಕ್ಕೆ ಮಾಧ್ಯಮ ಕ್ಷೇತ್ರ ಕೂಡ ವಿಪರೀತ ಬೆಳೆದಿದೆ. ಪುರುಷರಂತೆ ಮಹಿಳೆಯರಿಗೂ ಹೆಚ್ಚೆಚ್ಚು ಅವಕಾಶಗಳು ಒದಗುತ್ತಿವೆ. ಮಾಧ್ಯಮಗಳ ನಿರ್ಣಾಯಕ ಹುದ್ದೆಗಳಲ್ಲಿ ಮಹಿಳೆಯರೇ ಇಲ್ಲ ಎನ್ನುವ ಪರಿಸ್ಥಿತಿ ನಿಧಾನಕ್ಕೆ ಬದಲಾಗುತ್ತಿದೆ. ʼಓ ವುಮೇನಿಯಾʼ ಸಂಸ್ಥೆ ನೀಡಿರುವ ವರದಿಯ ಪ್ರಕಾರ ನಮ್ಮ ಮಾಧ್ಯಮಗಳಲ್ಲಿ ಶೇ.13 ರಷ್ಟು ಪ್ರಮುಖ ಹುದ್ದೆಗಳಲ್ಲಿ ಈಗ ಪತ್ರಕರ್ತೆಯರು ಇದ್ದಾರೆ. ಇನ್ನು ಪರ್ಯಾಯ ಮಾಧ್ಯಮಗಳಲ್ಲಿ, ಯು ಟ್ಯೂಬ್‌ ಚಾನಲ್‌ಗಳಲ್ಲಿ ಪತ್ರಕರ್ತೆಯರು ನಿರಂತರ ಹವಾ ಎಬ್ಬಿಸುತ್ತಿದ್ದಾರೆ. ನಮ್ಮವರೇ ಆದ ವಿಜಯಲಕ್ಷ್ಮಿ ಶಿಬರೂರು, ಮಂಜುಳಾ ಮಾಸ್ತಿಕಟ್ಟೆ, ರಾಷ್ಟ್ರೀಯ ಮಟ್ಟದಲ್ಲಿ ಧನ್ಯಾ ರಾಜೇಂದ್ರನ್‌, ಸಾಕ್ಷಿ ಜೋಶಿ, ಕುಂಕುಮ್‌ ಬಿಲ್ವಾಲ್‌ ಮುಂತಾದವರು ಪತ್ರಿಕಾ ವೃತ್ತಿಯ ಸಾಧ್ಯತೆಗಳನ್ನು, ತೂಕವನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.

ಭಾರತೀಯ ಪತ್ರಿಕೋದ್ಯಮದ ಮೊದಲ ಛಾಯಾಗ್ರಾಹಕಿ ಹೋಮೈ ವ್ಯಾರಾವಾಲಾ ಮತ್ತು ಮೊದಲ ಯುದ್ಧ ವರದಿಗಾರ್ತಿ ಪ್ರಭಾ ದತ್‌ ಅವರ ಹೆಸರಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಬೇಕು. ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತೆಯರನ್ನು ಗುರುತಿಸಿ ಪ್ರತೀ ವರ್ಷವೂ ಪ್ರಶಸ್ತಿ ನೀಡಬೇಕು. ಈ ಎರಡೂ ಪ್ರಶಸ್ತಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ನಾನು ಮುಖ್ಯಮಂತ್ರಿಗಳಿಂದ ಕೊಡಿಸಲು ಸಿದ್ದನಿದ್ದೇನೆ. ಇದು ಈ ವರ್ಷದಿಂದಲೇ ಆರಂಭಿಸಿದರೂ ನಾನು ಸಿದ್ದನಿದ್ದೇನೆ ಎಂದು ಘೋಷಿಸಿದರು. ಪತ್ರಕರ್ತೆಯರ ಸಂಘಕ್ಕೆ ಕಾರ್ಯ ನಿರ್ವಹಿಸಲು ಕಚೇರಿಯ ಅಗತ್ಯವಿದ್ದು ಇದಕ್ಕೆ ಸೂಕ್ತ ಕ್ರಮ ವಹಿಸಲು ಪ್ರಯತ್ನಿಸಲಾಗುವುದು ಎಂದರು.

ಈ ಸುದ್ದಿಯನ್ನೂ ಓದಿ | BBMP budget: ನಾಳೆ ಬಿಬಿಎಂಪಿ ಬಜೆಟ್‌ ಮಂಡನೆ, ಲೈವ್‌ ಇದೆ

ಈ ಸಂದರ್ಭದಲ್ಲಿ ರಾಜ್ಯ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪದಾಧಿಕಾರಿಗಳಾದ ಶ್ರೀಜಾ , ಶೀಲಾ ಸಿ . ಶೆಟ್ಟಿ, ವಾಣಿ ಶ್ರೀ, ಚೇತನಾ ಬೆಳೆಗೆರೆ, ಗೊರೂರು ಪಂಕಜ, ಮಿನಿ, ಶಾಂತಾ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತೆ ಡಾ. ವಿಜಯಮ್ಮ, ಸುಶೀಲಾ, ಮೀನಾ ಮೈಸೂರು, ಮಾಲತಿ ಭಟ್‌, ಯಶೋಧಾ, ಜಗದೀಶ್ವರಿ, ರಶ್ಮಿ ಸೇರಿದಂತೆ ಹಲವು ಹಿರಿಯ ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು.