ಮದುವೆಗೆ ನಿರಾಕರಣೆ; ಬೆಂಗಳೂರಿನಲ್ಲಿ ಪ್ರಿಯಕರನ ಮನೆಯಲ್ಲೇ ಯುವತಿ ಆತ್ಮಹತ್ಯೆ
Nikhitha Suicide Case: ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹೊಸ ವರ್ಷದ ಆಚರಣೆ ನಿಮಿತ್ತ ಜ.1ರಂದು ಅರಸೀಕೆರೆಯಿಂದ ಬೆಂಗಳೂರಿನ ಪ್ರಿಯಕರಣ ಮನೆಗೆ ಬಂದಿದ್ದ ಯುವತಿ, ನೇಣಿಗೆ ಶರಣಾಗಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ಯುವತಿ ನಿಖಿತಾ. -
ಬೆಂಗಳೂರು: ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಿಯಕರನ ಮನೆಯಲ್ಲೇ ಯುವತಿ ನೇಣಿಗೆ ಶರಣಾಗಿರುವ ಘಟನೆ (Nikhitha Suicide Case) ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸಿಕೆರೆ ಮೂಲದ ನಿಖಿತಾ (19) ಮೃತ ದುರ್ದೈವಿ. ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಯುವತಿ ಅರಸಿಕೆರೆಯಿಂದ ಪಿಲ್ಲಹಳ್ಳಿಯಲ್ಲಿರುವ ಪ್ರಿಯಕರನ ಮನೆಗೆ ಬಂದಿದ್ದಳು. ಈ ವೇಳೆ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಮೃತ ನಿಖಿತಾ ಹಾಗೂ ಪಿಲ್ಲಹಳ್ಳಿ ಗ್ರಾಮದ ರಾಘವೇಂದ್ರ ಎಂಬ ಯುವಕ ಕಳೆದ 5-6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೊಸ ವರ್ಷದ ಆಚರಣೆ ನಿಮಿತ್ತ ಜ.1ರಂದು ಅರಸೀಕೆರೆಯಿಂದ ಬೆಂಗಳೂರಿನ ರಾಘವೇಂದ್ರ ಮನೆಗೆ ಬಂದಿದ್ದಳು. ಈ ವೇಳೆ ತನ್ನನ್ನು ಮದುವೆಯಾಗುವಂತೆ ನಿಖಿತಾ ರಾಘವೇಂದ್ರನಿಗೆ ಒತ್ತಾಯಿಸಿದ್ದಾಳೆ. ಆದರೆ, ಇದಕ್ಕೆ ರಾಘವೇಂದ್ರ ಸಮಯ ಕೊಡುವಂತೆ ಹೇಳಿದ್ದಾನೆ. ಇದರಿಂದ ಬೇಸತ್ತ ನಿಖಿತಾ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆಯವರಿಗೆ ಕರೆ ಮಾಡಿ ಹೇಳಿದ್ದಾಳೆ. ಇದರಿಂದ ಕಂಗೆಟ್ಟ ಮನೆಮಂದಿ ವಾಪಸ್ ಕರೆ ಮಾಡುವ ವೇಳೆಗೆ ಆಕೆ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಯುವತಿ ಪೋಷಕರು ಆಕೆಯನ್ನು ಪ್ರೀತಿ ಮಾಡಿದ ಯುವಕನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಹೀಗಾಗಿ ಆರೋಪಿ ರಾಘವೇಂದ್ರನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಉಪನ್ಯಾಸಕರಿಂದ ಲೈಂಗಿಕ ಕಿರುಕುಳ, ಹಿರಿಯ ವಿದ್ಯಾರ್ಥಿನಿಯರ ರ‍್ಯಾಗಿಂಗ್; ಯುವತಿ ಆತ್ಮಹತ್ಯೆ
ಇನ್‌ಸ್ಟಾಗ್ರಾಮ್ ಮೂಲಕ ಹುಟ್ಟಿದ್ದ ಪ್ರೀತಿ
ಇನ್‌ಸ್ಟಾಗ್ರಾಮ್ ಮೂಲಕ ಪರಿಚಿತವಾದ ರಾಘವೇಂದ್ರ ಮತ್ತು ನಿಖಿತಾ ನಡುವೆ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಮಾಡುತ್ತಲೇ ಸ್ನೇಹ ಬೆಳೆದಿತ್ತು. ನಂತರ, ಕೆಲವೇ ದಿನಗಳ ಅಂತರದಲ್ಲ ಇವರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಇತ್ತೀಚೆಗೆ ಇಬ್ಬರೂ ಪರಸ್ಪರ ಭೇಟಿ ಮಾಡುವುದು, ಅಲ್ಲಲ್ಲಿ ಸುತ್ತಾಡುವುದು ನಡೆದಿತ್ತು. ಯುವತಿಗೆ 19 ವರ್ಷಗಳಾಗುತ್ತಿದ್ದಂತೆ ಯುವಕ ರಾಘವೇಂದ್ರ, ಹುಡುಗಿಯ ಮನೆಯವರಿಗೆ ನಾನು ನಿಮ್ಮ ಮಗಳು ನಿಖಿತಾಳನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದ. ಆದರೆ, ಇದೀಗ ಪ್ರಿಯಕರನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.