Bhavana Belagere Interview: ಅಮ್ಮನ ಜೊತೆಯೇ ಎಕ್ಸಾಂ ಬರೆದಿದ್ದ ರವಿ ಬೆಳಗೆರೆ; SSLC ಫೇಲ್ ಆಗಿದ್ದೇ ಬದುಕಿನ ಟರ್ನಿಂಗ್ ಪಾಯಿಂಟ್!
Bhavana Belagere Interview: ನಾಡು ಕಂಡ ಅತ್ಯದ್ಬುತ ಬರಹಗಾರ, ಪತ್ರಕರ್ತ ಅಕ್ಷರ ಬ್ರಹ್ಮ ರವಿ ಬೆಳಗೆರೆ ಅವರ ಬಗ್ಗೆ ಅವರು ಪುತ್ರಿ ಭಾವನಾ ಬೆಳಗೆರೆ ನಮಗೆ ನಿಮಗರಿಯದ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನಕ್ಕೆ ಕುರಿತ ಡಿಟೇಲ್ ವರದಿ ಇಲ್ಲಿದೆ.


ಬೆಂಗಳೂರು: ಕನ್ನಡ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರ ಕಂಡ ಅಪರೂಪದ ಬರಹಗಾರರಲ್ಲಿ ಒಬ್ಬರಾದ ರವಿ ಬೆಳಗೆರೆ(Ravi Belegere) ಯವರ ಅಭಿಮಾನಿ ಬಳಗ ತುಂಬಾ ದೊಡ್ಡದು. ಅವರ ಹಾಯ್ ಬೆಂಗಳೂರು(Hai Bengalore) ಪತ್ರಿಕೆಯ ಸಂಚಿಕೆಗಳು ಬಿಡುಗಡೆಯಾಗಲು ಪ್ರತಿಯೊಬ್ಬರೂ ಕಾತುರದಿಂದ ಕಾಯುತ್ತಿದ್ದರು. ಅವರ ಪುಸ್ತಕಗಳಂತೂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮರುಮುದ್ರಣಗೊಂಡ ಉದಾಹಣೆಗಳೂ ಇವೆ. ಆದರೆ, ಅವರ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ತಿಳಿಯದ ನೂರಾರು ಸಂಗತಿಗಳಿವೆ. ಇಂತಹ ಸಂಗತಿಗಳನ್ನು ಅವರ ಮಗಳು ಹಾಗೂ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕಿಯಾದ ಭಾವನಾ ಬೆಳಗೆರೆಯವರು ʼವಿಶ್ವವಾಣಿʼಯೊಂದಿಗೆ ಬಿಚ್ಚಿಟ್ಟಿದ್ದಾರೆ. ರವಿ ಬೆಳಗೆರೆಯವರ ಜೀವನದ ಅತ್ಯಂತ ಪ್ರಮುಖ ಘಟನೆಗಳು ಮತ್ತು ಅವುಗಳಿಂದ ಅವರ ವೃತ್ತಿ ಜೀವನ ಯಾವ ರೀತಿ ತಿರುವು ಪಡೆಯಿತು ಎಂಬುದರ ಕುರಿತು ಭಾವನ ಬೆಳೆಗೆರೆ(Bhavana Belagere Interview) ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ, ಓದಿ.
SSLC ಫೇಲ್ ಆಗಿದ್ದೇ ರವಿ ಬದುಕಿನ ಟರ್ನಿಂಗ್ ಪಾಯಿಂಟ್:
“ರವಿ ಬೆಳಗೆರೆ ಹಾಗೂ ಅವರ ತಾಯಿ ಒಟ್ಟಿಗೆ SSLC ಪರೀಕ್ಷೆ ಬರೆದಿದ್ದರು. ಆಗಿನ ಕಾಲದಲ್ಲಿ 8ನೇ ತರಗತಿ ಪಾಸಾಗಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದ ಬೆಳಗೆರೆಯವರ ತಾಯಿ SSLC ಪಾಸಾದರೆ, ನಮ್ಮ ತಂದೆ SSLC ಫೇಲಾದರು. ರಿಸಲ್ಟ್ ದಿನ ಅಜ್ಜಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ನಮ್ಮ ತಂದೆ ರಿಸಲ್ಟ್ ನೋಡಿ ಬಂದು, ಕಿಟಕಿಯಿಂದ ʼಅಮ್ಮ ನೀನು ಪಾಸ್, ನಾನು ಫೇಲ್ʼ ಎಂದು ಹೇಳಿದ್ದರು” ಎಂದು ಭಾವನಾ ಬೆಳಗೆರೆಯವರು ತಮ್ಮ ತಂದೆಯ ಜೀವನದ ಒಂದು ಪ್ರಮುಖ ಘಟ್ಟವನ್ನು ವಿವರಿಸಿದ್ದಾರೆ. SSLC ಫೇಲ್ ಆಗಿದ್ದು ಅವರ ಬದುಕಿನಲ್ಲಿ ಪುಸ್ತಕಗಳನ್ನು ಪರಿಚಯಿಸಿತು. ಇದೇ ಅವರ ಜೀವನ ಪ್ರಮುಖ ತಿರುವನ್ನು ಪಡೆದುಕೊಳ್ಳಲು ಕಾರಣವಾಯಿತು ಎಂದು ಭಾವನ ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Bhavana Belagere Interview: ಎರಡನೇ ಹೆಂಡತಿ ಮಗನಿಗೆ ಅನ್ಯಾಯ ಮಾಡ್ಬೇಡಿ ಎಂದು ವಿಲ್ ಬರೆಸಿದ್ರಾ ರವಿ ಬೆಳಗೆರೆ ಪತ್ನಿ?
“ಫೇಲ್ ಆಗಿದ್ದ ತಂದೆಯವರಿಗೆ ಮೂರು ರೂಪಾಯಿ ನೀಡಿದ ಅಜ್ಜಿ, ಹೋಗು ಸಿನಿಮಾ ನೋಡು ಎಂದಿದ್ದರಂತೆ. ಬಳಿಕ ಅವರ ತಲೆದಿಂಬಿನ ಕೆಳಗೆ ಒಂದು ಕಾದಂಬರಿಯನ್ನು ಇಟ್ಟು ನಿನಗೆ ಸಮಯವಾದಾಗ ಅದನ್ನು ಓದು ಎಂದು ಹೇಳಿದ್ದರು. ಅಜ್ಜಿ ಶಾಲೆಗೆ ಹೋಗುವ ಮುಂಚೆ ತಂದೆಯನ್ನು ಲೈಬ್ರರಿಯಲ್ಲಿ ಬಿಟ್ಟು ಹೋಗುತ್ತಿದ್ದರು. ತಂದೆಗೆ ಪುಸ್ತಕಗಳ ಕುರಿತು ವ್ಯಾಮೋಹ ಹೆಚ್ಚಿಸಿದ್ದೇ ಅಜ್ಜಿ. ತಂದೆಯಲ್ಲಿದ್ದ ಸೃಜನಾತ್ಮಕತೆಯನ್ನು ಗುರುತಿಸಿದ್ದೇ ಅವರು. ಅವರಿಗೆ ನಾನು ಥ್ಯಾಂಕ್ಸ್ ಹೇಳಬೇಕು” ಎಂದು ಭಾವನ ಹೇಳಿದ್ದಾರೆ.
ನಮ್ಮ ತಂದೆ ಜೀವನದಲ್ಲಿ ತುಂಬಾ ನೋವು ಅನುಭವಿಸಿದ್ದಾರೆ. ಅಜ್ಜಿ ಪಾರ್ಶ್ವವಾಯು ಪೀಡಿತರಾದಾಗ ಏನು ಮಾಡೋದು ಎಂದು ಗೊತ್ತಿಲ್ಲದ ಅಸಹಾಯಕ ಪರಿಸ್ಥಿತಿಗೂ ತಲುಪಿದ್ದಾರೆ. ಅದರ ನಂತರ ವೃತ್ತಿ ಜೀವನದಲ್ಲಿಯೂ ನೋವು, ಅವಮಾನವನ್ನು ಅನುಭವಿಸಿದ ಅವರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಖಡ್ಗದ ರೂಪದಲ್ಲಿ ದೊರೆತಿದ್ದೇ ಹಾಯ್ ಬೆಂಗಳೂರು. ಓದಿನಲ್ಲಿ ಹಿಂದೆ ಉಳಿದಿದ್ದ ಅಪ್ಪ ಏನು ಬೇಕಾದರೂ ಅಗಬಹುದಿತ್ತು. ಒಬ್ಬ ರೌಡಿಯಾಗುವ ಸಾಧ್ಯತೆಯೂ ಇತ್ತು. ಅದರೆ, ಎಲ್ಲವನ್ನೂ ಬಿಟ್ಟು ರವಿ ಬೆಳಗೆರೆಯಾಗಿ ಬೆಳೆಯಲು ಬಹುಶಃ ಅಂದು ಲೈಬ್ರರಿಗೆ ಕರೆದುಕೊಂಡು ಹೋಗಿದ್ದೇ ಕಾರಣವೆಂದು ನಾನು ಭಾವಿಸುತ್ತೇನೆ ಎಂದು ಭಾವನಾ ಬೆಳಗೆರೆ ಹೇಳಿದ್ದಾರೆ.