ಚಿಕ್ಕಬಳ್ಳಾಪುರ: ಸೆ.೨೫ರಂದು ಬಾಗೇಪಲ್ಲಿಯಲ್ಲಿ ಅಖಿಲ ಕರ್ನಾಟಕ ರೈತ ಸಂಘಟನೆ (ಎ.ಕೆ.ಆರ್.ಎಸ್) ಎಂಬ ನೂತನ ಸಂಘಟನೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಎ.ಕೆ.ಆರ್.ಎಸ್ ಜಿಲ್ಲಾ ಸಂಚಾಲಕ ಪಿ.ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ನೂತನ ಸಂಘದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಎಂಬ ಧ್ಯೇಯದಲ್ಲಿ ಸ್ಥಾಪನೆಯಾಗಿರುವ ಅಖಿಲ ಕರ್ನಾಟಕ ರೈತ ಸಂಘಟನೆ (ಎ.ಕೆ.ಆರ್.ಎಸ್) ಎಂಬ ನೂತನ ಸಂಘಟನೆಯನ್ನು ಲೋಕಾ ರ್ಪಣೆ ಮಾಡಲು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಆಗಮಿಸ ಲಿದ್ದಾರೆ. ಜತೆಗೆ ಬಾಗೇಪಳ್ಳಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆಯಾಗಲಿ, ನ್ಯಾಯಯುತ ಬೆಲೆಯಾಗಲಿ ದೊರೆಯುತ್ತಿಲ್ಲ.ರೈತರು ಬೀಜ,ರಸಗೊಬ್ಬರ,ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ ರೂಪದ ಸಾಲದ ವಿಷಯದಲ್ಲಿ ದೊಡ್ಡ ಸಂಕಷ್ಟ ಅನುಭವಿಸುತ್ತಿದ್ದು, ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ.ರೈತ ಕೃಷಿ ಕಾರ್ಮಿಕ ವರ್ಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವುದೇ ನಮ್ಮ ಸಂಘಟನೆಯ ಧ್ಯೇಯವಾಗಿದೆ ಎಂದರು.
ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ,ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಒದಗಿಸುವುದು,ಸರಿಯಾದ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣ,ಸಾಲಮನ್ನಾ ಜಾರಿಗೆ ಒತ್ತಾಯಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಇನ್ನೂ ವಿದ್ಯುತ್ ಖಾಸಗೀ ಕರಣ, ಕಂಪನಿ ಬೇಸಾಯ ಹಾಗೂ ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ಗಳಿಗೆ ಚಾಲನೆ ನೀಡಲಾಗುವುದು. ಕೃಷಿ ಭಾರತ ಮತ್ತು ರೈತಾಪಿ ಸಂರಕ್ಷಣೆಗಾಗಿ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ವಕೀಲ ಚಂದ್ರಶೇಖರ್,ಎ.ಕೆ.ಆರ್.ಎಸ್ ಸಂಪೂರ್ಣ ರೈತ ಪರ ಸಂಘಟನೆಯಾಗಿದ್ದು,ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ತರಲು ಮುಂದಾದರೆ ಅದನ್ನು ತೀವ್ರವಾಗಿ ವಿರೋಧಿಸಲಾಗುವುದು. ರೈತರಿಗೆ ದೀರ್ಘಕಾಲಿಕ ಅನುಕೂಲವಾಗು ವಂತೆ ನೀರಾವರಿ ಯೋಜನೆ ಜಾರಿಗೆ ತರುವುದು,ಬೆಳೆಗಳಿಗೆ ಸಂರಕ್ಷಣೆಯಾಗಿ ಉತ್ತಮ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಕಲ್ಪಿಸುವುದು ಈ ಸಂಘಟನೆಯ ಗುರಿಯಾಗಿದೆ.
ರಾಜ್ಯದ ರೈತರ ಹಿತದೃಷ್ಟಿ ಕಾಯುವ ಮೂಲಕ ಜಾತ್ಯತೀತ ಧರ್ಮಾತೀತ ನೆಲೆಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಪ್ರಗತಿ ಪರ ಚಿಂತಕರು ಅನುಭವಿ ಹೋರಾಟಗಾರರು ಬುದ್ದಿ ಜೀವಿಗಳ ಬೆಂಬಲ ಹಾಗು ರೈತರ ನಾಯಕತ್ವದೊಂದಿಗೆ ಈ ರೈತ ಸಂಘಟನೆ ಸ್ಥಾಪನೆ ಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ವಿಸ್ತರಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಲಕ್ಷ್ಮಿ ನಾರಾಯಣ, ರವಿಚಂದ್ರ ರೆಡ್ಡಿ, ರವೀಂದ್ರ ರೆಡ್ಡಿ, ನರಸಿಂಹಪ್ಪ, ಅಕ್ರಮ್, ಫಾತಿಮಾ ಬಿ,ಚಂದ್ರ, ಶ್ರೀನಿವಾಸ್, ಮಂಜುನಾಥ್ ಇತರರು ಹಾಜರಿದ್ದರು.