Adoption Awareness Month: ನವೆಂಬರ್ ದತ್ತು ಸ್ವೀಕಾರ ಮಾಸಾಚರಣೆ ಅಂಗವಾಗಿ ನಂದಿಬೆಟ್ಟದಲ್ಲಿ ಜಾಗೃತಿ ಕರಪತ್ರ ಬಿಡುಗಡೆ
ಅನಾಥ, ಪರಿತ್ಯಕ್ತ ಹಾಗೂ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ಸುರಕ್ಷಿತ ಕುಟುಂಬದ ವಾತಾವರಣ ಮತ್ತು ಉತ್ತಮ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾನೂನುಬದ್ಧ ದತ್ತು ಸ್ವೀಕಾರ(Legal Adoption) ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸು ವುದು ಅಗತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
-
ಚಿಕ್ಕಬಳ್ಳಾಪುರ: ಅನಾಥ, ಪರಿತ್ಯಕ್ತ ಹಾಗೂ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ಸುರಕ್ಷಿತ ಕುಟುಂಬದ ವಾತಾವರಣ ಮತ್ತು ಉತ್ತಮ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾನೂನುಬದ್ಧ ದತ್ತು ಸ್ವೀಕಾರ(Legal Adoption) ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸು ವುದು ಅಗತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ನವೆಂಬರ್ ತಿಂಗಳನ್ನು ದತ್ತು ಸ್ವೀಕಾರ ಮಾಸಾಚರಣೆ(Adoption Awareness Month)ಯಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ದತ್ತು ಸ್ವೀಕಾರದ ಕಾನೂನುಬದ್ಧ ವಿಧಾನಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ನಂದಿಬೆಟ್ಟದಲ್ಲಿ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಇಕ್ಬಾಲ್ ಅವರು ಕರಪತ್ರಗಳನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ: AICC's legal conclave: ಅಂಬೇಡ್ಕರ್, ನೆಹರು ಆದರ್ಶಗಳನ್ನು ಹಿಂತಿರುಗಿ ನೋಡಬೇಕಿದೆ: ಸಿಎಂ ಸಿದ್ದರಾಮಯ್ಯ
ಇಲಾಖೆಯ ನಿರ್ದೇಶಕ ಮಹೇಶ್, ಜಂಟಿ ನಿರ್ದೇಶಕ ಬಿ. ನಿಶ್ಚಲ್, ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ನಸೀಮಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆಯು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (CARA) ಮಾರ್ಗಸೂಚಿಗಳ ಅನ್ವಯವೇ ನಡೆಯಬೇಕು. ದತ್ತು ಪಡೆಯಲು ಇಚ್ಛಿಸುವವರು ಅಧಿಕೃತ CARA ಪೋರ್ಟಲ್ ಮೂಲಕ ನೋಂದಣಿ ಮಾಡಿ ಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಮಕ್ಕಳನ್ನು ದತ್ತು ಪಡೆಯುವುದು, ಮಕ್ಕಳ ಮಾರಾಟ ಅಥವಾ ಅಕ್ರಮ ದತ್ತು ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಎಚ್ಚರಿಸಿದರು.
ಅನಾಥ, ಪರಿತ್ಯಕ್ತ ಹಾಗೂ ಒಪ್ಪಿಸಲ್ಪಟ್ಟ ಮಕ್ಕಳಿಗೆ ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಪ್ರೀತಿಯ ಕುಟುಂಬ ಮತ್ತು ಸುರಕ್ಷಿತ ಜೀವನ ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ. ದತ್ತು ಸ್ವೀಕಾರವು ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ವದ ಪ್ರಕ್ರಿಯೆಯಾಗಿದ್ದು, ಈ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ಪೋಷಕರ ಆರೈಕೆಯಿಂದ ವಂಚಿತರಾದ, ಸಂಕಷ್ಟದಲ್ಲಿರುವ, ಪರಿತ್ಯಕ್ತ ಅಥವಾ ರಕ್ಷಣೆಯ ಅಗತ್ಯವಿರುವ ಮಕ್ಕಳು ಕಂಡುಬಂದಲ್ಲಿ ಅವರ ಸುರಕ್ಷತೆ ಹಾಗೂ ಪುನರ್ವಸತಿಗಾಗಿ ತಕ್ಷಣವೇ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪ್ರತಿಯೊಂದು ಮಗುವಿಗೂ ಕುಟುಂಬದ ಪ್ರೀತಿ, ಆರೈಕೆ ಮತ್ತು ರಕ್ಷಣೆಯ ಹಕ್ಕಿದೆ. ಮಕ್ಕಳ ಹಕ್ಕುಗಳ ಸಂರಕ್ಷಣೆ ಹಾಗೂ ಅವರಿಗೆ ಸುರಕ್ಷಿತ ಭವಿಷ್ಯ ಕಲ್ಪಿಸುವುದು ಎಲ್ಲರ ಸಾಮೂಹಿಕ ಹೊಣೆಗಾರಿಕೆ ಯಾಗಿದೆ ಎಂಬ ಸಂದೇಶವನ್ನು ದತ್ತು ಸ್ವೀಕಾರ ಜಾಗೃತಿ ಅಭಿಯಾನದ ಮೂಲಕ ಸಾರಲಾಯಿತು.