Har Ghar Tiranga: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಹರ್ ಘರ್ ತಿರಂಗಾ ಜಾಥಾ: ನಾಗೇಂದ್ರ ವಜಾಕ್ಕೆ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆಗ್ರಹ
ದೇಶದ 80ನೇ ಸ್ವಾತಂತ್ರ‍್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಹರ್ ಘರ್ ತಿರಂಗಾ-2026' ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದು, ಆ.9ರಿಂದ ಆ.17ರವರೆಗೆ ರಾಷ್ಟ್ರವ್ಯಾಪಿ ಅಭಿಯಾನ ನಡೆಯುತ್ತಿದ್ದು ಜಿಲ್ಲೆಯಲ್ಲಿಯೂ ಇದನ್ನು ಮಾಡಲಾಗುತ್ತಿದೆ
ಚಿಕ್ಕಬಳ್ಳಾಪುರದಲ್ಲಿ ಹರ್ ಘರ್ ತಿರಂಗಾ ಯಾತ್ರೆ-೨೦೨೬ರ ಭಾಗವಾಗಿ ಜಿಲ್ಲಾ ಬಿಜೆಪಿಯಿಂದ ಜಾಥಾ ನಡೆಸಲಾಯಿತು. -
ಚಿಕ್ಕಬಳ್ಳಾಪುರ: 'ಹರ್ ಘರ್ ತಿರಂಗಾ-2026' ಅಭಿಯಾನದ ಮೂಲಕ ದೇಶದ ಪ್ರತಿ ಯೊಂದು ಮನೆ, ಪ್ರತಿಯೊಬ್ಬ ನಾಗರಿಕನಲ್ಲೂ ರಾಷ್ಟ್ರಪ್ರೇಮದ ಭಾವನೆ ಮೂಡಿಸುವುದರ ಜತೆಗೆ, ಭಾರತೀಯರ ನಡುವೆ ಏಕತೆ ಮತ್ತು ದೇಶದ ಮೇಲಿನ ಹೆಮ್ಮೆಯನ್ನು ಮತ್ತಷ್ಟು ಬಲಪಡಿಸುವ ಆಶಯದಿಂದ ಈ ಕಾರ್ಯಕ್ರಮವನ್ನು ಪ್ರಧಾನಿಗಳು ದೇಶಕ್ಕೆ ಕೊಟ್ಟಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ತಿರಂಗಾ ಯಾತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಚಾಲನೆ ನೀಡಿದರು.
ದೇಶದ 80ನೇ ಸ್ವಾತಂತ್ರ‍್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಹರ್ ಘರ್ ತಿರಂಗಾ-2026' ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದು, ಆ.9ರಿಂದ ಆ.17ರವರೆಗೆ ರಾಷ್ಟ್ರವ್ಯಾಪಿ ಅಭಿಯಾನ ನಡೆಯುತ್ತಿದ್ದು ಜಿಲ್ಲೆಯಲ್ಲಿಯೂ ಇದನ್ನು ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: Chikkaballapur News: 154 ಗ್ರಾಮ ಪಂಚಾಯಿತಿಗಳಲ್ಲಿ ಭಾರತ್ ಜೋಡೋ ಯುವ ಸಂಘಗಳ ರಚನೆಗೆ ಸಿದ್ಧತೆ: ಜಿಲ್ಲಾಧಿಕಾರಿ ಜಿ.ಪ್ರಭು
ಈ ಬಾರಿಯ 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ವಿಶೇಷ ಮಹತ್ವ ನೀಡಲಾಗಿದ್ದು, ರಾಷ್ಟ್ರ ಗೀತೆ ಮತ್ತು 'ವಂದೇ ಮಾತರಂ' ಗೀತೆಗಳು ರಚನೆಯಾಗಿ 150 ವರ್ಷಗಳು ಪೂರ್ಣ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು 'ವಂದೇ ಮಾತರಂ' ಗೀತೆಗೆ ಸಮರ್ಪಿಸಲಾಗಿದೆ ಎಂದರು.
ಆ ಮೂಲಕ ದೇಶದ ನಾಗರಿಕರು 'ವಂದೇ ಮಾತರಂ' ಗೀತೆಯನ್ನು ಸರಿಯಾಗಿ ಹಾಡುವು ದನ್ನು ಕಲಿಯಲು ಹಾಗೂ ಸಾಮೂಹಿಕವಾಗಿ ಗಾಯನ ಮಾಡುವ ಮೂಲಕ ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನದ ಭಾವನೆಯನ್ನು ಬಲಪಡಿಸಲು ಪ್ರೋತ್ಸಾಹಿಸಲಾಗುತ್ತಿದೆ. ರಾಷ್ಟ್ರಧ್ವಜದ ಗೌರವ ಹಾಗೂ ಸ್ವಾತಂತ್ರ‍್ಯ ಹೋರಾಟದ ಸ್ಮರಣೆಯನ್ನು ಜನಮನದಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶವನ್ನು ಅಭಿಯಾನ ಹೊಂದಿದೆ ಎಂದು ಹೇಳಿದರು.
ಅಲ್ಲದೆ ಜಾಗತಿಕ ಮಟ್ಟದಲ್ಲಿಯೂ 'ಸೂರ್ಯಪಥ್ ತಿರಂಗಾ' ಎಂಬ ಸಾಂಕೇತಿಕ ಜಾಗತಿಕ ರಿಲೇ ಆಯೋಜಿಸಲಾಗಿದೆ. ಭಾರತೀಯ ರಾಯಭಾರ ಕಚೇರಿಗಳು ಹಾಗೂ ಅನಿವಾಸಿ ಭಾರತೀಯರನ್ನು ಒಳಗೊಂಡ ಈ ಕಾರ್ಯಕ್ರಮದ ಮೂಲಕ ವಿದೇಶಗಳಲ್ಲಿಯೂ ಭಾರತದ ರಾಷ್ಟ್ರಧ್ವಜ, ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರಲು ಬಿಜೆಪಿ ಮತ್ತು ಭಾರತ ಸರಕಾರ ಉದ್ದೇಶಿಸಲಾಗಿದೆ.
ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಜಿಲ್ಲೆಯ ವಿವಿಧ ಮಂಡಲಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುತ್ತಾ ಅಂಬೇಡ್ಕರ್ ವೃತ್ತದಿಂದ ವಾಪಸಂದ್ರದ ಜಿಲ್ಲಾ ಬಿಜೆಪಿ ಕಚೇರಿವರೆಗೆ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ರಾಷ್ಟ್ರಪ್ರೇಮ ಹಾಗೂ ದೇಶಭಕ್ತಿಯ ಭಾವನೆ ಮೂಡಿಸುವಲ್ಲಿ ಯಶಸ್ವಿ ಯಾದರು.
ಜಾಥಾ ಬಳಿಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸೀಕಲ್ ರಾಮಚಂದ್ರಗೌಡ, ಆ.15ರಂದು ದೇಶವು 80ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ ದಡಿ ಜಿಲ್ಲಾಘಟಕವು ರಾಷ್ಟ್ರಧ್ವಜ ಹಿಡಿದು ದೇಶಭಕ್ತಿಯ ಘೋಷಣೆಗಳನ್ನು ಕೂಗುವ ಮೂಲಕ ಜನರಲ್ಲಿ ರಾಷ್ಟ್ರಪ್ರೇಮ ಜಾಗೃತವಾಗುವಂತೆ ಮಾಡಲಾಗಿದೆ ಎಂದರು.
ನಾಗೇಂದ್ರ ವಜಾಕ್ಕೆ ಆಗ್ರಹ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪರಿಶಿಷ್ಟ ಪಂಗಡದ 186 ಕೋಟಿ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಸದನದ ಒಳಗೆ ಮತ್ತು ಹೊರಗೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಶೂನ್ಯ ಸ್ಥಾನ
ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್ ನಾಯಕರು ವೇದಿಕೆಗಳಲ್ಲಿ ಮಾತ್ರ ಮಹಿಳೆಯರ ಅಭಿವೃದ್ಧಿ ಕುರಿತು ಮಾತನಾಡುತ್ತಾರೆ, ಆದರೆ ಅಧಿಕಾರದಲ್ಲಿ ಅನುಷ್ಠಾನಗೊಳಿಸುವುದಿಲ್ಲ ಎಂದು ಆರೋಪಿಸಿದರು. 2028ರಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಚಿಂತಾಮಣಿ ಕ್ಷೇತ್ರದ ಮುಖಂಡ ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುರಳಿಧರ್, ಕೊಂಡೇನಹಳ್ಳಿ ಮುರಳಿ, ಮಧು ಸೂರ್ಯನಾರಾಯಣ ರೆಡ್ಡಿ, ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಮ್ಮ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ರಾಜ್ಯ ಮಾಧ್ಯಮ ಸದಸ್ಯ ಶ್ರೀನಾಥ್, ಜಿಲ್ಲಾ ಮಾಧ್ಯಮ ಸಂಚಾಲಕ ವಿ. ಮಧುಚಂದ್ರ ಹಾಗೂ ವಿವಿಧ ಮಂಡಲಗಳ ಅಧ್ಯಕ್ಷರು ಮತ್ತು ಮಹಿಳಾ ಮುಖಂಡರು ಉಪಸ್ಥಿತರಿದ್ದರು.