Bengalore North University: ಶಿಕ್ಷಣದ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ದೇವರಾಜ್ ಕೆ.ಆರ್.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿತು, ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಆತ್ಮವಿಶ್ವಾಸ, ಪರಿಶ್ರಮ ಮತ್ತು ಗುರಿಯತ್ತದ ಬದ್ಧತೆಯೇ ವಿದ್ಯಾರ್ಥಿಗಳನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುವ ಮೂಲಮಂತ್ರಗಳಾಗಿವೆ
-
ಶಿಡ್ಲಘಟ್ಟ: ಪದವಿ ಶಿಕ್ಷಣವು ವಿದ್ಯಾರ್ಥಿ ಜೀವನದ ಅಂತ್ಯವಲ್ಲ, ಬದಲಾಗಿ ಹೊಸ ಜವಾಬ್ದಾರಿಗಳು ಮತ್ತು ಅವಕಾಶಗಳ ಆರಂಭವಾಗಿದೆ. ಶಿಕ್ಷಣದೊಂದಿಗೆ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡರೆ ಜೀವನದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ(Bengalore North University)ದ ಸಿಂಡಿಕೇಟ್ ಸದಸ್ಯ ಡಾ.ದೇವರಾಜ್ ಕೆ.ಆರ್. ಹೇಳಿದರು.
ತಾಲೂಕಿನ ಎಚ್. ಕ್ರಾಸ್ ಸಮೀಪದ ಸಾಯಿ ವಿದ್ಯಾನಿಧಿ ನ್ಯಾಷನಲ್ ಡಿಗ್ರಿ ಕಾಲೇಜಿನಲ್ಲಿ 2025–26ನೇ ಸಾಲಿನ ಬಿ.ಕಾಂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಉದ್ಯೋಗ ಪಡೆಯುವ ಸಾಧನವಾಗಿ ಮಾತ್ರ ನೋಡದೆ, ವ್ಯಕ್ತಿತ್ವ ವಿಕಸನ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಶಕ್ತಿಯಾಗಿ ಬಳಸಿಕೊಳ್ಳಬೇಕು. ಕಾಲೇಜು ಜೀವನದಲ್ಲಿ ಪಡೆದ ಅನುಭವಗಳು ಮತ್ತು ಮೌಲ್ಯಗಳು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿಯಾಗಲಿವೆ ಎಂದು ತಿಳಿಸಿದರು.
ಇದನ್ನೂ ಓದಿ: Shidlaghatta News: ದೇಶದ ಅಭಿವೃದ್ಧಿಗೆ ಮೋದಿ ಕೊಡುಗೆ ಸ್ಮರಣೀಯ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅಭಿಮತ
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಡಾ.ಮುರಳಿ ಆನಂದ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿತು, ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಆತ್ಮವಿಶ್ವಾಸ, ಪರಿಶ್ರಮ ಮತ್ತು ಗುರಿಯತ್ತದ ಬದ್ಧತೆಯೇ ವಿದ್ಯಾರ್ಥಿಗಳನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುವ ಮೂಲಮಂತ್ರಗಳಾಗಿವೆ ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಜವಾಬ್ದಾರಿತನಕ್ಕೆ ಹೆಚ್ಚಿನ ಮಹತ್ವ ವಿದ್ದು, ಕಾಲೇಜಿನ ಸುವರ್ಣ ನೆನಪುಗಳನ್ನು ಜೀವನಪೂರ್ತಿ ಉಳಿಸಿಕೊಂಡು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಕರೆ ನೀಡಿದರು.
ಇದೇ ವೇಳೆ, ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಗಣ್ಯರು ಪದವಿ ಪ್ರದಾನ ಪ್ರಮಾಣಪತ್ರ ಗಳನ್ನು ವಿತರಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಎನ್.ಮೂರ್ತಿ, ಸಿ.ಎಂ.ನಾರಾಯಣಸ್ವಾಮಿ, ಡಾ.ಎಂ.ಶಿವರಾಮ ರೆಡ್ಡಿ, ಪೂರ್ಣಚಂದರ್, ಪುನೀತ್ ಕುಮಾರ್, ಶೋಭಿತ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಟ್ರಸ್ಟ್‌ನ ಸದಸ್ಯರು, ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.